ನಟ ಅನಿರುದ್ಧ್ ಜಟ್ಕರ್ ಈಗ “ಶೆಫ್ ”ಆಗಿದ್ದಾರೆ. ಅರೆ, ಏನಿದು ಅನಿರುದ್ಧ್ ಸಿನೆಮಾ ಮಾಡೋದು ಬಿಟ್ಟು ಹೊಸ ವೃತ್ತಿ ಆರಿಸಿಕೊಂಡ್ರಾ? ಅಂತ ಕನ್‍ಫ್ಯೂಸ್ ಆಗ್ಬೇಡಿ, ಅಸಲಿ ವಿಚಾರ ಬೇರೇನೇ ಇದೆ. ಹೌದು, ಅನಿರುದ್ಧ್ ಶೆಫ್ ಆಗಿರೋದು ನಿಜ. ಆದರೆ ಅದು ಸಿನಿಮಾಗೋಸ್ಕರ. ಕಿರುತೆರೆಯಲ್ಲಿಆರ್ಯವರ್ಧನ್ ಆಗಿ ಮಿಂಚಿ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಅನಿರುದ್ಧ್, ಮತ್ತೆ ಬೆಳ್ಳಿತೆರೆಯಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಆ ಚಿತ್ರಕ್ಕೆ`ಶೆಫ್ ಚಿದಂಬರ’ ಎಂದು ಟೈಟಲ್ ಫಿಕ್ಸ್ ಆಗಿದ್ದು, ಇದರ ಮೊದಲ ಪೋಸ್ಟರ್ ನ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
ಎಂ.ಆನಂದರಾಜ್ ನಿರ್ದೇಶಿಸುತ್ತಿರುವ “ಶೆಫ್ ಚಿದಂಬರ” ಪೋಸ್ಟರ್ ನ “ಹವ್ಯಾಸಿ ಶೆಫ್” ಆಗಿರುವ ಕಿಚ್ಚನ ಕೈಯಲ್ಲಿ ರಿಲೀಸ್ ಮಾಡಿಸಿರೋದು ಇಂಟ್ರೆಸ್ಟಿಂಗ್ ವಿಚಾರ. ಶೆಫ್ ವೇಷ ತೊಟ್ಟಅನಿರುದ್ಧ್ ಕೈಯಲ್ಲಿ ಚಾಕುವೊಂದಿದ್ದು, ಅದಕ್ಕೆ ರಕ್ತದ ಕಲೆ ಮೆತ್ತಿದೆ. ಸಿನಿಮಾದಲ್ಲಿ ಅನಿರುದ್ಧ್ ಬಾಣಸಿಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪೋಸ್ಟರ್ನಿಂದ ತಿಳಿದು ಬರುತ್ತಿದೆಯಾದರೂ, ಶೆಫ್ ಕೈಯಲ್ಲಿರೋ ಚಾಕುಗೆ ಅಂಟಿದ ರಕ್ತದ ಕಲೆ ಸಿನಿಮಾ ಮರ್ಡರ್ ಮಿಸ್ಟರಿ ಇರಬಹುದೇ ಎಂಬ ಅನುಮಾನ ಮೂಡಿಸಿದೆ. ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಸಿನಿಮಾ ಖ್ಯಾತಿಯ ರೆಚೆಲ್ ಡೇವಿಡ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಇನ್ನಿತರರು ಪ್ರಮುಖ ಪಾತ್ರವರ್ಗದಲ್ಲಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಈ ಹಿಂದೆ ‘ರಾಘು’ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಎಂ.ಆನಂದರಾಜ್ ಈಗ “ಶೆಫ್ ಚಿದಂಬರ”ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರೂಪ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರಕ್ಕೆ ಎಂ.ಆನಂದ್ರಾಜ್ ಕತೆ, ಚಿತ್ರಕಥೆ ಬರೆದಿದ್ದು, ಗಣೇಶ್ ಪರಶುರಾಮ್ ಸಂಭಾಷಣೆ ಬರೆದಿದ್ದಾರೆ. ಉದಯಲೀಲ ಸಿನಿಮಾಟೊಗ್ರಫಿ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ಚಿತ್ರಕ್ಕಿದೆ. ‘ವಿಕ್ರಾಂತ್ ರೋಣ’ ಸಿನಿಮಾಕ್ಕೆ ಕೆಲಸ ಮಾಡಿದ್ದ ಆಶಿಕ್ ಕುಸುಗೊಳ್ಳಿ “ಶೆಫ್ ಚಿದಂಬರ” ನಿಗೆ ಡಿ.ಐ ವರ್ಕ್ ಮಾಡಲಿದ್ದಾರೆ. ನರಸಿಂಹಮೂರ್ತಿ ಸಾಹಸ ನಿರ್ದೇಶನ, ಮಾಧುರಿ ಪರಶುರಾಮ್ ಡ್ಯಾನ್ಸ್ ಕೊರಿಯೋಗ್ರಫಿ ಸಿನಿಮಾಗಿರಲಿದೆ. ಸಿನಿಮಾದ ಚಿತ್ರೀಕರಣ ಆಗಸ್ಟ್ 10ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದಿದೆ ಚಿತ್ರತಂಡ.
ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಜಟ್ಕರ್ ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಅವರಿಗೆ ಅವಕಾಶಗಳ ಕೊರತೆಯೋ,ಅದೃಷ್ಟದ ಹಿನ್ನಡೆಯೋ ಗೊತ್ತಿಲ್ಲ.ಅಷ್ಟಾಗಿ ಚಿತ್ರರಂಗದಲ್ಲಿ ಸೌಂಡ್ ಮಾಡಲು ಅವಕಾಶ ದೊರಕಿಲ್ಲ. 2018 ರ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸದ ಅನಿರುದ್ಧ್, ಇತ್ತಿಚೆಗೆ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ “ಶೆಫ್ ಚಿದಂಬರ” ನಾಗಿ ಕಮಾಲ್ ಮಾಡಲು ಬರುತ್ತಿದ್ದಾರೆ.