ಸ್ಯಾಂಡಲ್ವುಡ್ ಮರಿಟೈಗರ್ ವಿನೋದ್ ಪ್ರಭಾಕರ್ ಸದಾ ರೈತರ ಪರವಾಗಿ ನಿಲ್ತಾರೆ. ರೈತರಿಗೆ ಅನ್ಯಾಯ ಆದಾಗೆಲ್ಲಾ, ರೈತರ ಮೇಲೆ ದೌರ್ಜನ್ಯಗಳು ನಡೆದಾಗೆಲ್ಲಾ ಅದನ್ನು ಖಂಡಿಸಿ ಪ್ರತಿಭಟಿಸುವ ಅವರು, ಈಗ ರೈತರ ಸಮಸ್ಯೆಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಟಕ್ಕಿಳಿದಿದ್ದಾರೆ. `ಫೈಟರ್’ ಸಿನಿಮಾದ ಮೂಲಕ ರೈತರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಿದ್ದಾರೆ. ಹೌದು, ನಿನ್ನೆಯಷ್ಟೇ ತೆರೆಕಂಡಿರುವ ವಿನೋದ್ ಪ್ರಭಾಕರ್ ಅಭಿನಯದ `ಫೈಟರ್’ ಸಿನಿಮಾದಲ್ಲಿ ರೈತರನ್ನು ಜಾಗೃತಗೊಳಿಸುವಂತಹ ಸಂದೇಶವಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಕೃಷಿ ಭೂಮಿ ಹೇಗೆ ಹಾಳಾಗುತ್ತಿದೆ, ಇದರ ಹಿಂದಿರುವ ಮಾಫಿಯಾ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು `ಫೈಟರ್’ ಸಿನಿಮಾ ಮೂಲಕ ತಿಳಿಸಿಕೊಡಲಾಗಿದೆ.
ಯೂಟ್ಯೂಬ್ನಲ್ಲಿ ರಿಲೀಸ್ ಆಗಿರುವ `ಫೈಟರ್’ ಟೀಸರ್-ಟ್ರೇಲರ್ ನೋಡಿ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಅಷ್ಟೇ ಅಂತ ಷರಾ ಬರೆದು ಕೂರಬೇಡಿ. ಬದಲಾಗಿ ಒಮ್ಮೆ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿಕೊಂಡು ಬನ್ನಿ. ಯಾಕಂದ್ರೆ, `ಫೈಟರ್’ ಬರೀ ಮಾಸ್ ಪ್ರೇಕ್ಷಕರಿಗೋಸ್ಕರ ಮಾಡಿರುವ ಸಿನಿಮಾವಲ್ಲ. ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಯಾವ್ ರೀತಿ ಮೋಸ ಆಗ್ತಿದೆ, ರೈತರು ಇನ್ಮೇಲೆ ಹೇಗೆ ಎಚ್ಚೆತ್ತುಕೊಳ್ಳಬೇಕು ಎನ್ನುವ ಸಂದೇಶವನ್ನು ಮಾಸ್ ಎಲಿಮೆಂಟ್ಸ್ ಜೊತೆ ಮಿಕ್ಸ್ ಮಾಡಿ ತೆಗೆದಿರುವ ಚಿತ್ರ. ನಿರ್ದೇಶಕ ನೂತನ್ ಉಮೇಶ್ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ತಮ್ಮ ಮಾಸ್ ಆಡಿಯನ್ಸ್ ಗೆ ಭರ್ ಪೂರ್ ಆ್ಯಕ್ಷನ್ ಕಿಕ್ ಕೊಟ್ಟಿರುವ ವಿನೋದ್ ಪ್ರಭಾಕರ್, ರೈತರ ವಿಚಾರ ಅಂತ ಬಂದಾಗ ಸೆಟೆದು ನಿಲ್ಲೋದಕ್ಕೆ ಸಿದ್ದ ಎಂಬುದನ್ನ ಸಿನಿಮಾ ಮೂಲಕವೂ ಪ್ರೂವ್ ಮಾಡಿ ತೋರಿಸಿದ್ದಾರೆ.
`ಫೈಟರ್’ ರೈತರ ಸಮಸ್ಯೆಗೆ ಧ್ವನಿಯಾಗುವುದರ ಜೊತೆಗೆ ಮೆಡಿಕಲ್ ಮಾಫಿಯಾವನ್ನು ಬಯಲಿಗೆಳೆದಿದ್ದಾರೆ. ನಡುವು ಫ್ಯಾಮಿಲಿ ಸೆಂಟಿಮೆಂಟ್ ಇಟ್ಟು ತಂದೆ-ಮಗ, ತಾಯಿ-ಮಗನ ಬಾಂದವ್ಯವನ್ನು ತೋರಿಸಿದ್ದಾರೆ. ನಾಯಕ ವಿನೋದ್ ಪ್ರಭಾಕರ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದರಲ್ಲೂ ಆ್ಯಕ್ಷನ್ನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಇನ್ನೂ ನಾಯಕಿ ಲೇಖಾಚಂದ್ರ ಲವಲವಿಕೆಯಿಂದ ನಟಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ನಾಯಕಿ ಪಾವನಾ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ನಿರೋಷಾ ರಾಧಾ, ಕುರಿ ಪ್ರತಾಪ್, ಶರತ್ ಲೋಹಿತಾಶ್ವ, ರಾಜೇಶ್ ನಟರಂಗ್, ದೀಪಕ್ ಶೆಟ್ಟಿ ಸೇರಿದಂತೆ ಪಾತ್ರವರ್ಗದಲ್ಲಿರುವವರೆಲ್ಲರೂ ಕೂಡ ತಮ್ಮ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ. ಇಲ್ಲಿವರೆಗೂ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರೆಲ್ಲರೂ ಕೂಡ `ಫೈಟರ್’ ನ ಒಪ್ಪಿಕೊಂಡಿದ್ದಾರೆ. ಇನ್ನೇನಿದ್ರು ಬಾಕ್ಸ್ ಆಫೀಸ್ ಕೈ ಹಿಡಿಬೇಕು. ನಿರ್ಮಾಪಕರಾದ ಸೋಮಶೇಖರ್ ಕಟ್ಟಿಗೇನಹಳ್ಳಿಯವರ ಖಜಾನೆಗೆ `ಫೈಟರ್’ ಗೆ ಸುರಿದಿರುವ ಬಂಡವಾಳದ ಜೊತೆಗೆ ಲಾಭವೂ ಹರಿದುಬರಬೇಕು.
ಎಲ್ಲದಕ್ಕಿಂತ ಹೆಚ್ಚಾಗಿ ಮರಿಟೈಗರ್ ಹೋರಾಟಕ್ಕೆ ಮತ್ತು ವಿನೋದ್ ಒಳ್ಳೆಯ ಗುಣಕ್ಕೆ ಬರೀ ಫ್ಯಾನ್ಸ್ ಜೈಕಾರ ಹಾಕಿದರೆ ಸಾಕಾಗಲ್ಲ ರೈತರು ಕೂಡ ಉಘೇ ಉಘೇ ಎನ್ನಬೇಕಿದೆ. ತಮ್ಮ ಪರವಾಗಿ ಧ್ವನಿಯೆತ್ತಿದ ನಾಯಕನ ಪರವಾಗಿ ರೈತರು ಕೂಡ ನಿಲ್ಲಬೇಕಿದೆ. ಯಾಕಂದ್ರೆ, ಟೈಗರ್ ಸನ್ ಕೂಡ ಸಿನಿಮಾ ಲೋಕದಲ್ಲಿ ಸಾಕಷ್ಟು ಹೋರಾಟ ಮಾಡ್ತಿದ್ದಾರೆ. ಅಪ್ಪನ ಹೆಸರೇಳಿಕೊಂಡು ತಿರುಗದೇ ಬೆವರು ಬಸಿದು ದುಡಿಯುತ್ತಿದ್ದಾರೆ. ಅವಕಾಶಕ್ಕಾಗಿ ಯಾರ ಬಳಿಯೂ ಅಂಗಲಾಚದೇ ಸ್ವಯಂ ಪ್ರತಿಭೆಯಿಂದ ಒಂದೊಂದೇ ಹೆಜ್ಜೆ ಮೇಲೆ ಬರುತ್ತಿರುವ ಮರಿಟೈಗರ್ ವಿನೋದ್ ಪ್ರಭಾಕರ್ಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆಯಿದೆ. ನೀವೆಲ್ಲಾ ಮನಸ್ಸು ಮಾಡಿದರೆ ಆ ದೊಡ್ಡ ಗೆಲುವು ಮರಿಟೈಗರ್ಗೆ ದಕ್ಕುವುದು ದೊಡ್ಡ ವಿಷ್ಯವೇನಲ್ಲ. ಹೌದು, ಅವರ ಪಿಕ್ಚರ್ ರಿಲೀಸ್ ಆದಾಗ ಒಮ್ಮೆ ಥಿಯೇಟರ್ಗೆ ದಾಂಗುಡಿ ಇಟ್ಟರೆ ಸಾಕು ಮರಿ ಟೈಗರ್ ಮೇಲೆ ಬರುತ್ತಾರೆ. ಗೆಲುವೆಂಬ ಗದ್ದುಗೆ ಏರಿ ಗಹಗಹಿಸ್ತಾರೆ. ಈ ಕ್ಷಣಕ್ಕಾಗಿ ಅವರು ಕೂಡ ಎದುರುನೋಡ್ತಿದ್ದಾರೆ. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ಎಷ್ಟೇ ಎಫರ್ಟ್ ಹಾಕಿ ಸಿನಿಮಾ ಮಾಡಿದರೂ ಕೂಡ ಬೃಹತ್ ಗೆಲುವು ಅವರ ಪಾಲಾಗುತ್ತಿಲ್ಲ. ಅದಕ್ಕೆ ಕಾರಣ, ಅದೃಷ್ಟ ಕೈ ಹಿಡಿಯುತ್ತಿಲ್ಲವೋ ಅಥವಾ ಸಿನಿಮಾಗಳ ಆಯ್ಕೆ ಸರಿಯಿಲ್ಲವೋ ಎಂಬುದೇ ಉತ್ತರ ಸಿಗದ ಪ್ರಶ್ನೆ.
ರೇಟಿಂಗ್ : 3/5