ಜಾತಿ, ಧರ್ಮ, ಮತ-ಭೇದ ಅಂತ ಬೇಲಿ ಹಾಕ್ಕೊಂಡು ಬದುಕುವವರ ಕಣ್ಣು ತೆರೆಸಲಿಕ್ಕೆಂದೇ, ಸಂಕುಚಿತ ಮನೋಭಾವದಿಂದ ಹೊರಬಂದು ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ, ಸೌಹಾರ್ದತೆ ಹಾಗೂ ಸಹಕಾರ ಮನೋಭಾವದಿಂದ ಬದುಕಬೇಕು ಎನ್ನುವ ಭಾವನೆ ಹುಟ್ಟಿಸಿಲಿಕ್ಕೆಂದೇ, ಭಗವಂತ ಕೆಲವರನ್ನ ಸೃಷ್ಟಿ ಮಾಡಿರುತ್ತಾನೆ ಅಂತ ಕಾಣುತ್ತೆ. ಹಾಗೇ ಸೃಷ್ಟಿಗೊಂಡವರ ಪೈಕಿ ಬೀದರ್ ಜಿಲ್ಲೆಯ ಶಿವಾನಿ ಶಿವದಾಸ್ ಸ್ವಾಮಿ ಕೂಡ ಒಬ್ಬರು ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ, ಈ ಶಿವಾನಿ ಶಿವದಾಸ್ ಸ್ವಾಮಿ ಯಾರು? ಅವರ ಬಗ್ಗೆ ಯಾಕೇ ಈ ಕ್ಷಣ ಪ್ರಸ್ತಾಪ ಮಾಡ್ತಿದ್ದೇವೆ ಅಂದರೆ ಅದಕ್ಕೊಂದು ಬಲವಾದ ಕಾರಣಾನೇಯಿದೆ. ಇವತ್ತು ಬರೀ ಕರ್ನಾಟಕ ಮಾತ್ರವಲ್ಲ ಇಡೀ ಜಗತ್ತನ್ನೇ ಆಕೆ ಮೆಚ್ಚಿಸಿದ್ದಾಳೆ. ಆಕೆಯ ಸ್ವರದಲ್ಲಿರುವ ಶಕ್ತಿ ಹಾಗೂ ಭಕ್ತಿ ಪರಾಕಾಷ್ಠೆಯನ್ನ ಸಾಮಾನ್ಯ ಮನುಷ್ಯರ್ಯಾಕೆ ದೇವಾನು ದೇವತೆಗಳೇ ಮೆಚ್ಚುವಂತಹದ್ದು. ಹೀಗಾಗಿಯೇ ನಾವು ಆ ಭಕ್ತಿವಂತೆಯ ದಿವ್ಯ ಕಥನವನ್ನು ಹೊತ್ತು ತಂದಿದ್ದೇವೆ. ಈ ಕ್ಷಣ ನಿಮ್ಮ ಮುಂದೆ ಹರವಿಡುತ್ತಿದ್ದೇವೆ.
ಶಿವಾನಿ ಶಿವದಾಸ್ ಸ್ವಾಮಿ ಈ ಹೆಸರು ಜನಸಾಮಾನ್ಯರಿಗೆ ಅಷ್ಟು ಪರಿಚಯ ಇಲ್ಲದೇ ಇರಬಹುದು. ಆದರೆ, ಗಾಯನ ಲೋಕದ ಮಂದಿಗೆ ಈಗಾಗಲೇ ಚಿರಪರಿಚಿತಗೊಂಡಿದ್ದಾಳೆ. ಇಂಡಿಯಾದ ಪ್ರತಿಷ್ಠಿತ ಸಿಂಗಿಂಗ್ ರಿಯಾಲಿಟಿ ಶೋ `ಇಂಡಿಯನ್ ಐಡಲ್-14′ ಗೆ ಆಯ್ಕೆಯಾಗುವ ಮೂಲಕ ಶಿವಾನಿ ಸುದ್ದಿಯಲ್ಲಿದ್ದಾಳೆ. ಅಂದ್ಹಾಗೇ, ಈ ಇಂಡಿಯನ್ ಐಡಲ್ ಶೋ ಸಾಮಾನ್ಯವಾದುದಲ್ಲ. ಇಡೀ ದೇಶದ ಗಮನ ಸೆಳೆದಿರುವ ಎಲ್ಲದಕ್ಕಿಂತ ಹೆಚ್ಚಾಗಿ ಯುವ ಗಾಯಕರ ಕನಸಿನ ವೇದಿಕೆಯಾಗಿರುವಂತಹ ಸಂಗೀತ ಕಾರ್ಯಕ್ರಮ. ಬಾಲ್ಯದಿಂದ ಸಂಗೀತವನ್ನು ಉಸಿರಾಗಿಸಿಕೊಂಡವರಿಂದ ಹಿಡಿದು ಗಾಯನವನ್ನು ವೃತ್ತಿಯಾಗಿಸಿಕೊಳ್ಳಲು ಕಸರತ್ತು ನಡೆಸುವವರೆಲ್ಲರೂ ಕೂಡ `ಇಂಡಿಯನ್ ಐಡೆಲ್’ ವೇದಿಕೆ ಏರಲು ಹಪಹಪಿಸುತ್ತಾರೆ. ಆದರೆ, ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಈ ಸ್ಟೇಜ್ ಹತ್ತಲಿಕ್ಕೆ ಅವಕಾಶ ಸಿಗುತ್ತೆ. ಅಂತಹದ್ದೊಂದು ಅವಕಾಶ ನಮ್ಮ ಕರ್ನಾಟಕದ ಬೀದರ್ ಜಿಲ್ಲೆಯ ಶಿವಾನಿ ಶಿವದಾಸ್ಗೆ ಸಿಕ್ಕಿರುವುದು ಸೌಭಾಗ್ಯವೇ ಸರೀ.
