ಸಿನಿಮಾ: ಭರ್ಜರಿ ಗಂಡು
ನಿರ್ದೇಶನ: ಪ್ರಸಿದ್ದ್
ನಿರ್ಮಾಣ: ಪ್ರಸಿದ್ದ್ ಸಿನಿಮಾಸ್
ತಾರಾಬಳಗ: ಕಿರಣ್ ರಾಜ್, ಯಶ ಶಿವಕುಮಾರ, ರಮೇಶ್ ಭಟ್
ಕಥೆ:
ನೀರಿನ ಅಭಾವದಿಂದ ತತ್ತರಿಸಿ ಹೋಗಿರುವ ಹಳ್ಳಿ, ಆ ಹಳ್ಳಿಗೆ ಎಂಟ್ರಿ ಕೊಡುವ ಮಸ್ತ್ ಸಿಟಿ ಹುಡುಗ. ಅಲ್ಲಿಂದ ತೆರೆದುಕೊಳ್ಳುವುದು ಆತನ ಪ್ರೀತಿ ಪ್ರಪಂಚ. ಹಳ್ಳಿ ಹುಡುಗಿ ಪ್ರೀತಿಯಲ್ಲಿ ಬೀಳುವ ನಾಯಕನ ಪ್ರೇಮ ಪುರಾಣ ಒಂದು ಕಡೆಯಾದ್ರೆ, ಊರಲ್ಲಿ ನಡೆಯೋ ಕೊಲೆ ಒಂದು ಕಡೆ. ನಾಯಕ ಆ ಹಳ್ಳಿಗೆ ಬರಲು ಕಾರಣವೇನು, ಆ ಹಳ್ಳಿ ಜನರಿಗಾಗಿ ಆತ ಏನು ಮಾಡುತ್ತಾನೆ ಅನ್ನೋದು ʼಭರ್ಜರಿ ಗಂಡುʼ(Bharjari Gandu) ಸಿನಿಮಾ ಎಳೆ.
ನಿರ್ದೇಶನ:
ಈ ಹಿಂದೆ ರತ್ನಮಂಜರಿ ಸಿನಿಮಾ ನಿರ್ದೇಶಿಸಿದ್ದ ಪ್ರಸಿದ್ದ್ ಔಟ್ ಅಂಡ್ ಔಟ್ ಮಾಸ್ ಸಿನಿಮಾ ತೆಗೆಯಲು ಹೋಗಿ ಎಡವಿದ್ದಾರೆ. ಅದೇ ಹಳೆಯ ಸ್ಟೋರಿ, ಅಲ್ಲೇನೂ ಹೊಸತನವಿಲ್ಲ. ಕಥೆಯಲ್ಲೇನೂ ಹೊಳಪಿಲ್ಲ ಫೈಟ್ ಆದ್ರೂ ಮಾಸ್ ಆಗಿರಲಿ ಅಂತೇಳಿ ಒಂದಿಷ್ಟು ಬೇಕಿಲ್ಲದ ಫೈಟ್ ಸೀನ್ ತೂರಿಸಲಾಗಿದೆ. ಹೀರೋ ವಿಜೃಂಭಣೆಯಲ್ಲೇ ಸಾಗಿ ಕಥೆಗೆ ಹೊರಳುವಷ್ಟರಲ್ಲಿ ಭರ್ಜರಿ ಗಂಡು(Bharjari Gandu) ಬೇಡವಾಗುತ್ತಾನೆ.
ಕಲಾವಿದರ ಅಭಿನಯ:
ಕಿರುತೆರೆಯಿಂದ ಹಿರಿತೆರೆಗೆ ಬಂದಿರುವ ಕಿರಣ್ ರಾಜ್(Kiran Raj) ಮಾಸ್ ಹೀರೋ ಆಗಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ಚಿತ್ರವೂ ಅದಕ್ಕೆ ಹೊರತಾಗಿಲ್ಲ. ಮಾಸ್ ದೃಶ್ಯದಲ್ಲಿರುವ ಫೋರ್ಸ್ ಬೇರೆಲ್ಲೂ ಕಾಣಲ್ಲ. ಕಥೆಯ ಆಯ್ಕೆ, ನಟನೆಯಲ್ಲಿ ಪಳಗಿದರೆ ಒಳ್ಳೆ ಭವಿಷ್ಯವಿದೆ. ನಾಯಕಿ ಯಶ ಶಿವಕುಮಾರ್(Yasha Shivakumar) ಒಳಗೊಂಡಂತೆ ಎಲ್ಲರ ಅಭಿನಯ ಪಾತ್ರಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಸಿನಿಮಾ ಹೇಗಿದೆ:
ಹಳ್ಳಿ ಸೊಗಡಿನ ಕಥೆ, ಅಲ್ಲೊಬ್ಬ ಮಾಸ್ ಹೀರೋ, ಹಳ್ಳಿ ಹುಡುಗಿ ಪ್ರೀತಿ, ಊರಿನವರ ವೈರತ್ವ ಇಂತಹ ಎಷ್ಟೋ ಕಥೆಗಳು ಬಂದು ಹಳಸಲಾಗಿವೆ. ಅದರಲ್ಲೂ ಹೊಸತನವೇ ಇಲ್ಲದ ಈ ಭರ್ಜರಿ ಗಂಡು((Bharjari Gandu) ಪೇಲವ ಎನಿಸುತ್ತಾನೆ.