ಕೈ ಹಿಡಿಯೋದಕ್ಕೂ ಮುಂಚೆ, ಕೊರಳಿಗೆ ತಾಳಿ ಕಟ್ಟೋದಕ್ಕೂ ಮೊದಲೇ, ತನ್ನ ಕಷ್ಟದ ಸಮಯದಲ್ಲಿ ಪ್ರೀತಿಸಿದ ಹುಡುಗ ಜೊತೆಯಾಗಿ ನಿಲ್ತಾನೆ ಅಂದರೆ, ಅದಕ್ಕಿಂತ ಬೇರೆ ಖುಷಿ ಹೆಣ್ಣಾದವಳಿಗೆ ಮತ್ತೊಂದಿಲ್ಲ ಅಲ್ವಾ? ಅದ್ರಲ್ಲೂ ತಾನು ಮದುವೆ ಆಗಬೇಕಿರೋ ಹುಡುಗಿಗೆ ಎರೆಡೆರಡು ಸರ್ಜರಿ ಆಗ್ಬೇಕು, ಬದುಕೋದು 50% ಚಾನ್ಸ್ ಅಷ್ಟೇ ಇದೆ ಅಂದ್ರು, ಜೊತೆಗಿದ್ದು ಧೈರ್ಯ ತುಂಬಿ, ಬದುಕಿನ ಆಶಯ ಹುಟ್ಟಿಸೋದೇ ಅಲ್ವೇ ನಿಜವಾದ ಪ್ರೀತಿ? ಇದೆಲ್ಲಾ ಸಿನೆಮಾ ಕಥೆ ಯಾಕ್ ಹೇಳ್ತಿದ್ದಾರೆ ಅನ್ಕೋಬೇಡಿ. ಇದು ರೀಲ್, ಅಲ್ಲ ರಿಯಲ್ ಸ್ಟೋರಿ. ಇದು ಮಜಾಭಾರತ ಖ್ಯಾತಿಯ ಪ್ರಿಯಾಂಕ ಕಾಮತ್ ಬದುಕಿನಲ್ಲಿ ನಡೆದ ನೈಜಘಟನೆ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಚಾಂಪಿಯನ್ ,‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಿಯಾಂಕಾ ಕಾಮತ್ ಎಷ್ಟು ಆಕ್ಟೀವ್ ಆಗಿರ್ತಾರೆ ಅಂತ ನಿಮಗೆಲ್ಲಾ ಗೊತ್ತೇ ಇದೆ. ತಮ್ಮ ಅಂದ, ಲಾಂಗ್ ಹೇರ್, ಧಿರಿಸು, ಭಾಷೆ ,ನಟನೆ ಇವೆಲ್ಲವುಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನೂ ಸಂಪಾದಿಸಿದ್ದ ಪ್ರಿಯಾಂಕ, ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ತಾರೆ ಎನ್ನುವಾಗ ಅವರಿಗೆ ಅನಾರೋಗ್ಯ ಉಂಟಾಗಿ 2 ಸರ್ಜರಿ ಮಾಡಬೇಕಾಗಿ ಬಂತು. 8 ತಿಂಗಳುಗಳ ಕಾಲ ನಡೆಯಲಾಗದೆ, ಬೆಡ್ ರಿಡನ್ ಆಗಿ ಕಷ್ಟಪಡುತ್ತಿದ್ದ ಪ್ರಿಯಾಂಕಾಗೆ, ಅವರ ಬಾವಿ ಪತಿ ಅಮಿತ್ ಬೆಂಬಲವಾಗಿ ನಿಂತಿದ್ದರಂತೆ. ಈ ಬಗ್ಗೆ ಪ್ರಿಯಾಂಕಾ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
“ನನ್ನ ಜೀವನದಲ್ಲಿ ವೈಯಕ್ತಿಕ ಜೀವನ, ವೃತ್ತಿ ಜೀವನ ಎಲ್ಲವೂ ಚೆನ್ನಾಗಿತ್ತು, ಒಮ್ಮೆ ನನಗೆ ನಡೆಯಲು, ಕೂರಲು ಆಗುತ್ತಿರಲಿಲ್ಲ. ವೈದ್ಯರು ಸರ್ಜರಿ ಮಾಡಬೇಕು ಎಂದರು. ನನ್ನ ಕುಟುಂಬ, ಮದುವೆಯಾಗುವ ಹುಡುಗನ ಮುಂದೆ ನಾನು ತುಂಬ ಸ್ಟ್ರಾಂಗ್ ಆಗಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. ನನ್ನ ತಂದೆ ಮುಂದೆ ನಾನು ಭಾವನಾತ್ಮಕವಾಗಿ ದುಃಖ ಹೊರಹಾಕುವಂತಾಗಿದ್ದೆ, ಆ ವೇಳೆಗೆ ನನ್ನ ನಿಶ್ಚಿತಾರ್ಥ ಕೂಡ ಫಿಕ್ಸ್ ಆಗಿತ್ತು. ಸರ್ಜರಿ ಬಳಿಕ ನನ್ನ ಲೈಫ್ ಹೇಗಿರತ್ತೆ ಅಂತ ಕೂಡ ಗೊತ್ತಿರಲಿಲ್ಲ. ದೈಹಿಕ, ಮಾನಸಿಕವಾಗಿ ನಾನು ತುಂಬ ನೋವು ಅನುಭವಿಸಿದ್ದೆ. ಅದೃಷ್ಟವಶಾತ್ ನನ್ನ ಸರ್ಜರಿ ಚೆನ್ನಾಗಿಯೇ ಆಯ್ತು. ನನ್ನ ಕುಟುಂಬ, ಮದುವೆಯಾಗುವ ಹುಡುಗ ಬೆನ್ನೆಲುಬಿಗೆ ನಿಂತ” ಎಂದು ಸಾಲು ಸಾಲು ಆ ಕ್ಷಣದ ವೀಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ ಪ್ರಿಯಾಂಕ.
