ಆರ್ಮುಗಂ ರವಿಶಂಕರ್ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ ನಟನಾಗುವ ತಮ್ಮ ಕನಸನ್ನ ಈಡೇರಿಸಿಕೊಂಡರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ `ಕೆಂಪೇಗೌಡ’ ಸಿನಿಮಾದಲ್ಲಿ ಆಮುರ್ಗಂ ಪಾತ್ರ ಪೋಷಣೆ ಮಾಡಿ ಜನಪ್ರಿಯತೆ ಗಳಿಸಿದರು. ಅಲ್ಲಿವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕೂಡ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ. ಆದರೆ, ಕೆಂಪೇಗೌಡ ಸಿನಿಮಾದಿಂದ ರವಿಶಂಕರ್ ಕರಿಯರ್ರೇ ಬದಲಾಯ್ತು. ನೇಮು-ಫೇಮು-ಕ್ರೇಜು-ಕಾಸು ಹೀಗೆ ಎಲ್ಲವೂ ಕೂಡ ಒಟ್ಟೊಟ್ಟಿಗೆ ದಕ್ಕಿತು, ಬೇಡಿಕೆ ಸೃಷ್ಟಿಯಾಯ್ತು. ಈಗಲೂ ಆ ಬೇಡಿಕೆ ತಗ್ಗಿಲ್ಲ, ಸದ್ಯಕ್ಕೆ ತಗ್ಗೋದು ಇಲ್ಲ ಅನ್ನೋದಕ್ಕೆ ಅವರ ಕೈಯಲ್ಲಿರುವ ಸಿನಿಮಾಗಳೇ ಸಾಕ್ಷಿ
ಅಷ್ಟಕ್ಕೂ, ನಾವು ಇವತ್ತು ಆರ್ಮುಗಂ ರವಿಶಂಕರ್ ಅವರ ಬಗ್ಗೆ ಬರೆಯುತ್ತಿರುವುದಕ್ಕೆ ಕಾರಣ ಅವರು ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಭಾರಿ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ರವಿಶಂಕರ್ ಗೆ ಈ ಚಿತ್ರದಿಂದ ಒಳ್ಳೆ ಹೆಸರು ಬಂದಿತ್ತು. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ದುರ್ಗಿ ನಂತರ ಡೈರೆಕ್ಷನ್ ಕಡೆ ಮುಖ ಮಾಡಿರಲಿಲ್ಲ. ಇದೀಗ, 20 ವರ್ಷಗಳು ಉರುಳಿದ್ಮೇಲೆ ಮತ್ತೆ ಡೈರೆಕ್ಟರ್ ಹ್ಯಾಟ್ ತೊಡಲು ರೆಡಿಯಾಗಿದ್ದಾರೆ. ಅದು ಅವರ ಮಗನ ಸಿನಿಮಾಗೆ ಅನ್ನೋದು ವಿಶೇಷ.
ಹೌದು, ಆರ್ಮುಗಂ ರವಿಶಂಕರ್ಗೆ ಒಬ್ಬ ಮಗ ಇದ್ದಾರೆ. ಅಧ್ವಯ್ ಶಂಕರ್ ಅಂತ ಅವರ ಹೆಸರು. ವಿದೇಶದಲ್ಲಿ ನಟನಾ ತರಭೇತಿಯನ್ನ ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸವೆಲ್ಲ ಮುಗಿಸಿ ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯಿಸೋಕೆ ರವಿಶಂಕರ್ ರೆಡಿಯಾಗಿದ್ದಾರೆ. ತಾತನಂತೆ, ಅಪ್ಪ-ಚಿಕ್ಕಪ್ಪರಂತೆ ಕಲೆ ರಕ್ತಗತವಾಗಿ ಬಂದಿರುವುದರಿಂದ ಮುಖಕ್ಕೆ ಬಣ್ಣ ಹಚ್ಚಲು ಅಧ್ವಯ್ ಕೂಡ ಓಕೆ ಹೇಳಿದ್ದು, ಪುತ್ರನ ಚೊಚ್ಚಲ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ನಟ ಕಂ ನಿರ್ದೇಶಕ ರವಿಶಂಕರ್
ಅಕ್ಟೋಬರ್ 24 ರಂದು ಅಧಿಕೃತವಾಗಿ ಅಧ್ವಯ್ ಸಿನಿಮಾ ಲೋಕಕ್ಕೆ ಎಂಟ್ರಿಕೊಡ್ತಿದ್ದಾರೆ. ಅಂದೇ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಗ್ರ್ಯಾಂಡ್ ಆಗಿ ಮಗನನ್ನು ಲಾಂಚ್ ಮಾಡೋದಕ್ಕೆ ರವಿಶಂಕರ್ ಅವರು ತಯ್ಯಾರಿ ನಡೆಸಿದ್ದಾರಂತೆ. ನನ್ನ ಮಗನ ಬಗ್ಗೆ ಬೇರೆಯವರಿಗಿಂತ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಹೀಗಾಗಿ, ಅವನ ಡೆಬ್ಯೂ ಸಿನಿಮಾವನ್ನು ನಾನೇ ಡೈರೆಕ್ಟ್ ಮಾಡಬೇಕು ಎನ್ನುವ ಆಸೆ. ಜೊತೆಗೆ ನಿರ್ದೇಶನದಿಂದ ದಶಕಗಳ ಕಾಲ ದೂರ ಉಳಿದಿದ್ದೇನೆ. ಆದರೆ, ಡೈರೆಕ್ಷನ್ ಮಾಡುವ ಬಯಕೆ ಮಾತ್ರ ನನ್ನಿಂದ ದೂರ ಆಗಿಲ್ಲ. ಹೀಗಾಗಿ, ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿರುವ ಬಗ್ಗೆ ಖಾಸಗಿ ಪತ್ರಿಕೆಗೆ ರಿಯಾಕ್ಷನ್ ಕೊಟ್ಟಿದ್ದಾರೆ. ನಾಯಕಿ ಸೇರಿದಂತೆ ಸಿನಿಮಾ ತಂಡದ ಉಳಿದ ಮಾಹಿತಿಯನ್ನ ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ, ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಮಾಡುವ ಚಿಂತನೆ ಇರುವುದಾಗಿ ತಿಳಿಸಿದ್ದಾರೆ.