ಕಿಂಗ್ ಖಾನ್ ಶಾರುಖ್ ತಮ್ಮ ಅಭಿಮಾನಿಗಳಿಗೆ ಪ್ಲಸ್ ಸಿನಿಮಾಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ನಾನು ಒಳ್ಳೆಯವನೋ, ಕೆಟ್ಟವನೋ ಅಂತ ನೀವೆಲ್ಲರೂ ಹೇಳಬೇಕು. ನಿಮಗೆ ನಾನು 30 ದಿನ ಟೈಮ್ ಕೊಡ್ತೀನಿ ಅಷ್ಟರಲ್ಲಿ ನಂಗೆ ತಿಳಿಸಬೇಕು ಅಂತ ಬಾಲಿವುಡ್ ಬಾದ್ ಷಾ ಸೋಷಿಯಲ್ ಮೀಡಿಯಾ ಮೂಲಕ ಗಡುವು ನೀಡಿದ್ದಾರೆ. ಅಷ್ಟಕ್ಕೂ, ಡೋಂಟ್ ಕೇರ್ ಸ್ವಭಾವದ ಶಾರುಖ್ ನಾನು ಒಳ್ಳೆಯವನೋ, ಕೆಟ್ಟವನೋ ಹೇಳಿ ಅಂತ ಜನರ ಬಳಿ ಯಾಕ್ ಕೇಳ್ತಿದ್ದಾರೆ. 30 ದಿನದೊಳಗಾಗಿ ಹೇಳಬೇಕು ಅಂತ ಅದ್ಯಾಕ್ ಡೆಡ್‍ಲೈನ್ ನೀಡಿದ್ದಾರೆ. ಆ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ
ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಜೀರೋ ಟು ಹೀರೋ ಆಗಿದ್ದು. ಹೀರೋ ಆದ್ಮೇಲೆ ಜೀರೋ ಚಿತ್ರದ ಮೂಲಕ ಸೋತು ಸುಣ್ಣವಾಗಿದ್ದು, ತದನಂತರ `ಪಠಾಣ್’ ಸಿನಿಮಾ ಮೂಲಕ ಸೋಲಿಗೆ ಸೆಡ್ಡು ಹೊಡೆದು ನಿಂತಿದ್ದು ಇದೆಲ್ಲ ನಿಮಗೆ ಗೊತ್ತೆಯಿದೆ. ಇದೀಗ `ಜವಾನ್’ ಆಗಿ ಬಿಗ್‍ಸ್ಕ್ರೀನ್‍ಗೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ಎದುರಾಳಿಗಳನ್ನ ಢರ್ ಹೊಡೆಸೋಕೆ, ಬಾಕ್ಸ್ ಆಫೀಸ್‍ನ ಶೇಕ್ ಮಾಡೋದಕ್ಕೆ ಬಾಜೀಘರ್ ಹೀರೋ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸೆಪ್ಟೆಂಬರ್ 07ರಂದು ಅಖಾಡಕ್ಕೆ ಇಳಿಯೋದಾಗಿ ಮುಹೂರ್ತ ಕೂಡ ಫಿಕ್ಸ್ ಮಾಡಿದ್ದಾರೆ. ಹೀಗಿರುವಾಗಲೇ ಜವಾನ್ನ ಹೊಸ ಪೋಸ್ಟರ್ ಒಂದನ್ನು ಶೇರ್ ಮಾಡಿಕೊಂಡಿರುವ ಶಾರುಖ್ ಖಾನ್, ನಾನು ಒಳ್ಳೆಯವನೋ, ಕೆಟ್ಟವನೋ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಶಾರುಖ್ ಶೇರ್ ಮಾಡಿಕೊಂಡಿರುವ ಪೋಸ್ಟರ್ ನೋಡಿದರೆ ಮೇಲ್ನೋಟಕ್ಕೆ ಅವರು ವಿಲನ್ ರೀತಿಯಲ್ಲಿ ಕಾಣಿಸುತ್ತಾರೆ. ಜವಾನ್ ಚಿತ್ರದಲ್ಲಿ ಶಾರುಖ್ ವಿಲನ್ನಾ ಅಥವಾ ಹೀರೋನಾ ಎನ್ನುವ ಕನ್‍ಫ್ಯೂಶನ್ ಜೊತೆಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಬೇಕು ಎನ್ನುವ ಕಾರಣ ಕಿಂಗ್ ಖಾನ್ ಹೀಗೊಂದು ಪ್ಲ್ಯಾನ್ ಮಾಡಿದ್ದಾರೆ.
