ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಕರಿಚಿರತೆಯಾಗಿ ಖದರ್ ತೋರಿಸೋದಕ್ಕೆ ಹೊರಟಿದ್ದಾರೆ. ರೋರಿಂಗ್ ಹುಟ್ಟುಹಬ್ಬದ ಪ್ರಯುಕ್ತ ʻಬಘೀರʼ ಟೀಸರ್ ರಿಲೀಸ್ ಆಗಿದ್ದು, ಅಗಸ್ತ್ರ್ಯನ ಅಬ್ಬರ-ಆರ್ಭಟ ಹೇಗರಲಿದೆ ಅನ್ನೋದಕ್ಕೆ ಹೊಂಬಾಳೆ ಸಂಸ್ಥೆ ಝಲಕ್ ತೋರಿಸಿದೆ. ಹೈವೋಲ್ಟೇಜ್ ಆಕ್ಷನ್ ಪ್ಯಾಕ್ಡ್ ಜೊತೆ ಕಣಕ್ಕಿಳಿದಿರೋ ರೋರಿಂಗ್ ಸ್ಟಾರ್, ಖಾಕಿ ತೊಟ್ಟು ಖಡಕ್ ನೋಟ ಬೀರಿದ್ದಾರೆ. ಕರಿ ಚಿರತೆಯ ಮಾಸ್ಕ್ ಧರಿಸಿ ಮತ್ತೊಂದು ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. “ಸಮಾಜವು ಕಾಡಾಗಿ ಬದಲಾದಾಗ ಒಬ್ಬ ಪರಭಕ್ಷಕ ಮಾತ್ರ ನ್ಯಾಯಕ್ಕಾಗಿ ಘರ್ಜಿಸುತ್ತಾನೆ” ಅನ್ನೋದನ್ನ ಬಘೀರ ಚಿತ್ರದಲ್ಲಿ ಹೇಳಲಾಗ್ತಿದೆ.
ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ʼಲಕ್ಕಿʼ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ʼಕೆಜಿಎಫ್ ಚಾಪ್ಟರ್ 2ʼ ಮತ್ತು ʼಕಾಂತಾರʼ ಸಿನಿಮಾಗಳ ಮೆಗಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ʼಬಘೀರʼ ಚಿತ್ರವನ್ನು ನಿರ್ಮಿಸಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಹೊಂಬಾಳೆ ಹಾಗೂ ಸೂರಿ..ಈ ಮೂವರ ಸಂಗಮದಿಂದಲೇ ಬಘೀರ ದೊಡ್ಡ ಮಟ್ಟಿಗಿನ ಹೈಪ್ ಪಡೆದುಕೊಂಡಿದೆ. ಎಜೆ ಶೆಟ್ಟಿ ಕ್ಯಾಮೆರಾ ಕೈಚಳಕ, ಅಜನೀಶ್ ಲೋಕನಾಥ್ ಮ್ಯೂಸಿಕ್ ಪುಳಕ, ರಂಗಾಯಣ ರಘು, ಅಚ್ಯುತ್ ಕುಮಾರ್ ನಂತಹ ದಿಗ್ಗಜ ತಾರೆಯರ ಅಭಿನಯದ ಮೆರಗು ತುಂಬಿರುವ ಬಘೀರನಿಗೆ ರುಕ್ಮಿಣಿ ವಸಂತ ಜೋಡಿ..ಸೂರಿ ಟೇಕಿಂಗ್, ಶ್ರೀ ಆಕ್ಟಿಂಗ್, ಹೊಂಬಾಳೆ ಫಂಡಿಂಗ್ ನ ಈ ಚಿತ್ರ ಕೊನೆ ಹಂತದ ಶೂಟಿಂಗ್ ನಲ್ಲಿದೆ.
ಇನ್ನೂ ಶ್ರೀ ಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ.
ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬಹುತೇಕ ಬೆಣ್ಣೆ ನಗರಿ ದಾವಣಗೆರೆ ಪ್ರತಿಭೆಗಳೇ ಒಂದಾಗಿ ಮಾಡುತ್ತಿರುವ ಪರಾಕ್ ಚಿತ್ರದ ಟೈಟಲ್ ಪೋಸ್ಟರ್ ಆಕರ್ಷಕವಾಗಿದೆ. ಹೊಸ ಅವತಾರದಲ್ಲಿ ಶ್ರೀ ದರ್ಶನ ಕೊಟ್ಟಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಪರಾಕ್ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ.