-ಅವರ ಕಂಕುಳಲ್ಲಿರೋ ಕೂಸು ಅವರದ್ದಲ್ಲ!
-ಭಿಕ್ಷೆ ಹಾಕಿದರೂ ಪಾಪ ಸುತ್ತಿಕೊಳ್ಳೋ ಕಾಲ!
ಇದು ಭಿಕ್ಷಾಟನೆಯ ಹೆಸರಲ್ಲಿ ನಡೆಯುತ್ತಿರುವ ದಂಧೆಯ ಕರಾಳ ಕಥೆ. ಎಲ್ಲೋ ಹಾದಿ ಬದಿಯಲ್ಲಿ ಎಳೇ ಕಂದನನ್ನು ಎದೆಗವುಸಿಕೊಂಡು ದೈನ್ಯದಿಂದ ಕೈಚಾಚುವ ಹೆಂಗಸು, ಅಂಗವಿಕಲರಂತೆಯೇ ಕುಂಟುತ್ತಾ ಕೈಯೊಡ್ಡುವ ಮಂದಿ, ಸಿಗ್ನಲ್ಲುಗಳಲ್ಲಿ ಚಿಂದಿ ಬಟ್ಟೆ ತೊಟ್ಟು ಮುತ್ತಿಕೊಳ್ಳುವ ಮಕ್ಕಳು… ಇದು ದಿನ ನಿತ್ಯ ಕಾಣ ಸಿಗುವ ಭಿಕ್ಷಾಟನೆಯ ಬಾಹ್ಯ ರೂಪ. ಆದರೆ, ಇದರ ಹಿಂದಿರುವ ಕರಾಳ ಕೂಪವಿದೆಯಲ್ಲಾ? ಅದು ನಾಗರಿಕ ಸಮುದಾಯವೆ ಬೆಚ್ಚಿ ಬೀಳುವಂತಿದೆ. ಇಲ್ಲಿ ಕರುಣೆಗೆ ಅರ್ಥವಿಲ್ಲ. ಕನಿಕರಕ್ಕೆ ಕಿಮ್ಮತ್ತಿಲ್ಲ. ಎಲ್ಲೋ ತಾಯಿಯ ಮದಿಲಲ್ಲಿ ಬೆಚ್ಚಗಿರಬೇಕಾದ ಹಸುಗೂಸಿನ ಛೀತ್ಕಾರ ಈ ದುಷ್ಟ ಜಗತ್ತಿನಲ್ಲಿ ಒಂದು ಸಾಮಾನ್ಯ ಸದ್ದಷ್ಟೇ. ಇಷ್ಟೆಲ್ಲ ರೌದ್ರವನ್ನ ಯಾರೋ ಕಾಸಾಗಿ ಬಸಿದುಕೊಳ್ಳುತ್ತಾರೆ. ಅಂದಹಾಗೆ ಬೆಂಗಳೂರಿನಂಥಾ ನಗರಗಳಲ್ಲಿಂದು ಈ ಭಿಕ್ಷಾಟನೆಯೆಂಬುದೊಂದು ಪಕ್ಕಾ ಮಾಫಿಯಾ. ಅರ್ಥಾತ್ ಇದು ಭಿಕಾರಿ ಮಾಫಿಯಾ!
