`ಸಪ್ತ ಸಾಗರದಾಚೆ ಎಲ್ಲೋ’- ಸೈಡ್ ಬಿ’ ಸ್ಯಾಂಡಲ್ವುಡ್ ಸಿನಿಪ್ರೇಕ್ಷಕರನ್ನ ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳನ್ನೇ ಕಣ್ಣರಳಿಸಿ ಕಾಯುವಂತೆ ಮಾಡಿದ್ದ ಚಿತ್ರ. ಫೈನಲೀ ಮೂವೀ ಲವ್ವರ್ಸ್ ಕಾತುರಕ್ಕೆ ಬ್ರೇಕ್ ಬಿದ್ದಿದೆ, ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್-2 ತೆರೆಗೆ ಬಂದಿದೆ. ಬೆಳ್ಳಿಪರದೆ ಮೇಲೆ ಮನು-ಪ್ರಿಯಾ ಪ್ರೇಮಗಾಥೆ ಅನಾವರಣಗೊಂಡಿದ್ದು, ಕೆಜಿಎಫ್ ಚಾಪ್ಟರ್-2 ನಲ್ಲಿ ರಾಕಿ ಚಿನ್ನ ಸಮೇತ ಸಮುದ್ರದಲ್ಲಿ ಮುಳುಗಿದಂತೆ, ಮನು ಉರುಫ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಪ್ತಸಾಗರದಲ್ಲಿ ಮುಳುಗಿದ್ದಾರೆ. ಪಾರ್ಟ್-3 ಸುಳಿವೂ ಕೂಡ ಸಿಕ್ಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮನು ಎಲ್ಲರ ಹೃದಯದಲ್ಲೂ ಅಚ್ಚೊತ್ತಿದ್ದಾರೆ. ಹುಡುಗೀರಂತೂ ತಮ್ಮ ತಮ್ಮ ಮನೆದೇವರಿಗೆ ಮನು ಥರ ಪ್ರೇಮಿ ಸಿಗಲೆಂದು ಥಿಯೇಟರ್ನಲ್ಲಿ ಕುಂತ್ಕೊಂಡೆ ಹರಕೆ ಕಟ್ಟಿಕೊಳ್ತಿದ್ದಾರೆ. ಅಷ್ಟರ ಮಟ್ಟಿಗೆ ಮನು ಹುಡುಗೀರ್ ಮನಸ್ಸಿಗೆ ಹಿಡಿಸಿದ್ದಾರೆ. ಮನು ಜೀವನದಲ್ಲಿ ಬರುವ ಪ್ರಿಯಾ, ಸುರಭಿ ನೋಡುಗರನ್ನ ಕಾಡುತ್ತಾರೆ. ಅಚ್ಚರಿ ಏನ್ಗೊತ್ತಾ, ಪ್ರೀತಿ- ಪ್ರೇಮ ವಿಚಾರದಲ್ಲಿ ತಾನು ಕರ್ಣನೇ ಎಂಬುದನ್ನ ಮನು ಉರುಫ್ ರಕ್ಷಿತ್ ಶೆಟ್ಟಿ ಪ್ರೂ ಮಾಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ನೋಡಿದವರಿಗೆ ಕಥೆ ಎಲ್ಲಿಗೆ ಎಂಡ್ ಆಗಿತ್ತು ಎಂಬುದು ಗೊತ್ತಿರುತ್ತೆ. ಆದರೂ, ಚಿಕ್ಕದಾಗಿ ರೀಕಾಲ್ ಮಾಡಿಕೊಳ್ಳುವುದಾದರೆ ತನ್ನ ಹೃದಯ ಗೆದ್ದ ಚೆಲುವೆ ಪ್ರಿಯಾ(ರುಕ್ಮಿಣಿ ವಸಂತ್) ಆಸೆ-ಕನಸುಗಳನ್ನ ಈಡೇರಿಸಬೇಕು ಅಂತ ಮನು(ರಕ್ಷಿತ್ ಶೆಟ್ಟಿ) ಒಂದು ರಿಸ್ಕ್ ತಗೋತ್ತಾನೆ. ತಾನು ಮಾಡದ ತಪ್ಪನ್ನ ತನ್ನ ಮೇಲೆ ಹಾಕ್ಕೊಂಡು ಜೈಲಿಗೆ ಹೋಗಿ 10 ವರ್ಷಗಳ ಕಾಲ ನರಕ ಅನುಭವಿಸ್ತಾನೆ. ನೀನು ಜೈಲಿಂದ ಬರುವವರೆಗೂ ಕಾಯ್ತೀನಿ ಮನು ಅಂತ ಮಾತುಕೊಟ್ಟ ಪ್ರೇಯಸಿ ಪ್ರಿಯ ಮನೆಯವರ ಒತ್ತಾಯದ ಮೇರೆಗೆ ಬೇರೆಯವರ ಜೊತೆಗೆ ಮದುವೆಗೆ ಸಿದ್ದಗೊಳ್ತಾಳೆ. ಇಲ್ಲಿಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಎಂಡ್ ಆಗಿತ್ತು. ಮನು ಬದುಕಲ್ಲಿ ಸುರಭಿ ಅನ್ನೋ ಹುಡುಗಿ ಬರುವುದರ ಸೂಚನೆ ಕೂಡ ಕ್ಲೈಮ್ಯಾಕ್ಸ್ನಲ್ಲಿ ತಿಳಿದಿತ್ತು. ಈಗ `ಸಪ್ತ ಸಾಗರದಾಚೆ ಎಲ್ಲೋ’- ಸೈಡ್ ಬಿ’ ತೆರೆದುಕೊಂಡಿದೆ.
