ಇದೀಗ ದೇಶಾದ್ಯಂತ ನಅತೀ ಚಿಕ್ಕ ವಯಸ್ಸಿನವರಿಗೂ ಹೃದಯಾಘಾತದ ಮೂಲಕ ಸಾವು ಒಕ್ಕರಿಸುತ್ತಿದೆ. ಒಂದು ಕಾಲದಲ್ಲಿ ಹೃದಯಾಘಾತದ ಬಗ್ಗೆ ಒಂದಷ್ಟು ನಂಬಿಕೆಗಳಿದ್ದವು. ಅದೆಷ್ಟೋ ವರ್ಷಗಳ ಕಾಲ ಅದು ನಗರಗಳಲ್ಲಿ ವಾಸಿಸುವ ಹಣವಂತ ಮಂದಿಯನ್ನು ಹುಡುಕಿ ಆವರಿಸಿಕೊಳ್ಳುವ ಕಾಯಿಲೆ ಎಂಬಂಥಾ ನಂಬಿಕೆಯೊಂದು ಈ ಸಮಾಜದಲ್ಲಿ ಹಾಸು ಹೊಕ್ಕಾಗಿತ್ತು. ನಲವತ್ತರಾಚೆಗೆ ಇದರ ಆಗನವಾಗಬಹುದೆಂಬ ಭಯ ಒಂದಷ್ಟು ಮಂದಿಗಿತ್ತು. ಆದರೀಗ ಶಾಲಾ ಮಕ್ಕಳಿಗೂ ಕೂಡಾ ಹಠಾತ್ತನೆ ಹೃದಯಾಘಾತವಾಗುತ್ತಿದೆ. ಒಂದು ಕಾಲದಲ್ಲಿ ಮಕ್ಗಕಳು ಡುಮ್ಮಗಿದ್ದರೆ ಖುಷಿ ಪಡುವ ಕಾಲ ಸರಿದು ಇದೀಗ ಅದೂ ಕೂಡಾ ಸಾವಿನ ಭಯದಿಂದ ಕಂಪಿಸುವಂತೆ ಮಾಡಿ ಬಿಟ್ಟಿದೆ.
ಹೀಗೆ ಹೃದಯಾಘಾತ ವ್ಯಾಪಕವಾಗಿ ಹಬ್ಬಿಕೊಳ್ಳುತ್ತಿರೋದಕ್ಕೆ ಕೊರೋನಾ ಲಸಿಕೆಯೇ ಕಾರಣ ಅಂತೆಲ್ಲ ಹೇಳಲಾಗುತ್ತಿದೆ. ಈ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಆದರೆ, ಇದು ಕೊರೋನಾ ಪರಿಣಾಮ ಇದ್ದರೂ ಇರಬಹುದೆಂಬ ವಿಚಾರ ಮೇಲುನೋಟಕ್ಕೇನೇ ಗೊತ್ತಾಗುವಂತಿದೆ. ಹಾಗಾದರೆ, ಇಂಥಾ ಹಠಾತ್ ಸಾವುಗಳಿಗೆ ಬರೀ ಕೊರೋನಾ ಲಸಿಕೆ ಮಾತ್ರವೇ ಕಾರಣವಾ? ಬೇರೇನೂ ಕಾರಣಗಳಿರಲಿಕ್ಕಿಲ್ಲವಾ ಅನ್ನೋ ಪ್ರಶ್ನೆ ಮೂಡಿಕೊಳ್ಳೋದು ಸಹಜ. ಒಂದು ವೇಳೆ ಕೊರೋನಾ ಲಸಿಕೆ ಮಾತ್ರವೇ ಕಾರಣ ಅಂದರೆ ಅದು ನಿಜಕ್ಕೂ ಸಿನಿಕತನವಾಗುತ್ತದೆ. ಇದರ ಹಿಂದೆ ತಣ್ಣಗೆ ಕೊಲ್ಲುವ ಕೊಲೆಸ್ಟ್ರಾಲ್ ಅಂದರೆ ಕೊಬ್ಬಿನ ಕೈಚಳಕ ಖಂಡಿತವಾಗಿಯೂ ಇದೆ. ಈವತ್ತಿನ ಪರಿಸ್ಥಿತಿಯಲ್ಲಿ ಪುಟ್ಟ ಮಕ್ಕಳು ಕೂಡಾ ಕೊಬ್ಬಿನಿಂದ ಅಪಾಯದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಕೊಬ್ಬೆಂಬುದು ಜೀವ ಬಲಿಗಾಗಿ ಕಾದು ಕುಂತ ರಕ್ಕಸನಂತೆಯೇ ಕಾಣಿಸುತ್ತಿದೆ!
ಹಠಾತ್ ಸಾವು
ಕೊರೋನಾ ನಂತರದಲ್ಲಿ ಸಾವಿಗೆ ಮಾರಣಾಂತಿಕ ಕಾಯಿಲೆಗಳ ಕಾರಣವೇನೂ ಬೇಕಿಲ್ಲ. ಗಟ್ಟಿಮುಟ್ಟಾಗಿ ಓಡಾಡಿಕೊಂಡಿದ್ದವರೇ ಕುಸಿದು ಬಿದ್ದು ಸಾಯುವಂಥಾ ಭಯಭೀತ ವಾತಾವರಣ ಸೃಷ್ಟಿಯಾಗಿದೆ. ಇದರ ಹಿಂದೆ ಕೋವಿಡ್ ವ್ಯಾಕ್ಸಿನ್ನಿನ ಕಿಸುರಿದೆಯೆಂಬ ಚರ್ಚೆಗಳೂ ನಡೆಯುತ್ತಿವೆ. ಆದ್ರೆ, ಈಗ ಕಾಡುತ್ತಿರೋ ಬಹುತೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪ್ರಧಾನ ಕಾರಣವಾಗಿರೋದು ಜೀವನಶೈಲಿ ಮತ್ತು ಕಳಪೆ ಆಹಾರ ಕ್ರಮ. ಇದೆಲ್ಲದರ ಫಲವಾಗಿ ಕೆಟ್ಟ ಕೊಲೇಸ್ಟ್ರಾಲಿನ ಕಂಟಕ ಬಹುತೇಕರನ್ನ ಕಾಡುತ್ತಿದೆ. ಕೊಲೆಸ್ಟ್ರಾಲ್ ಅನ್ನೋದು ಮಾಮೂಲಿ ಮ್ಯಾಟರ್ ಅಂತ ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೇ ಕುತ್ತುಂಟಾದ್ರೂ ಅಚ್ಚರಿಯೇನಿಲ್ಲ. ಅದು ಕೊಲೆಸ್ಟ್ರಾಲ್ ಎಂಬ ತಣ್ಣಗಿನ ಹಂತಕನ ಕರಾಮತ್ತು.