ಬೆಂಗಳೂರೆಂಬಬುದು ಬೇರೆ ಬೇರೆ ರಾಜ್ಯಗಳ ಭಿಕ್ಷುಕರ ಮಾಫಿಯಾದ ಧಾವಾನಲವಾಗಿ ಬಹಳಷ್ಟು ವರ್ಷಗಳೇ ಸಂದು ಹೋಗಿವೆ. ಕೆಲ ಪ್ರಜ್ಞಾವಂತರು ಮತ್ತು ಸಾಮಾಜಿಕ ಹೋರಾಟಗಾರರು ಈ ಬಗ್ಗೆ ಆಗಾಗ ಧ್ವನಿ ಎತ್ತುತ್ತಿದ್ದರೂ ಅದು ಅರಣ್ಯರೋದನವಾಗಿ ಅಂತರ್ಧಾನ ಹೊಂದಿದ್ದೇ ಹೆಚ್ಚು. ಕಡೆಗೂ ಇದೀಗ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯ ಅಧಿಕಾರಿಗಳು ಬೆಂಗಳೂರಿನ ಭಿಕಾರಿ ಮಾಫಿಯಾವನ್ನು ಮಟ್ಟ ಹಾಕುವ ನಿರ್ಧಾರಕ್ಕೆ ಬಂದು ಅಖಾಡಕ್ಕಿಳಿದಿದ್ದಾರೆ. ಇದರ ಮೊದಲ ಭಾಗವಾಗಿ ಬೆಂಗಳೂರಿನ ಆಯಕಟ್ಟಿನ ಪ್ರದೇಶಗಳಲ್ಲಿನ ಹದಿನೈದು ಮಕ್ಕಲು ಸೇರಿದಂತೆ ನೂರಾ ಏಳು ಮಂದಿಯನ್ನು ಬಂಧಿಸಿದ್ದಾರೆ. ಇದೆಲ್ಲ ಆದ ಬಳಿಕ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಚಂದ್ರನಾಯಕ್ ಭಿಕಾರಿ ಮಾಫಿಯಾದ ಬೆಚ್ಚಿ ಬೀಳಿಸುವ ವಿವರಗಳನ್ನು ಕಲೆ ಹಾಕಿದ್ದಾರೆ.

ಇದು ಅಂತಾರಾಜ್ಯ ಮಾಫಿಯಾ. ಇದಕ್ಕೆ ಇರುವಾತ ಒಬ್ಬನೇ ದೊರೆಯಾ ಎಂಬುದಕ್ಕೆ ಪೊಲೀಸ್ ಇಲಾಖೆಯಲ್ಲಾಗಲಿ, ಸಮಾಜ ಕಲಗಯಾಣ ಇಲಾಖೆಯ ಅಧಿಕಾರಿಗಳಿಗಾಗಲಿ ಈ ಕ್ಷಣಕ್ಕೂ ನಿಖರ ಉತ್ತರಗಳ:ಇಲ್ಲ. ಆದರೆ ಈ ಬೆಗ್ಗರ್ಸ್ ದಂಧೆಗೆ ಅಂತಾರಾಜ್ಯ ಲಿಂಕುಗಳಿರೋದಂತೂ ಸತ್ಯ. ಇದರ ಹಿಂದೆ ಮಕ್ಕಳ ಮಾರಾಟ ಜಾಲವೂ ಅತ್ಯಂತ ವ್ಯವಸ್ಥಿತವಾಗಿ ಲಿಂಕು ಹೊಂದಿದೆ. ಇನ್ನೂ ಆಘಾತಕಾರ ಅಂಶವೆಂದರೆ, ಈ ಮಕ್ಕಳ ಮಾರಾಟ, ಭಿಕ್ಷಾಟನೆಯ ದಂಧೆಗೂ ಕೆಲ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗಳಿಗೂ ನೇರಾ ನೇರ ಸಂಬಂಧಗಳಿದ್ದಾವೆಂಬುದನ್ನು ಅಧಿಕಾರಿಗಳು ಆರಂಭಿಕವಾಗಿಯೇ ಪತ್ತೆ ಹಚ್ಚಿದ್ದಾರೆ. ಅಂದಹಾಗೆ, ಬೆಂಗಳೂರೂ ಸೇರಿದಂತೆ ನಾನಾ ಭಾಗಗಳಲ್ಲಿ ಮಕ್ಕಳು ಕಾಣೆಯಾಗುತ್ತವಲ್ಲಾ? ಅಂಥಾ ಮಕ್ಕಳಲ್ಲಿ ಬಹು ಪಾಲು ನಿಖರವಾಗಿ ಈ ಭಿಕಾರಿ ಮಾಫಿಯಾದ ಕೈವಶವಾಗೋದೇ ಹೆಚ್ಚು. ಬಹುಶಃ ವರ್ಷಾಂತರಗಳ ಹಿಂದಿನಿಂದಲೂ ಹಳ್ಳಿಗಾಡುಗಳ ಕಡೆಗಳಲ್ಲಿಯೂ ಮಕ್ಕಳ ಕಳ್ಳರ ಬಗ್ಗೆ ಒಂದು ಭಯವಿತ್ತಲ್ಲಾ? ಅದು ಸುಳ್ಳು ಸುದ್ದಿ ಎಂದೇ ಅನೇಕರು ಅಂದುಕೊಂಡಿದ್ದಿದೆ. ಆದರೆ ಅದರ ಹಿಂದೆ ಇದೇ ಭಿಕಾರಿ ಮಾಫಿಯಾ ಕೆಲಸ ಮಾಡುತ್ತಿರೋದು ಭಯಾನಕ ಸತ್ಯ. ಈಗ್ಗೆ ಆರೇಳು ತಿಂಗಳ ಹಿಂದೆ ಇಂಥಾದ್ದೇ ಗ್ಯಾಂಗು ಟಿ ನರಸೀ ಪುರದ ಬಳಿ ಶಾಲೆ ಮುಗಿಸಿಕೊಂಡು ನಿರ್ಜನ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ಬಾಲಕಿಯರನ್ನು ಓಮಿನಿಯಲ್ಲಿ ತುಂಬಿಕೊಂಡು ಹೋಗುವ ವಿಫಲ ಯತ್ನ ನಡೆಸಿತ್ತು.
