ಹಿಂದಿಯಲ್ಲಿ ‘ಪರಿಂದಾ’, ‘1942 ಎ ಲವ್ ಸ್ಟೊರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ‘ಮುನ್ನಾಭಾಯ್’ ಸರಣಿಯ ನಿರ್ಮಾಪಕರಾದ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಹೊಸ ಸಿನಿಮಾ ‘12th ಫೇಲ್’ ಸಿನಿಮಾ ಇದೀಗ ಕನ್ನಡದಲ್ಲೂ ತೆರೆ ಕಾಣಲಿದೆ.
ಕನ್ನಡದ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ‘ಕೆ. ಆರ್. ಜಿ ಸ್ಟುಡಿಯೋಸ್’ ವಿಧು ವಿನೋದ್ ಚೋಪ್ರಾ ಅವರ ’12th ಫೇಲ್’ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ಅ. 27ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
’12th ಫೇಲ್’ ಚಿತ್ರವು ಅನುರಾಗ್ ಪಾಠಕ್ ಅವರ ಅದೇ ಹೆಸರಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗಿ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ‘ಎ ಡೆಥ್ ಇನ್ ದಿ ಗುಂಜ್’, ‘ಚಪಾಕ್’, ‘ಹಸೀನ್ ದಿಲ್ರುಬಾ’ ಮುಂತಾದ ಚಿತ್ರಗಳ ಖ್ಯಾತಿಯ ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.