ಅದ್ಯಾವ ದಿನಕ್ಕಾಗಿ, ಅದ್ಯಾವ ಕ್ಷಣಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಖಂಡ ಅಭಿಮಾನಿಗಳು ಕಾದು ಕುಳಿತಿದ್ದರೋ ಆ ದಿನ ಬಂದೇ ಬಿಟ್ಟಿದೆ. ಭರ್ತಿ 33 ವರ್ಷಗಳಿಂದ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾದು ಕುಳಿತಿದ್ದ ಭಕ್ತಗಣ ಇಂದು ಕೇಕೆ ಹೊಡೆಯುತ್ತಿದೆ. ಪಡೆಯಪ್ಪ ಕೊಟ್ಟ ಸರ್ ಪ್ರೈಸ್‍ಗೆ ಸರಪಟಾಕಿ ಹೊಡೆದು ಸಂಭ್ರಮಿಸುತ್ತಿದೆ. ಶಿವಾಜಿ ಹಾಗೂ ಶೆಹೆನ್ ಷಾಗೆ ಬಹುಪರಾಕ್ ಹಾಕುತ್ತಾ, ಬೆಳ್ಳಿತೆರೆ ಅಂಗಳಕ್ಕೆ ಈ ಇಬ್ಬರು ದಿಗ್ಗಜರನ್ನು ಬರಮಾಡಿಕೊಳ್ಳುವ ದಿವ್ಯಕ್ಷಣಕ್ಕಾಗಿ ಹೀಗಿಂದಲೇ ಕಾತರಿಸುತ್ತಿದೆ.
ಭಾರತೀಯ ಚಿತ್ರರಂಗದ ಈ ಇಬ್ಬರು ದಂತಕಥೆಗಳನ್ನು ಒಟ್ಟುಗೂಡಿಸಿ ಸಿನಿಮಾ ಮಾಡುತ್ತಿರುವ ಬಗ್ಗೆ ಲೈಕಾ ಸಂಸ್ಥೆ ಅಧಿಕೃತ ಘೋಷಣೆ ಮಾಡಿತ್ತು. ತಲೈವಾ 170 ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ತಿದ್ದಾರೆಂದು ಪೋಸ್ಟರ್ ಹಂಚಿಕೊಂಡಿತ್ತು. ಅಂದೇ ಈ ಇಬ್ಬರು ದಿಗ್ಗಜರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಆದರೆ ಇವತ್ತು ಬಾಷಾ, ಬಾಲಿವುಡ್ ಬಾದ್‍ಷಾ ಅಮಿತಾಬ್‍ರನ್ನ ಭೇಟಿ ಮಾಡುವ ಮೂಲಕ ಅಭಿಮಾನಿ ದೇವರುಗಳು ಹಾಗೂ ಸಮಸ್ತ ಸಿನಿಮಾ ಪ್ರೇಮಿಗಳು ಹುಚ್ಚೇಳುವಂತೆ ಮಾಡಿದ್ದಾರೆ.
ಹೌದು, ಕಳೆದೊಂದು ತಿಂಗಳಿಂದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದ ಪಡೆಯಪ್ಪ ಕೊಂಚ ಫ್ರೀ ಮಾಡ್ಕೊಂಡು ಮುಂಬೈ ಫ್ಲೈಟ್ ಏರಿದ್ದಾರೆ. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಸೀದಾ ಬಿಗ್ ಬಿ ಮನೆಗೆ ಎಂಟ್ರಿಕೊಟ್ಟಿರೋ ಬಾಬಾ, ಶಮಿತಾಬ್ ಜೊತೆ ಮಾತುಕತೆ ನಡೆಸಿ ಫೋಟೋಗೆ ಸ್ಮೈಲ್ ಮಾಡಿದ್ದಾರೆ. ವಿಶೇಷ ಅಂದರೆ ಬಾಲಿವುಡ್ ಬಾದ್‍ಷಾ, ನಮ್ಮ ಬಾಷಾ ಹೆಗಲ ಮೇಲೆ ಕೈಹಾಕಿ ಮಂದಹಾಸ ಬೀರಿದ್ದಾರೆ. ಆ ಫೋಟೋನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತಲೈವಾ, 33 ವರ್ಷದ ನಂತರ ನನ್ನ ಗುರು ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವೀಗ ಸಂತೋಷದಿಂದ ಬಡಿದುಕೊಳ್ತಿದೆ ಎಂದು ತಮ್ಮ ಮನಸ್ಸಿನ ಮಾತನ್ನು ಪದಗಳಲ್ಲಿ ಬಣ್ಣಿಸಿದ್ದಾರೆ.