ಕೊಲೆಸ್ಟ್ರಾಲ್ ಎಂಬ ತಣ್ಣಗೆ ಕೊಲ್ಲೋ ವಿಷ ಒಂದಷ್ಟು ಮಾರಣಾಂತಿಕ ಕಾಯಿಲೆಗಳಿಗೆ ಸಹಕಾರ ನೀಡುತ್ತೆ. ಇದು ಎಂಥಾ ಡೇಂಜರಸ್ ಬಾಧೆ ಅಂದ್ರೆ, ಕೆಲವೊಮ್ಮೆ ಸೂಚನೆ ನೀಡಿ ಕೆಡುಕುಂಟು ಮಾಡುತ್ತೆ. ಮತ್ತೆ ಕೆಲ ಬಾರಿ ಯಾವ ಗುಣಲಕ್ಷಣಗಳನ್ನೂ ಕಾಣಿಸದೆಯೇ ಅಮರಿಕೊಳ್ಳುತ್ತೆ. ಲಿಪಿಡ್ ಅಂತೊಂದು ಪರೀಕ್ಷೆಯ ಮೂಲಕವಷ್ಟೇ ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿದುಕೊಳ್ಳಬೇಕಾಗುತ್ತೆ. ಆದ್ರೆ ಹೆಚ್ಚಿನವರು ಆಗಾಗ ಇಂಥಾ ಪರೀಕ್ಷೆ ಮಾಡಿಸಿಕೊಳ್ಳಲು ಮನಸು ಮಾಡೋದಿಲ್ಲ. ಈವತ್ತಿನ ಸಂದರ್ಭದಲ್ಲಿ ಆಗಾಗ ನಿಯಮಿತವಾಗಿ ಕೊಲೆಸ್ಟ್ರಾಲ್ ಪರೀಕ್ಷೆ ನಡೆಸಲೇ ಬೇಕಾಗುತ್ತದೆ. ಹಾಗಾದರೆ ಮಾತ್ರವೇ ಜೀವಾಪಾಯದ ಸಾಧ್ಯತೆಯನ್ನ ಸತ್ಯವಾಗಿಸಿಕೊಳ್ಳಬಹುದೇನೋ…
ಲಿಪಿಡ್ ಟೆಸ್ಟು!
ಸಾಮಾನ್ಯವಾಗಿ ಲಿಪಿಡ್ ಪರೀಕ್ಷೆಯ ಹೊರತಾಗಿಯೂ ಕೊಲೆಸ್ಟ್ರಾಲ್ ಹೆಚ್ಚಾಗಿರೋದು ನಮ್ಮ ದೇಹದ ಮೇಲೆ ಕಾಣಿಸಿಕೊಳ್ಳಲಾರಂಭಿಸುತ್ತೆ. ಮುಖದ ಮೇಲೆ ಹಳದಿ ಪ್ಯಾಚುಗಳು ಮೂಡಿಕೊಂಡರೆ, ಕಣ್ಣಿನ ಸುತ್ತ ಹಳದಿ ಬಣ್ಣ ಕಾಣಿಸಿಕೊಂಡರೆ, ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಅನ್ನೋದರ ಸೂಚನೆ. ಮತ್ತೆ ಕೆಲ ಬಾರಿ ಮುಖದ ಮೇಲೆ ಊತ ಕಾಣಿಸಿಕೊಳ್ಳುತ್ತೆ. ಅದು ತಿಳಿ ಹಳದಿ ಬಣ್ಣಕ್ಕೆ ತಿರುಗಿಕೊಳ್ಳುತ್ತೆ. ಹಾಗಂತ ಅದೇನೂ ನೋವಿರೋದಿಲ್ಲ. ಒಂದಷ್ಟು ಸಮಯದ ಬಳಿಕ ತಾನಾಗಿಯೇ ಊತ ಮರೆಯಾಗಲೂ ಬಹುದು. ಆಗ ಎಲ್ಲ ಸರಿಯಾಗಿದೆ ಅಂದುಕೊಂಡು ಸುಮ್ಮನಾದರೆ, ದೇಹದೊಳಗೆ ಮತ್ತೊಂದು ಕಾಯಿಲೆ ಸಂಚು ನಡೆಸೋದು ನಿಶ್ಚಿತ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಹೃದಯಾಘಾತಕ್ಕಿಂತಲೂ ಡೇಂಜರಸ್ ಆದ ಕಾಯಿಲೆಗಳು ದೇಹದೊಳಗೆ ರುದ್ರನರ್ತನ ಶುರುವಿಟ್ಟುಕೊಳ್ಳುತ್ತವೆ.