ಹೀಗೆ ಅಪಹರಿಸಲ್ಪಟ್ಟ ಮಕ್ಕಳ ಗತಿಯೇನಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ಕೆಆರ್‌ಪುರಂನ ಮಾರ್ಕೆಟ್ಟಿನಲ್ಲಿ ಬೆಚ್ಚಿ ಬೀಳಿಸುವಂಥಾ ಉತ್ತರಗಳು ಸಿಗುತ್ತವೆ. ಸದಾ ಗಿಜಿಗುಡುವ ಕೆಆರ್ ಪುರಂ ಮಾರ್ಕೆಟ್ಟು ರಾತ್ರಿಯಾಗುತ್ತಿದ್ದಂತೆಯೇ ಭಿಕಾರಿ ಮಾಫಿಯಾದ ತಂಗುದಾಣವಾಗಿ ಬದಲಾಗುತ್ತದೆ. ಇಲ್ಲಿ ಮೂರು ನಾಲಕ್ಕು ಮಂದಿ ಹೆಂಗಸರು ದೇಖಾರೇಖಿ ನೋಡಿಕೊಳ್ಳುತ್ತಾರೆ. ಇಂದಿರಾನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಮುಂತಾದ ಆಯಕಟ್ಟಿನ ಪ್ರದೇಶಗಳಲ್ಲಿ ನಾನಾ ಅವತಾರಗಳಲ್ಲಿ ಭಿಕ್ಷೆ ಬೇಡುವ ಮಕ್ಕಳನ್ನು ಈ ಹೆಂಗಸರೇ ರಾತ್ರಿ ಒಂಬತ್ತು ಘಂಟೆಯ ಆಸುಪಾಸಲ್ಲಿ ಆಟೋಗಳ ಮೂಲಕ ಇದೇ ಕೆಆರ್ ಮಾರ್ಕೆಟ್ಟಿಗೆ ಕರೆತರುತ್ತಾರೆ. ಇಲ್ಲಿ ಪುಟ್ಟ ಕಂದಮ್ಮಗಳು, ವಯಸ್ಸಿಗೆ ಬಂದ ಹುಡುಗಿಯರು, ಸದಾ ಗಾಂಜಾ ಮತ್ತಿನಲ್ಲಿರುವ ಸೈಕೋಗಳೆಲ್ಲರನ್ನು ಸಾಲಾಗಿ ಮಲಗಿಸಲಾಗುತ್ತದೆ. ಇಲ್ಲಿ ಹಸಿವಿಗೆ, ನೋವಿಗೆ, ಸಂಕಟಕ್ಕೆ ಕಿಲುಬುಗಾಸಿನ ಬೆಲೆಯೂ ಇಲ್ಲ. ಆ ಹೆಂಗಸರೆಲ್ಲ ಎಣ್ಣೆ ಏಟು ಮತ್ತು ಗಾಂಜಾ ನಶೆಯಲ್ಲಿ ಮನುಷ್ಯತ್ವವನ್ನೇ ಮರೆತಿರುತ್ತಾರೆ.

ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಪುಟ್ಟ ಮಕ್ಕಳನ್ನು ಅಪಹರಿಸಿ ತಂದು ಈ ಭಿಕಾರಿ ಗ್ಯಾಂಗು ಕೊಡುವ ಚಿತ್ರ ಹಿಂಸೆ ಮನುಷ್ಯತ್ವವನ್ನೇ ಅಣಕಿಸುವಂಥಾದ್ದು. ಇಂಥಾ ಕಂದಮ್ಮಗಳಿಗೆ ಸರಿಯಾಗಿ ಅನ್ನಾಹಾರವನ್ನೂ ಕೊಡದೆ ಮನ ಬಂದಂತೆ ಹೊಡೆದು ಚಿತ್ರ ಹಿಂಸೆ ನೀಡಲಾಗುತ್ತದೆ. ಕೆಲವೊಮ್ಮೆ ಈ ಗ್ಯಾಂಗು ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿ ಹಲ್ಲೆ ನಡೆಸಿ ಹಸುಗೂಸುಗಳ ಕೈ ಕಾಲು ಮುರಿಯುತ್ತದೆ. ಇಂಥಾ ಪುಟ್ಟ ಮಕ್ಕಳು ಒಂದೇ ಸಮನೆ ಅಳುತ್ತವಲ್ಲಾ? ಅವುಗಳಿಗೆ ಬೆಳಗ್ಗೆಯೇ ಹಾಲಿನ ಜೊತೆ ನಿದ್ದೆ ಮಾತ್ರೆ ಬೆರೆಸಿ ಹೆಂಗಸರೊಂದಿಗೆ ಕಳಿಸಲಾಗುತ್ತದೆ. ಇಂಥಾ ಪುಟ್ಟ ಮಕ್ಕಳು ಈ ಭಿಕಾರಿ ಗ್ಯಾಂಗಿಗೆ ನಿಜವಾದ ಆದಾಯ ಮೂಲ. ಯಾಕೆಂದರೆ, ಕಂಕುಳಲ್ಲಿ ಪುಟ್ಟ ಮಕ್ಕಳನ್ನು ನೇತಾಕಿಕೊಂಡು ಭಿಕ್ಷಾಟನೆಗಿಳಿಯುವ ಹೆಂಗಸರಿಗೇ ಹೆಚ್ಚಿನ ಕಲೆಕ್ಷನ್ನಾಗುತ್ತದೆ. ಅಂತಃಕರಣ ಹೊಂದಿರುವವರು ಹಸುಗೂಸಿನ ಮುಲಾಜಿಗಾದರೂ ಕಾಸು ಹಾಕಿಯೇ ಹಾಕುತ್ತಾರೆ. ಇಂಥಾ ಹಸುಗೂಸುಗಳನ್ನು ಹೊರತಾಗಿಸಿ ಈ ಗ್ಯಾಂಗು ಭಿಕ್ಷಾಟನೆಗೆ ಒಂದು ಟ್ರಿಕ್ಸು ಬಳಸುತ್ತದೆ. ಬುದ್ಧಿ ಬಲಿತ ಮಕ್ಕಳನ್ನು ಆಂದ್ರ ಪ್ರದೇಶದಿಂದ ಬೆಂಗಳೂರಿಗೆ ಕರೆ ತಂದು ದಂಧೆ ನಡೆಸುತ್ತದೆ. ಕರ್ನಾಟಕದ ಮಕ್ಕಳನ್ನು ಆಂಧ್ರಪ್ರದೇಶಕ್ಕೆ ಬಿಡುತ್ತದೆ.