ಅಂದ್ಹಾಗೇ, ಈ ಇಬ್ಬರು ದಿಗ್ಗಜರು ಸುಮಾರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. 1991ರಲ್ಲಿ ಹಮ್ ಎಂಬ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಅಲ್ಲಿಂದ ಮತ್ತೆ ಒಟ್ಟಿಗೆ ಅಭಿನಯಿಸಿಲ್ಲ. ಅತ್ಯುತ್ತಮ ಗೆಳೆಯರಾಗಿರುವ ಇವರಿಬ್ಬರನ್ನು ಒಂದೇ ಫ್ರೇಮ್ ನಲ್ಲಿ ನೋಡಲು ಕಾಯ್ತಿದ್ದ ಫ್ಯಾನ್ಸ್ ಆಸೆ ಈಡೇರಿಸ್ತಿದೆ ಲೈಕಾ..ಅಷ್ಟಕ್ಕೂ ರಜನಿ ಹಾಗೂ ಅಮಿತಾಬ್ ಬಚ್ಚನ್ ನಂತಹ ಇಬ್ಬರು ಘಟಾನುಘಟಿಗಳಿಗೆ ಆಕ್ಷನ್ ಕಟ್ ಹೇಳೋದು ಅಂದ್ರೆ ಸುಮ್ಮನೇ ಮಾತಲ್ಲ. ಅಂತಹ ದಿಗ್ಗಜ ಡೈರೆಕ್ಟರ್ ಬೇಕು. ಅವ್ರು ಮತ್ಯಾರು ಅಲ್ಲ ಟಿಜೆ ಜ್ಞಾನವೇಲ್
ರಜನಿ 170ನೇ ಚಿತ್ರದ ಸೂತ್ರಧಾರ ಈ ಜ್ಞಾನವೇಲ್..ಹಾಗಿದ್ರೆ ಯಾರು ಈ ಜ್ಞಾನವೇಲ್ ಎಂಬ ಸರಳ ಪ್ರಶ್ನೆಗೆ ಉತ್ತರ ಜೈಭೀಮ್ ಡೈರೆಕ್ಟರ್.. ಬರಹಗಾರರಾಗಿ ಕಾಲಿವುಡ್ ನಲ್ಲಿ ಸಿನಿಪಯಣ ಆರಂಭಿಸಿದ ಜ್ಞಾನವೇಲ್ ಇಲ್ಲಿವರೆಗೆ ನಿರ್ದೇಶನ ಮಾಡಿರೋದು ಎರಡೇ ಸಿನಿಮಾ. ಹಾಗಂತ ಅವರ ಪ್ರತಿಭೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಯಾಕಂದ್ರೆ ಟಿಜೆ ಜ್ಞಾನವೇಲ್ ನಿರ್ದೇಶನ ಎರಡನೇ ಸಿನಿಮಾವೇ ಆಸ್ಕರ್ ರೇಸ್ ಗಿಳಿದಿತ್ತು. ಅದೀಗ ಇತಿಹಾಸ. ಇಂತಹ ಐತಿಹಾಸಿಕ ಸಿನಿಮಾ ಕೊಟ್ಟ ಟಿಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳ್ತಿರುವುದು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಅವರಿಗೆ ಹೀಗಿದ್ಮೇಲೆ ಕುತೂಹಲ ಹುಟ್ಟಿಕೊಳ್ಳದೇ ಇರುತ್ತಾ? ಆಫ್ ಕೋರ್ಸ್..ಈ ದಿಗ್ಗಜ ಸ್ಟಾರ್ಸ್ ಗೆ ಜ್ಞಾನವೇಲ್ ಯಾವ ರೀತಿ ಕಥೆ ಮಾಡಲಿದ್ದಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.
ತಲೈವರ್ 170 ಸಿನಿಮಾದಲ್ಲಿ ಅಮಿತಾಬ್ ಮಾತ್ರವಲ್ಲ ಬಾಹುಬಲಿ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಭಾಟಿ, ಪುಷ್ಪ ಖ್ಯಾತಿಯ ಫಹಾದ್ ಫಾಸಿಲ್, ಮಂಜು ವಾರಿಯರ್, ದುಶಾರಾ ವಿಜಯನ್, ರಿತಿಕಾ ಸಿಂಗ್ ನಂತಹ ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿದೆ. ರಾಕ್ ಸ್ಟಾರ್ ಅನಿರುದ್ಧ್ ಒನ್ಸ್ ಎಗೇನ್ ರಜನಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ದೊಡ್ಡ ಕ್ಯಾನ್ವಸ್ ಸಿನಿಮಾಗೆ ಹಣ ಹಾಕುತ್ತಿದೆ. ಹೇಳಿಕೇಳಿ ಲೈಕಾ ರಜನಿ ಕಾಂಬಿನೇಷನ್ ನ ಮೂರನೇ ಸಿನಿಮಾ ಇದು. ಈ ಹಿಂದೆ ಕಾಲಾ, 2.0 ಚಿತ್ರ ನಿರ್ಮಿಸಿದ್ದ ಲೈಕಾ ಮತ್ತೆ ತಲೈವರ್ ಜೊತೆ ಶೇಕ್ ಹ್ಯಾಂಡ್ ಮಾಡಿದೆ. ಸದ್ಯ ತಲೈವರ್ 170ನೇ ಸಿನಿಮಾದ ಸೆಕೆಂಡ್ ಷೆಡ್ಯೂಲ್ಡ್ ಶೂಟಿಂಗ್ ಮುಂಬೈನಲ್ಲಿ ಚಾಲುವಾಗಿದೆ. ಜಸ್ಟ್ 20 ದಿನ ಕಾಲ್ ಶೀಟ್ ನೀಡಿರುವ ಬಾಲಿವುಡ್ ದಂತಕಥೆ ಅಮಿತಾಬ್ ಪಡೆಯುತ್ತಿರೋದು ಬರೋಬ್ಬರಿ 20 ಕೋಟಿಯಂತೆ. ಹಾಗಿದ್ರೆ ರಜನಿ ಈ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು ಎಂಬ ಲೆಕ್ಕಚಾರ ಶುರುವಾಗಿದೆ.