ದೊಡ್ಮನೆ ಭಕ್ತರು ಮಾತ್ರವಲ್ಲ ಇಡೀ ಕರುನಾಡ ಮಂದಿ, ಅಪ್ಪಾಜಿ ಮತ್ತು ಅಪ್ಪು ಇಬ್ಬರನ್ನೂ ಶಿವಣ್ಣ ಅವ್ರಲ್ಲಿ ಕಾಣ್ತಿದ್ದಾರೆ. `ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ನಮ್ಮ ನಡುವೆ ನೂರಾರು ವರ್ಷ ಬಾಳಿ ಬದುಕಬೇಕು ಎಂತಲೂ ಆಸೆ ಪಡ್ತಿದ್ದಾರೆ. ಈ ರೀತಿಯಾಗಿ ಬಯಸೋ ಅಭಿಮಾನಿಗಳಿಗೆ ಶಿವಣ್ಣನ ಮಾತಿನಿಂದ ಕೊಂಚ ಬೇಜಾರಾಗಿದೆ. ಮುತ್ತಣನ ಆ ಮಾತು ಎದೆಯಲ್ಲಿ ಸಣ್ಣ ಭಯವನ್ನೂ ಹುಟ್ಟಿಸಿದೆ. ಅಷ್ಟಕ್ಕೂ, ಶಿವಣ್ಣ ಏನಂದ್ರು? ಅಭಿಮಾನಿ ಬಳಗ ಭಯಪಟ್ಟಿದ್ದೇಕೆ? ಆ ಸ್ಟೋರಿ ಇಲ್ಲಿದೆ ನೋಡಿ
ಶಿವಣ್ಣ ಓಪನ್ ಬುಕ್ ಇದ್ದಂತೆ. ಏನೇ ಇದ್ರೂ ನೇರಾನೇರಾ ಹೇಳಿಬಿಡ್ತಾರೆ. ಹಿಡಿಯಷ್ಟು ಕೋಪ ತೋರಿಸಿದರೆ, ಬೆಟ್ಟದಷ್ಟು ಪ್ರೀತಿ ಮಾಡ್ತಾರೆ. ನಾವು ಮಾತ್ರವಲ್ಲ ನಮ್ಮ ಜೊತೆಗೆ ನಾಲ್ವರು ಬೆಳಿಬೇಕು ಅಂತ ಆಸೆಪಡ್ತಾರೆ. ಪ್ರತಿಭಾವಂತರನ್ನ ಪ್ರೋತ್ಸಾಹಿಸ್ತಾರೆ. ಎಲ್ಲರನ್ನೂ ಅಣ್ಣ-ತಮ್ಮನ ಥರ ನೋಡ್ತಾರೆ. ದೊಡ್ಮನೆಯ ಕುಡಿಯಾದ್ರೂ ಕೂಡ ಕಾಮನ್ ಮ್ಯಾನ್ ಥರ ಇರ್ತಾರೆ. ಸೂಪರ್ ಸ್ಟಾರ್ ಆದರೂ ಕೂಡ ಯಾವತ್ತೂ ಸ್ಟಾರ್ ಗಿರಿ ತೋರಿಸಿಲ್ಲ. ನಾನು ರಾಜ್ಕುಮಾರ್ ಮಗ ಎನ್ನುವ ಅಹಂ ಯಾವತ್ತೂ ಶಿವಣ್ಣನ ನೆತ್ತಿಗೇರಿಲ್ಲ. ಅಂದಿಗೂ, ಇಂದಿಗೂ ನಮ್ಮ ಕೆಲಸ ಮಾತನಾಡಬೇಕು ಎಂದು ಬಯಸುವ ಶಿವಣ್ಣ ಇವತ್ತು ಕರುನಾಡ ಚಕ್ರವರ್ತಿಯ ಪಟ್ಟಕೇರಿದ್ದಾರೆ. ಹೊರ ರಾಜ್ಯದ ಸೂಪರ್ ಸ್ಟಾರ್ಸ್ಗಳು ರೆಡ್ಕಾರ್ಪೆಟ್ ಹಾಕಿ ನಮ್ಮ ಸೆಂಚುರಿ ಸ್ಟಾರ್ ನ ಅವರ ಸಿನಿಮಾಗೆ ಕರ್ಕೊಂಡು ಹೋಗಿದ್ದಾರೆ.