“ಕಳೆದ ವರ್ಷ ನಾನು, ಅಮಿತ್ ಮದುವೆಯಾಗಬೇಕು ಅಂತ ಫಿಕ್ಸ್ ಆದೆವು, ನಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು, ಆಮೇಲೆ ಒಂದಷ್ಟು ದಿನಗಳ ಬಳಿಕ ನಡೆಯಲು, ಕೂರಲು ಆಗದೆ 2 ಸರ್ಜರಿ ಆಯ್ತು. ನಾನು 50% ಮಾತ್ರ ಬದುಕುವ ಚಾನ್ಸ್ ಇತ್ತು, ನನ್ನ ದೇಹದಲ್ಲಿ Screw, Rods ಇತ್ತು. ಅಮಿತ್ಗೆ ನನ್ನನ್ನು ಬಿಟ್ಟು, ಬೇರೆಯವರನ್ನು ಮದುವೆಯಾಗು ಅಂತ ಹೇಳಿದ್ದೆ. ಆದರೆ ಕಷ್ಟದ ಸಮಯದಲ್ಲಿ ಅವನು ನನ್ನ ಬಿಡಲೇ ಇಲ್ಲ. ಡ್ರೆಸ್ ಹಾಕಿಕೊಳ್ಳೋದರಿಂದ ಹಿಡಿದು, ಡೈಪರ್ ಪ್ಯಾಡ್ ಬದಲಾಯಿಸಲು ಕೂಡ ಅಮಿತ್ ನನಗೆ ಸಹಾಯ ಮಾಡ್ತಿದ್ದ” ಎಂದು ವಿಡಿಯೋದಲ್ಲಿ ಪ್ರಿಯಾಂಕಾ ಕಾಮತ್ ಹೇಳಿದ್ದಾರೆ. ಪ್ರೀತಿಸಿದ ಹುಡುಗ ಕೈಬಿಡದೆ ಅವರ ಬೆಂಗಾವಲಾಗಿ ನಿಂತಿದ್ದರಿಂದ ಪ್ರಿಯಾಂಕಾ ಮಾನಸಿಕ, ದೈಹಿಕ ನೋವನ್ನು ಎದುರಿಸಿ, ಈಗ ಬದುಕಿನ ಹೊಸ ಕ್ಷಣಗಳನ್ನ ಅನುಭವಿಸುತ್ತಿದ್ದಾರೆ.
“ನಾನು 8 ತಿಂಗಳುಗಳ ಕಾಲ ಹಾಸಿಗೆಯಲ್ಲಿದ್ದೆ. ಆಮೇಲೆ ಸುಧಾರಿಸಿಕೊಳ್ಳಲು ಆರಂಭಿಸಿದೆ. ಆಮೇಲೆ ನಡೆಯಲು ಆರಂಭಿಸಿದೆ. ಅಮಿತ್ ನಾನು ಆಶಯ ಕಳೆದುಕೊಳ್ಳದಂತೆ ನೋಡಿಕೊಂಡ. ಅದಾಗಿ ಕೆಲವು ತಿಂಗಳುಗಳ ನಂತರ ನಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡೆವು. ಈ ವರ್ಷದ ಡಿಸೆಂಬರ್ನಲ್ಲಿ ನಾವು ಮದುವೆಯಾಗಲಿದ್ದೇವೆ. ಅಮಿತ್ ನನಗೆ ಎಂದೂ ಐ ಲವ್ ಯು ಅಂತ ಹೇಳಲೇ ಇಲ್ಲ, ಆದರೆ ಅವನ ಕೆಲಸದ ಮೂಲಕ ಹೇಳುತ್ತಿರುತ್ತಾನೆ” ಎಂದು ತಮ್ಮ ಪ್ರಿಯಕರ,ಬಾವೀಪತಿಯ ಗುಣವನ್ನ ಕೊಂಡಾಡಿದ್ದಾರೆ ಪ್ರಿಯಾಂಕಾ. ಇವರಿಬ್ಬರ ಈ ಶುದ್ದ ಪ್ರೀತಿಯ ಬಗ್ಗೆ ಓದಿದ,ಹಾಗು ಪ್ರಿಯಾಂಕ ಶೇರ್ ಮಾಡಿರೋ ವೀಡಿಯೋ ತುಣುಕು ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಸರಿ ಇದ್ದಾಗ ಇರುವ ಪ್ರೀತಿ ಗಿಂತ,ಹೀಗೆ ಕಷ್ಟದಲ್ಲಿದ್ದ ತನ್ನವರ ಜೊತೆ ನಿಲ್ಲೋ ಪ್ರೀತಿಗೆ ಹೆಚ್ಚಿನ ಸ್ಥಾನಮಾನವಿದೆ. ಹಾಗಾಗಿ ಅಮಿತ್ ನಾಯಕ್ ಹಾಗು ಪ್ರಿಯಾಂಕ ಕಾಮತ್ ಜೋಡಿಯ ಮುಂದಿನ ಬದುಕಿಗೆ ಹೆಚ್ಚಿನ ಜನರ ಆರ್ಶಿರ್ವಾದ ಮತ್ತು ಅಭಿಮಾನಿಗಳ ಹಾರೈಕೆ ಇದೆ.