ನವರಸ ನಾಯಕ ಜಗ್ಗೇಶ್(Jaggesh) ತಮ್ಮ ಮ್ಯಾನರಿಸಂ, ಕಾಮಿಡಿ ಪಾತ್ರಗಳಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿರುವ ಜಗ್ಗೇಶ್ ಈ ನಡುವೆ ಸಿನಿಮಾಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ ಅನ್ನೋದು ಅವ್ರ ಅಭಿಮಾನಿಗಳ ಬೇಸರ. ಈ ಬೇಸರಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ತೆರೆಕಂಡ `ರಂಗನಾಯಕ'(Ranganayaka) ಸಿನಿಮಾ ಭಾರೀ ನಿರಾಸೆ ಉಂಟು ಮಾಡಿದೆ. ಸಿನಿಮಾ ಸೋತ ಬೆನ್ನಲ್ಲೇ ಜಗ್ಗೇಶ್(Jaggesh) ಕೂಡ ರಾಯರ ಸನ್ನಿದಾನದಿಂದಲೇ ಮನದಾಳದ ಕ್ಷಮೆಯಾಚಿಸಿದ್ದಾರೆ.
ಹೌದು, `ಮಠ'(Mata), `ಎದ್ದೇಳು ಮಂಜುನಾಥ'(Eddelu Manjunatha) ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟ ಜೋಡಿ ಜಗ್ಗೇಶ್(Jaggesh) ಹಾಗೂ ನಿರ್ದೇಶಕ ಗುರು ಪ್ರಸಾದ್(Guruprasad). ಈ ಸಿನಿಮಾ ನಂತರ ಇಬ್ಬರ ನಡುವೆ ವೈಮನಸ್ಸು ಬಂದು ಒಂದಷ್ಟು ದಿನ ನೀನೊಂದು ತೀರ, ನಾನೊಂದು ತೀರ ಅಂತ ಓಡಾಡಿದ್ದುಂಟು. ಆದ್ರೆ ಮತ್ತೆ ಈ ಇಬ್ಬರನ್ನು ಒಂದು ಮಾಡಿದ್ದು ಮತ್ತದೇ ಸಿನಿಮಾ ಪ್ರೀತಿ. `ರಂಗನಾಯಕ'(Ranganayaka) ಸಿನಿಮಾ ಮೂಲಕ ಈ ಜೋಡಿಯ ಮನಸ್ತಾಪಕ್ಕೆ ಬ್ರೇಕ್ ಬಿದ್ದು ಮತ್ತೆ ಹ್ಯಾಟ್ರಿಕ್ ಹಿಟ್ ಕೊಡುವ ನಿರೀಕ್ಷೆಯಲ್ಲಿ ಭರವಸೆ ಮೂಡಿಸಿದ್ರು. ಈ ಬಾರಿ ಹ್ಯಾಟ್ರಿಕ್ ಗೆಲುವು ಇವರದ್ದೇ ಅಂದುಕೊಂಡು ಚಿತ್ರಮಂದಿರಕ್ಕೆ ಹೋದವರಿಗೆಲ್ಲ ಭ್ರಮ ನಿರಸನವಾಗಿತ್ತು. ಡಬ್ಬಲ್ ಮೀನಿಂಗ್ ಡೈಲಾಗ್‌ಗಳು, ಕೇಳಲಾಗದ ಸಂಭಾಷಣೆಗಳು ಈ ಜೋಡಿ ಮೇಲೆ ಇಟ್ಟ ಅಪಾರ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಪರಿಣಾಮ ಸಿನಿಮಾ ಹೀನಾಯ ಸೋಲು ಕಂಡಿದೆ.
ಸಿನಿಮಾದಲ್ಲಿ ಬಳಕೆಯಾದ ಸಂಭಾಷಣೆ ಬಗ್ಗೆ ಅಪಾರ ಟೀಕೆ ಕೇಳಿ ಬರುತ್ತಿರೋದು ಜಗ್ಗೇಶ್(Jaggesh) ಗಮನಕ್ಕೂ ಬಂದಿದೆ. ಈ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ ರಾಯರ ಸನ್ನಿದಿಯಿಂದಲೇ ಸಿನಿಮಾ ಸೋಲು ಹಾಗೂ ಅಭಿಮಾನಿಗಳ ಬೇಸರಕ್ಕೆ ಉತ್ತರ ನೀಡಿದ್ದಾರೆ. ʻಮೊನ್ನೆ ಒಂದು ಸಿನಿಮಾ ಮಾಡಿದೆ. ಅದ್ರಿಂದ ನಿಮಗೆ ಹರ್ಟ್ ಆಗಿದೆ. ಆದ್ರೆ ಅದರಲ್ಲಿ ನನ್ನ ತಪ್ಪಿಲ್ಲ. ನಿರ್ದೇಶಕರು ತಮ್ಮ ಆಸೆಯಂತೆ ಸಿನಿಮಾ ಮಾಡಿದ್ದಾರೆ. ಅಕಸ್ಮಾತ್ ನಿಮಗೆಲ್ಲ ಬೇಜಾರ್ ಆಗಿದ್ರೆ ಕ್ಷಮೆಯಿರಲಿ ಎಂದಿದ್ದಾರೆ. ಯಾರದೋ ಅಪರಾಧಕ್ಕೆ ನನ್ನ ಮೇಲೆ ಬೇಜಾರ್ ಬೇಡʼ ಎನ್ನುವ ಮೂಲಕ ಅಭಿಮಾನಿ ಬಳಗ ಹಾಗೂ ಸಿನಿ ಪ್ರೇಕ್ಷಕರಿಗೆ ಕ್ಷಮೆಯಾಚಿಸಿದ್ದಾರೆ.
ʻತೋತಾಪುರಿʼ(Thothapuri) ಸಿನಿಮಾ ಬಂದಾಗಲೂ ಡಬಲ್ ಮೀನಿಂಗ್ ಡೈಲಾಗ್‌ಗಳು ನೋಡುಗರಲ್ಲಿ ಮುಜುಗರ ತರಿಸಿತ್ತು. ಆಗಲೂ ಜಗ್ಗೇಶ್(Jaggesh) ಈ ರೀತಿ ಸಿನಿಮಾ ಯಾಕ್ ಮಾಡ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ `ರಂಗನಾಯಕ'(Ranganayaka) ಸಿನಿಮಾದಲ್ಲೂ ಅದು ಮುಂದುವರೆದಿದೆ. ಇದ್ರಿಂದ ಅವ್ರ ಅಭಿಮಾನಿ ಬಳಗ ನಿರಾಸೆಯಲ್ಲಿರೋದಂತೂ ಸತ್ಯ.