ಈಗಾಗಲೇ ಕೊಲೆಸ್ಟ್ರಾಲಿನ ಬಗ್ಗೆ ನಾನಾ ಅಧ್ಯಯನಗಳು ನಡೆದಿವೆ. ಕೆಟ್ಟ ಕೊಲೆಸ್ಟ್ರಾಲಿನಿಂದಲೇ ಹೆಚ್ಚಿನ ಹೃದಯಾಘಾತಗಳು ಸಂಭವಿಸುತ್ತವೆ. ಹಾಗಂತ ವೈದ್ಯರೇ ದೃಢ ಪಡಿಸಿದ್ದಾರೆ. ಆದ್ರೆ, ಹೆಚ್ಚಿನ ಮಂದಿ ಪೀಚು ಪೀಚಾಗಿರೋರಿಗೂ ಹೃದಯಾಘಾತವಾಗುತ್ತೆ ಎಂಬರ್ಥದಲ್ಲಿ ತಾತ್ಸಾರ ಮಾಡುತ್ತಾರೆ. ಇನ್ನುಳಿದಂತೆ ಸ್ಟ್ರೋಕ್ ಗೂ ಕೂಡಾ ಇದು ಕಾರಣವಾಗುತ್ತೆ. ಇದನ್ನು ತಡೆಗಟ್ಟಬೇಕಂದ್ರೆ ಸಮತೋಲಿತವಾದ, ಕ್ವಾಲಿಟಿ ಹೊಂದಿರೋ ಆಹಾರವೇ ಪರಿಹಾರ. ಜಂಕ್ ಫುಡ್ಡುಗಳಿಂದ ದೂರವಿರೋದು ಕೊಲೆಸ್ಟ್ರಾಲಿನ ಅಪಾಯಗಳಿಂದ ಪಾರು ಮಾಡುತ್ತೆ. ಒಂದುವೇಳೆ ಕೊಲೆಸ್ಟ್ರಾಲ್ ವಿಪರೀತಕ್ಕಿಟ್ಟುಕೊಂಡಿದ್ದರೆ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಲೇ ಬೇಕಾಗುತ್ತದೆ. ಒಂದು ವೇಳೆ ಮುಂದಕ್ಕೆ ಹಾಕಿದರೆ, ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಕೊಲೆಸ್ಟ್ರಾಲ್ ಅಂದ್ರೇನು?
ಅಷ್ಟಕ್ಕೂ ಕೊಲೆಸ್ಟ್ರಾಲ್ ಅಂದರೇನು? ಇಂಥಾ ಪ್ರಶ್ನೆಗೆ ಬಹುತೇಕ ಮಂದಿಗೆ ಉತ್ತರ ಗೊತ್ತಿಲ್ಲ. ಯಾವುದೇ ಕಾಯಿಲೆ ಆದರೂ ಅದರಿಂದ ದೂರವಿರೋದಕ್ಕೆ ಅದರ ಬಗ್ಗೆ ತಿಳುವಳಿಕೆ ಮುಖ್ಯವಾಗುತ್ತೆ. ಕೊಲೆಸ್ಟ್ರಾಲ್ ಒಂದು ಕಾಯಿಲೆ ಅಲ್ಲದಿದ್ದರೂ ಅದು ಹೆಚ್ಚಾದರೆ ಒಂದಷ್ಟು ಬಗೆಯ ರೋಗಗಳಿಗೆ ಕಾರಣವಾಗುತ್ತದೆ. ಇದರಿಂದಾಗಿಯೇ ಅದರ ಬಗ್ಗೆ ತಿಳುವಳಿಕೆ ಅಗತ್ಯ. ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿರು ಬೆರೆತಿರುವ ಜಿಗುಟು ಗುಣದ ಮೇಣದಂಥ ವಸ್ತು. ಇದು ಒಂದು ರೀತಿಯ ಲಿಪಿಡ್ ಜೀವಕೋಶದ ರಚನೆಗಳೆಂದು ಗುರುತಿಸಲಾಗಿದೆ. ಹಾರ್ಮೋನುಗಳು ಹಾಗೂ ಜೀವಸತ್ವಗಳನ್ನು ನಿರ್ಮಿಸಲು ದೇಹ ಕೊಲೆಸ್ಟ್ರಾಲ್ ಅನ್ನು ಬಳಸುತ್ತದೆ. ಅದು ಒಂದು ಮಟ್ಟದಲ್ಲಿದ್ದರೆ ಖಂಡಿತ ಅದು ಸಹಕಾರಿ. ಯಾಕೆಂದರೆ, ಅದು ಅಗತ್ಯವಿರುವಾಗ ಜೀವಕೋಶದ ಕಾರ್ಯಚಟುವಟಿಕೆಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಕೊಲೆಸ್ಟ್ರಾಲ್ ಪರೀಕ್ಷೆ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಮತ್ತು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಸೇರಿದಂತೆ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣವನ್ನು ತೋರಿಸುತ್ತದೆ. ಅದನ್ನು ಕಾಲ ಕಾಲಕ್ಕೆ ಮಾಡಿಸೋದು ಅನಿವಾರ್ಯ.
