ಕನ್ನಡದ ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಮೊಮ್ಮಗ ಹಾಗೂ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ‘ಗೌರಿ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.

ಇತ್ತೀಚೆಗೆ ನಾಯಕ ಸಮರ್ಜಿತ್ ಲಂಕೇಶ್ ಹುಟ್ಟುಹಬ್ಬವನ್ನು ಚಿತ್ರತಂಡದ ಸದಸ್ಯರು ಆಚರಿಸಿದರು. ಸಮರ್ಜಿತ್ ಅವರ ಅಜ್ಜಿ, ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್, ತಾಯಿ ಅರ್ಪಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಾಯಕಿ ಸಾನ್ಯಾ ಅಯ್ಯರ್, ನಟಿಯರಾದ ಮಾನಸಿ ಸುಧೀರ್, ಎಸ್ತರ್ ನರೋನ, ಹಿರಿಯ ಛಾಯಾಗ್ರಾಹಕ ಕೆ. ಕೃಷ್ಣಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮಾತನಾಡಿದ ಚಿತ್ರತಂಡ, ‘ಗೌರಿ’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈಗಾಗಲೇ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ ಎಂದು ಮಾಹಿತಿ ನೀಡಿದೆ.

ಸಮರ್ಜಿತ್ ನಾವು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ಹಿರಿಯ ಛಾಯಾಗ್ರಾಹಕ ಕೆ. ಕೃಷ್ಣಕುಮಾರ್ ಛಾಯಾಗ್ರಹಣದ ನೂರನೇ ಚಿತ್ರ ಇದಾಗಿದೆ. ಆದಷ್ಟು ಬೇಗ ‘ಗೌರಿ’ ಸಿನಿಮಾ ತೆರೆಗೆ ಬರಲಿದೆ ಎಂದರು ನಿರ್ದೇಶಕ ಇಂದ್ರಜಿತ್ ಲಂಕೇಶ್.
ಇನ್ನು ‘ಗೌರಿ’ ಸಿನಿಮಾದ ನಾಯಕ ಸಮರ್ಜಿತ್ ತಮ್ಮ ಹುಟ್ಟುಹಬ್ಬವನ್ನು ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ತೆರಳಿ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು. ಆನಂತರ ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.





