ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಮತ್ತೊಂದು ಸ್ಟುಡಿಯೋ ಆರಂಭವಾಗಿದೆ. ‘ವೇಲ್ಸ್ ಗ್ರೂಪ್’ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಅವರ ಸಾರಥ್ಯದಲ್ಲಿ ಬೆಂಗಳೂರಿನ ಹೊರವಲಯದ ಬಿಡದಿ ಸಮೀಪ ಪ್ರಾರಂಭವಾಗಿರುವ ‘ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್’ ಇತ್ತೀಚೆಗೆ ಉದ್ಘಾಟನೆಯಾಯಿತು.
ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್, ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಸಂಸದ ಡಿ. ಕೆ. ಸುರೇಶ್ ಹಾಗೂ ಮಾಗಡಿ ಶಾಸಕ ಹೆಚ್. ಸಿ ಬಾಲಕೃಷ್ಣ, ರ್ಯಾಪರ್ ಅಲೋಕ್, ನಟಿ ಸಂಜನಾ ಆನಂದ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದು ‘ಜಾಲಿವುಡ್ ಸ್ಟುಡಿಯೋ’ವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಐಶರಿ ಕೆ ಗಣೇಶ್, ‘ಬಹಳ ವರ್ಷಗಳ ಒಂದು ಕನಸು ಇಂದು ನನಸಾಗಿದೆ. ಕಳೆದ 30 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮನೆಮಂದಿಯಲ್ಲಾ ಒಟ್ಟಿಗೆ ಸಮಯ ಕಳೆಯುವಂತಹ ಒಂದು ಥೀಮ್ ಪಾರ್ಕ್ ಮಾಡಬೇಕು ಎಂಬ ಆಸೆ ಇತ್ತು. ಹೀಗಿರುವಾಗಲೇ, ಇನ್ನೊವೇಟಿವ್ ಫಿಲಂಸಿಟಿಯನ್ನು ಟೇಕ್ ಓವರ್ ಮಾಡುವ ಆಫರ್ ಬಂತು. ಕಳೆದ ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಫಿಲಂಸಿಟಿಯನ್ನು ನವೀಕರಿಸಿರುವುದಷ್ಟೇ ಅಲ್ಲ, ಹಲವು ಮನರಂಜನೆ ಆಟಗಳನ್ನು ಹೊಸದಾಗಿ ಪ್ರಾರಂಭಿಸಿದ್ದೇವೆ. ಭಾರತೀಯ ಚಿತ್ರರಂಗಕ್ಕೆ ಇದನ್ನು ಸಮರ್ಪಿಸುತ್ತಿದ್ದೇವೆ’ ಎಂದರು.
ಇದೇ ವೇಳೆ ಮಾತನಾಡಿದ ನಟ ಶಿವರಾಜಕುಮಾರ್, ‘ಹಿಂದೆ ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇದು ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ಒಂದು ಕಡೆ ಸೇರುವ ಸ್ಥಳ ‘ಜಾಲಿವುಡ್’ ಆಗಲಿ’ ಎಂದು ಹಾರೈಸಿದರು. ಅಂದಹಾಗೆ, ಇದೇ ಆಗಸ್ಟ್ 27ರಿಂದ ಈ ‘ಜಾಲಿವುಡ್’ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಸಿನಿಮಾ ಮತ್ತು ಮನರಂಜನಾ ಚಟುವಟಿಕೆಗಳಿಗೆ ಲಭ್ಯವಾಗಲಿದೆ.