‘ಬಸ್ರಿಕಟ್ಟೆ’ ಎಂಬ ಹೆಸರನ್ನು ಅನೇಕರು ಕೇಳಿರಬಹುದು. ಚಿಕ್ಕಮಗಳೂರು ಜಿಲ್ಲೆೆಯ ಮೂಡಿಗೆರೆ ತಾಲೂಕಿನಲ್ಲಿ ‘ಬಸ್ರಿಕಟ್ಟೆ’ ಎಂಬ ಊರಿದೆ. ಈಗ ಇದೇ ‘ಬಸ್ರಿಕಟ್ಟೆ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಸದ್ಯ ಬಿಡುಗಡೆಯ ಹಂತಕ್ಕೂ ಬಂದಿದೆ. ಅಂದಹಾಗೆ, ಈ ಸಿನಿಮಾದ ಹೆಸರು ‘ಬಸ್ರಿಕಟ್ಟೆ’ ಅಂತಿದ್ದರೂ, ಈ ಸಿನಿಮಾಕ್ಕೂ ‘ಬಸ್ರಿಕಟ್ಟೆ’ ಊರಿಗೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆೆ ಚಿತ್ರತಂಡ, ತಮ್ಮ ಸಿನಿಮಾಕ್ಕೆೆ ‘ಬಸ್ರಿಕಟ್ಟೆ’ ಎಂದು ಹೆಸರಿಟ್ಟುಕೊಂಡಿದೆ.
ಇನ್ನು ‘ಬಸ್ರಿಕಟ್ಟೆೆ’ ಹಾರರ್ ಕಂ ಸಸ್ಪೆೆನ್ಸ್ ಶೈಲಿಯ ಸಿನಿಮಾವಾಗಿದ್ದು, ನವ ನಿರ್ದೇಶಕ ವೈಭವ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ‘ಬಸ್ರಿಕಟ್ಟೆ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈ ಸಿನಿಮಾದಲ್ಲಿ ಸಿನಿಮ್ಯಾಟಿಕ್ ಫೀಲ್‌ಗಿಂತ ನ್ಯಾಚುರಲ್ ಆಗಿ ಮೂಡಿ ಬರಲಿ ಎಂಬ ಕಾರಣಕ್ಕೆೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ. ಈ ಸಿನಿಮಾದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂಬುದು ಚಿತ್ರತಂಡದ ಅನಿಸಿಕೆ.
‘ಗೀತಾಂಜಲಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಎನ್. ಪೈ ‘ಬಸ್ರಿಕಟ್ಟೆ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ‘ಕಿರಗೂರಿನ ಗಯ್ಯಾಳಿಗಳು’, ‘ಕಾಫಿ ತೋಟ’ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅನನ್ಯಾ ಕಶ್ಯಪ್ ನಾಯಕಿಯಾಗಿದ್ದಾರೆ. ಉಳಿದಂತೆ ಬಲರಾಜವಾಡಿ, ಕಿರಣ್ ನಾಯ್ಕ್, ಸಿದ್ಲಿಂಗು ಶ್ರೀಧರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಇದೇ ನವೆಂಬರ್ 3 ರಂದು ‘ಬಸ್ರಿಕಟ್ಟೆ’ ಸಿನಿಮಾ ತೆರೆ ಕಾಣಲಿದೆ.





