‘ಭುವನ್ ಮೂವೀಸ್ ಲಾಂಛನದಲ್ಲಿ’ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ ‘ಕಾಲಾಪತ್ಥರ್’ ಸಿನಿಮಾದ ‘ಗೋರುಕನ ಗಾನ..’ ಎಂಬ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಡಾ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ಬರೆದಿದ್ದು, ‘ಸರಿಗಮಪ’ ಖ್ಯಾತಿಯ ಶಿವಾನಿ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ನಟಿ ತಾರಾ ಅನುರಾಧ ‘ಕಾಲಾಪತ್ಥರ್’ ಸಿನಿಮಾದ ‘ಗೋರುಕನ ಗಾನ..’ ಎಂಬ ಈ ಗೀತೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಮಾತನಾಡಿದ ‘ಕಾಲಾಪತ್ಥರ್’ ಸಿನಿಮಾದ ನಾಯಕ ನಟ ಕಂ ನಿರ್ದೇಶಕ ವಿಕ್ಕಿ ವರುಣ್, ‘’ಗೋರುಕನ ಗಾನ…’ ಹಾಡು ನಮ್ಮ ಚಿತ್ರದ ಮೊದಲ ಹಾಡು. ಈ ಹಾಡಿನ ಮೂಲಕ ಮಂಗಳಮುಖಿಯರು ನಮ್ಮ ಚಿತ್ರದ ಕಥೆ ಹೇಳುತ್ತಾರೆ. ಇದು ಚಿತ್ರದ ಕಥೆ ಹೇಳುವ ಗೀತೆಯಾಗಿದೆ’ ಎಂದು ಹಾಡಿನ ಬಗ್ಗೆ ವಿವರಣೆ ನೀಡಿದರು. ‘ಕಾಲಾಪತ್ಥರ್’ ಸಿನಿಮಾದಲ್ಲಿ ವಿಕ್ಕಿ ವರುಣ್ ಅವರಿಗೆ ಧನ್ಯಾ ರಾಮಕುಮಾರ್ ನಾಯಕಿಯಾಗಿದ್ದು, ಇದೇ ನವೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.





