ಬಿಟೌನ್ ಕಿಂಗ್ ಖಾನ್ ಶಾರುಖ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ಬಾದ್ಷಾ ಈ ಭಾರಿ ಗ್ರ್ಯಾಂಡ್ ಆಗಿ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿರುವ ಶಾರುಖ್, ಮಧ್ಯರಾತ್ರಿಯೇ ಮನ್ನತ್ ಮನೆಮುಂದೆ ಬಂದಿದ್ದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ದೇಶದ ನಾನಾ ಭಾಗಗಳಿಂದ ಸಾಗರೋಪಾದಿಯಲ್ಲಿ ಹರಿದುಬಂದ ಅಭಿಮಾನಿ ದೇವರುಗಳನ್ನು ಕಂಡು ಬೆರಗಾದ ಕಿಂಗ್ ಖಾನ್, ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿ ಅಖಂಡ ಅಭಿಮಾನಿ ಬಳಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ. `ನಾನು ಕೇವಲ ನಟ ಅಷ್ಟೇ ನಿಮ್ಮನ್ನು ಸ್ವಲ್ಪ ಮಟ್ಟಿಗೆ ಮನರಂಜಿಸುತ್ತೇನೆ. ಅದಕ್ಕೆ ಪ್ರತಿಯಾಗಿ ನೀವು ತೋರಿಸ್ತಿರುವ ಪ್ರೀತಿ ಕಂಡು ದಿಗ್ಭ್ರಾಂತನಾಗಿದ್ದೇನೆ’. ಈ ಭಾರಿಯ ಬರ್ತ್ಡೇ ಸೆಲಬ್ರೇಷನ್ನ ನನ್ನ ಕೈಲಿ ನಂಬೋದಕ್ಕೆ ಅಸಾಧ್ಯ ಎಂದಿರುವ ಬಾದ್ಷಾ, ನಿಮ್ಮ ಪ್ರೀತಿಯ ಕನಸಲ್ಲಿ ಬದುಕುತ್ತೇನೆ. ನಿಮ್ಮೆಲ್ಲರನ್ನು ರಂಜಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ.

ಇನ್ನೂ, ಬಾಲಿವುಡ್ ಬಾದ್ ಷಾಗೆ ಈ ವರ್ಷದ ಬರ್ತ್ಡೇ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಮರೀಚಿಕೆಯಾಗಿದ್ದ ಗೆಲುವು ಮರಳಿ ಸಿಕ್ಕಿದೆ. ಸೋಲಿನ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದ್ದ ಸುಲ್ತಾನ್ಗೆ ಸಕ್ಸಸ್ ಕೈ ಹಿಡಿದಿದೆ. ಪಠಾಣ್, ಜವಾನ್ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿ ಕಿಂಗ್ ಖಾನ್ ಹಳೆಯ ಫಾರ್ಮ್ಗೆ ಮರಳುವಂತೆ ಮಾಡಿವೆ. ಸೋತ ಜಾಗದಲ್ಲೇ ಗೆದ್ದು ಗಹಗಹಿಸೋದಕ್ಕೆ ಈ ಎರಡು ಸಿನಿಮಾಗಳು ಸಾಥ್ ಕೊಟ್ಟಿವೆ. ಕಿಂಗ್ ಈಸ್ ಆಲ್ವೇಸ್ ಕಿಂಗ್ ಅನ್ನೋದನ್ನ ಪ್ರೂ ಮಾಡೋದಕ್ಕೆ ಪಠಾಣ್, ಜವಾನ್ ಚಿತ್ರಗಳು ಸಹಕರಿಸಿವೆ. ಮನ್ನತ್ ಮನೆಯಿಂದ ಮರೆಯಾಗಿದ್ದ ಅದೃಷ್ಟ ಅನ್ನೋ ಅಶ್ವಮೇಧ ಕುದುರೆಯನ್ನ ವಾಪಾಸ್ ಮನ್ನತ್ ಮನೆಮುಂದೆ ತಂದು ಕಟ್ಟಾಕಿವೆ. ಹೀಗಾಗಿ, ಕಿಂಗ್ ಖಾನ್ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ 58ನೇ ವರ್ಷದ ಹುಟ್ಟುಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿಕೊಳ್ತಿದ್ದಾರೆ. ವಿಶೇಷ ಅಂದರೆ ಜನುಮದಿನದ ಸಂಭ್ರಮದಲ್ಲಿರುವ ಬಾದ್ಷಾಗೆ `ಡಂಕಿ’ ಸಾರಥಿ ರಾಜ್ಕುಮಾರ್ ಹಿರಾನಿ `ಡಂಕಿ ಡ್ರಾಪ್-1′ ವಿಡಿಯೋ ರಿಲೀಸ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದಾರೆ.

`ಡಂಕಿ’ ಬಾಜೀಘರ್ ಹೀರೋ ಹಾಗೂ ರಾಜ್ಕುಮಾರ್ ಹಿರಾನಿ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವೀ. ಫಾರ್ ದಿ ಫಸ್ಟ್ ಟೈಮ್ ಈ ಕ್ರೇಜಿ ಜೋಡಿ ಕೈಜೋಡಿಸಿದ್ದು ಕುತೂಹಲ ಕೆರಳಿಸಿದೆ. ಟೈಟಲ್ ಟೀಸರ್ನಿಂದ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದ್ದ `ಡಂಕಿ’ ಈಗ `ಡಂಕಿ ಡ್ರಾಪ್-1′ ವಿಡಿಯೋದಿಂದ ಸುದ್ದಿಯಾಗ್ತಿದೆ. ಇದೇನಿದು `ಡಂಕಿ ಡ್ರಾಪ್-1′ ಅಂತ ಮೂವೀ ಲವ್ವರ್ಸ್ ಮಾತ್ರವಲ್ಲ ಮೂವೀ ಮೇಕರ್ಸ್ಗಳು ಕೂಡ ತಲೆ ಕೆಡಿಸಿಕೊಂಡಿದ್ದಾರೆ. ಪ್ರೀತಿ ಮತ್ತು ಸ್ನೇಹದ ಹೂರಣವನ್ನೊತ್ತು ಬರುತ್ತಿರುವ `ಡಂಕಿ’ ಚಿತ್ರದಲ್ಲಿ ಕಾಮಿಡಿ, ಎಮೋಷನ್, ಡ್ರಾಮ, ರೊಮ್ಯಾನ್ಸ್ ಎಲ್ಲವೂ ಇದೆ. ಸಿನಿಮಾ ಪ್ರೇಮಿಗಳಿಗೆ ಮನರಂಜನೆ ನೀಡೋದ್ರ ಜೊತೆಗೆ ಸೊಸೈಟಿಗೆ ಒಂದು ಮೆಸೇಜ್ ಕೂಡ ಇದೆ. ಅದೇನು ಅನ್ನೋದು ಇದೇ ಕ್ರಿಸ್ಮಸ್ ಹಬ್ಬದಂದು ತಿಳಿಯಲಿದೆ. ದಿಯಾ ಮಿರ್ಜಾ, ಥಾಪ್ಸಿ ಪನ್ನು, ಬೊಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್ ಸೇರಿದಂತೆ ಅತೀ ದೊಡ್ಡ ತಾರಾಬಳಗದ `ಡಂಕಿ’ ಸಿನಿಮಾ ವಿಶ್ವದಾದ್ಯಂತ ಕಣಕ್ಕಿಳಿಯಲು ಸಜ್ಜಾಗಿದ್ದು, `ಸಲಾರ್’ ಎದುರು ಸ್ಪರ್ಧಿಸಲು ಸಿದ್ದವಾಗಿದೆ.
ಸಲಾರ್ ವರ್ಸಸ್ ಡಂಕಿ ಫೈಟ್ ಬಗ್ಗೆ ಬಹುಷಃ ನಿಮಗೆಲ್ಲ ತಿಳಿದೇಯಿದೆ. ಡಾರ್ಲಿಂಗ್ ಪ್ರಭಾಸ್ ನಟನೆಯ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ಹಾಗೂ ಕಿಂಗ್ ಖಾನ್ ಶಾರುಖ್ `ಡಂಕಿ’ ಒಂದೇ ದಿನ ಕಣಕ್ಕಿಳಿಯುತ್ತವೆ ಅನ್ನೋದು ಹಳೆಯ ಸುದ್ದಿ. ಆದರೆ, ಇತ್ತೀಚೆಗೆ `ಡಂಕಿ’ ಫಿಕ್ಸಾದ ಡೇಟ್ಗೆ ರಿಲೀಸ್ ಆಗ್ತಿಲ್ಲವಂತೆ. ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆಯಂತೆ ಅನ್ನೋ ಸುದ್ದಿ ಹಬ್ಬಿತ್ತು. ಕೆಜಿಎಫ್ ಎದುರು ಜೀರೋ ಸಿನಿಮಾ ರಿಲೀಸ್ ಮಾಡಿ ಮಕಾಡೆ ಮಲಗಿದ ಬಾದ್ಷಾ `ಸಲಾರ್’ ಸಿನಿಮಾಗೆ ಹೆದರಿರಬಹುದು. ಅದಕ್ಕಾಗಿ ಮುಂದಿಟ್ಟ ಹೆಜ್ಜೆನಾ ಹಿಂತೆಗೆದುಕೊಂಡಿರಬಹುದು ಅಂತ ಸುದ್ದಿಯಾಗಿತ್ತು. ಅದಕ್ಕೆಲ್ಲಾ ಇವತ್ತು ಬಿಗ್ ಬ್ರೇಕ್ ಬಿದ್ದಿದೆ. ಯಾವ `ಸಲಾರ್’ಗೂ ಹೆದರೋ ಮಾತೇಯಿಲ್ಲ ಅನ್ನೋದು `ಡಂಕಿ ಡ್ರಾಪ್-1′ ವಿಡಿಯೋ ಮೂಲಕ ಖಚಿತವಾಗಿದೆ. ಇದೇ ಡಿಸೆಂಬರ್ 22ರಂದು ಮೋಸ್ಟ್ ಅವೈಟೆಡ್ ಡಂಕಿ ತೆರೆಗಪ್ಪಳಿಸಲಿದೆ. ಅದೇ ದಿನ ಕೆಜಿಎಫ್ ಕ್ಯಾಪ್ಟನ್ ಬತ್ತಳಿಕೆಯಿಂದ ತಯಾರಾಗಿರೋ `ಸಲಾರ್’ ಎನ್ನುವ ಶಿಲೆ ವಲ್ಡ್ ವೈಡ್ ಅನಾವರಣಗೊಳ್ಳಲಿದೆ.
