ಅದು ಸಾವಿರಾರು ಜನ ಬೈಕರ್ಸ್ ಒಂದು ಕಡೆ ಸೇರಿದ್ದ ಸಂದರ್ಭ. ಕೆಂಗೇರಿ ಬಳಿ ಅಕ್ಟೋಬರ್ ಫೆಸ್ಟ್ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಯ ಬೈಕ್ ರೇಸರ್ಗಳು ಅಲ್ಲಿ ಜಮಾಯಿಸಿದ್ದರು. ಪುನೀತ್ ರಾಜ್ ಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಎಲ್ಲ ಬೈಕರ್ ಗಳು ಅಪ್ಪು ಅವರನ್ನು ಸ್ಮರಿಸಿಕೊಂಡು ‘ಬೊಂಬೆ ಹೇಳುತೈತೆ’ ಹಾಡನ್ನು ಆಲಿಸಿದರು.

ಇದೇ ಸಂದರ್ಭದಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದ ʻಆರಂಭ…ʼ ಎನ್ನುವ ಹಾಡನ್ನು ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಮಾತನಾಡಿದ ನಿರ್ದೇಶಕ ಅರವಿಂದ್ ಕೌಶಿಕ್, ‘ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದರು. ಸಿನಿಮಾ ನಟನೆಯ ಜೊತೆಗೆ ಅಡ್ವೆಂಚರ್ ಅನ್ನು ತುಂಬಾನೇ ಇಷ್ಟ ಪಡುತ್ತಿದ್ದವರು. ಅಪ್ಪು ಅವರ ಪುಣ್ಯ ಸ್ಮರಣೆಯ ಈ ಘಳಿಗೆಯಲ್ಲಿ ಬಿಡುಗಡೆ ಮಾಡುತ್ತಿರುವ ʼಆರಂಭʼ ಹಾಡನ್ನು ಅವರಿಗೇ ಅರ್ಪಿಸುತ್ತಿದ್ದೇವೆ’ ಎಂದು ನಿರ್ದೇಶಕ ಹೇಳಿದರು.

‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದ ಮೂಲಕ ಹೀರೋ ಆಗಿ ಬಿಗ್ ಬಾಸ್ ಸ್ಪರ್ಧಿ ಮತ್ತು ಬೈಕರ್ ಕೆ. ಪಿ. ಅರವಿಂದ್ ಲಾಂಚ್ ಆಗುತ್ತಿದ್ದಾರೆ. ಮೂಲತಃ ಬೈಕರ್ ಆಗಿರುವ ಅರವಿಂದ್ ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದಲ್ಲಿ ಕೂಡಾ ಬೈಕರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ, ವಿಶೇಷವಾಗಿ ಬೈಕರ್ಸ್ ಸಮುದಾಯದ ನಡುವೆಯೇ ಈ ಹಾಡು ಅನಾವರಣಗೊಂಡಿದೆ. ‘ಬಕ್ಸಸ್ ಮೀಡಿಯಾ’, ‘ಆರ್ಎಸಿ ವಿಷುವಲ್ಸ್ ಮತ್ತು’ ಲೈಟ್ಹೌಸ್ ಮೀಡಿಯಾ’ ಸಹಕಾರದೊಂದಿಗೆ ಈ ಸಿನಿಮಾ ನಿರ್ಮಾಣವಾಗಿದೆ. ಅರವಿಂದ್, ದಿವ್ಯಾ ಉರುಡುಗ ಅವರೊಂದಿಗೆ ರ್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಮತ್ತಿತರರು ‘ಅರ್ಧಂಬರ್ಧ ಪ್ರೇಮಕಥೆ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