ಮನು ನೀನು ಜೈಲಿಂದ ರಿಲೀಸ್ ಆಗುವ ದಿನ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿಕೊಳ್ತೀನಿ. ದೊಡ್ಡದಾಗಿ ಸೆಲೆಬ್ರೇಷನ್ ಮಾಡೋಣ ಅಂತೇಳಿದ್ದ ಪ್ರಿಯಾ, ಮನೆಯವರು ತೋರಿಸಿದ ಹುಡುಗನ ಕೈಲಿ ತಾಳಿ ಕಟ್ಟಿಸಿಕೊಂಡು ಸಂಸಾರ ಶುರು ಮಾಡಿದ್ದಾಳೆ. ಇತ್ತ ಜೈಲಿನಿಂದ ಬಿಡುಗಡೆಯಾಗಿ ಹೊರಗಡೆ ಬಂದ ಮನುಗೆ ಪ್ರಿಯಾನ ಒಂದೇ ಒಂದು ಭಾರಿ ಕಣ್ತುಂಬಿಕೊಳ್ಳುವ ತವಕ. ಅದರ ಬೆನ್ನತ್ತಿ ಹೋದ ಮನುಗೆ ತನ್ನ ಮನದರಸಿ ಸುಖವಾಗಿಲ್ಲ, ಸಂತೋಷವಾಗಿಲ್ಲ ಅನ್ನೋ ಸತ್ಯ ತಿಳಿಯುತ್ತೆ. ಅನಂತರ ಮನು ಏನ್ಮಾಡ್ತಾನೆ? ಪ್ರೀತಿಸಿದ ಹುಡುಗಿ ಕೈ ಬಿಟ್ಟು ಹೋದ್ಮೇಲೂ ಆಕೆಗೋಸ್ಕರ ಏನೆಲ್ಲಾ ತ್ಯಾಗ ಮಾಡ್ತಾನೆ ಅನ್ನೋದನ್ನು ನೀವು ಥಿಯೇಟರ್ಗೆ ಹೋಗಿ ಮೆಕ್ಕೆಜೋಳ ಜಗಿಯುತ್ತಲೇ ತಿಳಿದುಕೊಳ್ಳಬೇಕು
ಹಾಗಾದ್ರೆ, ಈ ಸುರಭಿ ಏನು? ಮನು ಜೀವನದಲ್ಲಿ ಆಕೆಯ ಪಾತ್ರವೇನು? ಸುರಭಿ ಹೊಸ ಪ್ರೇಯಸಿಯಾ ಅಥವಾ ಪತ್ನಿಯಾ? ಸುರಭಿ ಪ್ರಿಯಾ ಜಾಗವನ್ನ ತುಂಬಿದಳಾ ಅಥವಾ ಇಲ್ಲವಾ? ಅದ್ಯಾವ ಕವಲು ದಾರಿಯಲ್ಲಿ ಮನುಗೆ ಸುರಭಿ ಜೊತೆಯಾದಳು? ಮನು ಮನದೊಳಗಿನ ನೋವಿಗೆ ಎಂತೆಂತಾ ಮುಲಾಮು ಹಚ್ಚಿದಳು. ಈ ಕುತೂಹಲವನ್ನ ತಣಿಸಿಕೊಳ್ಳಬೇಕು ಅಂದರೆ ಒನ್ಸ್ ಅಗೇನ್ ನೀವು ಚಿತ್ರಮಂದಿರಕ್ಕೆ ಹೋಗಿ 100 ರೂಪಾಯಿ ಕೊಟ್ಟು ಸಿನಿಮಾ ನೋಡಬೇಕು. ಬಟ್ ಗ್ಯಾರಂಟಿ ಏನಂದರೆ ನೀವು ಕೊಟ್ಟ ದುಡ್ಡಿಗೆ ಮೋಸ ಅಂತೂ ಆಗಲ್ಲ. ನಿಮಗೆ ಲವ್ವರ್ ಇರಲಿ, ಇಲ್ಲದೇ ಇರಲಿ. ಪ್ರೀತಿಲಿ ಬಿದ್ದಿರಲಿ, ಬೀಳದೇ ಇರಲಿ ಎಲ್ಲರಿಗೂ ಈ ಸಿನಿಮಾದಿಂದ ಒಂದು ಸಂದೇಶವಂತೂ ಸಿಗುತ್ತೆ. ನನಗೆ ಸಿಗದ ಹೆಣ್ಣು ಬೇರೆಯವರಿಗೂ ದಕ್ಕಬಾರದು. ನನಗೆ ಸಿಗದ ಗಂಡು ಬೇರೆಯವಳಿಗೆ ದಕ್ಕಬಾರದು ಎಂಬ ಮನಸ್ಥಿತಿಯಲ್ಲಿರುವ ಹೆಣ್ಣುಜೀವಕ್ಕೆ ಹಾಗೂ ಗಂಡು ಜನ್ಮಕ್ಕಂತಲೇ ನಿರ್ದೇಶಕ ಹೇಮಂತ್ ರಾವ್ ಈ ಸಿನಿಮಾ ಸೃಷ್ಟಿಸಿದ್ದಾರೆ.
