ರಾಜ್ ಬಿ ಶೆಟ್ಟಿ ಈ ಹೆಸರು ಈಗ ಬ್ರ್ಯಾಂಡ್ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ಆ್ಯಕ್ಟರ್ ಪ್ಲಸ್ ಡೈರೆಕ್ಟರ್ ಆಗಿ ಸ್ಯಾಂಡಲ್ವುಡ್ ಅಂಗಳದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಶೆಟ್ರು `ಟೋಬಿ’ ಸಿನಿಮಾದ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಇದೇ ಆಗಸ್ಟ್ 25ರಂದು ಚಿತ್ರ ಬಿಡುಗಡೆಯಾಗಲಿದ್ದು ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿ `ಭರ್ಜರಿ ಬ್ಯಾಚುಲರ್ಸ್’ ಶೋಗೆ ತೆರಳಿರೋ ಶೆಟ್ರು ಸಿನಿಮಾ ಪ್ರಮೋಟ್ ಮಾಡೋದ್ರ ಜೊತೆಗೆ ಲವ್ವು, ಬ್ರೇಕಪ್, ಡಿವೋರ್ಸ್, ಲಿವ್ ಇನ್ ರಿಲೇಶನ್ಶಿಪ್ ಹೀಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಂಗೆ 2 ಭಾರಿ ಬ್ರೇಕಪ್ ಆಗಿದೆ, ಈಗ ಮತ್ತೊಂದು ಲವ್ವಾಗಿದೆ ಅಂತೇಳೋದ್ರ ಮೂಲಕ ಎಲ್ಲರ ತಲೆಗೆ ಹುಡುಗಿ ಯಾರು ಅನ್ನೋ ಹುಳಬಿಟ್ಟಿದ್ದಾರೆ. ಹಾಗಾದ್ರೆ, ಶೆಟ್ರ ಹೃದಯ ಕದ್ದ ಆ ಚೆಲುವೆ ಯಾರು? ಅವರು ಇಂಡಸ್ಟ್ರಿನಲ್ಲಿದ್ದಾರಾ? ಆಕೆ ನಿರೂಪಕಿನಾ? ನಾಯಕಿನಾ? ಹೀಗೊಂದಿಷ್ಟು ಕುತೂಹಲ ಎಲ್ಲರನ್ನ ಕಾಡೋದಕ್ಕೆ ಶುರು ಮಾಡಿದೆ. ಅಷ್ಟಕ್ಕೂ, `ಭರ್ಜರಿ ಬ್ಯಾಚುಲರ್ಸ್’ ಕಾರ್ಯಕ್ರಮದಲ್ಲಿ ಶೆಟ್ರು ಹೇಳಿದ್ದೇನು ಅನ್ನೋದನ್ನ ನೀವು ಒಮ್ಮೆ ಓದಿ ತಿಳಿದುಕೊಂಡು ಬಿಡಿ
ನಿಮಗೆ ಲವ್ ಮ್ಯಾರೇಜ್ ಇಷ್ಟನಾ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?
ಪ್ರೀತಿ ವಿಚಾರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ. ಕೆಲವರಿಗೆ ಪ್ರೀತಿಸಿ ಮದುವೆ ಆಗೋದು ಇಷ್ಟವಿರುವುದಿಲ್ಲ. ಕೆಲವರಿಗೆ ಪ್ರೀತಿಸಿಯೇ ಮದುವೆ ಆಗಬೇಕೆಂದಿರುತ್ತದೆ. ‘ನನಗೆ ಲವ್ ಮ್ಯಾರೇಜ್ ಇಷ್ಟ. ಇದರಲ್ಲಿ ತಪ್ಪು ಮಾಡೋಕೆ ಸಾಕಷ್ಟು ಅವಕಾಶ ಇದೆ. ಮದುವೆ ಬಳಿಕ ಅವರಿಗೋಸ್ಕರ ನಾವೊಂದು ಹೆಜ್ಜೆ ಇಡುತ್ತೇವೆ. ನಮಗೋಸ್ಕರ ಅವರೊಂದು ಹೆಜ್ಜೆ ಇಡುತ್ತಾರೆ. ಆಗ ಇಬ್ಬರು ಒಟ್ಟಿಗೆ ಸಾಗಬಹುದು ಅನ್ನೋದು ಗೊತ್ತಾಗುತ್ತದೆ. ಅವರೊಂದು ಹೆಜ್ಜೆ ಇಡುತ್ತಾರೆ, ನಾನು ಬೇರೆ ಕಡೆ ಹೆಜ್ಜೆ ಇಡುತ್ತೇವೆ. ಆಗ ಇಬ್ಬರೂ ಬೇರೆ ಕಡೆ ಹೋಗಬೇಕು ಅನ್ನೋದು ಗೊತ್ತಾಗುತ್ತದೆ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ನೀವು ಈಗ ಲುಂಗಿ ಹಾಕ್ಕೊಂಡು ಆರಾಮಾಗಿ ಓಡಾಡ್ತೀರಾ? ಮದುವೆಯಾದ್ಮೇಲೆ ನಿಮ್ಮ ವೈಫ್ ಸ್ಟೈಲಿಷ್ ಡ್ರಸ್ ವೇರ್ ಮಾಡಿ ಅಂದ್ರೆ ಮಾಡ್ತೀರಾ?
ಮದುವೆ ಆಗೋ ಹುಡುಗಿ ನೀವು ಬದಲಾಗಬೇಕು ಎಂದರೆ ಏನು ಮಾಡುತ್ತೀರಿ ಎಂದು ಕೇಳಲಾಯಿತು. ‘ನಾನು ಇರೋದು ಇಷ್ಟೇ. ನಾನು ಇರೋದೇ ಒಂದು ಲೋಟ. ಆ ನೀರನ್ನು ಚೊಂಬಿನಲ್ಲಿ ಹಾಕಿ ತುಂಬಿಸ್ತೀನಿ ಎಂದರೆ ಸಾಧ್ಯವಿಲ್ಲ. ನಾನು ಇರುವ ಹಾಗೆ ಇರೋಕೆ ಬಿಡು. ನೀನು ಹೇಗಿದ್ದರೂ ನಾನು ಅದನ್ನು ಪ್ರಶ್ನೆ ಮಾಡಲ್ಲ. ಇಬ್ಬರೂ ಬೆಳೆಯುತ್ತಾ ಹೋಗಬೇಕು. ಪ್ರಬುದ್ಧತೆ ಇರುವ ವ್ಯಕ್ತಿ ಕಂಡೀಷನ್ ಹಾಕಲ್ಲ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
ಸ್ಪರ್ಧಿಗಳ ಪ್ರಶ್ನೆ ನಡುವೆ ಡಿಂಪಲ್ ಕ್ವೀನ್ ರಚಿತ ಕೂಡ ಶೆಟ್ರಿಗೆ ಪ್ರಶ್ನೆ ಮಾಡಿದರು. ನಿಮ್ಮ ಮಾತು ಕೇಳ್ತಾ ಇದ್ದರೆ ನಿಮಗೂ ಲವ್ ಆಗಿದೆ, ಬ್ರೇಕಪ್ ಆಗಿದೆ ಅನ್ಸ್ತಿದೆ. ಸೋ ನಿಮ್ಮ ಲವ್ ಲೈಫ್ ಹೇಗಿದೆ ಹೇಳಿ ಅಂತ ಕೇಳಿದರು. ಗುಳಿಕೆನ್ನೆ ಬೆಡಗಿಯ ಕೊಶ್ಚನ್ಗೆ ಶೆಟ್ರ ಆನ್ಸರ್ ಹೀಗಿತ್ತು ನೋಡಿ.
ಡಿಗ್ರಿನಲ್ಲಿ ನಂಗೊಬ್ಬಳು ಹುಡುಗಿ ಇದ್ದಳು. ನಾನು ರಿಲೇಶನ್ಶಿಪ್ ಶುರುವಾದ ಆರಂಭದಲ್ಲೇ ಹೇಳಿದ್ದೆ ನೀನು ಯಾವತ್ತಾದ್ರೂ ಬಿಟ್ಟೋಗ್ತೀನಿ ಅಂದರೆ ಕಾರಣ ಕೇಳಲ್ಲ ಅಂತ. ಅದ್ಯಾಕೆ ನಾನು ಹಂಗೆ ಹೇಳಿದ್ನೋ ಗೊತ್ತಿಲ್ಲ ಆದರೆ 6 ವರ್ಷ ಆದ್ಮೇಲೆ ಹಂಗೆ ಆಯ್ತು. ಒಂದ್ವೇಳೆ ಅವಳು ಬಿಟ್ಟೋಗಲಿಲ್ಲ ಅಂದಿದ್ದರೆ ನಾನು ಕೆಟ್ಟ ಮನುಷ್ಯನಾಗೇ ಉಳಿದುಕೊಳ್ಳುತ್ತಿದ್ದೆ. ಹಾಗಂತ ಈಗ ನಾನು ಒಳ್ಳೆಯವನಾಗಿದ್ದೀನಿ ಎಂದಲ್ಲ. ಕೊನೇಪಕ್ಷ ನಾನು ಎಷ್ಟು ಕೆಟ್ಟವನು ಅನ್ನೋದು ನನಗೆ ಈಗ ಗೊತ್ತಾಗಿದೆ. ಅವಳು ಬ್ರೇಕಪ್ ಮಾಡಿದ್ದರಿಂದಲೇ ನಾನು ಬೆಳೆದೆ. ನನಗೆ ಪ್ರೀತಿಯೇ ಕೊಡಲು ಬಂದಿರಲಿಲ್ಲ ಅನ್ನೋದು ನಂತರ ಗೊತ್ತಾಗಿತ್ತು. ನಾನು ಯೋಗ್ಯ ಅಲ್ಲ ಅನ್ನೋದನ್ನು ತೋರಿಸಿ ಹೋದಳು’ . ಅದಕ್ಕೆ ನಾನು ಅವಳಿಗೆ ಗ್ರೇಟ್ಫುಲ್ ಆಗಿರುತ್ತೀನಿ. ಅನಂತರ ಒಂದು ರಿಲೇಶನ್ಶಿಪ್ನಲ್ಲಿದ್ದೆ ಅದು ಯಾಕೋ ಕೈ ಕೊಡ್ತು. ‘ಈಗ ಒಂದು ರಿಲೇಶನ್ಶಿಪ್ ಇದೆ. ಇಬ್ಬರೂ ಜೀವನದ ಹುಡುಕಾಟದಲ್ಲಿದ್ದೇವೆ. ನಂದೇನೂ ರೂಲ್ಸ್ ಇಲ್ಲ. ಅವಳದ್ದೂ ಇಲ್ಲ. ನಾವು ಖುಷಿಯಿಂದ ಇದ್ದೇವೆ. ನೀನು ಬದುಕು ಕಲಿ, ನಾನು ಬದುಕು ಕಲಿಯುತ್ತೇನೆ ಎಂಬ ಮನಸ್ಥಿತಿ’ ಎಂದು ಈಗಿನ ಪ್ರೀತಿ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಆದರೆ,ಆ ಹುಡುಗಿ ಯಾರು? ಏನು ಅನ್ನೋ ವಿಚಾರವನ್ನ ಅವರು ಹೇಳಿಕೊಂಡಿಲ್ಲ. ಬಟ್ ಈ ಹಿಂದೆ ಗಾಂಧಿನಗರದ ಗಲ್ಲಿ ಗಾಸಿಪ್ನಲ್ಲಿ ಒಂದು ಸುದ್ದಿ ಓಡಾಡಿತ್ತು. ನಟಿಯೊಬ್ಬರ ಜೊತೆ ರಾಜ್ ಬಿ ಶೆಟ್ಟಿ ರಿಲೇಶನ್ಶಿಪ್ನಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗ್ತಾರೆ ಅಂತ. ಅಷ್ಟಕ್ಕೂ ಆ ನಟಿ ಯಾರು? ಈ ಕುತೂಹಲದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಟೋಬಿ ಸಿನಿಮಾ ಪ್ರಚಾರ ಮಾಡುತ್ತಾ ಖಾಸಗಿ ಮಾಧ್ಯಮಕ್ಕೆ ರಿಯಾಕ್ಟ್ ಮಾಡಿದ್ದಾರೆ. ಆಲ್ರೆಡಿ ರಿಜಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೇನೆ, ಹುಡುಗಿ ಇಲ್ಲಿನವರೇ ಎಂದಿದ್ದಾರೆ. ಎಲ್ಲಿಯವರು? ಬೆಂಗಳೂರಿನವರಾ? ಕರ್ನಾಟಕ ಮೂಲದವರಾ? ಹೂಃ ಈ ಕೊಶ್ಚನ್ಗೆ ಉತ್ತರ ಕೊಡದ ಶೆಟ್ರು ಮಗುಳ್ನಕ್ಕು ಸುಮ್ಮನಾಗಿದ್ದಾರೆ. ರಾಜ್ ಬಿ ಶೆಟ್ಟಿಯ ಮನದರಸಿ ಯಾರು ಅಂತ ಎಲ್ಲರೂ ಸರ್ಚಿಂಗ್ನಲ್ಲಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ರಚ್ಚು ಶೆಟ್ರೆ ಇನ್ನೊಂದು ಪ್ರಶ್ನೆ? ಈ ಲಿವ್ ಇನ್ ರಿಲೇಶನ್ಶಿಪ್ ಓಕೆನಾ ಅಥವಾ ಕಂಪ್ಲೀಟ್ಲಿ ಕಮಿಟೆಡ್ ಆಗೋದು ಬೆಸ್ಟಾ ಹೇಳಿ?
ಕಂಪ್ಲೀಟ್ಲಿ ಕಮಿಟೆಡ್ ಒಳ್ಳೆದು ಅಂತ ಅನಿಸುತ್ತೆ ನಂಗೆ. ಮ್ಯಾರೇಜ್ಗೂ ಮುನ್ನ ಲವ್ ಎಕ್ಸ್ಪೀರಿಯನ್ಸ್ ಆಗಿರಬೇಕು. ಮದುವೆಯಾದರೆ ಎಲ್ಲ ಪಡೆದುಕೊಳ್ಳೋದಕ್ಕಲ್ಲ, ಎಲ್ಲವನ್ನೂ ಕಳೆದುಕೊಳ್ಳೋದಕ್ಕೆ ಇಬ್ಬರು ರೆಡಿಯಿರಬೇಕು. ಹೀಗೊಂದು ಭಾವನೆ ಇಬ್ಬರಲ್ಲೂ ಇದ್ದರೆ ಕಮಿಟ್ ಆಗ್ಬೋದು. ಅಂದ್ಹಾಗೇ, ಈ ಡಿವೋರ್ಸ್ ಕೂಡ ಕೆಟ್ಟದ್ದು ಅಂತ ನಾನು ಹೇಳಲ್ಲ. ವರ್ಕ್ ಆಗಿಲ್ಲ ಅಂದರೆ ಬೇರೆಯಾಗೋದ್ರಲ್ಲಿ ತಪ್ಪೇನಿದೆ. ಅದಕ್ಕೆ ಯಾಕೇ ಗಂಡ ಬಿಟ್ಟೋಳು, ಹೆಂಡ್ತಿ ಬಿಟ್ಟೋನು ಅಂತೀರಾ. ಖುಷಿಯಲ್ಲಿರಬೇಕು ಅಂತ ನಿರ್ಧಾರ ಮಾಡಿದಾಗ ಅದು ಲವ್ವಲ್ಲಿ ಸಿಕ್ಕರೆ ಲವ್ ಮಾಡ್ಲಿ, ಲಿವ್ ಇನ್ನಲ್ಲಿದ್ದರೆ ಖುಷಿ ಅಂದರೆ ಹಂಗೆ ಇರಲಿ. ಮದುವೆಯಾದರೆ ಖುಷಿ ಸಿಗುತ್ತೆ ಅಂದರೆ ಮದುವೆಯಾಗಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಂತಾರೇ ರಾಜ್ ಬಿ ಶೆಟ್ಟಿ