ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಟಾಲಿವುಡ್ ಸ್ಟಾರ್ ನಾಗಚೈತನ್ಯ ತಯಾರಿ ನಡೆಸುತ್ತಿದ್ದಾರೆ. ಅಭಿಮಾನಿಗಳಿಗೆ ಒಂದೊಳ್ಳೆ ಹಿಟ್ ಸಿನಿಮಾ ಕೊಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಇತ್ತೀಚಿಗೆ ಆಂಧ್ರಪ್ರದೇಶದ ಶ್ರೀಕಾಕುಳಂ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಮೀನುಗಾರರ ಜೊತೆ ಸಮಯ ಕಳೆದಿದ್ದಾರೆ. ಮೀನುಗಾರರ ಸಂಸ್ಕೃತಿ, ಸಂಪ್ರದಾಯ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಯಾಕಪ್ಪಾ ಅಂತೀರಾ? ನಾಗಚೈತನ್ಯ ಅವರ 23 ನೇ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದು, ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ.
ಸದ್ಯ NC23 ಎಂಬ ತಾತ್ಕಾಲಿಕ ಟೈಟಲ್ ಕೊಡಲಾಗಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಕಾರ್ತಿಕೇಯ-2’ ದಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ಚಂದು ಮೊಂಡೇಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬನ್ನಿ ವಾಸು ಗೀತಾ ಆರ್ಟ್ಸ್ ಬ್ಯಾನರ್ ಅಡಿ, ಅಲ್ಲು ಅರವಿಂದ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಸಿನಿಮಾವು ಮೀನುಗಾರ ಸಮುದಾಯದ ಕುರಿತಾದ ಕತೆಯನ್ನು ಒಳಗೊಂಡಿದ್ದು, ಬಹುತೇಕ ಚಿತ್ರೀಕರಣ ಸಮುದ್ರ ದಡದಲ್ಲಿಯೇ ನಡೆಯಲಿದೆ. NC23 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಇದೇ ತಿಂಗಳಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.
ಭೇಟಿ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಾಯಕ ನಾಗಚೈತನ್ಯ, ‘ ಚಂದು ಅವರು 6 ತಿಂಗಳ ಹಿಂದೆಯೇ ಕಥೆಯನ್ನು ಹೇಳಿದ್ದರು. ಕಥೆ ಕೇಳಿ ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಅವರು ಕಥೆಯನ್ನು ಬರೆದಿದ್ದಾರೆ. ಬನ್ನಿ ವಾಸು ಮತ್ತು ಚಂದು ಎರಡು ವರ್ಷಗಳಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಥೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಖಂಡಿತಾ ಸ್ಪೂರ್ತಿ ನೀಡುವಂತಹ ಕಥೆ ಇದು. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯಲು ನಾವು ಇಲ್ಲಿಗೆ ಬಂದಿದ್ದೇವೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ’ ಎಂದರು.