ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ನರ್ತನ್ ಕಾಂಬಿನೇಶನ್ನಲ್ಲಿ ತೆರೆ ಕಂಡ ʻಮಫ್ತಿʻ ಸಿನಿಮಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಶಿವಣ್ಣನ ಮಾಸ್ ಅವತಾರ, ಕಿಕ್ ಕೊಡೊ ಲುಕ್, ಖಡಕ್ ಡೈಲಾಗ್, ನರ್ತನ್ ನಿರ್ದೇಶನ ತೆರೆ ಮೇಲೆ ಸೃಷ್ಠಿಸಿದ ಮ್ಯಾಜಿಕ್ ಅಂತಿಂತದ್ದಲ್ಲ. ಸಿನಿಮಾ ನೋಡಿ ಕೇವಲ ದೊಡ್ಮನೆ ಅಭಿಮಾನಿ ಬಳಗ ಮಾತ್ರವಲ್ಲ ಸಿನಿಮಾ ಪ್ರೀತಿಸುವ ಮನಸ್ಕರೆಲ್ಲ ಒಂದ್ಸಾರಿ ಅಲ್ಲ, ಮತ್ತೊಮ್ಮೆ ಮಗದೊಮ್ಮೆ ನೋಡಿ ಸಂಭ್ರಮಿಸಿದ್ರು. ಈ ಸಿನಿಮಾ ನೋಡಿದ್ ಮೇಲೆ ಇನ್ನೊಂದ್ ಸಾರಿ ಇವರಿಬ್ಬರ ಕಾಂಬಿನೇಶನ್ನಲ್ಲಿ ಸಿನಿಮಾ ನೋಡೋ ಕಾತರತೆಯನ್ನು ವ್ಯಕ್ತಪಡಿಸಿದ್ರು. ಆ ಕಾತರತೆಯ ಫಲವೇ ʻಭೈರತಿ ರಣಗಲ್ʻ
ಶಿವಣ್ಣ ಹಾಗೂ ನರ್ತನ್ ಕಾಂಬಿನೇಶನ್ ಮತ್ತೆ ತೆರೆ ಮೇಲೆ ಮೋಡಿ ಮಾಡೋಕೆ ಮಫ್ತಿಗಿಂತ ದೊಡ್ಡ ಮಟ್ಟದಲ್ಲಿ ರೆಡಿಯಾಗುತ್ತಿದೆ. ʻಭೈರತಿ ರಣಗಲ್ʻ ಆಗಿ ಶಿವಣ್ಣನ ಅಬ್ಬರವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳುವ ದಿನವೂ ಅಧಿಕೃತವಾಗಿ ಫಿಕ್ಸ್ ಆಗಿದೆ. ಆಗಸ್ಟ್ 15 ರಂದು ʻಭೈರತಿ ರಣಗಲ್ʻ ಸಿನಿಮಾ ತೆರೆ ಮೇಲೆ ಕಿಕ್ ನೀಡಲು ಬರ್ತಿದೆ. ʻಭೈರತಿ ರಣಗಲ್ʻ ಸಿನಿಮಾ ಒಂದ್ ರೀತಿ ದೊಡ್ಮನೆ ಅಭಿಮಾನಿಗಳ ಬಹು ಅಭಿಮಾನದ ಮೇಲೆ ಸೆಟ್ಟೇರಿದ ಸಿನಿಮಾ ಅಂದ್ರೆ ತಪ್ಪಾಗೋದಿಲ್ಲ. ಇದನ್ನು ಚಿತ್ರತಂಡವೂ ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾರಣ ನರ್ತನ್ ಶಿವಣ್ಣನನ್ನು ʻಭೈರತಿ ರಣಗಲ್ʻ ರೂಪದಲ್ಲಿ ತೋರಿಸಿದ ರೀತಿ. ಅದ್ರಲ್ಲೂ ಭೈರತಿ ರಣಗಲ್ ಆಗಿ ಹ್ಯಾಟ್ರಿಕ್ ಹೀರೋ ಪರಕಾಯ ಪ್ರವೇಶ, ಆ ಸ್ವ್ಯಾಗ್ ನೋಡಿ ಈ ಹೆಸರಲ್ಲೇ ಸಿನಿಮಾವೊಂದು ಮೂಡಿ ಬಂದ್ರೆ ಇನ್ನೂ ಕಿಕ್ ಇರುತ್ತೆ ಎಂಬ ಒತ್ತಾಸೆಯನ್ನು ಸಿನಿಮಾ ತಂಡದ ಮೇಲೆ ಅಭಿಮಾನಿಗಳು ವ್ಯಕ್ತಪಡಿಸಿದ್ರು. ಅಭಿಮಾನಿಗಳು ಆ ಪಾತ್ರದ ಮೇಲೆ ತೋರಿಸಿದ ಪ್ರೀತಿ ಕಂಡು ಶಿವಣ್ಣ ಹಾಗೂ ತಂಡ ಅಭಿಮಾನಿಗಳೇ ನಮ್ಮನೇ ದೇವ್ರು, ಅವ್ರ ಆರ್ಶೀವಾದವೇ ನಮ್ಮ ಹಾರೈಕೆ ಅಂತೇಳಿ ʻಭೈರತಿ ರಣಗಲ್ʻಗೆ ಅಂಕಿತ ಹಾಕಿದ್ರು. ಇನ್ನೇನಿದ್ರು ತೆರೆ ಮೇಲೆ ಶಿವಣ್ಣ-ನರ್ತನ್ ಮ್ಯಾಜಿಕ್ ಹೇಗೆ ಮೂಡಿ ಬಂದಿದೆ ಅನ್ನೋದನ್ನ ನೋಡೋದೊಂದೇ ಬಾಕಿ.
ಅಲ್ಲು ಅರ್ಜುನ್ ಅಭಿನಯದ ʻಪುಷ್ಪ-2ʻ ಸಿನಿಮಾ ಕೂಡ ಆಗಸ್ಟ್ 15ಕ್ಕೆ ಬಿಡುಗಡೆಯಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ʻಪುಷ್ಪʻಗೆ ʻಭೈರತಿ ರಣಗಲ್ʻ ಬಿಗ್ ಟಕ್ಕರ್ ಕೊಡೋದಂತೂ ಪಕ್ಕಾ. ಅದಕ್ಕೆ ಸಾಕ್ಷಿ ʻಭೈರತಿ ರಣಗಲ್ʻ ಮೇಲಿರುವ ಶಿವಣ್ಣ ಅಭಿಮಾನಿಗಳ ಅಪಾರ ಕ್ರೇಜ್. ಅದ್ರಲ್ಲೂ ʻಜೈಲರ್ʻ ಸಿನಿಮಾ ನೋಡಿದ ಮೇಲೆ ನೆರೆ ರಾಜ್ಯಗಳಲ್ಲೂ ಶಿವಣ್ಣ ಅಭಿಮಾನಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇದೆಲ್ಲವೂ ʻಭೈರತಿ ರಣಗಲ್ʻಗೆ ಬಿಗ್ ಪ್ಲಸ್ ಪಾಯಿಂಟ್. ಇನ್ನೂ, ʻಭೈರತಿ ರಣಗಲ್ʻ ವಿಶೇಷ ಅಂದ್ರೆ ಈ ಸಿನಿಮಾ ʻಗೀತಾ ಪಿಕ್ಚರ್ಸ್ʻ ಬ್ಯಾನರ್ನಲ್ಲಿ ಮೂಡಿ ಬರ್ತಿರೋ ಎರಡನೇ ಸಿನಿಮಾ. ಅದ್ದೂರಿತನಕ್ಕೇನು ಇಲ್ಲಿ ಕೊರತೆಯಿಲ್ಲ. ಅನುಭವಿ ತಾರಾಬಳಗವೂ ಚಿತ್ರದಲ್ಲಿದೆ. ಶಿವಣ್ಣನ ಜೋಡಿಯಾಗಿ ʻಸಪ್ತ ಸಾಗರದಾಚೆ ಎಲ್ಲೋʻ ಸಿನಿಮಾ ಮೂಲಕ ಮನೆ ಮಾತಾಗಿರುವ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ.