ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಪ್ರಯೋಗ ಅಂದ್ರೆ ರಂಗಾಯಣ ರಘು..ರಂಗಾಯಣ ರಘು ಎಂದ್ರೆ ಪ್ರಯೋಗ..ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿಕೊಂಡು ಬರ್ತಿರುವ ಈ ಅತ್ಯದ್ಭುತ ಕಲಾವಿದ ಈಗ ಹೊಸ ಅವತಾರ ತಾಳಿದ್ದಾರೆ. ಅದಕ್ಕೆ ಶಾಖಾಹಾರಿ ಟ್ರೇಲರ್ ಸಾಕ್ಷಿ. ಸಂದೀಪ್ ಸುಂಕದ್ ಸಾರಥ್ಯದ ಶಾಖಾಹಾರಿ ಸಿನಿಮಾದ ಮೊದಲ ನೋಟ ಅನಾವರಣಗೊಂಡಿದೆ. ರಣರೋಚಕ ಟ್ರೇಲರ್ ನಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಗಳೇ ಹೈಲೆಟ್ಸ್. ಸುಬ್ಬಣ್ಣ ಭಟ್ಟನ ಅವತಾರವೆತ್ತಿರುವ ರಂಗಾಯಣ ರಘು ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಹಿಂದೆಂದೂ ಕಾಣದ ಹೊಸ ಗೆಟಪ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಶಾಖಾಹಾರಿ ಸಿನಿಮಾದ ಟ್ರೇಲರ್ನ ನಟರಾಕ್ಷಸ ಡಾಲಿ ಧನಂಜಯ್ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.
ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ರಂಗಾಯಣ ರಘು ಹೋಟಲ್ ಭಟ್ಟ ಸುಬ್ಬಣ್ಣನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್ ಐ ಮಲ್ಲಿಕಾರ್ಜುನ್ ಆಗಿ ಗೋಪಾಲಕೃಷ್ಣ ದೇಶಪಾಂಡೆ, ವಿನಯ್ ಯುಜೆ, ನಿಧಿ ಹೆಗ್ಡೆ, ಹರಿಣಿ ಶ್ರೀಕಾಂತ್, ಸುಜಯ್ ಶಾಸ್ತ್ರೀ, ಶ್ರೀಹರ್ಷ ಗೋಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮಲೆನಾಡಿನ ತಪ್ಪಲಿನಲ್ಲೇ ಚಿತ್ರೀಕರಣಗೊಂಡ ಈ ಸಿನೆಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರು ನಟಿಸಿದ್ದಾರೆ. ಶಾಖಾಹಾರಿ ಸಿನಿಮಾ ಮೂಲಕ ಸಂದೀಪ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಶಾಖಾಹಾರಿ ಸಿನೆಮಾದ ಕಥೆ, ಸಂಭಾಷಣೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂದೀಪ್ ಸುಂಕದ್ ಅವರ ಸೂಕ್ಷ್ಮತೆ, ವಿಶ್ವಜಿತ್ ರಾವ್ ಅವರ ಕ್ಯಾಮೆರ ಕೈಚಳಕ ಸಿನೆಮಾಗೆ ಶಕ್ತಿಯಾಗಿರುವುದಲ್ಲದೇ, ಶಶಾಂಕ್ ನಾರಾಯಣ್ ಅವರ ಸಂಕಲನ, ಮಯೂರ್ ಅಂಬೇಕಲ್ಲು ಅವರ ಸಂಗೀತ ಸಿನೆಮಾಗೆ ಪುಷ್ಟಿ ನೀಡಿದೆ. ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿರುವ ಶಾಖಾಹಾರಿ ಸಿನಿಮಾವನ್ನು ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈಮೇಟ್ ಲಿಮಿಟೆಡ್ ಬ್ಯಾನರ್ ನಡಿ ನಿರ್ಮಿಸಿದ್ದಾರೆ. ಇದೇ ಫೆಬ್ರವರಿ 16ಕ್ಕೆ ಕರ್ನಾಟಕದಾದ್ಯಂತ ಚಿತ್ರ ತೆರೆಕಾಣಲಿದ್ದು. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ.