ಮಾಜಿ ಸಚಿವ ಮತ್ತು ನಟ ಬಿ. ಸಿ. ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ‘ಗರಡಿ’ ಸಿನಿಮಾದ ಟ್ರೇಲರ್ ನವೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ರಾಣಿಬೆನ್ನೂರಿನ ಮುನ್ಸಿಪಲ್ ಗ್ರೌಂಡ್ ನಲ್ಲಿ ನವೆಂಬರ್ 1 ರಂದು ಸಂಜೆ 6.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಗರಡಿ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.
ಇತ್ತೀಚಿಗೆ ‘ಗರಡಿ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ‘ಯು/ಎ’ ಪ್ರಮಾಣಪತ್ರ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುತ್ತಿದೆ. ‘ಸೌಮ್ಯ ಫಿಲಂಸ್’ ಹಾಗೂ ‘ಕೌರವ ಪ್ರೊಡಕ್ಷನ್ ಹೌಸ್’ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ ‘ಗರಡಿ’ ಸಿನಿಮಾಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನವಿದೆ.
‘ಗರಡಿ’ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಉಳಿದಂತೆ ಬಿ. ಸಿ. ಪಾಟೀಲ್, ಸೋನಾಲ್ ಮೊಂತೆರೊ, ರವಿಶಂಕರ್, ಧರ್ಮಣ್ಣ, ಸುಜಯ್ ಬೇಲೂರ್, ರಾಘವೇಂದ್ರ, ಚೆಲುವರಾಜ್, ಬಲ ರಾಜವಾಡಿ, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ‘ಗರಡಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ‘ಗರಡಿ’ ಸಿನಿಮಾ ಇದೇ ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.