ನಿಮಗೆಲ್ಲ ಗೊತ್ತಿರುವ ಹಾಗೇ `ಸಲಾರ್’ ಮೇಲೆ ನಿರೀಕ್ಷೆ ಹೆಚ್ಚಿದೆ. ಪ್ರಭಾಸ್ ಸಿನಿಮಾ ಅನ್ನೋದಕ್ಕಿಂತ ಕೆಜಿಎಫ್ ಸಾರಥಿಯ ಚಿತ್ರ ಅನ್ನೋ ಕಾರಣಕ್ಕೆ ವಿಶ್ವ ಸಿನಿದುನಿಯಾವೇ ಕಣ್ಣರಳಿಸಿದೆ. ಅಟ್ ದಿ ಸೇಮ್ ಟೈಮ್ `ಡಂಕಿ’ ರಾಜ್ಕುಮಾರ್ ಹಿರಾನಿ ಕೈಚಳಕದ ಕಥೆ ಅನ್ನೋ ಕಾರಣಕ್ಕೆ ಕುತೂಹಲ ಗರಿಗೆದರಿದೆ. ಮುನ್ನಭಾಯ್ ಎಂಬಿಬಿಎಸ್, ತ್ರಿಈಡಿಯಟ್ಸ್, ಪಿಕೆ, ಸಂಜು ಹೀಗೆ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನೇ ಕೊಟ್ಟಿರುವ ಹಿರಾನಿ, `ಡಂಕಿ’ ಮೂಲಕ ಪ್ಯಾನ್ ವಲ್ರ್ಡ್ ಲೋಕವನ್ನ ಥಂಡಾ ಹೊಡೆಸ್ತಾರೆನ್ನುವ ನಿರೀಕ್ಷೆಯಿದೆ. `ಸಲಾರ್’ಗಾಗಿ ಹೊಂಬಾಳೆ ನೀರಿನಂತೆ ಹಣ ಖರ್ಚು ಮಾಡಿದೆ. ಅತ್ತ JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ `ಡಂಕಿ’ ಗಾಗಿ ಡ್ರಮ್ಗಟ್ಟಲೇ ಬಂಡವಾಳ ಹೂಡಿದೆ. `ಡಂಕಿ’ ಗೆಲ್ಲಲೇಬೇಕೆನ್ನುವ ಪಣತೊಟ್ಟೇ ಆರಂಭದಿಂದ ಕೆಲಸ ಮಾಡಿದ್ದಾರೆ. ಈ ಮಧ್ಯೆ ಪಠಾಣ್ ಹಾಗೂ ಜವಾನ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಉಡೀಸ್ ಮಾಡಿವೆ. ಹೀಗಾಗಿ ಕಿಂಗ್ ಖಾನ್, `ಮೈ ನೇಮ್ ಈಸ್ ಖಾನ್’ ಎನ್ನುತ್ತಾ ಮೀಸೆ ತಿರುವುತ್ತಿದ್ದಾರೆ. `ಡಂಕಿ’ ಮೂಲಕ ಹ್ಯಾಟ್ರಿಕ್ ಗೆಲುವು ಕಾಣುವ ಕಾತುರದಲಿದ್ದಾರೆ. ಇನ್ನೂ, ಬಾಹುಬಲಿ ನಂತರ ಬರೀ ಸೋಲನ್ನೇ ಕಂಡಿರೋ ಪ್ರಭಾಸ್, `ಸಲಾರ್’ ಮೂಲಕ ಸಕ್ಸಸ್ ಎದುರುನೋಡ್ತಿದ್ದಾರೆ. ಹೀಗಾಗಿ, ಗೆಲುವು ಯಾರ ಮುಡಿಗೆ? ಪ್ರೇಕ್ಷಕರು ಇಬ್ಬರಲ್ಲಿ ಯಾರನ್ನ ಕೈಹಿಡಿಯುತ್ತಾರೆ? ಕ್ರಿಸ್ಮಸ್ ಕಾಳಗದಲ್ಲಿ ಸಕ್ಸಸ್ ಚುಕ್ಕಾಣಿ ಹಿಡಿದು ಗಹಗಹಿಸೋದ್ಯಾರು? ಕಾದುನೋಡಬೇಕು ಅಷ್ಟೇ.





