ಸಮಂತಾ ಹಾಗೂ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾದ ಐದನೇ ಹಾಡು ರಿಲೀಸ್ ಆಗಿದೆ. ಸಮಂತಾಗೆ ‘ಹೇ… ಹೆಂಡತಿ’ ಎನ್ನುತ್ತಾ ವಿಜಯ್ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ರಿಲೀಸ್ ಆಗಿರುವ ಈ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮೆಲೋಡಿ ಹಾಡುಗಳಿಗೆ ಜನಪ್ರಿಯರಾಗಿರುವ ಹೇಷಾಂ ಅಬ್ದುಲ್ ವಹಾಬ್ ಈ ಸಿನಿಮಾದ ಹಾಡಿಗೆ ಟ್ಯೂನ್ ಹಾಕಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ ‘ಮಜಿಲಿ’ ಸಿನಿಮಾದ ನಿರ್ದೇಶಕ ಶಿವ ನಿರ್ವಾಣ ಆಕ್ಷನ್-ಕಟ್ ಹೇಳಿದ್ದಾರೆ.
ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ‘ಖುಷಿ’ ಸಿನಿಮಾವನ್ನು ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲಾ ಕಿಶೋರ್, ರೋಹಿಣಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೇಷಾಂ ಅಬ್ದುಲ್ ವಹಾಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.