ಸಹಾಯಕ ಕೊಲೆಸ್ಟ್ರಾಲ್ ಎಂಬುದು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಅಧಿಕವಾದಾಗ ಅದು ರಕ್ತನಾಳಗಳ ಮೇಲೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಅದು ಹಾಗೆಯೇ ನಿಂತರೆ ಕ್ರಮೇಣ ವಿವಿಧ ಅಂಗಗಳಿಗೆ ರಕ್ತ ಪೂರೈಕೆಯ ಹರಿವನ್ನು ತಡೆಯುತ್ತದೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಷ್ಟೂ ಹೃದ್ರೋಗದ ಅಪಾಯ ಹೆಚ್ಚು. ಕೊಲೆಸ್ಟ್ರಾಲ್ ಪರೀಕ್ಷೆಯ ಫಲಿತಾಂಶಗಳು ಹೆಚ್ಚಿನ ಎಲ್ಡಿಎಲ್ ಮಟ್ಟಗಳ ಸಂದರ್ಭದಲ್ಲಿ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಮುಂಚಿನ ಎಚ್ಚರಿಕೆಯನ್ನು ನೀಡಬಹುದು. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸದಾ ಪ್ರಯತ್ನ ಜಾರಿಯಲ್ಲಿಟ್ಟು, ಜೀವನಶೈಲಿಯನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚೆಗೆ ಹೃದ್ರೋಗದಿಂದ ಬಳಲುತ್ತಿರುವ ಜನರಿಗೆ ಶಸ್ತ್ರಚಿಕಿತ್ಸೆಯ ನಂತರ ಅಥವಾ ಔಷಧಿಗಳನ್ನು ತೆಗೆದುಕೊಂಡ ನಂತರ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುವುದು ಸಹ ಅಗತ್ಯವಾಗಿದೆ.
ಕೊಲೆಸ್ಟ್ರಾಲ್ ಕೆಟ್ಟದ್ದೂ ಅಲ್ಲ!
ಕೊಲೆಸ್ರ್ಠಾಲ್ ಪ್ರಮಾಣ ತೀರಾ ಕಡಿಮೆಯಾದರೂ ಕೂಡಾ ದೇಹ ನಾನಾ ಕಾಯಿಲೆಗಳ ಗುಡಾಣವಾಗಬಹುದು. ಹಾಗಂತ ಹೆಚ್ಚು ಮಾಡಿಕೊಂಡರೆ ಜೀವವೇ ಹೋಗಬಹುದು. ಅಂಥಾದ್ದೊಂದು ವಿಚಿತ್ರ ಗುಣ ಅದಕ್ಕಿದೆ. ದೇಹಕ್ಕೆ ಬೇಕಾಗಿರುವ ಕೊಲೆಸ್ಟ್ರಾಲ್ ದೇಹದ ಯಕೃತ್ತಿನಲ್ಲಿ ರೂಪುಗೊಳ್ಳುತ್ತದೆ. ನಿಮ್ಮ ದೇಹ ಅದರ ಕಾರ್ಯನಿರ್ವಹಣೆಗೆ ಬೇಕಾದಷ್ಟು ಕೊಲೆಸ್ಟ್ರಾಲ್ ಅನ್ನು ತಯಾರು ಮಾಡುತ್ತದೆ. ಕೆಲವು ಆಹಾರಗಳ ಸೇವನೆಯಿಂದ ದೇಹಕ್ಕೆ ಕೊಲೆಸ್ಟ್ರಾಲ್ ಲಭಿಸುತ್ತದೆ. ಅದರ ಪ್ರಮಾಣ ಸಮಸ್ಥಿತಿಯಲ್ಲಿರುತ್ತದೆ. ಇಂಥಾ ಕೊಲೆಸ್ಟ್ರಾಲ್ ಬಗ್ಗೆ ಜಗತ್ತಿನಾದ್ಯಂತ ಲೆಕ್ಕವಿಡಲು ಕಷ್ಟವಾಗುವಷ್ಟು ಅಧ್ಯಯನಗಳು ನಡೆದಿವೆ. ಅವೆಲ್ಲವೂ ಕೊಲೆಸ್ಟ್ರಾಲ್ ಅನ್ನು ಎರಡು ಭಾಗವಾಗಿ ವಿಂಗಡಿಸಿವೆ.
ಅದರಲ್ಲಿ ಮೊದಲನೇಯದ್ದು ಕೆಟ್ಟ ಕೊಲೆಸ್ಟ್ರಾಲ್, ಮತ್ತೊಂದು ಒಳ್ಳೆಯ ಕೊಲೆಸ್ಟ್ರಾಲ್ ಅಂತ ಗುರುತಿಸಲಾಗಿದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಪ್ರತಿಯೊಬ್ಬರ ರಕ್ತದಲ್ಲಿ ಬೆರೆತಿರುತ್ತದೆ. ಹೆಚ್ಚು ಕೊಲೆಸ್ಟ್ರಾಲ್ ಇರುವಂಥಾ ಆಹಾರಗಳನ್ನು ಹೆಚ್ಚು ಸೇವನೆ ಮಾಡುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಇಂದಿನ ಕಾಲದಲ್ಲಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ಸರ್ವೇ ಸಾಮಾನ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಈ ತೊಂದರೆ ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ವಯಸ್ಸಿನ ಜನರಲ್ಲಿ ವೇಗವಾಗಿ ಬೆಳೆಯುತ್ತಿದೆ. ಇಂಥಾ ವಾತಾವರಣದಲ್ಲಿ ಯಾವ ವಯಸ್ಸಿನವರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಎಷ್ಟಿರಬೇಕು ಎಂಬ ತಿಳುವಳಿಕೆ ಅತ್ಯಗತ್ಯ!
ಕೊಲೆಸ್ಟ್ರಾಲ್ ಎಷ್ಟಿರಬೇಕು?
