ಬೆಳ್ಳಿ-ಬೊಮ್ಮನ್ ಯಾರು ಅನ್ನೋ ವಿಚಾರವನ್ನ ಹೊಸದಾಗಿ ಹೇಳಬೇಕಾಗಿಲ್ಲ. `ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಪಾತ್ರಧಾರಿಗಳು. ಎಲ್ಲದಕ್ಕಿಂತ ಹೆಚ್ಚಾಗಿ ಬೆಳ್ಳಿ-ಬೊಮ್ಮನ್ ರಿಯಲ್ ಲೈಫ್ ಹೀರೋಗಳು. ಇವರಿಬ್ಬರ ಮುಗ್ದತೆಗೆ, ಅನಾಥ ಆನೆಮರಿಯೊಂದನ್ನ ಪಾಲಿಸಿ, ಪೋಷಿಸಿದ ರೀತಿಗೆ ಇಡೀ ಚಿತ್ರಜಗತ್ತು ಸಲಾಂ ಎಂದಿತ್ತು. ಆನೆ ಮತ್ತು ಮನುಷ್ಯನ ನಡುವಿರುವ ಸಂಬಂಧ ಎಂತಹದ್ದು ಎಂಬುದನ್ನು ತೋರಿಸಿಕೊಟ್ಟ `ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರಕ್ಕೆ ವಿಶ್ವಶ್ರೇಷ್ಟ ಆಸ್ಕರ್ ಪ್ರಶಸ್ತಿ ಮುಡಿಗೇರಿತ್ತು. ಇದೀಗ ಈ ಚಿತ್ರದ ಪಾತ್ರಧಾರಿಗಳಾದ ಬೆಳ್ಳಿ ಹಾಗೂ ಬೊಮ್ಮನ್ ಕಾನೂನಿನ ಮೊರೆ ಹೋಗಿದ್ದಾರೆ. ಸಾಕ್ಷ್ಯಚಿತ್ರ ತೆಗೆಯುವಾಗ ನಿರ್ದೇಶಕಿ ಕಮ್ ನಿರ್ಮಾಪಕಿ ಕಾರ್ತಿಕಿಯವರು ಹತ್ತಾರು ಆಶ್ವಾಸನೆಗಳನ್ನು ಕೊಟ್ಟಿದ್ದರಂತೆ. ಆಸೆ-ಆಮಿಷೆಗಳನ್ನೊಡ್ಡಿ ನಮ್ಮನ್ನ ಕ್ಯಾಮೆರಾ ಮುಂದೆ ನಿಲ್ಲಿಸಿದರಂತೆ. ಆದ್ರೀಗ ಬೆಳ್ಳಿ-ಬೊಮ್ಮನ್ ಕೈಗೆ ಸಿಗದೇ, ದೂರವಾಣಿ ಕರೆಗೂ ಸ್ಪಂಧಿಸದೇ ಇರೋದ್ರಿಂದ ಬೆಳ್ಳಿ ಹಾಗೂ ಬೊಮ್ಮನ್ ಕಾನೂನಿನ ಮೊರೆ ಹೋಗಿದ್ದಾರೆ. 2 ಕೋಟಿ ರೂಪಾಯಿ ಪರಿಹಾರ ಕೊಡುವಂತೆ ಕೇಳಿ ನಿರ್ದೇಶಕಿ ವಿರುದ್ದ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ.
ಚಿತ್ರದಲ್ಲಿ ನಟಿಸಿರೋದಕ್ಕೆ ನಮಗೆ ಯಾವುದೇ ರೀತಿಯ ಸಂಭಾವನೆ ಸಿಕ್ಕಿಲ್ಲ. ಡಾಕ್ಯೂಮೆಂಟ್ರಿ ಶೂಟ್ ಮಾಡುವಾಗ ನಿರ್ದೇಶಕಿ ಕಾರ್ತಿಕಿಯವರು ಸ್ವಂತ ಮನೆ ಕಟ್ಟಿಕೊಡುವುದಾಗಿ, ಬೆಟ್ಟ-ಗುಡ್ಡಗಳ ಮಧ್ಯೆ ಓಡಾಡಲಿಕ್ಕೆ ವಾಹನ ಕೊಡಿಸುವುದಾಗಿ ಜೊತೆಗೆ ಒಂದಿಷ್ಟು ಹಣ ಸಹಾಯ ಮಾಡುವುದಾಗಿ ಹೇಳಿದ್ರಂತೆ. ಆದರೆ, ಇಲ್ಲಿತನಕ ಯಾವುದೇ ಸಹಾಯ ಮಾಡಿಲ್ಲ. ಎಲ್ಲರೆದುರು ರಿಯಲ್ ಹೀರೋಗಳೆಂದು ಪರಿಚಯಿಸಿದ್ದು ಬಿಟ್ಟರೆ ಯಾವುದೇ ಉಪಯೋಗ ಮಾಡಿಕೊಟ್ಟಿಲ್ಲ. ತಮಿಳುನಾಡು ಮುಖ್ಯಮಂತ್ರ ಎಂಕೆ ಸ್ಟ್ಯಾಲಿನ್ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಡೆಯಿಂದ ದೇಣಿಗೆಯ ದುಡ್ಡು ನಮಗೆ ಸಿಕ್ಕಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ, ಅದು ಕೂಡ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆನ್ಸ್ ಕೈ ಸೇರಿದೆ ಎಂದು ಬೆಳ್ಳಿ ಹಾಗೂ ಬೊಮ್ಮನ್ ದಂಪತಿಗಳು ಆರೋಪಿಸಿದ್ದಾರೆ.
`ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಬೊಮ್ಮನ್ ಹಾಗೂ ಬೆಳ್ಳಿಯ ಮದುವೆ ದೃಶ್ಯವೊಂದನ್ನ ನೀವು ನೋಡಿರ್ತೀರಿ.ಇದಕ್ಕಾಗಿ ಈ ದಂಪತಿಯೇ ಹಣ ಖರ್ಚು ಮಾಡಿದ್ದರಂತೆ. ‘ನಿರ್ದೇಶಕಿ ಕಾರ್ತಿಕಿ ಕಾರ್ತಿಕಿ ಗೊನ್ಸಾಲ್ವೆನ್ಸ್ ಅವರು ನಮ್ಮ ಮದುವೆಯ ದೃಶ್ಯವನ್ನು ಮರುಸೃಷ್ಟಿ ಮಾಡಲು ಬಯಸಿದ್ದರು. ಹೀಗಾಗಿ ಆ ದೃಶ್ಯವನ್ನು ಸೇರಿಸಲಾಗಿದೆ. ಈ ದೃಶ್ಯದ ಶೂಟ್ಗೆ ಬೇಕಿರುವ ಸಿದ್ಧತೆಯನ್ನು ನಾವೇ ಮಾಡಿಕೊಂಡಿದ್ದೆವು. ಇದಕ್ಕಾಗಿ ನಮ್ಮ ಉಳಿತಾಯ ಖಾತೆಯಿಂದ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಮರಳಿ ನೀಡುವುದಾಗಿ ಅವರು ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ’ ಎಂದಿದ್ದಾರೆ ಬೊಮ್ಮನ್ ಹಾಗೂ ಬೆಳ್ಳಿ.
ಇನ್ನೂ ಆಸ್ಕರ್ ಗೆದ್ದ ನಂತರದಲ್ಲಿ ನಿರ್ದೇಶಕಿ ಕಮ್ ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವೆನ್ಸ್ ಸಂಪೂರ್ಣ ಬದಲಾಗಿದ್ದಾರಂತೆ. ಬೆಳ್ಳಿ-ಬೊಮ್ಮನ್ ಕಷ್ಟಕ್ಕೆ ಹಾಗೂ ಕರೆಗೆ ಸ್ಪಂಧಿಸುತ್ತಿಲ್ಲ. ಹೀಗಾಗಿಯೇ ನಾವು ನ್ಯಾಯದೇವತೆಯ ಮೊರೆ ಹೋಗಿದ್ದೇವೆ ಎಂದಿದ್ದಾರೆ. ಇದಕ್ಕೆ ನಿರ್ದೇಶಕಿ ಕಾರ್ತಿಕಿ ಯಾವ್ ರೀತಿ ಪ್ರತಿಕ್ರಿಯಿಸ್ತಾರೆ? 2 ಕೋಟಿ ರೂಪಾಯಿ ಧನಸಹಾಯ ಮಾಡುವಂತೆ ಕೋರಿರುವ ಮಾವುತ ದಂಪತಿಗಳಿಗೆ ಸಹಾಯ ಮಾಡ್ತಾರಾ ಇಲ್ಲವಾ ಅನ್ನೋದನ್ನ ಕಾದು ನೋಡಬೇಕಿದೆ.
ದಶಕಗಳಿಂದಲೂ ಬೊಮ್ಮನ್ ದಂಪತಿಗೆ ನಿಕಟವರ್ತಿಯಾಗಿರುವ ಪ್ರವೀಣ್ ರಾಜ್ ಎಂಬ ವಕೀಲರು, ಚೆನ್ನೈನಲ್ಲಿರುವ ಕಾನೂನು ಸಲಹಾ ಸಂಸ್ಥೆಯೊಂದಕ್ಕೆ ಪರಿಚಯಿಸಿದ್ದು, ಆ ಸಂಸ್ಥೆಯಿಂದಲೇ ನೋಟಿಸ್ ಜಾರಿಗೊಳಿಸಲಾಗಿದೆ. ಮೊಹಮ್ಮದ್ ಮಸೂರ್ ಎಂಬ ಅಡ್ವೊಕೇಟ್ ಈ ಪ್ರಕರಣವನ್ನು ನಿರ್ವಹಣೆ ಮಾಡುತ್ತಿದ್ದಾರೆ.