‘ಜೊತೆ ಜೊತೆಯಲಿ…’ ಧಾರಾವಾಹಿಯಿಂದಾಗಿ ಬಿಗ್ ಸ್ಕ್ರೀನ್ ನಿಂದ ಕೊಂಚ ದೂರವಾಗಿದ್ದ ನಟ ಅನಿರುದ್ಧ್ , ಈಗ ‘ಶೆಫ್ ಚಿದಂಬರ’ ಸಿನಿಮಾದ ಮೂಲಕ ಮತ್ತೆ ಬಿಗ್ ಸ್ಕೀನ್ ನತ್ತ ಬಿಗ್ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. ಹೌದು, ಸುಮಾರು ಐದು ವರ್ಷಗಳ ನಂತರ ಅನಿರುದ್ಧ ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾಕ್ಕೆ ‘ಶೆಫ್ ಚಿದಂಬರ’ ಎಂದು ಟೈಟಲ್ ಇಡಲಾಗಿದ್ದು, ಇದೀಗ ಸಿನಿಮಾದ ಚಿತ್ರೀಕರಣಕ್ಕೂ ಚಾಲನೆ ಸಿಕ್ಕಿದೆ.
ಇತ್ತೀಚೆಗೆ ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ‘ಶೆಫ್ ಚಿದಂಬರ’ ಸಿನಿಮಾದ ಮುಹೂರ್ತ ನೆರವೇರಿತು. ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮೊದಲಾದ ಗಣ್ಯರು ‘ಶೆಫ್ ಚಿದಂಬರ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಹಿಂದೆ ವಿಜಯ ರಾಘವೇಂದ್ರ ಅಭಿನಯದ ‘ರಾಘು’ ಸಿನಿಮಾವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಎಂ. ಆನಂದರಾಜ್ ‘ಶೆಫ್ ಚಿದಂಬರ’ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಸಿನಿಮಾದ ಟೈಟಲ್ಲೇ ಹೇಳುವಂತೆ ನಾಯಕ ನಟ ಅನಿರುದ್ಧ್ ಸಿನಿಮಾದಲ್ಲಿ ‘ಶೆಫ್ ಚಿದಂಬರ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ನಲ್ಲಿ ಮೂಡಿಬರುತ್ತಿರುವ ‘ಶೆಫ್ ಚಿದಂಬರ’ ಸಿನಿಮಾದಲ್ಲಿ ಅನಿರುದ್ಧ್ ಅವರಿಗೆ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ, ರಘು ರಾಮನಕೊಪ್ಪ ಮುಂತಾದವರು ‘ಶೆಫ್ ಚಿದಂಬರ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
‘ದಮ್ತಿ ಪಿಕ್ಚರ್ಸ್’ ಲಾಂಛನದಲ್ಲಿ ರೂಪ ಡಿ. ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಚಿತ್ರದ ಹಾಡುಗಳಿಗೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ‘ಶೆಫ್ ಚಿದಂಬರ’ ಸಿನಿಮಾದ ಮುಹೂರ್ತವನ್ನು ನೆರವೇರಿಸಿರುವ ಚಿತ್ರತಂಡ, ಇದೇ ಆಗಸ್ಟ್ ತಿಂಗಳ ಎರಡನೇ ವಾರದ ಬಳಿಕ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಇನ್ನು ಶೆಫ್ ಪಾತ್ರದಲ್ಲಿ ಅನಿರುದ್ಧ್ ಕಾಣಿಸಿಕೊಂಡಿರುವ ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.