ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಜೋಡಿಯ ಪ್ರೇಮಕಥೆಯುಳ್ಳ `ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೂಪರ್ ಹಿಟ್ಟಾಗಿದ್ದು, ಕನ್ನಡ ಮಾತ್ರವಲ್ಲದೇ ತೆಲುಗಿಗೆ ಡಬ್ ಆಗಿ ಗೆಲುವು ಕಂಡಿದ್ದು ನಿಮಗೆ ಗೊತ್ತಿರುವ ವಿಷ್ಯ. ಹೊಸ ಸುದ್ದಿಯೇನಂದರೆ `ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ರಿಲೀಸ್ ಮತ್ತೆ ಮುಂದಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳು ಇವೆ. ಈಗಾಗಲೇ ಒಮ್ಮೆ ರಿಲೀಸ್ ಡೇಟ್ನ ಮುಂದೂಡಿದ್ದರು. ಅಕ್ಟೋಬರ್ 19ರ ಬದಲು ಅಕ್ಟೋಬರ್ 27ರಂದು ಸೈಡ್ ಬಿ ಅಖಾಡಕ್ಕಿಳಿಸುವುದಾಗಿ ಶೆಟ್ರು ಮಾಹಿತಿ ಕೊಟ್ಟಿದ್ದರು. ಇದೀಗ, ರಿಲೀಸ್ ಡೇಟ್ ಸಮೀಪಿಸುತ್ತಿದ್ದರೂ ಕೂಡ ಪಾರ್ಟ್-2 ಗ್ಲಿಂಪ್ಸ್ ಬಿಡದ ಕಾರಣ ಸಂಶಯ ಮೂಡಿದೆ.

ಸದ್ಯ ಬಜಾರ್ ನಲ್ಲಿ ಹರಿದಾಡ್ತಿರುವ ಸುದ್ದಿ ಪ್ರಕಾರ ಶೆಟ್ಟಿ ಅಂಡ್ ಟೀಮ್ `ದಸರಾ ದಂಗಲ್’ ನಿಂದ ದೂರ ಉಳಿಯಲು ನಿರ್ಧರಿಸಿದೆಯಂತೆ. ಸ್ಯಾಂಡಲ್ವುಡ್ನಿಂದ ಘೋಸ್ಟ್, ಟಾಲಿವುಡ್ನಿಂದ ಭಗವಂತ್ ಕೇಸರಿ ಹಾಗೂ ಟೈಗರ್ ನಾಗೇಶ್ವರ್ ರಾವ್, ಕಾಲಿವುಡ್ನಿಂದ ಲಿಯೋ ಚಿತ್ರಗಳು ದಸರಾ ದಂಗಲ್ನಲ್ಲಿ ಸೆಣಸಾಡುತ್ತಿರುವುದರಿಂದ ಬಾಕ್ಸ್ ಆಫೀಸ್ನಲ್ಲಿ ಹಣಾಹಣಿ ಜೋರಾಗಲಿದೆ. ಇದರಿಂದ ಸಣ್ಣಪುಟ್ಟ ಸಿನಿಮಾಗಳಿಗೆ ಮಾತ್ರವಲ್ಲ ಸ್ಟಾರ್ಸ್ ಸಿನಿಮಾಗಳಿಗೂ ಎಫೆಕ್ಟ್ ಆಗುವ ಲಕ್ಷಣಗಳು ಕಾಣ್ತಿವೆ. ಇದನ್ನರಿತ `ಸಪ್ತ ಸಾಗರದಾಚೆ ಎಲ್ಲೋ’ ಬಳಗ ಒಂದು ವಾರ ಅಲ್ಲ ಹದಿನೈದು ದಿನ ಕಳೆದುಕೊಂಡು ಅಖಾಡಕ್ಕಿಳಿಯೋದು ಸೂಕ್ತವೆಂದು ನಿರ್ಧರಿಸಿದೆಯಂತೆ.

ಅಲ್ಲಿಗೆ ಶೆಟ್ರು ದಸರಾ ಬದಲಿಗೆ ದೀಪಾವಳಿಗೆ ಪಟಾಕಿ ಹೊಡೆಯೋದು ಫಿಕ್ಸು ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. `ಸೈಡ್-ಬಿ’ ನಾ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿ ಅದ್ದೂರಿಯಾಗಿ ರಿಲೀಸ್ ಮಾಡಬೇಕು ಎನ್ನುವ ಪ್ಲ್ಯಾನ್ ಕೂಡ ನಡೀತಿದೆಯಂತೆ. ಸೈಡ್- ಎ ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ಗೆಲುವು ಕಂಡ ಮೇಲೆ ಸಪ್ತಸಾಗರ ದಾಟಿತ್ತು. ಬಹುಷಃ ಸೈಡ್- ಬಿ ಕನ್ನಡದ ಜೊತೆಗೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಏಕಕಾಲಕ್ಕೆ ರಿಲೀಸ್ ಆದರೂ ಆಗಬಹುದು. ಯಾಕಂದ್ರೆ ಮೊದಲ ಭಾಗ ಕ್ಲಾಸ್ ನಿಂದ ಕೂಡಿತ್ತು. ಆದರೆ, ಎರಡನೇ ಭಾಗದಲ್ಲಿ ಮನು ಇನ್ನೊಂದು ಮುಖ ಅನಾವರಣಗೊಳ್ಳಲಿದೆ. ಹೌದು, ಸೈಡ್ ಎನಲ್ಲಿ ಲವ್ವರ್ಬಾಯ್ ಆಗಿ ನಿಮ್ಮೆಲ್ಲರ ಹೃದಯ ಗೆದ್ದಿರೋ ಮನು, ಸೈಡ್ ಬಿ ನಲ್ಲಿ ಮಾಸ್ ಹೀರೋ ಆಗಿ ನಿಮ್ಮೆಲ್ಲರ ಮುಂದೆ ಬರಲಿದ್ದಾರೆ. ಈಗಾಗಲೇ ಕ್ಲೈಮ್ಯಾಕ್ಸ್ ನಲ್ಲಿ ಬದಲಾದ ಮನು ಲುಕ್-ಗೆಟಪ್ ನ ನೀವೆಲ್ಲ ನೋಡಿದ್ದೀರಿ. ಅದು ಜಸ್ಟ್ ಸ್ಯಾಂಪಲ್ ಅಷ್ಟೇ ಪಿಕ್ಚರ್ ಅಭಿ ಬಾಕಿ ಹೈ.





