ಈ ಹಿಂದೆ ‘ಇಂಜಿನಿಯರ್ಸ್’ ಮತ್ತು ‘ಗಂಡುಲಿ’ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದ ವಿನಯ್ ರತ್ನಸಿದ್ದಿ ಈಗ ‘ಪ್ರೇಮಂ ಟುಟೂ’ ಎಂಬ ಮತ್ತೊಂದು ಪ್ರೇಮಕಥೆ ಹಿಡಿದುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ‘ಪ್ರೇಮಂ’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ‘ರತ್ನಸಿದ್ದಿ ಫಿಲಂಸ್’ ಮೂಲಕ ಚಂದನ, ಅಮರೇಂದ್ರ ವರದ ಹಾಗೂ ಪ್ರಸಾದ್ ಬಿ. ಜಿ, ‘ಪ್ರೇಮಂ ಟುಟೂ’ ಚಿತ್ರವನ್ನು ನಿರ್ಮಿಸಿದ್ದಾರೆ. ‘ಪ್ರೇಮಂ’ ಸಿನಿಮಾದಲ್ಲಿ ನಟ ವಿನಯ್ ರತ್ನಸಿದ್ದಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ‘ಪ್ರೇಮಂ’ ಸಿನಿಮಾದಲ್ಲಿ ಶಕುಂತಲಾ, ವೈಷ್ಣವಿ, ಸುಶ್ಮಿತಾ, ಮಂಜುಶ್ರೀ, ಕಾವೇರಿ ಹಾಗೂ ಪ್ರಿಯಾಂಕಾ ಸೇರಿ ಆರು ಜನ ನಾಯಕಿಯರು ಅಭಿನಯಿಸಿರುವುದು ಮತ್ತೊಂದು ವಿಶೇಷ. ಉಳಿದಂತೆ ಚಂದ್ರಪ್ರಭ, ಲೋಕೇಶ್ ರಾಜಣ್ಣ, ಉಮೇಶ್ ಕಿನ್ನಾಳ, ಶಿವಮೊಗ್ಗ ರಾಮಣ್ಣ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಪ್ರೇಮಂ’ ಸಿನಿಮಾದ ಬಗ್ಗೆ ಮಾತನಾಡುವ ನಾಯಕ ನಟ ಕಂ ನಿರ್ದೇಶಕ ವಿನಯ್ ರತ್ನಸಿದ್ದಿ, ‘ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಹೇಳುವ ಕಥೆ ನಮ್ಮ ‘ಪ್ರೇಮಂ ಟುಟು’ ಚಿತ್ರದಲ್ಲಿದೆ. ಫಸ್ಟ್ ಲಾಕ್ಡೌನ್ನಲ್ಲಿ ಎರಡು ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ಪ್ರಾರಂಭಿಸಿದ್ದೆವು. ಅದೀಗ ಇನ್ನೂರು ಪಾತ್ರಗಳಾಗಿದೆ. ಟುಟು ಎಂದರೆ ಎರಡು ವಿಕ್ಟರಿ, ಎರಡು ಥಿಂಕಿಂಗ್ ಏನಾದರೂ ಆಗಬಹುದು. ಚಿತ್ರದಲ್ಲಿ ಎರಡು ರೀತಿಯ ಆಲೋಚನೆಗಳ ಬಗ್ಗೆ ಹೇಳಿದ್ದೇವೆ, ಬುದ್ದಿನಂತನಲ್ಲದ, ಹೆಡ್ಡನಂತಿರುವ ನಾಯಕನ ಜೀವನದಲ್ಲಿ ಬರುವ ತಿರುವುಗಳು, ಆತನಗಾಗುವ ಪ್ರೀತಿ, ಆ ಪ್ರೀತಿಯಿಂದಾಗುವ ತೊಳಲಾಟಗಳು, ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ‘ಪ್ರೇಮಂ ಟುಟೂ’ ಕಥೆ’ ಎಂದು ವಿವರಣೆ ಕೊಡುತ್ತಾರೆ.

‘ಪ್ರೇಮಂ ಟುಟೂ’ ಚಿತ್ರದಲ್ಲಿ ಬಿಟ್ ಸೇರಿ ನಾಲ್ಕು ಹಾಡುಗಳು, ನಾಲ್ಕು ಫೈಟ್ಗಳಿವೆ. ತುಮಕೂರು ಬಳಿಯ ಹೊನ್ನುಡಿಕೆಯಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ವಿಮಾನ ನಿಲ್ದಾಣ ಮೊದಲಾದ ಕಡೆಗಳಲ್ಲಿ ‘ಪ್ರೇಮಂ ಟುಟೂ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ‘ಪ್ರೇಮಂ ಟುಟೂ’ ಚಿತ್ರದ ಹಾಡುಗಳಿಗೆ ಅಜಯ್ ಶ್ರೀನಿವಾಸಮೂರ್ತಿ ಸಂಗೀತ ಸಂಯೋಜನೆಯಿದ್ದು, ಆನಂದ್ ಇಳಯರಾಜಾ, ಅರುಣ್ ಮತ್ತು ಮನು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ, ಚಿತ್ರಕ್ಕೆ ವಿನಯ್ ಸಂಕಲನವಿದೆ. ಇದೇ ಅಕ್ಟೊಬರ್ ತಿಂಗಳಿನಲ್ಲಿ ‘ಪ್ರೇಮಂ ಟುಟೂ’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.