ಹಾಗಾದರೆ ಕೊಲೆಸ್ಟ್ರಾಲ್ ಪ್ರಮಾಣ ಎಷ್ಟಿರಬೇಕು? ಅದು ವಯೋಮಾನದ ಲೆಕ್ಕದಲ್ಲಿ ಹೇಗೆಲ್ಲ ಬದಲಾಗುತ್ತದೆ? ಇಂಥಾ ಪ್ರಶ್ನೆಗಳಿಗೆಲ್ಲ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸುದೀರ್ಘವಾದ ಅಧ್ಯಯನದ ಮೂಲಕ ನಿಖರ ಉತ್ತರ ಕಂಡುಕೊಂಡಿದೆ. ಇಪ್ಪತ್ತನೇ ವಯಸ್ಸಿನವರು ಪ್ರತಿ ನಾಲಕ್ಕರಿಂದ ಆರು ವರ್ಷಗಳಿಗೊಮ್ಮೆ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಿಕೊಳ್ಳಬೇಕೆಂದು ತಜ್ಞರೇ ಸಲಹೆ ನೀಡಿದ್ದಾರೆ.. ಈ ವಯಸ್ಸಿನವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಆರಂಭವಾಗುತ್ತದೆ. ವಯಸ್ಕರಿಗೆ ಒಟ್ಟು ಕೊಲೆಸ್ಟ್ರಾಲ್ ಮಟ್ಟ ಪ್ರತಿ ಡೆಸಿಲೀಟರ್ಗೆ ಇನ್ನೂರು ಮಿಲಿ ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ ಎಂಬುದನ್ನು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ.
ಇನ್ನು ಕೆಟ್ಟ ಕೊಲೆಸ್ಟ್ರಾಲಿಗೂ ಕೂಡಾ ಕೆಕಲ ಮಿತಿಗಳನ್ನು ಸದರಿ ಅಧ್ಯಯನ ವಿಧಿಸಿದೆ. ಕೆಟ್ಟ ಕೊಲೆಸ್ಟ್ರಾಲ್ ನೂರು ಮಿಲಿಗ್ರಾಂ ಅಥವಾ ಅದಕ್ಕಿಂತ ಕಡಿಮೆ ಇರಬೇಕಾಗುತ್ತದೆ. ಎಚ್ಡಿಎಲ್ ಕೊಲೆಸ್ಟ್ರಾಲ್ ಯಾನೆ ಒಳ್ಳೆಯ ಕೊಲೆಸ್ಟ್ರಾಲ್ ಅರವತ್ತು ಮಿಲಿಗ್ರಾಂ, ಎಚ್ಡಿಎಲ್ ಅಲ್ಲದ ಕೊಲೆಸ್ಟ್ರಾಲ್ ನೂರಾ ಮೂವತ್ತು ಮಿಲಿಗ್ರಾಂ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು ಅಂತ ತಜ್ಞರು ಶಿಫಾರಸ್ಸು ಮಾಡುತ್ತಾರೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಈ ಪ್ರಮಾಣದಲ್ಲಿ ಇಲ್ಲದಿದ್ದರೆ ನೀವು ಹೃದಯ ರೋಗ ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ. ನಿಯಮಿತ ತಪಾಸಣೆಯಿಂದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಾಧ್ಯವಾಗುತ್ತದೆಂಬ ವಿಚಾರವನ್ನು ಜಗತ್ತಿನಾದ್ಯಂತ ತಜ್ಞರು ಹೇಳುತ್ತಾ ಬಂದಿದ್ದಾರೆ.
ಈವರೆಗೆ ಜರ್ನಲ್ ಆಫ್ ದ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿದೀ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಾ ಬಂದಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಕಿಮ್ಮತ್ತೂ ಇದೆ. ಇಂಥಾ ಅಧ್ಯನದ ಆಧಾರದಲ್ಲಿ ಪ್ರಕಟವಾದ ಪ್ರಕಟವಾದ ವರದಿಗಳ ಅನ್ವಯ ಹೇಳೋದಾದರೆ, ರಕ್ತದ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವ ಮಾರ್ಗಸೂಚಿಗಳಲ್ಲಿ ವಯಸ್ಕರಿಗೆ ಕೊಲೆಸ್ಟ್ರಾಲ್ ಮಟ್ಟ ಎಷ್ಟಿರಬೇಕು ಎಂಬುದನ್ನು ನಿಖರವಾಗಿ ತಿಳಿಸಲಾಗಿದೆ. ಮಕ್ಕಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಅನೇಕ ಕಾರಣಗಳಿವೆ. ಇವುಗಳಲ್ಲಿ ದೈಹಿಕ ಚಟುವಟಿಕೆ, ಪೌಷ್ಟಿಕ ಆಹಾರ ಸೇವಿಸುವುದು, ಅಧಿಕ ತೂಕ ಹೊಂದಿರುವುದು ಹಾಗೂ ಹೆಚ್ಚಿನ ಕೊಲೆಸ್ಟ್ರಾಲ್ಗೆ ಆನುವಂಶಿಕ ಕಾರಣವು ಇರಬಹುದು. ಒಂಬತ್ತರಿಂದ ರಿಂದ ಹನ್ನೊಂದು ವರ್ಷ ವಯಸ್ಸಿನ ಮಕ್ಕಳು ಮತ್ತು ಹದಿನೇಳರಿಂದ ಇಪ್ಪತ್ತೊಂದು ವರ್ಷ ವಯಸ್ಸಿನವರು ಖಡ್ಡಾಯವಾಗಿ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಲೇಬೇಕಿದೆ.
ನಿರ್ಲಕ್ಷ್ಯ ಮಾಡಿದ್ರೆ ಅನಾಹುತ ಖಚಿತ
ಜಗತ್ತಿನಲ್ಲಿ ಇಂಥಾ ಅನೇಕ ಅಧ್ಯಯನ ವರದಿಗಳು ಬರುತ್ತವೆ. ಆದರೆ ತಿಳುವಳಿಕೆ ಇರುವವರೂ ಕೂಡಾ ಅದನ್ನು ನಿರ್ಲಕ್ಷ್ಯ ಮಾಡೋದೇ ಹೆಚ್ಚು. ಆದರೆ ಕೊಲೆಸ್ಟ್ರಾಲ್ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ನಾನಾ ರೋಗಗಳು ಮುತ್ತಿಕೊಳ್ಳೋದು ಖಚಿತ. ಕೊಲೆಸ್ಟ್ರಾಲ್ ಇದ್ದು ಬಿಟ್ಟರೆ ಮಧುಮೇಹ, ಬೊಜ್ಜು ಸೇರಿದಂತೆ ವಿವಿಧ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಮಕ್ಕಳ ಕೊಲೆಸ್ಟ್ರಾಲ್ ಮಟ್ಟ ಎಷ್ಟಿದೆ ಎಂಬುದನ್ನು ತಿಳಿಯಲು ಆಗಾಗ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಠಯ ಪಟ್ಟಿದ್ದಾರೆ. ಮಕ್ಕಳ ಕೊಲೆಸ್ಟ್ರಾಲ್ ಮಟ್ಟ ನೂರಾ ಎಪ್ಪತ್ತು ಮಿಲಿ ಗ್ರಾಮಿಗಿಂತ ಕಡಿಮೆ ಇರಬೇಕಾಗುತ್ತೆ. ಮಗುವಿನ ಕೆಟ್ಟ ಕೊಲೆಸ್ಟ್ರಾಲ್ ನೂರಾ ಮೂವತ್ತು ಮಿಲಿಗ್ರಾಂ ಇರಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಮಗುವಿನ ಟ್ರೈಗ್ಲಿಸರೈಡ್ಗಳ ಮಟ್ಟ ಇನ್ನೂರು ಇರಬೇಕಾಗುತ್ತೆ. ಅದಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸೋದು ಅವಶ್ಯ. ಮಕ್ಕಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಆಹಾರ ಪದ್ಧತಿ ಬದಲಾಯಿಸುವುದು ಬಹು ಪರಿಣಾಮಕಾರಿ ಮಾರ್ಗವಾಗಿದೆ. ಇನ್ನುಳಿದಂತೆ ವ್ಯಾಯಾಮದ ಶಿಸ್ತು ರೂಢಿಸಿ ಅದನ್ನು ನಿಮಮಿತವಾಗಿ ಮಾಡುವಂತೆ ನೋಡಿಕೊಳ್ಳೋದೂ ಕೂಡಾ ಅಪಾಯದ ಮಟ್ಟವನ್ನು ತಗ್ಗಿಸುತ್ತೆ.
ಮಹಿಳೆಯರೇ ಹುಷಾರ್…
ಮಹಿಳೆಯರ ದೇಹ ಪ್ರಕೃತಿ ಸೂಕ್ಷ್ಮವಾಗಿರುತ್ತೆ. ಕೊಲೆಸ್ಟ್ರಾಲ್ ಮಟ್ಟದಲ್ಲಿಯೂ ಕೂಡಾ ಗಂಡು ಮತ್ತು ಹೆಣ್ಣಿಗೆ ಒಂದಷ್ಟು ಬದಲಾವಣೆಗಳಿರುತ್ತವೆ. ಮಹಿಳೆಯರಿಗೆ ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚಿನ ಒಳ್ಳೆಯ ಕೊಲೆಸ್ಟ್ರಾಲ್ ಇರಬೇಕಾಗುತ್ತದೆ. ಮಹಿಳೆಯರಲ್ಲಿ ಒಟ್ಟು ಕೊಲೆಸ್ಟ್ರಾಲ್ ಮಟ್ಟ ಅದಕ್ಕಿಂತ ಕಡಿಮೆ ಇದ್ದರೆ ಉತ್ತಮ. ಒಳ್ಳೆಯ ಕೊಲೆಸ್ಟ್ರಾಲ್ ಕೆಟ್ಟದ್ದಕ್ಕಿಂತ ಹೆಚ್ಚಿರಬೇಕು. ಹೃದಯದ ಆರೋಗ್ಯ ನಿರ್ಣಯಿಸಲು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲಿಸುವುದು ತೀ ಅಗತ್ಯ. ರಕ್ತ ಪರೀಕ್ಷೆಯ ಸಂದರ್ಭದಲ್ಲಿ ಒಟ್ಟು ಕೊಲೆಸ್ಟ್ರಾಲ್ ಮಟ್ಟ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಅಳೆಯಲಾಗುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ನ ಅತ್ಯುತ್ತಮ ಮಟ್ಟ ವ್ಯಕ್ತಿಯ ವಯಸ್ಸು, ಲಿಂಗ ಅವಲಂಬಿಸಿ ಬದಲಾಗುತ್ತದೆ. ಈ ನಿಟ್ಟಿನಲ್ಲಿ ಗಂಡು ಹೆಣ್ಣಿಗೆ ಬೇರೆ ಬೇರೆ ಮಾನದಂಡಗಳಿರುತ್ತವೆ.
ಹೀಗೆ ಕೊಲೆಸ್ಟ್ರಾಲ್ ಮಟ್ಟ ಪತ್ತೆ ಹಚ್ಚೋದಕ್ಕೆ ನಾನಾ ಬಗೆಗಳು ಚಾಲ್ತಿಯಲ್ಲಿದ್ದಾವೆ. ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣ ಅಳೆಯಲು ಆರೋಗ್ಯ ವೃತ್ತಿಪರ ವೈದ್ಯರು ಲಿಪಿಡ್ ಪ್ಯಾನಲ್ ಬ್ಲಡ್ ಟೆಸ್ಟ್ ಶಿಫಾರಸ್ಸು ಮಾಡುತ್ತಾರೆ. ಇದರಿಂದಾಗಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ತಿಳಿಯಲು ಸಾಧ್ಯಗುತ್ತದೆ. ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಮೂರು ಲಿಪಿಡ್ಗಳನ್ನು ಹೊಂದಿರುತ್ತದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ಗಳು ರಕ್ತಪರಿಚಲನೆಯಿಂದ ಕೊಲೆಸ್ಟ್ರಾಲನ್ನು ಸಾಗಿಸುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇದ್ದರೆ ಅದು ರಕ್ತನಾಳಗಳಲ್ಲಿ ಅಡ್ಡಿಯನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಹೃದಯ ಕಾಯಿಲೆಯ ಅಪಾಯ ಗಣನೀಯವಾಗಿ ಹೆಚ್ಚಿಸುತ್ತದೆ. ಇಂಥಾದ್ದನ್ನು ಕೆಟ್ಟ ಕೊಲೆಸ್ಟ್ರಾಲ್ ಅಂತ ಗುರುತಿಸಲಾಗುತ್ತದೆ.
