ಹೊಂಬಾಳೆ ಫಿಲಂಸ್ ಕೈಗೊಂಡ ಅದೊಂದು ನಿರ್ಧಾರ ದೊಡ್ಮನೆ ಭಕ್ತರು ರೊಚ್ಚಿಗೇಳುವಂತೆ ಮಾಡಿತ್ತು. `ಯುವ’ರಾಜ್‍ಕುಮಾರ್ ನ ಮುತ್ತಿನ ಥೇರಲ್ಲಿ ಮೆರವಣಿಗೆ ಮಾಡ್ತೀವಿ ಅಂತ ಮುಹೂರ್ತ ಫಿಕ್ಸ್ ಮಾಡಿ, ಕೊನೆಗೆ ಆ ಮುಹೂರ್ತದಲ್ಲಿ `ಸಲಾರ್’ ಹೀರೋನಾ ದಿಬ್ಬಣ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದು ಅಪ್ಪು ಅಭಿಮಾನಿಗಳನ್ನ ಕೆರಳಿಸಿತ್ತು. ಆದ್ರೀಗ `ಯುವ’ ಅಂಗಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನಿಕ್ಕಿಯಾದ ಮುಹೂರ್ತದಲ್ಲೇ ಅಪ್ಪು ಉತ್ತರಾಧಿಕಾರಿಯ ಉತ್ಸವ ಶುರುವಾಗುವುದು ಗ್ಯಾರಂಟಿ ಎನಿಸ್ತಿದೆ. ರಾಜವಂಶದ ಕುಡಿಯಾಗಿ ಪವರ್ ಸ್ಟಾರ್ ಗದ್ದುಗೆ ಏರಲಿರುವ ಪವರ್ ಪ್ರಿನ್ಸ್ `ಯುವ’ ಕಥನ ಇಲ್ಲಿದೆ ನೋಡಿ
`ಯುವ’…. ಯುವರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ. ಪವರ್ ಪ್ರಿನ್ಸ್ ಆಗಿ ಅಖಾಡಕ್ಕಿಳಿಯುತ್ತಿರುವ ರಾಘಣ್ಣನ ಪುತ್ರನ ಬಗ್ಗೆ ಹಾಗೂ ಯುವ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ದೊಡ್ಮನೆ ರಾಜಕುಮಾರನಿಗೆ ಬ್ಲಾಕ್‍ಬಸ್ಟರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್, `ಯುವ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದರಿಂದ ಕುತೂಹಲ ಗರಿಗೆದರಿದೆ. ಈಗಾಗಲೇ ಹೊರಬಿದ್ದಿರುವ ಟೀಸರ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ರಣವಿಕ್ರಮನ ಥರಾನೇ ಹೈವೋಲ್ಟೇಜ್ ಆ್ಯಕ್ಷನ್ ಕಿಕ್ಕೇರಿಸಿರೋ ಯುವರಾಜ್, ದೊಡ್ಮನೆ ಭಕ್ತರನ್ನ ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವಿಶೇಷ ಅಂದರೆ ಪವರ್ ಸ್ಟಾರ್ ಫ್ಯಾನ್ಸ್ ಈಗಾಗಲೇ `ಯುವ’ ಕಣ್ಣಲ್ಲಿ ಅಪ್ಪುನಾ ಕಾಣ್ತಿದ್ದಾರೆ. ಥೇಟ್ ಅಪ್ಪುನೇ ಹೋಲುವಂತಿರುವ ಯುವ ಚಿಕ್ಕಪ್ಪನಂತೆ ಫೈಟ್, ಡ್ಯಾನ್ಸ್ ಮೂಲಕ ಯುವರತ್ನನ ಅಭಿಮಾನಿಗಳು ಕಣ್ಣರಳಿಸುವಂತೆ ಮಾಡಿದ್ದಾರೆ.