ಅಂದಹಾಗೆ, ಇಲ್ಲಿನ ಭಿಕಾರಿ ಗ್ಯಾಂಗಿನ ಬೇರುಗಳಿರೋದು ನೆರೆಯ ಹೈದರಾಬಾದಿನಲ್ಲಿ. ಇಲ್ಲಿನ ಇಂದಿರಾ ಪಾರ್ಕ್, ಮತ್ತು ಅಮೀರ್ ಪೇಟೆಯ ಸುತ್ತಮುತ್ತ ಈ ಭಿಕಾರಿ ಗ್ಯಾಂಗಿನ ಬೇರುಗಳು ಇಳಿ ಬಿಟ್ಟುಕೊಂಡಿವೆ. ಈ ಭಾಗದಲ್ಲಿ ಮೊದಲಿಗೆ ಬದುಕಿನ ಅನಿವಾರ್ಯತೆಗೆ ಸಿಕ್ಕ ಮಂದಿ ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದರು. ಅವರದ್ದು ಒಂದು ರೀತಿಯಲ್ಲಿ ಅನಿವಾರ್ಯ ಕರ್ಮ. ಇಲ್ಲಿ ಮೊದಲು ಬಂದು ಭಿಕ್ಷಾಟನೆ ಆರಂಭಿಸಿದ್ದು ತೆಲಂಗಾಣದ ನೆಲ್ಗೊಂಡಾ ಗ್ರಾಮದ ನಿರ್ಗತಿಕ ರೈತರು. ಈ ಭಾಗದಲ್ಲಿ ಎಕರೆಗಟ್ಟಲೆ ಜಮೀನಿದ್ದರೂ ಸರಿಯಾಗಿ ಮಳೆ ಬಾರದ ಕಾರಣ ಜಮಿನ್ದಾರಿ ರೈತರೇ ಹೊತ್ತಿನ ಊಟಕ್ಕೂ ಪರದಾಡ ಬೇಕಾದ ದಯನೀಯ ಸ್ಥಿತಿ ತಲುಪಿದ್ದರು. ಇಂಥಾ ಪ್ರದೇಶದಿಂದ ಜನ ಗುಂಪಾಗಿ ಬಂದು ಹೈದ್ರಾಬಾದಿನ ಇಂದಿರಾ ನಗರದ ಸುತ್ತಮುತ್ತ ಭಿಕ್ಷಾಟನೆ ಆರಂಭಿಸಿದ್ದರು. ಆದರೆ ಈ ನಿರ್ಗತಿಕರ ಆದಾಯದ ಮೇಲೆಯೇ ಕೆಲ ಕಿರಾತಕರು ಕಣ್ಣಿಟ್ಟರು ನೋಡಿ? ಅಲ್ಲಿಂದ ನಿಜವಾದ ಹೊಟ್ಟೆ ಸಂಕಟ ಯಾರದ್ದೋ ಆದಾಯದ ಮೂಲವಾಗಿ ಬದಲಾಗಿ ಹೋಗಿತ್ತು.

ಮೊದ ಮೊದಲು ಈ ಭಿಕ್ಷುಕರಿಂದಲೇ ಹಫ್ತಾ ವಸೂಲಿ ಮಾಡಲಾರಂಭಿಸಿದ ಕಿರಾತಕರು ನಂತರ ತಾವೇ ಕೆಲವರನ್ನು ಕರೆ ತಂದು ಬಿಟ್ಟು ಭಿಕ್ಷೆ ಬೇಡುವ ದಂಧೆಗೆ ಬಿಡಲಾರಂಭಿಸಿದ್ದರು. ತೆಲಂಗಾಣ ಪ್ರದೇಶದಿಂದ ನಿರ್ಗತಿಕ ರೈತರು ಬಂದು ಭಿಕ್ಷಾಟನೆ ನಡೆಸುತ್ತಿದ್ದ ದಶಕಗಳ ಹಿಂದಿನ ಕಾಲದಲ್ಲಿ ಪ್ರತೀ ಭಿಕ್ಷುಕರ ಆದಾಯ ನಲವತ್ತರಿಂದ ಅರವತ್ತು ರೂಪಾಯಿಯಷ್ಟಿತ್ತು. ಈವತ್ತಿಗೆ ಭಿಕಾರಿ ಮಾಫಿಯಾದ ಕೈವಶವಾಗಿರೋ ಭಿಕ್ಷುಕರ ದಿನದ ಆದಾಯ ಒಂದರಿಂದ ಒಂದೂವರೆ ಸಾವಿರ ದಾಟುತ್ತದೆ. ಆದ್ದರಿಂದಲೇ ಈ ಗ್ಯಾಂಗು ನಾನಾ ಪ್ರದೇಶಗಳಿಂದ ಮಕ್ಕಳನ್ನು ಅಪಹರಿಸಿ ತಂದು ಈ ದಂಧೆಗಿಳಿಸುತ್ತಿದೆ.