ಇನ್ನುಳಿದಂತೆ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ಗಳು ಹೃದಯ ಕಾಯಿಲೆಯಿಂದ ಮಹಿಳೆಯರನ್ನು ರಕ್ಷಿಸುತ್ತವೆ. ಟ್ರೈಗ್ಲಿಸರೈಡ್ಸ್ ನಿಮ್ಮ ದೇಹದಲ್ಲಿ ಸಂಗ್ರಹವಾಗುವ ಮತ್ತೊಂದು ರೀತಿಯ ಕೊಬ್ಬು ಅನ್ನೋದರಲ್ಲಿ ಅನುಮಾನವಿಲ್ಲ. ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್ಗಳು ಮತ್ತು ಕಡಿಮೆ ಮಟ್ಟದ ಕೊಲೆಸ್ಟ್ರಾಲ್ ನಿಮ್ಮ ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆಲೆಂಬುದನ್ನು ತಜ್ಞ ವೈದ್ಯರು ಕಂಡುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಸ್ಥೂಲಕಾಯ, ಮಧುಮೇಹ ಮತ್ತು ಹೃದಯದ ರಕ್ತನಾಳ ಬಂದ್ ಆಗುವಂಥಾ ಸಾಂಕ್ರಾಮಿಕವಲ್ಲದ ರೋಗದ ಅಪಾಯ ಹೆಚ್ಚಳ ಕಾಣುತ್ತಿದೆ. ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಗಾಢ ಪರಿಣಾಮ ಬೀರಬಲ್ಲ ಇವುಗಳ ನಿಯಂತ್ರಣಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೋಷಕಾಂಶ ಸಂಸ್ಥೆಲ್ಲೊಂದಷ್ಟು ಆಹಾರದ ಮಾರ್ಗಸೂಚಿಗಳನ್ನು ಸಿದ್ಧಪಡಿಸಿವೆ.
ಕಟ್ಟುನಿಟ್ಟಾದ ಆಹಾರಕ್ರಮ
ಇಂಥಾ ಆಹಾರ ಪದ್ಧತಿಯನ್ನು ಜೀವನಶೈಲಿಯ ಭಾಗವಾಗಿಸಿಕೊಂಡರೆ ಅಪಾಯ ಪ್ರಮಾಣವನ್ನು ಕೊಂಚ ತಗ್ಗಿಸಬಹುದು. ಈ ಆಹಾರಗಳು ಹಲವಾರು ವರ್ಷಗಳ ಅಧ್ಯಯನದ ಫಲವಾಗಿ ಕಂಡುಕೊಂಡಿರುವಂಥವು. ಅದು ಅನೇಕ ಶಿಫಾರಸುಗಳನ್ನು ಒಳಗೊಂಡಿರುವ ಹೊಸ ಮಾರ್ಗಸೂಚಿ. ಜೊತೆಗೆ ಕಠಿಣ ಶೈಕ್ಷಣಿಕ ಮತ್ತು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಿದ ನಂತರವೇ ಇಂಥಾ ಆಹಾರ ಕ್ರಮವನ್ನು ಶಿಫಾರಸ್ಸು ಮಾಡಲಾಗಿದೆ. ಸಮತೋಲಿತ ಆಹಾರ ಸೇವನೆ ಇದರ ಉದ್ದೇಶ. ತರಕಾರಿ, ಪೋಷಕಾಂಶ, ಸಮೃದ್ಧ ಪೋಷಕಾಂಶಯುಕ್ತ ಕಾಳುಗಳನ್ನು ಹೊಂದಿರುವ ಆಹಾರ ಸೇವಿಸೋದು ಅವಶ್ಯಕ. ಸುರಕ್ಷಿತವಾದ ಶುಚಿಗೊಳಿಸಿದ ಆಹಾರ ಸೇವನೆಯ ಜೊತೆಗೆ ಸಾಕಷ್ಟು ನೀರು ಸೇವನೆ ಕೂಡ ಅತ್ಯಗತ್ಯವೆಂದು ಶಿಫಾರಸ್ಸು ಮಾಡಲಾಗಿದೆ.