ಪವರ್ ಸ್ಟಾರ್ ಸಾಮ್ರಾಜ್ಯದ ಗದ್ದುಗೆ ಏರಲಿರೋ ಜೂ ಪವರ್ ಸ್ಟಾರ್ ಎಂಟ್ರಿ ಹೇಗಿರ್ಬೋದು, ಯುವರಾಜ್ ಲುಕ್ಕು-ಗೆಟಪ್ ಯಾವ್ ರೀತಿ ಇರ್ಬೋದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರಾಜ್ನ ಯಾವ್ ರೀತಿ ತೋರಿಸಿರ್ಬೋದು? ಈ ಎಲ್ಲಾ ಪ್ರಶ್ನೆಗಳಿಗೂ ನಿರ್ದೇಶಕರು ಟೈಟಲ್ ಟೀಸರ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಪವರ್ ಪ್ರಿನ್ಸ್ ಅಂತಾನೇ ಕರೆಸಿಕೊಳ್ಳುವ ಯುವ ಸುತ್ತಿಗೆ ಇಡ್ಕೊಂಡು ಬೆಂಕಿಚೆಂಡಿನ ಥರ ಅಖಾಡಕ್ಕಿಳಿದಿದ್ದಾರೆ. ನೀವು ದಾಟಿರೋದು ಬ್ಲಡ್‍ಲೈನ್ ರಕ್ತ ಹರಿದೇ ಹರಿಯುತ್ತೆ ಅಂತ ಖಡಕ್ ಡೈಲಾಗ್ ಹೊಡೆದಿರೋ ಯುವರಾಜ್, ಇತಿಹಾಸದ ಪುಟಗಳಲ್ಲಿ ರಕ್ತಚರಿತ್ರೆ ಸೃಷ್ಟಿಸೋ ಸುಳಿವು ನೀಡಿದ್ದಾರೆ. ಆದರೆ, ಯುವ ಗ್ಯಾಂಗ್ ಸ್ಟರ್ರಾ ಅಥವಾ ಮಾನ್ ಸ್ಟರ್ರಾ ಅನ್ನೋದು ಸದ್ಯಕ್ಕಿರುವ ಕುತೂಹಲದ ಪ್ರಶ್ನೆ.
ಅಷ್ಟಕ್ಕೂ, ನಾವು ಇವತ್ತು ಯುವ ಚಿತ್ರದ ಬಗ್ಗೆ ಮಾತನಾಡ್ತಿರುವುದಕ್ಕೆ ಕಾರಣ `ಡಬ್ಬಿಂಗ್’ ಆರಂಭವಾಗಿರೋದ್ರಿಂದ. ಯಸ್, ಸದ್ದಿಲ್ಲದೇ ಶೂಟಿಂಗ್ ಮುಗಿಸಿರೋ ಯುವ ಫಿಲ್ಮ್ ಟೀಮ್ ಮಾತಿನ ಮನೆಯಲ್ಲಿ ಬ್ಯುಸಿಯಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನಟ ಯುವರಾಜ್‍ಕುಮಾರ್ ಇಬ್ಬರು ಡಬ್ಬಿಂಗ್ ಮನೆಯಲ್ಲಿ ಕಂಠದಾನ ಮಾಡ್ತಿರುವ ಫೋಟೋ ರಿವೀಲ್ ಆಗಿದೆ. ಕಥಾನಾಯಕ ಯುವ ವಾಯ್ಸ್ ಡಬ್ ಮಾಡೋದು ಕಾಮನ್, ಆದರೆ, ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಅವರು ವಾಯ್ಸ್ ಕೊಡ್ತಿರುವುದು ಕುತೂಹಲ ಕೆರಳಿಸಿದೆ. ಅವರಿಲ್ಲಿ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರ ನಿರ್ವಹಿಸಿದರಾ ಅಥವಾ ಧ್ವನಿಯ ಏರಿಳಿತಗಳನ್ನ `ಯುವಾ’ಗೆ ಹೇಳಿಕೊಡ್ತಿದ್ದಾರಾ ? ಹೀಗೊಂದು ಅನುಮಾನ ಹುಟ್ಟಿದೆ. ಇದಕ್ಕೆ ಸದ್ಯಕ್ಕೆ ಉತ್ತರವಿಲ್ಲವಾದರೂ `ಯುವ’ ಬಿರುಸಿನ ಡಬ್ಬಿಂಗ್ ಕಾರ್ಯಾಚರಣೆ ರಿಲೀಸ್ ಕುತೂಹಲಕ್ಕೂ ಕಾರಣವಾಗಿದೆ.