ಈವತ್ತಿಗೆ ಬೆಂಗಳೂರಿನ ಸಿಟಿ ರೈಲ್ವೇ ನಿಲ್ದಾಣ, ಕೆಆರ್ ಪುರಂ ಮತ್ತು ಸಿಟಿ ಮಾರ್ಕೆಟ್ಟುಗಳಂಥಾ ಆಯಕಟ್ಟಿನ ಜಾಗೆಗಳಲ್ಲಿ ಬೀಡು ಬಿಟ್ಟಿರುವ ಬಹುತೇಕ ಭಿಕ್ಷುಕರು ಆಂಧ್ರ ಪ್ರದೇಶ ಮೂಲದವರೇ. ಉತ್ತರ ಭಾರತ ಮೂಲದವರೂ ಕೂಡಾ ಆಂಧ್ರ ಮಾಫಿಯಾದ ಮೂಲಕವೇ ಬೆಂಗಳೂರಿಗೆ ಬದಿಳಿಯುತ್ತಾರೆ. ಇದೀಗಹ ಒಪಕ್ಕಾ ದಂಧೆ. ದಿನವಿಡೀ ಅಂಗವಿಕಲರಂತೆ ಕುಂಟುತ್ತಾ ನಾಟಕವಾಡಿ ಕಾಸು ಗುಂಜುವ ಪ್ರಳಯಾಂತಕರು ರಾತ್ರಿಯಾಗುತ್ತಲೇ ಸಿಟಿ ಮಾರ್ಕೆಟ್ಟಿನ ಇಕ್ಕೆಲದ ಖಾಲಿ ಪ್ರದೇಶಗಳಲ್ಲಿ ಹೊಟ್ಟೆ ತುಂಬಾ ಬಿರ್ಯಾನಿ ತಿಂದು, ಕಳ್ಳು ತುಂಬಾ ಎಣ್ಣೆ ಹೊಡೆದು ಕಾಲು ನೀವಿಕೊಳ್ಳುತ್ತಾರೆ. ಇಂಥಾ ಪ್ರತೀ ಫೇಕು ಭಿಕ್ಷುಕರ ದಿನವೊಂದರ ಆದಾಯವೇ ಒಂದೂವರೆ ಸಾವಿರ ರೂಪಾಯಿ.

ಹೀಗೆ ಭಿಕ್ಷಾಟನೆಯನ್ನೇ ಚಟವಾಗಿಸಿಕೊಂಡು ಅದನ್ನೇ ಆದಾಯ ಮೂಲವಾಗಿಸಿಕೊಂಡ ಹಲಾಲುಕೋರರ ಕಥೆ ಹಾಗಿರಲಿ. ಈ ಭಿಕಾರಿ ಮಾಫಿಯಾದ ಕೈಗೆ ಸಿಕ್ಕ ಕಂದಮ್ಮಗಳು ಮತ್ತು ಹೆಣ್ಣು ಮಕ್ಕಳದ್ದು ಕರಾಳ ಬದುಕು. ಈ ಮಾಫಿಯಾ ಅದೆಷ್ಟು ಬಲಿತಿದೆ ಎಂದರೆ, ಪುಟ್ಟ ಮಕ್ಕಳನ್ನು ಅಪಹರಿಸೋದು ರಿಸ್ಕು ಅನ್ನಿಸಿದಾಗ ಈ ತಂಡದವರೇ ಮಕ್ಕಳನ್ನು ಖರೀದಿ ಮಾಡುತ್ತಾರೆ. ಇಂಥವರಿಗೆ ಮಕ್ಕಳನ್ನು ಮಾರಾಟ ಮಾಡುವ ಮಾಫಿಯಾವೂ ಹುಟ್ಟಿಕೊಂಡು ಕರ್ನಾಟಕದ ತುಂಬಾ ಹರಡಿಕೊಂಡಿದೆ. ಬೆಂಗಳೂರಿನಲ್ಲಿ ಎದೆಮಟ್ಟ ಬೆಳೆದ ಹೆಣ್ಣಮಕ್ಕಳು ಭಿಕ್ಷೆ ಬೇಡುತ್ತಿದ್ದಾವೆಂದರೆ ಅವು ಖಂಡಿತವಾಗಿಯೂ ಆಂದ್ರಪ್ರದೇಶದವುಗಳೇ. ಇಂಥಾ ಮೈ ನೆರೆತ ಹೆಣ್ಣುಮಕ್ಕಳನ್ನು ಈ ಗ್ಯಾಂಗು ಕ್ರಮೇಣ ಸಿಟಿಯ ದಂಧೆ ನಡೆಸೋ ಲಾಡ್ಜುಗಳಿಗೆ ನೈಟ್ ಡ್ಯೂಟಿಗೆ ಸರಬರಾಜು ಮಾಡಲಾರಂಭಿಸುತ್ತವೆ. ಈವತ್ತಿಗೂ ಉಪ್ಪಾರಪೇಟೆ ಸುತ್ತಲಿನ ಏರಿಯಾಗಳಲ್ಲಿ ಇಂಥಾ ಬಡಪಾಯಿ ಹೆಣ್ಣುಮಕ್ಕಳು ಲಾಡ್ಜುಗಳಲ್ಲಿ ವಿಟರ ಅಟಾಟೋಪಕ್ಕೆ ಸಿಕ್ಕು ಚಿತ್ರ ಹಿಂಸೆ ಅನುಭವಿಸುತ್ತಿವೆ.
