ವರಮಹಾಲಕ್ಷ್ಮಿ ಹಬ್ಬಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಖತ್ ಸರ್ಪೈಸ್ ಕೊಟ್ಟಿದ್ದಾರೆ. ಎರಡನೇ ಭಾರಿಗೆ ತಂದೆಯಾಗುತ್ತಿರುವ ಖುಷಿಸುದ್ದಿಯನ್ನ ಹಂಚಿಕೊಳ್ಳುವುದರ ಮೂಲಕ ಸರ್ಜಾ ಕುಟುಂಬದ ಅಭಿಮಾನಿಗಳಲ್ಲಿ ಸಂತೋಷ, ಸಂಭ್ರಮ ಮನೆಮಾಡುವಂತೆ ಮಾಡಿದ್ದಾರೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬ ಮುಗಿದ 2 ತಿಂಗಳೊಳಗೆ, ಬಹದ್ದೂರ್ ಗಂಡಿನ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿತ್ತು. ಧ್ರುವ ಹಾಗೂ ಪ್ರೇರಣಾ ದಾಂಪತ್ಯಕ್ಕೆ ಸಾಕ್ಷಿಯಾಗಿ ಮೊದಲ ಭಾರಿಗೆ ಹೆಣ್ಣುಮಗು ಜನಿಸಿತ್ತು. ಈಗ ಎರಡನೇ ಭಾರಿ ಪೋಷಕರಾಗುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಎರಡನೇ ಕೂಸನ್ನ ಬರಮಾಡಿಕೊಳ್ಳಲು ಕಾತುರವಾಗಿರುವ ಧ್ರುವ-ಪ್ರೇರಣಾ, ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಸುದ್ದಿ ಕೊಟ್ಟು ಸಂತಸ ಹೆಚ್ಚಿಸಿದ್ದಾರೆ.
ಧ್ರುವ-ಪ್ರೇರಣಾ 2019 ನವೆಂಬರ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2022 ಅಕ್ಟೋಬರ್ 02ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಪ್ರೇರಣಾ ಮಡಿಲು ತುಂಬಿದ ಆ ಮುದ್ದುಬೊಂಬೆ, ಸಾಕ್ಷಾತ್ ಲಕ್ಷ್ಮಿಯಂತೆ ಸರ್ಜಾ ಕುಟುಂಬವನ್ನ ಪ್ರವೇಶಿಸಿದ್ದಳು. ಈಗ ಎರಡನೇ ಕಂದಮ್ಮನ ಆಗಮನಕ್ಕಾಗಿ ಈ ಜೋಡಿ ಮಾತ್ರವಲ್ಲ ಇಡೀ ವಿಐಪಿ ಬಳಗವೇ ಎದುರುನೋಡ್ತಿದೆ. ಸದ್ಯ ಆರತಿಗೊಬ್ಬಳು ಮಗಳು ಇರೋದ್ರಿಂದ, ಕೀರ್ತಿಗೊಬ್ಬ ಮಗ ಬರಲಿ ಎನ್ನುವ ನಿರೀಕ್ಷೆ ಎಲ್ಲರದ್ದು. ಎನಿವೇ, ಹೆಣ್ಣಾಗಲೀ, ಗಂಡಾಗಲೀ ಸೂಸೂತ್ರವಾಗಿ ಕಂದಮ್ಮನ ಆಗಮನವಾಗಲಿ ಎನ್ನುತ್ತಾ ಅಭಿಮಾನಿ ದೇವರುಗಳು ಹಾಗೂ ಆಪ್ತವಲಯದವರು ಶುಭಕೋರುತ್ತಿದ್ದಾರೆ
ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಧ್ರುವ ನಟನೆಯ ಎಲ್ಲಾ ಸಿನಿಮಾಗಳು ಕೂಡ ಅದ್ದೂರಿತನದಿಂದ ಕೂಡಿವೆ. ಅದ್ರಂತೆ, ಎರಡನೇ ಕಂದಮ್ಮನ ನಿರೀಕ್ಷೆಯಲ್ಲಿರುವ ಆ್ಯಕ್ಷನ್‍ಪ್ರಿನ್ಸ್ ಅದ್ದೂರಿಯಾಗಿಯೇ ಫೋಟೋಶೂಟ್ ಮಾಡಿಸಿ ಸರ್ಪೈಸ್ ಕೊಟ್ಟಿದ್ದಾರೆ. ಅಂದ್ಹಾಗೇ, ಈ ವಿಡಿಯೋ ಯಾವ ಸಿನಿಮಾದ ಟೀಸರ್, ಟ್ರೈಲರ್‍ಗೂ ಕಮ್ಮಿಯಿಲ್ಲ ಅಂದರೆ ಅತಿಶಯೋಕ್ತಿ ಎನಿಸಿಲ್ಲ. ಎನಿವೇ ಶುಭವಾಗಲಿ. ಆದಷ್ಟು ಬೇಗ ಮಾರ್ಟಿನ್ ಸಿನಿಮಾದ ಮೂಲಕ ಕಣಕ್ಕಿಳಿದು, ಬೆಂಕಿಚೆಂಡು ಪ್ಯಾನ್ ಇಂಡಿಯಾ ತುಂಬೆಲ್ಲಾ ರೂಲ್ ಮಾಡಲಿ ಅನ್ನೋದೇ ಸಿನಿಮಾಮಂದಿಯ ಆಶಯ