ಸಾನ್ವಿ ಬಿಟ್ಟೋದ್ಮೇಲೆ ಕರ್ಣ ಕಮಿಟ್ ಆಗಿದ್ದಾರಾ ಅಥವಾ ಸ್ಟಿಲ್ ಸಿಂಗಲ್ಲಾಗಿದ್ದಾರಾ? ಈ ಕ್ಷಣಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆಯೇ ಸರೀ. ಯಾಕಂದ್ರೆ, ಸಿಂಪಲ್‍ಸ್ಟಾರ್ ರಕ್ಷಿತ್ ಶೆಟ್ಟಿ ಸಿಂಗಲ್ಲೋ, ಮಿಂಗಲ್ಲೋ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ, ಚಾರ್ಲಿ ಸಿನಿಮಾ ರಿಲೀಸ್ ಟೈಮ್‍ನಲ್ಲಿ ಕರ್ಣನ ಜೊತೆ ಸ್ಯಾಂಡಲ್‍ವುಡ್ ಕ್ವೀನ್ ಹೆಸರು ಕೇಳಿಬಂದಿತ್ತು. ಮೋಹಕತಾರೆ ರಮ್ಯಾ ಅವ್ರನ್ನ ರಕ್ಷಿತ್ ಕೈ ಹಿಡಿಯುತ್ತಾರೆಂತಲೂ ಸುದ್ದಿಯಾಗಿತ್ತು. ನಂತರ ಡಿವೈನ್ ಸ್ಟಾರ್ ರಿಷಬ್ ಶೆಟ್ರು ಅವರಿಬ್ಬರ ಮದುವೆ ಸುದ್ದಿಗೆ ಬ್ರೇಕ್ ಹಾಕಿದ್ದರು. ಇದೆಲ್ಲಾ ಈಗ ಹಳೆಯ ವಿಚಾರವಾದ್ರೂ ತಾಜಾ ಸಮಾಚಾರವೊಂದನ್ನ ಹೇಳಬೇಕಿರೋದ್ರಿಂದ ಇಷ್ಟೆಲ್ಲಾ ಪೀಠಿಕೆ ಹಾಕುತ್ತಿದ್ದೇವೆ.
ಯಸ್, ಶೆಟ್ರು ಸಪ್ತಸಾಗರ ದಾಟೋಕೆ ರೆಡಿಯಾಗಿ ನಿಂತಿದ್ದಾರೆ. ಇದೇ ಸೆಪ್ಟೆಂಬರ್ 01ರಂದು ರುಕ್ಮಿಣಿ ಕೈ ಹಿಡ್ಕೊಂಡು ಗಡಿದಾಟಲಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಮೂಲಕ ಎಲ್ಲರನ್ನೂ ತಲುಪಲು ಉತ್ಸುಕರಾಗಿರೋ ಶೆಟ್ರು, ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಚಾನೆಲ್‍ಗಳಿಗೆ ಸಂದರ್ಶನ ನೀಡುತ್ತಾ, ಎಂಟರ್ ಟೈನ್ಮೆಂಟ್ ಚಾನಲ್‍ಗಳಲ್ಲೂ ತಮ್ಮ ಸಿನಿಮಾ ಪ್ರಮೋಟ್ ಮಾಡ್ತಿದ್ದಾರೆ. ವಿಶೇಷ ಅಂದರೆ ಕಲರ್ಸ್ ಕನ್ನಡ ಸಿನಿಮಾದಲ್ಲಿ ಹೊಚ್ಚ ಹೊಸ ಶೋ ಶುರುವಾಗ್ತಿದೆ. `ಮಜಾ ಕೆಫೆ’ ಟೈಟಲ್‍ನಲ್ಲಿ ಮೂಡಿಬರುತ್ತಿರೋ ಆ ಶೋನಾ ಜಾಹ್ನವಿ ಕಾರ್ತಿಕ್ ಹೋಸ್ಟ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ನಿರ್ದೇಶಕ ಹೇಮಂತ್ ರಾವ್, ನಟಿ ರುಕ್ಮಿಣಿ ಜೊತೆ ರಕ್ಷಿತ್ ಪಾಲ್ಗೊಂಡಿದ್ದಾರೆ. ಈ ವೇಳೆ ಬ್ಯಾಚುಲರ್ಸ್ ಹುಡುಗರ ಹಿಂಡೊಂದು ಪ್ರಶ್ನೆ ಕೇಳಿದೆ. ಶೆಟ್ರೆ ನಮ್ಮಂತಹ ಸಿಂಗಲ್ಸ್‍ಗೆ ಮೂರು ಸಜೆಷನ್ ಕೊಡಬಹುದಾ ಅಂತ ಕೊಶ್ಚನ್ ಮಾಡಿದೆ. ಇದಕ್ಕೆ ಉತ್ತರಿಸಿರೋ ರಕ್ಷಿತ್ ಶೆಟ್ಟಿ ಮೂರು ಸಜೆಷನ್ ಯಾಕೇ ಒಂದೇ ಹೇಳ್ತೀನಿ ತಗೊಳ್ಳಿ, ಬೆಟರ್ ಸಿಂಗಲ್ಲಾಗಿ ಇದ್ದುಬಿಡಿ ಎಂದಿದ್ದಾರೆ. ಅದರ ಟೀಸರ್ ಝಲಕ್ ಹೊರಬಿದ್ದಿದ್ದು, ಕರ್ಣನ ಉಳಿದ ಮಾತನ್ನ ಕೇಳಿಸಿಕೊಳ್ಳೋಕೆ ಕುತೂಹಲಭರಿತರಾಗಿದ್ದಾರೆ.
ಅಷ್ಟಕ್ಕೂ, ಕರ್ಣ ಈ ಮಾತನ್ನು ನಕ್ಕೊಂಡು, ಖುಷಿಖುಷಿಯಿಂದ ಹೇಳಿರೋದೇನೋ ನಿಜ. ಆದರೆ, ಕರ್ಣನ ಕರುಳನ್ನು ಬ್ರೇಕಪ್ ಎಂಬ ನೋವು ಬಿಟ್ಟುಬಿಡದೇ ಬಾದಿಸಿರೋದಂತೂ ಸತ್ಯ. ಯಾವ್ಯಾವುದೋ ಕಾರಣಕ್ಕೆ ಸಾನ್ವಿ ಜೋಸೆಫ್ ಉರುಫ್ ರಶ್ಮಿಕಾ ಮಂದಣ್ಣ ದೂರವಾದ್ಮೇಲೆ ರಕ್ಷಿತ್ ಸಂಕಟ ಪಟ್ಟಿರೋದು, ಒಬ್ಬರೇ ನೋವುಂಡಿರೋದು ಕೂಡ ದಿಟ. ಆದರೆ, ಎಲ್ಲಿಯೂ ಕೂಡ ಮನದ ನೋವನ್ನ ರಕ್ಷಿತ್ ಹೊರಹಾಕಿಲ್ಲ. ಎದೆಯೊಳಗೆ ಎಷ್ಟೇ ದುಃಖವಿದ್ದರೂ ಅದೆಲ್ಲವನ್ನೂ ಅಲ್ಲಲ್ಲೆ ಅದುಮಿಟ್ಟುಕೊಂಡು, ಸಿನಿಮಾ ಕೆಲಸಕ್ಕೆ ಒಗ್ಗಿಕೊಂಡಿರುವುದು ಕಣ್ಣಮುಂದಿರುವ ಸತ್ಯ. ಆದರೆ, ಕಿರಿಕ್ ಪಾರ್ಟಿ ಚಿತ್ರದ ಕ್ಯೂಟ್ ಜೋಡಿ ದೂರವಾಗಿದ್ಯಾಕೆ ಎಂಬ ಅಸಲಿಯತ್ತು ಮಾತ್ರ ಹೊರಬೀಳಲಿಲ್ಲ. ಆ ಸತ್ಯ ತಿಳಿಯಲೇಬೇಕೆಂಬ ಜರೂರತ್ತೇನು ಇಲ್ಲವಾದರೂ, ಹಸೆಮಣೆ ಏರಬೇಕಿದ್ದ ಜೋಡಿ ಬೇರ್ಪಟ್ಟಿದ್ದಕ್ಕೆ ಬೇಜಾರಿದೆ. ಕರ್ಣನ ಕುಟುಂಬವನ್ನ ಮಾತ್ರವಲ್ಲ ಅಭಿಮಾನಿ ಬಳಗ ಕೂಡ ದುಃಖಿಸಿದೆ. ಅವನೇ ಶ್ರೀಮನ್ನಾರಾಯಣಿಗೆ ಸಾಕ್ಷಾತ್ ಲಕ್ಷ್ಮಿಯಂತಹ ಹುಡುಗಿ ಸಿಗಲೆಂದು ಭಕ್ತಬಳಗ ಹಾರೈಸಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ನಮ್ಮ ಹೀರೋ ಗೆದ್ದು ಗಹಗಹಿಸಬೇಕು, ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವಲ್ರ್ಡ್ ರೀಚ್ ಆಗಬೇಕೆಂದು ಬಯಸಿದೆ.
ಈಗಾಗಲೇ ಶೆಟ್ರು ತನ್ನ ಕ್ಯಾಲಿಬರ್ ಏನು ಅನ್ನೋದನ್ನ ಕನ್ನಡಿಗರ ಮುಂದೆ ಪ್ರೂ ಮಾಡಿ ತೋರಿಸಿದ್ದಾರೆ. ಚಾರ್ಲಿ ಸಿನಿಮಾದ ಮೂಲಕ ಪರಭಾಷೆಯಲ್ಲೂ ಗುರ್ತಿಸಿಕೊಂಡಿದ್ದಾರೆ. ಈಗ ಸಪ್ತಸಾಗರದಾಚೆ ಎಲ್ಲೋ ಸೌಂಡ್ ಮಾಡಲು ಹೊರಟಿದ್ದಾರೆ. ಅನಂತರ ತಮ್ಮದೇ ನಿರ್ದೇಶನದ ಪ್ಲಸ್ ತಮ್ಮದೇ ನಟನೆಯ `ರಿಚರ್ಡ್ ಆ್ಯಂಟನಿ’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಕೆಜಿಎಫ್, ಕಾಂತಾರ ಸಿನಿಮಾವನ್ನ ವಲ್ಡ್‍ವೈಡ್ ತಲುಪಿಸಿರೋ ಹೊಂಬಾಳೆ ಸಂಸ್ಥೆ `ರಿಚರ್ಡ್ ಆ್ಯಂಟನಿ’ಗೆ ಬಂಡವಾಳ ಹೂಡ್ತಿರೋದ್ರಿಂದ, ಯಶ್, ರಿಷಬ್‍ರಂತೆ ರಕ್ಷಿತ್ ಕೂಡ ನ್ಯಾಷನಲ್ ಲೆವೆಲ್‍ನಲ್ಲಿ ಗುರ್ತಿಸಿಕೊಳ್ಳುವ ಸಾಧ್ಯತೆಯಿದೆ. ಸದ್ಯ, `ರಿಚರ್ಡ್ ಆ್ಯಂಟನಿ’ ಚಿತ್ರ ಪ್ರಿಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, 2024ರ ಕೊನೆಯಲ್ಲಿ ಅಥವಾ 2025ರ ಫಸ್ಟ್ ಹಾಪ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅಲ್ಲಿವರೆಗೂ ಶೆಟ್ರ ಕೈಚಳಕದ `ರಿಚರ್ಡ್ ಆ್ಯಂಟನಿ’ ಗಾಗಿ ಕಾಯಲೇಬೇಕು.