ಸ್ಯಾಂಡಲ್ ವುಡ್ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಮತ್ತೊಂದು ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರಿಯಾಂಕಾ ಅವರ ಹೊಸ ಸಿನಿಮಾಗೆ ‘ಕ್ಯಾಪ್ಚರ್’ ಎಂದು ಟೈಟಲ್ ಇಡಲಾಗಿದೆ. ಸದ್ಯ ‘ಕ್ಯಾಪ್ಚರ್’ ತಂಡ ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.
ಈ ಸಿನಿಮಾಗೆ ‘ಮಮ್ಮಿ’, ‘ದೇವಕಿ’ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ತಮ್ಮ ‘ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ರವಿರಾಜ್ ಈ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ.
‘ಕ್ಯಾಪ್ಚರ್’ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ವಿಭಿನ್ನವಾಗಿ ಲಾಂಚ್ ಮಾಡಲಾಯಿತು. ವೀರೇಶ್ ಚಿತ್ರಮಂದಿರದ ಮುಂಭಾಗದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್ ನಿಲ್ಲಿಸುವ ಮೂಲಕ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಆಯಿತು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪೋಸ್ಟರ್ ಲಾಂಚ್ ಮಾಡಿದರು.ಅಭಿಮಾನಿಗಳ ಮಧ್ಯೆ ‘ಕ್ಯಾಪ್ಚರ್’ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ಸ್ಯಾಂಡಲ್‌ವುಡ್‌ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ, 60 ಅಡಿಯ ಕಟೌಟ್ ನಿಲ್ಲಿಸುವ ಮೂಲಕ ಬಿಡುಗಡೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.





