ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸೌತ್ ಸಿನಿಮಾ ಇಂಡಸ್ಟ್ರಿ ಎಂಟ್ರಿ ಕುರಿತಾಗಿ ಒಂದಿಷ್ಟು ಸುದ್ದಿಯಾಗ್ತಿದೆ. ಸೋಲಿನಿಂದ ಕಂಗೆಟ್ಟು ಸಿನಿಕರಿಯರ್‍ಗೆ ನಿವೃತ್ತಿ ಘೋಷಿಸಿದ್ದ ಆಮೀರ್, ಮತ್ತೆ ಮೈಕೊಡವಿ ಅಖಾಡಕ್ಕೆ ಇಳಿಯೋ ಬಗ್ಗೆ ಇತ್ತೀಚೆಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು ಇದೀಗ ಬಾಲಿವುಡ್ ಘಜಿನಿ ದಕ್ಷಿಣ ಭಾರತೀಯ ಸಿನಿಮಾರಂಗ ಪ್ರವೇಶಿಸುತ್ತಿದ್ದಾರೆನ್ನುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಹೌದು, ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಸಿನಿಮಾದಲ್ಲಿ ಅಂದರೆ `ದಳಪತಿ-68′ ಚಿತ್ರದಲ್ಲಿ ಆಮೀರ್ ಸ್ಪೆಷಲ್ ಅಪಿಯರೆನ್ಸ್ ಮಾಡ್ತಿದ್ದಾರಂತೆ. ಹೀಗೊಂದು ಸುದ್ದಿ ಬಿಟೌನ್ ಅಂಗಳದಲ್ಲಿ ಹಾಗೂ ಕಾಲಿವುಡ್ ಅಖಾಡದಲ್ಲಿ ಕೇಳಿಬರುತ್ತಿದ್ದು, ತಲೈವಾ ಅಭಿಮಾನಿಗಳ ಜೊತೆಗೆ ಪಿಕೆ ಫ್ಯಾನ್ಸ್ ಕೂಡ ಫುಲ್ ಎಕ್ಸೈಟ್ ಆಗಿದ್ದಾರೆ. ದಳಪತಿ ಜೊತೆ ಘಜಿನಿ ದಂಗಲ್ ಹೇಗಿರಬಹುದು ಎನ್ನುವ ಚಿತ್ರಣವನ್ನ ಆಗಲೇ ಕಣ್ಮುಂದೆ ತಂದುಕೊಂಡು ಕಾಯೋದಕ್ಕೆ ಶುರುಮಾಡಿದ್ದಾರೆ.
ಅಂದ್ಹಾಗೇ, `ದಳಪತಿ-68′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಇದೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ವೆಂಕಟ್ ಪ್ರಭು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಬೀಸ್ಟ್ ಹೀರೋ ಇಲ್ಲಿ ಡಬಲ್ ರೋಲ್ ಪ್ಲೇ ಮಾಡಲಿದ್ದು, ಫಾದರ್ ಅಂಡ್ ಸನ್ ಕ್ಯಾರೆಕ್ಟರ್‍ನಲ್ಲಿ ಕಮಾಲ್ ಮಾಡ್ತಾರೆನ್ನುವ ಸುದ್ದಿಯಿದೆ. ಎಜಿಎಸ್ ಎಂಟರ್ಟೈನ್‍ಮೆಂಟ್ ಬಂಡವಾಳ ಹೂಡಲಿದ್ದು, ಇತ್ತೀಚೆಗೆ ಈ ನಿರ್ಮಾಣ ಸಂಸ್ಥೆಯ ಐಶ್ವರ್ಯ ಕಲ್ಪಾತಿ, ಧೂಮ್ ಹೀರೋನಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರಂತೆ. ಹೀಗಾಗಿಯೇ, `ದಳಪತಿ-68′ ಚಿತ್ರದಲ್ಲಿ ದಂಗಲ್ ಹೀರೋ ಧಗಧಗಿಸ್ತಾರೆ, ಈ ಸಿನಿಮಾ ಮೂಲಕ ಲಗಾನ್ ಹೀರೋ ಸೌತ್ ಸಿನಿಮಾ ಇಂಡಸ್ಟ್ರಿಗೆ ಲಗ್ಗೆ ಇಡ್ತಾರೆನ್ನುವ ಸುದ್ದಿ ಹಲ್‍ಚಲ್ ಎಬ್ಬಿಸಿದೆ.
ಒಂದು ವೇಳೆ ಈ ಸುದ್ದಿ ನಿಜ ಆದರೆ, ಶಾರುಖ್ ಖಾನ್, ಸಂಜಯ್ ದತ್ತ್, ಇಮ್ರಾನ್ ಹಶ್ಮಿ, ಅರ್ಜುನ್ ರಾಂಪಾಲ್, ಜಾಕಿಶ್ರಾಫ್ ಅವರಂತೆ ಆಮೀರ್ ಕೂಡ ದಕ್ಷಿಣದ ಸಿನಿಮಾದಲ್ಲಿ ಕಾಣಿಸಿಕೊಂಡಂತಾಗುತ್ತೆ. ಇನ್ನೂ ಪ್ರಿನ್ಸ್ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಸಿನಿಮಾದಲ್ಲೂ ಆಮೀರ್ ಸ್ಪೆಷಲ್ ಅಪಿಯರೆನ್ಸ್ ಇರುತ್ತೆನ್ನುವ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಆ ಸುದ್ದಿಗೆ ಯಾವುದೇ ಸಾಕ್ಷಿಪುರಾವೆ ಸಿಕ್ಕಿಲ್ಲವಾದರೂ ಮಹರ್ಷಿಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ವಿಲನ್ ಎನ್ನುವ ನ್ಯೂಸ್ ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ಮಹೇಶ್ ಬಾಬು ಗುಂಟೂರು ಖಾರಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಆಮೀರ್ ಒಂದು ವರ್ಷ ಇಂಡಸ್ಟ್ರಿಯಿಂದ ಬ್ರೇಕ್ ಪಡೆದು ಮತ್ತೆ ಅಖಾಡಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ.
