ಕನ್ನಡ ಚಿತ್ರರಂಗದಲಲ್ಲಿ ‘ಮನೆ ದೇವ್ರು’, ‘ಹಾಲುಂಡ ತವರು’, ‘ಕರುಳಿನ ಕೂಗು’ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಹಿರಿಯ ನಿರ್ಮಾಪಕ ವೈಜಾಕ್ ರಾಜು ಅವರ ಪುತ್ರ ಕಾರ್ತಿಕ್ ರಾಜು, ಇದೀಗ ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ಅಥರ್ವ’ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಇದೇ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.
ತಮ್ಮ ಮೊದಲ ಕನ್ನಡ ಸಿನಿಮಾದ ಬಗ್ಗೆ ಮಾತನಾಡಿರುವ ಕಾರ್ತಿಕ್ ರಾಜು, ‘ನಮ್ಮ ತಂದೆ ವೈಜಾಕ್ ರಾಜು, ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬ ನನ್ನ ಬಹುದಿನ ಕನಸು ಈಗ ಈಡೇರಿದೆ. ಇದಕ್ಕೂ ಮೊದಲು ನಾನು ಪುನೀತ್ ರಾಜಕುಮಾರ್ ಅವರ ‘ವೀರ ಕನ್ನಡಿಗ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ‘ಅಥರ್ವ’ ಒಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ’ ಎಂದಿದ್ದಾರೆ.
ನಾನು ಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಹಾಗೂ ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವಿರುವ ಮಹೇಶ್ ರೆಡ್ಡಿ ‘ಅಥರ್ವ’ ಚಿತ್ರದ ನಿರ್ದೇಶಕರು. ‘ಕ್ಲೂಸ್ ಡಿಪಾರ್ಟ್ಮೆಂಟ್ ಎಂಬುದು ಪೊಲೀಸ್ ಡಿಪಾರ್ಟ್ಮೆಂಟ್ ವ್ಯಾಪ್ತಿಗೆ ಬರುತ್ತದೆ. ಈ ಕ್ಲೂಸ್ ಡಿಪಾರ್ಟ್ಮೆಂಟ್ ಬಳಸಿಕೊಂಡು ಹೆಚ್ಚಿನ ಸಿನಿಮಾಗಳು ಬಂದಿಲ್ಲ. ನಮ್ಮ ಚಿತ್ರದಲ್ಲಿ ಒಂದು ಕೊಲೆಯ ಸತ್ಯವನ್ನು ತಿಳಿಯಲು ಕ್ಲೂಸ್ ಡಿಪಾರ್ಟ್ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದೇವೆ’ ಎಂಬುದು ನಿರ್ದೇಶಕ ಮಹೇಶ್ ರೆಡ್ಡಿ ಮಾತು. ಚಿತ್ರದಲ್ಲಿ ನಾಯಕಿ ಸಿಮ್ರಾನ್ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.