ಇದೇ ತಜ್ಞರ ಅಧ್ಯಯನ ವರದಿ ಒಂದಷ್ಟು ಆಹಾರಗಳನ್ನು ಮುಟ್ಟಲೇ ಕೂಡದೆಂಬ ಎಚ್ಚರಿಕೆಯನ್ನೂ ನೀಡಿದೆ. ಬಾಡಿ ಮಾಸ್ ಪ್ರೋಟಿನ್ ಪೂರಕ ಆಹಾರ ಸೇವನೆ ತಪ್ಪಿಸಲೇ ಬೇಕಿದೆ. ಉಪ್ಪಿನ ಸೇವನೆ ಬಗ್ಗೆ ಎಚ್ಚರಿಕೆ ಅತ್ಯಗತ್ಯ. ಎಣ್ಣೆ ಮತ್ತು ಕೊಬ್ಬಿನ ಅಂಶಗಳು ಸುಧಾರಿತ ಪ್ರಮಾಣದಲ್ಲಿರುವಂತೆ ಎಚ್ಚರ ವಹಿಸಬೇಕಿದೆ. ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಆಹಾರ ಕೊಳ್ಳುವ ಮುನ್ನ ಅದರ ಲೇಬಲ್ನ ಮಾಹಿತಿ ಗಮನಿಸುವ ಮೂಲಕ ಆರೋಗ್ಯಯುತ ಆಹಾರ ಆಯ್ಕೆ ಮಾಡಿಕೊಳ್ಳುವುದರಿಂದ ಕೊಲೆಸ್ಟ್ರಾಲ್ ಮತ್ತು ಅದರ ಭೀಕರ ಪರಿಣಾಮದಿಂದ ಪಾರಾಗಬಹುದು. ಈಗೊಂದು ದಶಕದಿಂದ ಭಾರತೀಯ ಆಹಾರ ಪದ್ಧತಿ ಮತ್ತು ಅಭ್ಯಾಸಗಳು ಗಮನಾರ್ಹವಾಗಿ ಬದಲಾಗಿವೆ. ಇದು ಪೋಷಕಾಂಶ ಕೊರತೆಯ ಸಮಸ್ಯೆ ಮತ್ತು ಸಾಂಕ್ರಾಮಿಕವಲ್ಲದ ಗಂಭೀರ ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ ಂಬುದನ್ನು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ.
ಈ ಮಾರ್ಗಸೂಚಿಗಳನ್ನು ದೇಶದಿಂದ ದೇಶಕ್ಕೆ ಭಿನ್ನವಾಗಿ ರೂಪಿಸಲಾಗಿದೆ. ಇಂಥಾ ಮಾರ್ಗಸೂಚಿಗಳನ್ನು ಭಾರತದಲ್ಲಿ ಬದಲಾಗುತ್ತಿರುವ ಆಹಾರ ಸನ್ನಿವೇಶಕ್ಕೆ ಪೂರಕವಾಗಿ ಸಿದ್ಧಪಡಿಸಲಾಗಿದೆ. ಜನರು ಆಹಾರ ಸುರಕ್ಷತೆಯನ್ನು ನಿರ್ವಹಿಸುವುದು, ಕನಿಷ್ಠ ಸಂಸ್ಕರಿಸಿದ ಆಹಾರಗಳನ್ನು ಆರಿಸುವುದು, ಆಹಾರದಲ್ಲಿನ ಶಿಸ್ತು ಮತ್ತು ದೈಹಿಕ ಕಸರತ್ತುಗಳ ಬಗ್ಗೆಯೂ ಗಮನ ಹರಿಸಬೇಕೆಂದು ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಇಂಥಾ ಆಹಾರದ ಮಾರ್ಗಸೂಚಿಗಳ ಮೂಲಕ ಎಲ್ಲಾ ರೀತಿಯ ಪೌಷ್ಟಿಕ ಆಹಾರ ಕ್ರಮಗಳ ಕುರಿತಾಗಿ ಸಾರ್ವಕಾಲಿಕ ಅರಿವು ಮೂಡಿಸುವ ಕಾರ್ಯವೀಗ ವ್ಯಾಪಕವಾಗಿ ನಡೆಯುತ್ತಿದೆ. ಕೈಗೆಟುಕುವ ದರದ ವೈವಿಧ್ಯಮಯ ಆಹಾರಗಳ ಬಳಕೆಯ ಜೊತೆಗೆ ಪೌಷ್ಟಿಕಾಂಶಭರಿತ ಆಹಾರಗಳನ್ನು ತಜ್ಞರು ಉತ್ತೇಜಿಸುತ್ತಿದ್ದಾರೆ.
ಇಂಥಾ ಮಾರ್ಗಸೂಚಿಗಳನ್ನು ಅತ್ಯಂತ ಗಂಭೀರವಾಗಿ ಕಾರ್ಯರೂಪಕ್ಕೆ ತರುವ ತತುರ್ತು ಇದೀಗ ಹೆಚ್ಚಿಕೊಂಡಿದೆ. ನಾವು ಬಳಸುವ ಆಹಾರವೇ ನಮ್ಮೆಲ್ಲ ಕಾಯಿಲೆ ಕಸಾಲೆಗಳಿಗೂ, ಆರೋಗ್ಯಕ್ಕೂ ಮೂಲ ಕಾರಣ. ಹೀಗಿರುವಾಗ ಅದರ ಬಗ್ಗೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಯಾಕೆಂದರೆ, ನಮ್ಮ ದೇಹದೊಳಗೆ ಕೊಲೆಸ್ಟ್ರಾಲ್ ಎಂಬ ಹೊಂಚಿ ಕೊಲ್ಲುವ ರಕ್ಕಸನಿದ್ದಾನೆ. ಅದನ್ನು ಹೆಚ್ಚಾಗದಂತೆ, ಕಡಿಮೆಯೂ ಆಗದಂತೆ ನೋಡಿಕೊಳ್ಳಬೇಕಿದೆ. ಚಿಕಿತ್ಸೆಯ ಮೂಲಕ ಅದನ್ನು ಮಾಡೋದಕ್ಕಿಂತಲೂ ಆಹಾರದ ಮೂಲಕವೇ ನಿಯಂತ್ರಣ ಸಾಧಿಸೋದು ಬುದ್ಧಿವಂತಿಕೆ. ಈ ನಿಟ್ಟಿನಲ್ಲಿ ನಾವೆಲ್ಲ ಬುದ್ಧಿವಂತರಾಗದಿದ್ದರೆ ನಾನಾ ಕಾಯಿಲೆಗಳಿಂದ ಕುಸಿದು ಹೋಗಬೇಕಾಗುತ್ತದೆ!