ಸ್ಯಾಂಡಲ್‍ವುಡ್‍ನ ಸ್ವಾತಿಮುತ್ತು, ಕೋಟ್ಯಾಂತರ ಭಕ್ತರ ಆರಾಧ್ಯದೈವ, ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ 2023 ಸೆಪ್ಟೆಂಬರ್ 02ರಂದು 50ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಭೂಮಿಗೆ ಬಂದು ಯಶಸ್ವಿ 49 ವರ್ಷ ಪೂರೈಸಿರೋ ಕೋಟಿಗೊಬ್ಬ, ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿ ದೇವರುಗಳೊಟ್ಟಿಗೆ ಆಚರಣೆ ಮಾಡಿಕೊಳ್ಳಲಿದ್ದಾರೆ. ಪ್ರತಿವರ್ಷ ತಮ್ಮ ಜೆಪಿನಗರದ ನಿವಾಸದ ಬಳಿ ಫ್ಯಾನ್ಸ್ ನ ಭೇಟಿ ಮಾಡುತ್ತಿದ್ದರು. ಭಕ್ತಸಮೂಹದ ಸಮ್ಮುಖದಲ್ಲಿ ಬರ್ತ್‍ಡೇ ಸೆಲೆಬ್ರೇಷನ್ ಮಾಡಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮನೆ ಬಿಟ್ಟು ಮೈದಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ಜನಸಂದಣಿ
ಹೌದು, ಬರ್ತ್‍ಡೇ ದಿನ ಸುದೀಪ್ ಮನೆಮುಂದೆ ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ. ಕರುನಾಡಿನ ಮೂಲೆ ಮೂಲೆಯಿಂದ ಭಕ್ತಬಳಗ ಹರಿದು ಬರುವುದರಿಂದ ಕಿಚ್ಚನ ಮನೆಮುಂದೆ ಜನಸಂದಣಿ ಉಂಟಾಗುತ್ತೆ. ಅಕ್ಕ-ಪಕ್ಕದ ಮನೆಯವರಿಗೆ ಕೊಂಚ ಕಿರಿಕಿರಿಯಾಗುತ್ತೆ. ಕಿಕ್ಕಿರಿದು ಸೇರುವ ಅಭಿಮಾನಿಗಳನ್ನು ಕಂಟ್ರೋಲ್ ಮಾಡುವುದಕ್ಕೆ ಪೊಲೀಸರು ಹರಸಾಹಸ ಪಡಬೇಕಾಗುತ್ತೆ. ಈ ವರ್ಷ ಇದ್ಯಾವುದು ಆಗಬಾರದು ಎನ್ನುವ ಕಾರಣಕ್ಕೆ, `ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಸಂಘ’ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಹೊಸಕೆರೆಹಳ್ಳಿ ಬಳಿಯಿರುವ ನಂದಿ ಲಿಂಕ್ ಗ್ರೌಂಡ್‍ನಲ್ಲಿ ಕೋಟಿಗೊಬ್ಬನ ಹುಟ್ಟುಹಬ್ಬ ಆಚರಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಬರ್ತ್‍ಡೇ ದಿನ ಅಭಿಮಾನಿಗಳನ್ನು ಭೇಟಿಯಾಗುವುದಕ್ಕೆ ಕಿಚ್ಚ ಸುದೀಪ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಸದ್ಯ ಕಿಚ್ಚ ಚೆನ್ನೈನಲ್ಲಿ ಬೀಡುಬಿಟ್ಟಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ `ಕಿಚ್ಚ-46′ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶಾರ್ಟ್ ಬ್ರೇಕ್ ತಗೊಂಡು ಅಭಿಮಾನಿಗಳನ್ನ ಭೇಟಿ ಮಾಡಲು ಬರುತ್ತಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 02ರಂದು ಫ್ಯಾನ್ಸ್ ಜೊತೆ ಇರುತ್ತಿದ್ದರು. ಆದರೆ, ಈ ಭಾರಿ ಸಿನಿಮಾ ಶೂಟಿಂಗ್ ನಡೆಯುತ್ತಿರುವುದರಿಂದ ಸೆಪ್ಟೆಂಬರ್ 1ರಂದು ಸಂಜೆ 7ರಿಂದ ಮಧ್ಯರಾತ್ರಿ 12 ಗಂಟೆವರೆಗೂ ಅಭಿಮಾನಿಗಳ ಜೊತೆ ಟೈಮ್ ಸ್ಪೆಂಡ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇತ್ತ ಸುದೀಪ್ ಫ್ಯಾನ್ಸ್ ಕೂಡ `ಕಿಚ್ಚೋತ್ಸವ’ಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ನಂದಿ ಗ್ರೌಂಡ್‍ನಲ್ಲಿ ಆಕಾಶದೆತ್ತರಕ್ಕೆ ಕಟೌಟ್ ನಿಲ್ಲಿಸಿ ಗ್ರ್ಯಾಂಡ್ ಆಗಿ ಕಿಚ್ಚನ ಬರ್ತ್‍ಡೇ ಸೆಲೆಬ್ರೇಟ್ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ.
ಯಸ್, ಈ ಭಾರಿ ಬಾದ್‍ಷಾ ಬರ್ತ್‍ಡೇ ಸ್ಪೆಷಲ್ ಆಗಿರಲಿದೆ. ಅಭಿಮಾನಿ ದೇವರುಗಳಿಗೂ ಭರ್ಜರಿ ಉಡುಗೊರೆಗಳು ಸಿಗಲಿವೆ. ಮೊದಲನೆಯದಾಗಿ `ಕಿಚ್ಚ-46′ ಸಿನಿಮಾದ ಟೈಟಲ್ ಅನೌನ್ಸ್ ಮೆಂಟ್ ನಿರೀಕ್ಷೆ ಮಾಡಬಹುದು. ಸ್ವತಃ ಸುದೀಪ್ ಅವರೇ ಹೇಳಿಕೊಂಡಿರುವಂತೆ 47, 48, 49, 50ನೇ ಸಿನಿಮಾ ಕೂಡ ಫೈನಲ್ ಆಗಿದೆ. ಬಹುಷಃ ಬರ್ತ್‍ಡೇ ದಿನ ಈ ಐದು ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಬಹುದು. ಈ ಐದರಲ್ಲಿ ಪ್ಯಾನ್ ಇಂಡಿಯಾ ಯಾವುದು? ಪ್ಯಾನ್ ವಲ್ರ್ಡ್ ಪಿಕ್ಚರ್ ಯಾವುದು? ಗೊತ್ತಿಲ್ಲ. ಆದರೆ, ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್‍ನ ಸ್ಟಾರ್ ಡೈರೆಕ್ಟರ್ ಗಳು ಕಿಚ್ಚನ ಕಾಲ್‍ಶೀಟ್‍ಗಾಗಿ ಕ್ಯೂ ನಿಂತಿರುವುದು ನಿಜ. ಅಷ್ಟಕ್ಕೂ, ಯಾರ್ಯಾರಿಗೆ ರನ್ನ ಕಾಲ್‍ಶೀಟ್ ಕೊಟ್ಟಿದ್ದಾರೆ, ಆ ಐದು ಪ್ರಾಜೆಕ್ಟ್ ಗಳು ಯಾವ್ಯಾವು ಅನ್ನೋದನ್ನ ಕುತೂಹಲದಿಂದ ಕಾದುನೋಡಬೇಕು ಅಷ್ಟೇ.