ಕನ್ನಡದಲ್ಲಿ ‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಹಾಗೂ ‘ಜೇಮ್ಸ್’ ನಂತಹ ಮಾಸ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಚೇತನ್ ಕುಮಾರ್ ಈಗ ‘ಬರ್ಮ’ ಎಂಬ ಹೊಸ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೇ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚೇತನ್ ಕುಮಾರ್ ಮತ್ತು ಚಿತ್ರತಂಡ ತಮ್ಮ ಹೊಸ ಸಿನಿಮಾ ‘ಬರ್ಮ’ದ ಟೈಟಲ್ ರಿವೀಲ್ ಮಾಡಿದೆ. ಕಿರುತೆರೆಯ ‘ಪುಟ್ಟಗೌರಿಯ ಮದುವೆ’ ಮತ್ತು ‘ಗಟ್ಟಿಮೇಳ’ ಮೊದಲಾದ ಧಾರಾವಾಹಿಗಳ ನಟ ರಕ್ಷ್ ರಾಮ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೇ, ‘ಬರ್ಮ’ ಎಂದರೆ ಸಂಸ್ಕೃತದಲ್ಲಿ ಬ್ರಹ್ಮ ವಾಸಿಸುವ ಜಾಗ ಎಂಬ ಅರ್ಥವಿದೆ. ‘ಬರ್ಮ’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ವಿ. ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ‘ಬಹದ್ದೂರ್’ ಮತ್ತು ‘ಭರ್ಜರಿ’ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ವಿ. ಹರಿಕೃಷ್ಣ ಹಾಗೂ ಚೇತನ್ ಜೋಡಿ ಮೂರನೇ ಬಾರಿಗೆ ಈ ಸಿನಿಮಾದಲ್ಲಿ ಮತ್ತೆ ಒಂದಾಗುತ್ತಿದೆ.
ಈಗಾಗಲೇ ‘ಬರ್ಮ’ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇದೇ ಸೆಪ್ಟೆಂಬರ್ ತಿಂಗಳಿನಿಂದ ‘ಬರ್ಮ’ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಸದ್ಯ ‘ಬರ್ಮ’ ಸಿನಿಮಾದ ನಾಯಕಿ ಮತ್ತು ಇತರ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲಿ ಇತರ ಮಾಹಿತಿ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.