ಯಸ್, ನಿಮಗೆಲ್ಲ ಗೊತ್ತಿರುವ ಹಾಗೇ ನಮ್ಮ ಮಾಸ್ ಲೀಡರ್ ಶಿವಣ್ಣ `ಜೈಲರ್’ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆ ಸಿನಿಮಾ ಪ್ರಚಾರದ ಭಾಗವಾಗಿ ಚೆನ್ನೈನಲ್ಲಿ ಸಂದರ್ಶನ ನೀಡಿದ್ದು, ಅಲ್ಲಿ ಭಜರಂಗಿ ಕೊಟ್ಟಿರೋ ಹೇಳಿಕೆ ಕೆಲ ಅಭಿಮಾನಿಗಳನ್ನ ಬೆಚ್ಚಿಬೀಳಿಸಿದೆ. ಯಸ್, ತಮಿಳಿನ ಯುಟ್ಯೂಬ್ ಚಾನೆಲ್ವೊಂದರಲ್ಲಿ ಶಿವಣ್ಣನಿಗೆ, ಸಾಮಾನ್ಯವಾಗಿ ಸ್ಟಾರ್ ನಟರು ಎಲ್ಲರೊಟ್ಟಿಗೆ ಬೆರೆಯಲು ಆಗುವುದಿಲ್ಲ ಆದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನೀವು ಸಾಮಾನ್ಯರಂತೆ ಇರಲು ಸಾಧ್ಯವಿಲ್ಲ ಅಲ್ವಾ? ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಶಿವಣ್ಣ ‘ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ತುಂಬಾ ಕೂಲ್ ಆಗಿರುವ ವ್ಯಕ್ತಿ ನಾನು. ನಾನು ಸದಾ ಆರಾಮ್ ಅಗಿರುವುದಕ್ಕೆ ಇಷ್ಟ ಪಡುತ್ತೀನಿ. ನನಗೆ ಹೊರಗೆ ತಿನ್ನೋಕೆ ಇಷ್ಟ,ಅದರಲ್ಲೂ ರಸ್ತೆ ಬದಿಯಲ್ಲೇ ನಿಂತುಕೊಂಡು ಇಡ್ಲಿ ತಿನ್ನೋಕೆ, ಪ್ಲಾಟ್ಫಾರ್ಮ್ನಲ್ಲಿ ಕೂತು ಟೀ ಕುಡಿಯಲು ಇಷ್ಟ. ನಾನು ನನ್ನನ್ನು ಬದಲಿಸಿಕೊಳ್ಳೋಕೆ ಸಾಧ್ಯವಿಲ್ಲ ನಾನು ಇರುವುದೇ ಹಾಗೆ’ ಎಂದು ತಮ್ಮ ಸರಳ ವಿರಳ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.
ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ ಅಂದ್ರೆ ಯಾರಿಗ್ ಇಷ್ಟ ಇರಲ್ಲ ಹೇಳಿ. ಅದು ಬಹಳ ಇಷ್ಟ. ಎಲ್ಲರನ್ನು ಎಲ್ಲರೂ ಕೇಳಲ್ಲ ಅಲ್ಲವೇ. ಯಾರಾದರೂ ಬಂದು ನನ್ನನ್ನು ಫೋಟೊ ಕೇಳಿದರೆ ಖುಷಿಯಾಗುತ್ತದೆ. ಅರೇ ನನ್ನನ್ನು ನೋಡಿ ಯಾರೋ ಬಂದು ಫೋಟೊ ತೆಗೆದುಕೊಳ್ಳುತ್ತಾರೆ. ಅಂತಹ ಒಂದು ರೀತಿಯ ಪೊಗರು, ಗತ್ತು ಇರುತ್ತದೆ. ಅದೆಲ್ಲ ಇದ್ದರೆ ಅಲ್ಲವೇ ಒಬ್ಬ ಮನುಷ್ಯ. ಅದೆಲ್ಲಾ ಬೇಡ ಅಂತ ನಾನು ಆಕ್ಟಿಂಗ್ ಮಾಡುವುದಿಲ್ಲ ಅದನ್ನೆಲ್ಲಾ ಬಹಳ ಇಷ್ಟ ಪಡೋದ್ರ ಜೊತೆಗೆ ಎಂಜಾಯ್ ಮಾಡುತ್ತೀನಿ’ ಎಂದಿದ್ದಾರೆ.
ಹಾಗೇ ಮಾತು ಮುಂದುವರೆಸಿದ ಶಿವರಾಜ್ಕುಮಾರ್ ಅವರು ‘ನಾನು ಎಲ್ಲೇ ಹೋದರು ಹೆಚ್ಚು ಬಾಡಿಗಾರ್ಡ್ಗಳನ್ನ ಇಟ್ಟುಕೊಳ್ಳಲ್ಲ. ಆದರೆ, ಹೆಚ್ಚು ಜನ ಸೇರೋದ್ರಿಂದ ಬಾಡಿಗಾರ್ಡ್ಗಳು ಬೇಕಾಗುತ್ತೆ. ತುಂಬಾ ಸಲ ಬಾಡಿಗಾರ್ಡ್ಗಳಿಗೂ ಹೇಳುತ್ತೀನಿ ದಯವಿಟ್ಟು ನನ್ನ ಹಿಂದೆ ಸುತ್ತಬೇಡಿ ಸ್ವಲ್ಪ ದೂರ ಇರಿ ಅಂತ. ಯಾಕಂದರೆ ನನಗೆ ಇಷ್ಟ ಆಗಲ್ಲ ನಾನು ಇವತ್ತಿಗೆ ಏನೇ ಆಗಿದ್ದರೂ ಅದು ಜನರಿಂದ. ಹಾಗಂತ ನಾವು ಬೈಯುವುದಿಲ್ಲ ಅಂತ ಹೇಳಲ್ಲ, ಕೋಪ ಬಂದರೆ ಬೈಯ್ತೀನಿ. ನಾನು ಇರುವುದೇ ಹಾಗೆ ನಾನು ಅವರನ್ನು ಆ ರೀತಿ ಒಪ್ಪಿಕೊಂಡಿದ್ದೀನಿ ಅವರು ಅದೇ ರೀತಿ ಒಪ್ಪಿಕೊಳ್ಳಬೇಕು . ಸ್ನೇಹಿತರನ್ನು ಸ್ನೇಹಿತರಂತೆ ಸ್ವೀಕರಿಸಬೇಕು ಇಲ್ಲದಿದ್ದರೆ ಸ್ನೇಹ ಮಾಡಬಾರದು’ ಎಂದಿದ್ದಾರೆ ಶಿವಣ್ಣ.
“ನಾನು ಒಬ್ಬನೇ ಅಂತ ಅಲ್ಲ. ನನ್ನ ರೀತಿ ಸಾಕಷ್ಟು ಜನ ಇದ್ದಾರೆ. ನಾನು ಅವಕಾಶವಾದಿ ಅಲ್ಲ. ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಈ ಜಾಗದಲ್ಲೇ ಇರ್ತೀನಿ ಅಂದ್ರೆ ಹೇಗೆ? ಆಗ ದೇವರು ಹೇಳುತ್ತಾನೆ ಸಾಕು ಬಾರಪ್ಪ ನಿನ್ನದಲ್ಲ ಆ ಜಾಗ ಮೇಲೆ ಬಾ ಎಂದು ಕರೆದುಕೊಂಡು ಬಿಡುತ್ತಾನೆ. ಯಾರೋ ಇದ್ದಾರೆ ನಿನ್ನ ಜಾಗಕ್ಕೆ ಎನ್ನುತ್ತಾನೆ’ . ಶಿವಣ್ಣ ಹೇಳಿರುವ ಈ ಮಾತು ಅಭಿಮಾನಿಗಳಿಗೆ ಕೊಂಚ ಬೇಸರವಾದ್ರೂ, ತಮ್ಮ ನೆಚ್ಚಿನ ನಟನ ಸರಳ ವ್ಯಕ್ತಿತ್ವ,ನೇರಾ ನೇರಾ ಮಾತಿಗೆ ಮಣಿದಿರೋದು ನಿಜ. ಒಟ್ನಲ್ಲಿ ಈ ಸಂದರ್ಶನ ನೋಡಿದ ಪ್ರೇಕ್ಷಕರು ಹ್ಯಾಟ್ರಿಕ್ ಹೀರೋ ಗೆ ನೀವು 100 ವರ್ಷ ಇರ್ಬೇಕು ಶಿವಣ್ಣ ಎಂದು ಕಾಮೆಂಟ್ ಮೂಲಕ ಹಾರೈಸಿರೋದಂತೂ ಸತ್ಯ