ಒಮ್ಮೆ ಈ ಸಿನಿಮಾವನ್ನ ಕಣ್ತುಂಬಿಕೊಂಡರೆ ದಾರಿ ತಪ್ಪಿದವರು, ತಪ್ಪುವವರು ಕೂಡ ಸರಿದಾರಿಗೆ ಬಂದು ನಿಲ್ಲುವರು. ಪ್ರೀತಿ- ಪ್ರೇಮ ಎಂದರೆ ಬರೀ ಕಾಮವಲ್ಲ ಅದರಾಚೆ ಒಂದು ಧ್ಯಾನವಿದೆ. ಒಂದು ತ್ಯಾಗವಿದೆ. ನೆರಳಾಗಿ ನಿಂತುಕೊಳ್ಳುವ ಗುಣವಿದೆ ಎಂಬುದನ್ನು ಹೇಮಂತ್ ರಾವ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಯಾವ್ಯಾವುದೋ ಕಾರಣಕ್ಕೆ ನಿಜ ಜೀವನದಲ್ಲೂ ಪ್ರೀತಿನಾ ಧಾರೆ ಎರೆದು ಕೊಟ್ಟಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲೂ ಪ್ರೇಮತ್ಯಾಗ ಮಾಡಿ ಕರ್ಣನೆನಿಸಿಕೊಂಡಿದ್ದಾರೆ. ಮನು ಜೀವನದಲ್ಲಿ ಬರುವ ಪ್ರಿಯಾ, ಸುರಭಿ ನೋಡುಗರನ್ನ ಕಾಡುತ್ತಾರೆ. ಮೊದಲ ಭಾಗದಲ್ಲಿ ಪಟಪಟ ಮಾತನಾಡುತ್ತಾ, ಕತ್ತೆ ಕತ್ತೆ ಅಂತ ಕನವರಿಸುತ್ತಿದ್ದ ಪ್ರಿಯಾ ಎರಡನೇ ಭಾಗದಲ್ಲಿ ಮೌನಿಯಾಗಿದ್ದಾರೆ. ಸಿನಿಮಾದ ಪ್ರಮುಖ ತಿರುವುಗಳಿಗೆ ಕಾರಣವಾಗುವ ಪಾತ್ರವೊಂದಕ್ಕೆ ಸುರಭಿ(ಚೈತ್ರಾ ಜೆ ಆಚಾರ್) ಜೀವತುಂಬಿ ಅಭಿನಯಿಸಿದ್ದಾರೆ. ಖಳನಾಯಕನ ಪಾತ್ರದಲ್ಲಿ ರಮೇಶ್ ಇಂದಿರ ಖದರ್ ತೋರಿಸಿದ್ದಾರೆ. ಮನು(ರಕ್ಷಿತ್ ಶೆಟ್ಟಿ) ಜೊತೆ ಸಿನಿಮಾ ಪೂರ್ತಿ ಟ್ರಾವೆಲ್ ಮಾಡುವ ಗೋಪಾಲ್ ಕೃಷ್ಣ ದೇಶ್ ಪಾಂಡೆ ಕಲಾಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ಪ್ರಿಯಾ ಮಗನ ಪಾತ್ರಧಾರಿ ಆಗಾಗ ಪಂಚ್ ಕೊಡುತ್ತಾ ಪ್ರೇಕ್ಷಕನ್ನು ನಕ್ಕು ನಲಿಸ್ತಾನೆ.