ಯಾರೋ ಹೆಂಗಸು ಕಂಕುಳಲ್ಲಿ ಮಗುವನ್ನು ನೇತು ಹಾಕಿಕೊಂಡು ಬಂದು ತಿನ್ನಲೇನೋ ಕೇಳಿದರೆ ನಮಗೆ ಕರುಳು ಚುರುಕ್ ಅನ್ನುತ್ತದೆ. ನಾವು ಕಾಸು ಕೊಟ್ಟು ಸಮಾಧಾನಿಸಿಕೊಳ್ಳುತ್ತೇವೆ. ಆದರೆ ಹೀಗೆ ನಾವು ಕನಿಕರದಿಂದ ಕೊಟ್ಟ ಪ್ರತೀ ರೂಪಾಯಿಯೂ ಭಿಕಾರಿ ಮಾಫಿಯಾ ಕೊಬ್ಬುವಂತೆ ಮಾಡುತ್ತಿದೆ. ಅದೆಷ್ಟೋ ಮುಗ್ದ ಕಂದಮ್ಮಗಳ ಬದುಕು ಹೊಸಕಿ ಹಾಕುತ್ತಿದೆ. ಈವತ್ತಿಗೆ ಇಡೀ ಬೆಂಗಳೂರಿನಲ್ಲಿ ಹುಡುಕಿದರೆ ಒಂದು ಹತ್ತು ಪರ್ಸೆಂಟ್ ಅಸಲಿ ಭಿಕ್ಷುಕರು ಸಿಕ್ಕಿಯಾರಷ್ಟೇ. ಮತ್ತೆಲ್ಲವೂ ಭಿಕಾರಿ ಗ್ಯಾಂಗಿನದ್ದೇ ದರ್ಭಾರ್. ದುರಂತವೆಂದರೆ ಹೀಗೆ ನಿಜವಾದ ಭಿಕ್ಷುಕರನ್ನೂ ಕೂಡಾ ಭಿಕಾರಿ ಗ್ಯಾಂಗು ಕೈವಶ ಮಾಡಿಕೊಂಡಿದೆ. ಕೈ ಕಾಲಿಲ್ಲದ ಭಿಕ್ಷುಕರನ್ನು ಬೆಳಗ್ಗೆ ಬೇಗನೆ ಜನನಿಬಿಢ ಏರಿಯಾದಲ್ಲಿ ಮಲಗಿಸಿ ರಾತ್ರಿ ಎಬ್ಬಿಸಿಕೊಂಡು ಹೋಗಿ ಭಿಕ್ಷೆ ಕಾಸನ್ನೆಲ್ಲ ನುಂಗಿಕೊಳ್ಳುವ ಖದೀಮರು ಈ ಗ್ಯಾಂಗಿನಲ್ಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಆದಷ್ಟು ಬೇಗನೆ ಇಂಥಾ ಭಿಕ್ಷಾಟನೆಯ ಮಾಫಿಯಾವನ್ನು ಮಟ್ಟ ಹಾಕದಿದ್ದರೆ, ಇದು ನಾನಾ ರೂಪಗಳಲ್ಲಿ ಸಮಾಜದ ನೆಮ್ಮದಿ ಹಾಳುಗೆಡವೋದರಲ್ಲಿ ಯಾವುದೇ ಸಂಶಯಗಳಿಲ್ಲ.