ಲವ್ ಮಾಕ್ಟೇಲ್, ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಮತ್ತು ಗುರುದೇವ್ ಹೊಯ್ಸಳ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸಿನಿಪ್ರಿಯರ ಗಮನ ಸೆಳೆದಿರೋದು ನಟಿ ಅಮೃತಾ ಅಯ್ಯಂಗಾರ್. ಒಂದಾದ ಮೇಲೆ ಒಂದು ಸೂಪರ್ ಹಿಟ್ ಸಿನೆಮಾಗಳನ್ನೇ ನೀಡ್ತಿರುವ ಅಮೃತ, ಮೊದಲ ಸಿನಿಮಾ ಲವ್ ಮಾಕ್ಟೇಲ್ ಪಾತ್ರದ ಗುಂಗು ಮಾತ್ರ ಇನ್ನೂ ಹಾಗೇ ಇದೆ. ಅಷ್ಟರ ಮಟ್ಟಿಗೆ ಆ ಪಾತ್ರಕ್ಕೆ ಜೀವತುಂಬಿದ್ದರು. ಈಗಲೂ ಸಹ ಅಂತಹದ್ದೇ ಪಾತ್ರಗಳು ತಮ್ಮನ್ನ ಅರಸಿ ಬರುತ್ತಿರುವ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿರುವ ಇನ್ನಿತ್ತರ ನಟಿಯರ ತರಹ ನಾನು ಕೂಡ ವಿಭಿನ್ನ ಪಾತ್ರಗಳನ್ನೇ ನಿರೀಕ್ಷೆ ಮಾಡ್ತಿದ್ದೀನಿ, ಮೂರು ವರ್ಷಗಳು ಕಳೆದರೂ ಲವ್ ಮಾಕ್ಟೇಲ್ ಪಾತ್ರವನ್ನು ಜನ ಮರೆತಿಲ್ಲ. ನನ್ನ ಮುಂದಿನ ಸಿನಿಮಾ ನಟ ಶರಣ್ ಜೊತೆ, ಸೇಮ್ ಲವ್ ಮಾಕ್ಟೇಲ್ ಸಿನಿಮಾ ಫೀಲ್ ಕೊಡುತ್ತಿದೆ ಹೇಳಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿರುವ ಜೋಶಿತಾ, ಪಾತ್ರಕ್ಕಾಗಿ ಅಪ್ರೋಚ್ ಮಾಡುವ ನಿರ್ದೇಶಕರ ಮೇಲೆ ಕೊಂಚ ಬೇಸರ ಮಾಡ್ಕೊಂಡಿದ್ದಾರೆ.
‘ಸುಮಾರು 5 ವರ್ಷಗಳಿಂದ ಹಿಟ್ ಸಿನಿಮಾ ಮಾಡುತ್ತಿದ್ದರೂ ಸಿನಿಮಾ ನಿರ್ದೇಶಕರಿಗೆ ಹಾಗೂ ವೀಕ್ಷಕರಿಗೆ ನಾವು ಹೀರೋಯಿನ್ ಗಳಲ್ಲ. ಫಿಲ್ಮ್ ಮೇಕರ್ ಗಳ ಪ್ರಕಾರ ಸಿನಿಮಾ ಬಜೆಟ್ ಗಳು ನಾಯಕಿಯರ ಆಯ್ಕೆಯನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಆಫರ್ ಬಂದಾಗ ಟಾಪಿಕ್ ಸಂಭಾವನೆ ಮಾತ್ರವಾಗಿರುತ್ತದೆ. ಕಥೆ ಹೇಳುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಹಲವು ಸಿನಿಮಾಗಳು ಪುರುಷ ಪ್ರಧಾನ ಕಥೆಯಾಗಿರುತ್ತದೆ. ಅಲ್ಲಿ ನಾಯಕಿ ಎಂಟ್ರಿ ಕಥೆ ಇರುತ್ತದೆ ಅಷ್ಟೆ’ ಎಂದಿದ್ದಾರೆ ಅಮೃತಾ. ಇನ್ನೂ ‘ನಿರ್ದೇಶಕರು ಒಮ್ಮೆ ನಮ್ಮನ್ನು ಸಂಪರ್ಕಿಸಿದಾಗ 10 ದಿನ ನಿಮ್ಮ ಡೇಟ್ ಬೇಕು ನಮ್ಮ ಬಜೆಟ್ ಇಷ್ಟು ನಿಮಗೆ ಓಕೆ ಅಂದ್ರೆ ಕಥೆ ಹೇಳುತ್ತೀವಿ ಎನ್ನುತ್ತಾರೆ. ಆಗ ಏನು ಹೇಳೋದು ಅಂತಾನೇ ಗೊತ್ತಾಗಲ್ಲ. ಅಷ್ಟಕ್ಕೂ, ನನಗೆ ಕಥೆ ಇಷ್ಟ ಆದ್ರೆ ಸಿನಿಮಾ ಮಾಡುವೆ ಆದರೆ ಸಂಭಾವನೆ ಕಡಿಮೆಯಾಗಿರುತ್ತದೆ’ ಅಂತ ಅಮೃತಾ ಬೇಸರ ವ್ಯಕ್ತಪಡಿಸಿದ್ದಾರೆ.
‘ಧನಂಜಯ್ ಮತ್ತು ನನ್ನನ್ನ ಆನ್ ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಇಷ್ಟ ಪಡುತ್ತಾರೆ. ನಾವು ಮಾಡಿರುವುದು ಕೇವಲ ಮೂರು ಸಿನಿಮಾ ಅಷ್ಟೇ. ನಮ್ಮಿಬ್ಬರ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ವರ್ಕೌಟ್ ಆಗಿರೋದನ್ನ ನೋಡಿ ನಾವು ಡೇಟಿಂಗ್ ಮಾಡುತ್ತಿದ್ದೀವಿ ಅಂದುಕೊಳ್ಳುತ್ತಾರೆ. ಅಷ್ಟಕ್ಕೂ, ಧನಂಜಯ್ ಜೊತೆ ನಂಗೆ ಒಳ್ಳೆ ಬಾಂಡಿಂಗ್ ಇದೆ. ನಿಜ ಹೇಳಬೇಕು ಅಂದ್ರೆ ನಾನು ಇನ್ನೂ ಸಿಂಗಲ್’. ಹೀಗೆನ್ನುವ ಮೂಲಕ ಡಾಲಿ ಜೊತೆಗಿನ ಲವ್ವಿಡವ್ವಿ ಕಹಾನಿಗೆ ಜೋ ಬ್ರೇಕ್ ಹಾಕಿದ್ದಾರೆ. ಡಿಫ್ರೆಂಟ್ ಪಾತ್ರ, ಕಥೆಗಳ ನಿರೀಕ್ಷೆಯಲ್ಲಿರುವ ಅಮೃತಾ ಅಯ್ಯಂಗಾರ್ ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಮಿಂಚಲು ಎದುರುನೋಡ್ತಿದ್ದಾರೆ