ಮೊದಲ ಭಾಗದಲ್ಲಿ ಶೆಟ್ರು ಸಿಕ್ಕಾಪಟ್ಟೆ ಸಾಫ್ಟ್ ಆ್ಯಂಡ್ ಸೈಲೆಂಟ್. ಆದರೆ, ಸೈಡ್ ಬಿ ನಲ್ಲಿ ಶೆಟ್ರು ರಗಡ್ ಆ್ಯಂಡ್ ವೈಲೆಂಟ್. ಕ್ಲಾಸ್ ಲುಕ್ನಲ್ಲಿ ಕಾಣಿಸಿಕೊಳ್ತಿದ್ದ ಸಿಂಪಲ್ ಸ್ಟಾರ್ನ ನಿರ್ದೇಶಕ ಹೇಮಂತ್ ರಾವ್ ಸಖತ್ ಮಾಸ್ ಆಗಿ ತೋರಿಸಿದ್ದಾರೆ. ನಾವು ಕ್ಲಾಸ್ ಅಲ್ಲ ಮಾಸ್ ಅಂತ ಕರ್ಣ ಖಡಕ್ಕಾಗೇ ಖದರ್ ತೋರಿಸಿದ್ದಾರೆ. ಸೈಡ್ ಬಿ ಗಾಗಿ ತೂಕ ಹೆಚ್ಚಿಸಿಕೊಂಡು ಬದಲಾದ ಮನು ಲುಕ್ ಗೆಟಪ್ ಬಿಟೌನ್ ಘಜಿನಿಯಂತೆ ಕಾಣಿಸುತ್ತೆ. ಕೆಲ ಫ್ರೇಮ್ಗಳಲ್ಲಿ ಚಾರ್ಲಿ ಹೀರೋ ಧರ್ಮ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ರಂತೆ ಕಾಣ್ತಾರೆ. ಎಮೋಷನಲ್ ಲವ್ ಸ್ಟೋರಿಗೆ ಕರ್ಣ ಸಖತ್ತಾಗೆ ಸ್ಯೂಟ್ ಆಗಿದ್ದಾರೆ. ಎಲ್ಲರೂ ಗ್ಯಾಂಗ್ ಸ್ಟರ್ ಸಿನಿಮಾಗೆ ಕೈ ಹಾಕಿ ಸೀಕ್ವೆಲ್, ಪ್ರೀಕ್ವೆಲ್ ಅಂತಿದ್ದರೆ ಕವಲು ದಾರಿ ಡೈರೆಕ್ಟರ್ ಕಣ್ಣೀರು ಪ್ಲಸ್ ಪನ್ನೀರಿನಿಂತಿರೋ ಪ್ರೇಮಕಥೆನಾ ಎರಡು ಭಾಗ ಮಾಡಿ ತೋರಿಸಿ ಗೆಲುವಿನ ನಗೆ ಬೀರಿದ್ದಾರೆ. ಇದಕ್ಕೆ, ಮೂಲ ಕತೃ ಅವರೇ ಆದ್ರೂ ಕೂಡ ತಾರಾಬಳಗದ ಪಾತ್ರ ಮತ್ತು ತಂತ್ರಜ್ಞರ ಪಾತ್ರ ದೊಡ್ಡದಿದೆ, ಚರಣ್ ರಾಜ್ ಸಂಗೀತದ ಶಕ್ತಿ `ಸಪ್ತ ಸಾಗರದಾಚೆ ಎಲ್ಲೋ’- ಸೈಡ್ ಬಿ’ಗೆ ಆನೆಬಲ ತುಂಬಿದೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಸುನೀಲ್ ಎಸ್ ಭಾರದ್ವಾಜ್ ಸಂಕಲನ ಸಿನಿಮಾಗೆ ಪ್ಲಸ್ ಆಗಿದೆ. ಶೆಟ್ರ ಪರಂವಃ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಸಿನಿಮಾ ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಡುಗಡೆಯಾಗಿದೆ. ಮೊದಲ ದಿನ ಥಿಯೇಟರ್ಗೆ ನುಗ್ಗಿಬಂದ ಪ್ರೇಕ್ಷಕರಿಗೆ ನಯಾ ಅನುಭವ ಕೊಟ್ಟಿದೆ.