ಟ್ರೇಡ್ ಅನಲಿಸಿಸ್ಟ್ ತರಣ್ ಆದರ್ಶ್ ಇತ್ತೀಚೆಗೆ ಒಂದು ಟ್ವೀಟ್ ಮಾಡಿದ್ದರು. 2024 ಜನವರಿ 20ರಂದು ದಂಗಲ್ ಹೀರೋ ಹೊಸ ಸಿನಿಮಾ ಸೆಟ್ಟೇರಲಿದೆ. ಅದೇ ವರ್ಷ ಡಿಸೆಂಬರ್ 20ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಅಮೀರ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯ್ಯಾರಾಗಲಿದ್ದು, ಪ್ರಿಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿರುವುದಾಗಿ ತರಣ್ ಟ್ವೀಟ್ ಮೂಲಕ ತಿಳಿಸಿದ್ದರು. ಇದರ ಮೇಲೆ ಮತ್ತಷ್ಟು ವರ್ಕ್ ಮಾಡಿ ಡೀಟೈಲ್ಸ್ ಕಲೆಹಾಕಿರೋ ಕೆಲ ಖಾಸಗಿ ವೆಬ್‍ಸೈಟ್‍ಗಳು, ಘಜಿನಿಗೆ ದಿನೇಶ್ ವಿಜಾ ಡೈರೆಕ್ಷನ್ ಮಾಡ್ತಿದ್ದಾರೆ. ಭಾರತೀಯ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ಬಯೋಪಿಕ್‍ಗೆ ಬಣ್ಣ ಹಚ್ಚಲು ಆಮೀರ್ ಉತ್ಸುಕರಾಗಿದ್ದಾರೆ ಅಂತೆಲ್ಲಾ ಸುದ್ದಿ ಮಾಡಿದ್ದಾರೆ. ಉಜ್ವಲ್ ನಿಕಮ್ ಅವರು ಮುಂಬೈ ದಾಳಿ, ಗುಲ್ಶನ್ ಕುಮಾರ್ ಮರ್ಡರ್ ಕೇಸ್ ಸೇರಿದಂತೆ ಹಲವು ಹೈ ಪ್ರೊಫೈಲ್ ಕೇಸ್‍ಗಳನ್ನು ಕೈಗೆತ್ತಿಕೊಂಡು ಅನ್ಯಾಯದ ವಿರುದ್ದ ಹೋರಾಟ ನಡೆಸಿದ್ದಾರೆ. ಇಂತಹ ವಿಶೇಷ ವಕೀಲರ ಬಯೋಪಿಕ್‍ನ ತೆರೆಮೇಲೆ ತರುವುದಕ್ಕೆ ದಿನೇಶ್ ವಿಜಾ ಅವರು ಮನಸ್ಸು ಮಾಡಿದ್ದು, ಆಮೀರ್ ಖಾನ್ ಬಣ್ಣ ಹಚ್ಚುವುದರ ಜೊತೆಗೆ ಬಂಡವಾಳ ಹೂಡುವುದಕ್ಕೂ ಕೂಡ ಸಿದ್ದರಾಗಿದ್ದಾರಂತೆ.
ಕಳೆದೊಂದು ವರ್ಷದಿಂದ ಸಾಕಷ್ಟು ಸ್ಕ್ರಿಪ್ಟ್ ಕೇಳಿರೋ ಆಮೀರ್ ಖಾನ್, ಉಜ್ವಲ್ ನಿಕಮ್ ಹಾಗೂ ಸ್ಟಾರ್ ಕ್ರಿಕೆಟಿಗ ಲಾಲಾ ಅಮರನಾಥ್ ಜೀವನ ಚರಿತ್ರೆಗೆ ಜೀವತುಂಬಲು ಕಾತುರರಾಗಿರುವ ಬಗ್ಗೆ ಸುದ್ದಿಯಾಗ್ತಿದೆ. ಡಂಕಿ ಸಿನಿಮಾದ ನಂತರ ರಾಜ್‍ಕುಮಾರ್ ಹಿರಾನಿಯವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಲಾಲಾ ಅಮರನಾಥ್ ಬಯೋಪಿಕ್ ಡೈರೆಕ್ಷನ್ ಮಾಡಲಿದ್ದಾರಂತೆ. ಈ ಎಲ್ಲಾ ಸುದ್ದಿ ನಡುವೆ ದಂಗಲ್ ಹೀರೋ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಡ್ತಾರೆ ಎಂತಲೂ ನ್ಯೂಸ್ ಓಡಾಡ್ತಿದೆ.