ಯುವ ಪ್ರತಿಭೆ ಮಂಜುನಾಥ್ ಬಿ. ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ ‘ಗರುಡ ಪುರಾಣ’ ಚಿತ್ರದ ಟ್ರೇಲರ್ ದಸರಾ ಹಬ್ಬದ ವಿಜಯದಶಮಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಗರುಡ ಪುರಾಣ’ ಸಿನಿಮಾದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೀಗ ‘ಗರುಡ ಪುರಾಣ’ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಚಿತ್ರದ ಕಥೆಯ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ ಈ ಸಿನಿಮಾಕ್ಕೆ ‘ಗರುಡ ಪುರಾಣ’ ಎಂದು ಶೀರ್ಷಿಕೆ ಇಡಲಾಗಿದೆ ಎಂಬುದು ಚಿತ್ರತಂಡದ ಮಾತು. ‘27 ಫ್ರೇಮ್ ಕ್ರಿಯೇಷನ್ಸ್’ ಲಾಂಛನದಲ್ಲಿ ಸಿಂಧು ಕೆ. ಎಂ ಮತ್ತು ಬಿ. ಎಲ್ ಯೋಗೇಶ್ ಕುಮಾರ್ ನಿರ್ಮಿಸಿರುವ, ‘ಗರುಡ ಪುರಾಣ’ ಸಿನಿಮಾದ ಮೂಲಕ ಮಂಜುನಾಥ್ ಬಿ. ನಾಗಬಾ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ‘ಗರುಡ ಪುರಾಣ’ ಚಿತ್ರದಲ್ಲಿ ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ‘ಭಜರಂಗಿ’ ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ‘ಗರುಡ ಪುರಾಣ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಗರುಡ ಪುರಾಣ’ ಸಿನಿಮಾದ ಟ್ರೇಲರ್ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಇದೇ ನವೆಂಬರ್ 3 ರಂದು ಚಿತ್ರ ತೆರೆಗೆ ಬರಲಿದೆ.