Sriimurali: ನಟ ಶ್ರೀಮುರಳಿ(Sriimurali) ಬೆನ್‌ಬಿಡದೆ ಕಾಡುತ್ತಿರುವ ಒಂದಾದ ಮೇಲೆ ಒಂದು ಅಪಘಾತಗಳು ಅಭಿಮಾನಿಗಳನ್ನು ಬೇಸರಗೊಳಿಸಿದೆ. ಈ ಹಿಂದೆ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮದಗಜ ನಟ ಇದೀಗ ಮತ್ತೊಂದು ಅವಘಡಕ್ಕೆ ತುತ್ತಾಗಿದ್ದಾರೆ.
‘ಬಘೀರ’(Bagheera)ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಚೇತನ್ ಡಿಸೋಜ ನಿರ್ದೇಶನದಲ್ಲಿ ಚಿತ್ರದ ಆಕ್ಷನ್ ಸೀನ್‌ಗಳನ್ನು ಸೆರೆ ಹಿಡಿಯಲಾಗುತ್ತಿದೆ. ಚಿತ್ರೀಕರಣದ ವೇಳೆ ಶ್ರೀಮುರಳಿ(Sriimurali) ಕಾಲಿಗೆ ಪೆಟ್ಟಾಗಿದ್ದು, ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇಜರ್ ಅವಘಡದಿಂದ ಪಾರಾಗಿದ್ದು, ಕೈ ಮತ್ತು ಕಾಲಿಗೆ ಪೆಟ್ಟಾಗಿದ್ದು, ಒಂದಿಷ್ಟು ವಿಶ್ರಾಂತಿಗೆ ಡಾಕ್ಟರ್ ಸೂಚಿಸಿದ್ದಾರೆ. ಇದ್ರಿಂದ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಲಿದ್ದಾರೆ ಶ್ರೀಮುರಳಿ. ಈ ಹಿಂದೆ ಕೂಡ ಚಿತ್ರೀಕರಣದಲ್ಲಿ ಕಾಲಿಗೆ ಏಟಾಗಿ ಶಸ್ತ್ರ ಚಿಕಿತ್ಸೆ ಪಡೆದು ಎರಡು ತಿಂಗಳು ವಿಶ್ರಾಂತಿ ಪಡೆದಿದ್ದರು ಇದೀಗ ಮತ್ತೆ ಈ ರೀತಿ ಘಟನೆ ಮರುಕಳಿಸಿರೋದು ಅಭಿಮಾನಿಗಳಿಗೆ ನೋವು ಮತ್ತೆ ಬೇಸರ ತರಿಸಿದೆ.
‘ಮದಗಜ’ ನಂತರ ಶ್ರೀಮುರಳಿ(Sriimurali) ಸಿನಿಮಾಗಳು ತೆರೆಕಂಡಿಲ್ಲ. ‘ಬಘೀರ’(Bagheera)ಸಿನಿಮಾಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಸಿನಿಮಾ ಪದೇ ಪದೇ ಮುಂದೆಕ್ಕೆ ಹೋಗ್ತಿರೋದು ಬೇಸರ ತರಿಸಿದೆ. ಬಘೀರ ಶ್ರೀಮುರಳಿ ಕೆರಿಯರ್‌ನ ಸ್ಪೆಷಲ್ ಸಿನಿಮಾ ಎಂದರೂ ಅತಿಶಯೋಕ್ತಿಯಿಲ್ಲ. ಕಾರಣ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ ಜೊತೆಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಈ ಸಿನಿಮಾ ಮೂಲಕ ಶ್ರೀಮುರಳಿ ಪರಿಚಿತರಾಗಲಿದ್ದಾರೆ.
ಚಿತ್ರಕ್ಕೆ ಪ್ರಶಾಂತ್ ನೀಲ್(Prashanth Neel) ಕಥೆ ಒದಗಿಸಿದ್ದು, ಡಾ.ಸೂರಿ(Dr. Suri) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ರುಕ್ಮಿಣಿ ವಸಂತ್ (Rukmini Vasanth), ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ರಂಗಾಯಣ ರಘು ಚಿತ್ರದ ತಾರಾಬಳಗದಲ್ಲಿದ್ದಾರೆ.