ಅಂದ್ಹಾಗೇ, ಶಾರುಖ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಹೀರೋ ಕಮ್ ವಿಲನ್ನಾಗಿ ಖದರ್ ತೋರಿಸಿದ್ದಾರೆ. ಸದ್ಯ ಈ ಪೋಸ್ಟರ್ ನೋಡಿದರೆ ನಾಯಕನೋ, ಖಳನಾಯಕನೋ ತಿಳಿಯುವುದು ಕಷ್ಟ.ಆದರೆ, ಜವಾನ್ ಚಿತ್ರದಲ್ಲಿ ಬಾದ್ ಷಾ ಡಬಲ್ ರೋಲ್ ಪ್ಲೇ ಮಾಡ್ತಿರೋದ್ರಿಂದ ಹೀರೋ ಕಮ್ ವಿಲನ್ ಕ್ಯಾರೆಕ್ಟರ್ ನಲ್ಲಿ ಕಿಂಗ್ ಖಾನ್ ಕಮಾಲ್ ಮಾಡೋದು ಖರ್ರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಈ ಪೋಸ್ಟರ್ನಲ್ಲಿ ಶಾರುಖ್ ಖಾನ್ ಅವರು ಬೋಳು ತಲೆಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಜವಾನ್ನಲ್ಲಿ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಇದು ಕೂಡ ಒಂದು. ಸಿನಿಮಾದ ಪ್ರಿವ್ಯೂ ವಿಡಿಯೋದಲ್ಲಿ ಕೂಡ ಈ ಬಾಲ್ಡ್ ಹೆಡ್ ಲುಕ್ ಬಹಿರಂಗ ಆಗಿತ್ತು. ಈಗ ಅದೇ ಗೆಟಪ್ನ ಇನ್ನೊಂದು ಪೋಸ್ಟರ್ ಅನ್ನು ಶಾರುಖ್ ಖಾನ್ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ‘ನಾನು ಒಳ್ಳೆಯವನಾ ಅಥವಾ ಕೆಟ್ಟವನಾ? ತಿಳಿದುಕೊಳ್ಳಲು ಇನ್ನು 30 ದಿನ ಇದೆ, ರೆಡಿನಾ’ ಎಂಬ ಕುತೂಹಲದ ಶೀರ್ಷಿಕೆ ನೀಡಿದ್ದಾರೆ.
‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಇದು ಬಹುಕೋಟಿ ವೆಚ್ಚದ ಸಿನಿಮಾವಾಗಿದ್ದು, ರೆಡ್ ಚಿಲ್ಲಿಸ್ ಎಂಟರ್ ಟೈನ್ಮೆಂಟ್ ಅಡಿಯಲ್ಲಿ ಶಾರುಖ್ ಪತ್ನಿ ಗೌರಿಖಾನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್ ಸೇತುಪತಿ, ಸುನಿಲ್ ಗ್ರೋವರ್, ವಿಜಯ್, ಸಂಜಯ್ ದತ್ತ್ ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ಸೇರಿದಂತೆ ಸೌತ್-ನಾರ್ತ್ ಸ್ಟಾರ್ ಗಳ ಸಮಾಗಮ ಈ ಚಿತ್ರದಲ್ಲಾಗಿದೆ. ಸೆಪ್ಟೆಂಬರ್ 7ರಂದು ಜವಾನ್ ಪ್ಯಾನ್ ಇಂಡಿಯಾ ತುಂಬೆಲ್ಲಾ ಬಿಡುಗಡೆಯಾಗಲಿದ್ದು, ಶಾರುಖ್ ಫ್ಯಾನ್ಸ್ ತುದಿಗಾಲಿನಲ್ಲಿ ಚಿತ್ರ ನೋಡಲು ನಿಂತಿದ್ದಾರೆ. ಇನ್ನೂ, ಇದೇ ವರ್ಷ ತೆರೆಗೆ ಬಂದ ಪಠಾಣ್ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿ ಕಮಾಯಿ ಮಾಡಿತ್ತು. ಕುಸಿದು ಬಿದ್ದ ಬಾಲಿವುಡ್ ಮಾರ್ಕೆಟ್‍ಗೆ ಪಠಾಣ್ ಚಿತ್ರ ಬಲ ತುಂಬಿತ್ತು. ಅದ್ರಂತೆ ಜವಾನ್ ಸಿನಿಮಾ ಕೂಡ ಕಿಂಗ್ ಖಾನ್ ಕೈಹಿಡಿಯಲಿದೆಯಾ? ದಿಲ್‍ವಾಲೇ ಹೀರೋ ಆಲ್‍ಟೈಮ್ ಬಾಕ್ಸ್ ಆಫೀಸ್ ಕಿಂಗ್ ಅನ್ನೋದು ಫ್ರೂ ಆಗಲಿದೆಯಾ ಅನ್ನೋದನ್ನ ಕಾದುನೋಡಬೇಕಿದೆ.