ಹೌದು, ಯುವ ಸಿನಿಮಾದ ಡಬ್ಬಿಂಗ್ ಭರದಿಂದ ಸಾಗ್ತಿರುವುದನ್ನ ನೋಡಿದರೆ ಫಿಕ್ಸಾದ ರಿಲೀಸ್ ಡೇಟ್‍ಗೆ ಯುವ ಕಣಕ್ಕಿಳಿಯುತ್ತಾರಾ? ಡಿಸೆಂಬರ್ 22ರಂದು ಹೊಂಬಾಳೆ ಥೇರಲ್ಲಿ ಮೆರವಣಿಗೆ ಹೊರಡ್ತಾರಾ ಎನ್ನುವ ಪ್ರಶ್ನೆ ಮೂಡ್ತಿದೆ. ಆದರೆ ಹೊಂಬಾಳೆ ಸಂಸ್ಥೆ ಅದೇ ದಿನ ಡಾರ್ಲಿಂಗ್ ಪ್ರಭಾಸ್ ನಟನೆಯ `ಸಲಾರ್’ ತೆರೆಗೆ ತರುವ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ. ಡಿಸೆಂಬರ್ 22ರಂದು ಹೈವೋಲ್ಟೇಜ್ ಸಲಾರ್ ವಿಶ್ವದಾದ್ಯಂತ ಬಿಡುಗಡೆಯಾಗುವುದು ಪಕ್ಕಾ ಎಂದಿದೆ. ಹೀಗಾಗಿ, ಕನ್‍ಫ್ಯೂಶನ್ ಜೊತೆಗೆ ದೊಡ್ಮನೆ ಭಕ್ತರಲ್ಲಿ ಬೇಸರ ಮೂಡಿದೆ. ಸಲಾರ್‍ಗೂ ಮೊದಲೇ ಯುವ ರಿಲೀಸ್ ಡೇಟ್‍ನ ಫಿಕ್ಸ್ ಮಾಡಿ ಈಗ ಅದೇ ದಿನದಂದು `ಸಲಾರ್’ ತೆರೆಗೆ ತರುತ್ತಿರುವುದು ಎಷ್ಟು ಸರೀ?ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ, ಇರಲಿ ನಿಮ್ಮ ಅಪ್ಪುಗೆ ಅಂತ ಕೇಳಿಕೊಂಡಿದ್ದ ಹೊಂಬಾಳೆ ಮಾಲೀಕರು ಈ ರೀತಿ ಮಾಡಬಹುದಾ?ಹೀಗೊಂದು ಕೊಶ್ಚನ್ ರೈಸ್ ಆಗಿದ್ದು ಇದಕ್ಕೆ ಹೊಂಬಾಳೆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಂದ್ಹಾಗೇ. ಸಿನಿಮಾ ರಿಲೀಸ್ ವಿಚಾರದಲ್ಲಿ ನಿರ್ಮಾಪಕರು ಸ್ವತಂತ್ರರಾಗಿರುತ್ತಾರೆ. ಕೋಟಿ ಕೋಟಿ ಬಂಡವಾಳ ಹೂಡುವ ಅನ್ನದಾತರು ಅವರಾಗಿರುವುದರಿಂದ ಅವರು ನಿಗದಿಪಡಿಸಿದ ದಿನದಂದೇ ಸಿನಿಮಾ ರಿಲೀಸ್ ಮಾಡುವುದು ವಾಡಿಕೆ. ಹೀಗಾಗಿ, ಡೇಟ್ ವಿಚಾರದಲ್ಲಿ ಯುವ ಎಂಟ್ರಿಕೊಡಲು ಸಾಧ್ಯವಿಲ್ಲ ಅನ್ಸುತ್ತೆ. ಅಷ್ಟಕ್ಕೂ, `ಯುವ’ ಸಿನಿಮಾಗಿಂತ `ಸಲಾರ್’ ಚಿತ್ರಕ್ಕೆ ಹೆಚ್ಚಿನ ಬಂಡವಾಳ ಸುರಿದಿರುವುದರಿಂದ ಹಾಕಿದ ಬಂಡವಾಳದ ಜೊತೆಗೆ ಕೋಟಿ ಕೋಟಿ ಲಾಭ ಮಾಡ್ಲೇಬೇಕಿದೆ. ಅಟ್ ದಿ ಸೇಮ್ ಟೈಮ್ `ಸಲಾರ್’ ಗೆಲ್ಲಲೇಬೇಕಿದೆ. ಹೀಗಾಗಿ, ತಮ್ಮ ನಿರ್ಮಾಣ ಸಂಸ್ಥೆಯ ಲಕ್ಕಿ ಮಂತ್ ಡಿಸೆಂಬರ್ ಮೇಲೆ ಹೊಂಬಾಳೆ ಮಾಲೀಕರು ಕಣ್ಣಿಟ್ಟಿದ್ದಾರೆ. ಡಿಸೆಂಬರ್ 22ರಂದು `ಸಲಾರ್’ ಚಿತ್ರವನ್ನ ವಿಶ್ವದಾದ್ಯಂತ ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ. ಅದೇ ದಿನ `ಯುವ’ ಸಿನಿಮಾವನ್ನೂ ರಿಲೀಸ್ ಮಾಡ್ತಾರಾ? `ಸಲಾರ್’ ಎದುರು `ಯುವ’ ಪರ್ವ ಶುರುವಾಗುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್