ಹೌದು, `ಇಂಡಿಯನ್ ಐಡಲ್-14′ ಸೀಸನ್ನ ಆಡಿಷನ್ಗೆ ಸುಮಾರು 13000 ಸಾವಿರ ಜನ ಭಾಗಿಯಾಗಿದ್ದು, ಅವರಲ್ಲಿ 25 ಜನರನ್ನು ಮಾತ್ರ ಮೆಗಾ ಆಡಿಷನ್ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ 25 ಜನ ಸ್ಪರ್ಧಿಗಳ ಪೈಕಿ ನಮ್ಮ ಶಿವಾನಿ ಕೂಡ ಸೆಲೆಕ್ಟ್ ಆಗಿರುವುದು ಕರುನಾಡಿಗೆ ಮತ್ತು ಬೀದರ್ ಜಿಲ್ಲೆಗೆ ಸಂತಸ ತಂದಿರುವ ವಿಷಯ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ ಈಕೆ ಪರಶಿವನ ಪರಮಭಕ್ತೆ. ಈಕೆಯ ಕುಟುಂಬಸ್ಥರು ಕೂಡ ಶಿವನ ಆರಾಧಕರು. ಪ್ರತಿನಿತ್ಯವೂ ಮನೆಮನದಲ್ಲಿ ಶಿವನಾಮಸ್ಮರಣೆ ಜೋರು. ಹಣೆಗೆ ವಿಭೂತಿ ಧಾರಣೆ ಮಾಡಿಕೊಂಡು, ಕೊರಳಿಗೆ ಇಷ್ಟಲಿಂಗದ ಕರಡಿಗೆ ಧರಿಸಿಕೊಂಡು ಇರುವುದು ವಾಡಿಕೆ. ಅದನ್ನು `ಇಂಡಿಯನ್ ಐಡೆಲ್’ ಶೋನಲ್ಲೂ ಈಕೆ ಪ್ರದರ್ಶನ ಮಾಡಿದ್ಳು ಎನ್ನುವುದಕ್ಕಿಂತ ಶಿವಾನಿ ತಮ್ಮ ಸಂಪ್ರದಾಯವನ್ನು ಬಿಟ್ಟುಕೊಡಲಿಲ್ಲ ಎಂಬುದು ಮುಖ್ಯವಾಗುತ್ತೆ. ವೇದಿಕೆ ಯಾವುದೇ ಇರಲಿ ಅಲ್ಲಿ ನಮ್ಮ ಆಚಾರ-ವಿಚಾರಗಳನ್ನು, ನಮ್ಮ ಪದ್ದತಿ-ಸಂಪ್ರದಾಯಗಳನ್ನು ಪ್ರದರ್ಶಿಸಬೇಕು ಎಲ್ಲದಕ್ಕಿಂತ ಹೆಚ್ಚಾಗಿ ಪಾಲಿಸಬೇಕು ಎನ್ನುವುದು ಶಿವಾನಿಯಂತವರನ್ನು ನೋಡಿ ಕೆಲವರು ಕಲಿಯಬೇಕಾಗುತ್ತದೆ.
ಇಲ್ಲಿ ನಾವು ಮುಖ್ಯವಾಗಿ ನಿಮಗೆ ತಿಳಿಸಬೇಕಿರುವುದು ಸಂಕುಚಿತ ಮನೋಭಾವದಿಂದ ಹೊರಬಂದು ಬದುಕಬೇಕು ಅಂತೇಳಿರುವ ವಿಚಾರವನ್ನ. ಯಸ್, ಇಂಡಿಯನ್ ಐಡೆಲ್ ವೇದಿಕೆ ಏರಿದ ಶಿವಭಕ್ತೆ ಶಿವಾನಿ `ಅಲ್ಲಾ’ ಕುರಿತಾದ ಹಾಡೊಂದನ್ನು ಆಯ್ಕೆ ಮಾಡಿಕೊಂಡಿದ್ದಾಳೆ. `ದಮಾ ದಮ್ ಮಸ್ತ್ ಕಲಂದರ್’ ಅಂತ ಕಂಠಕ್ಕೆ ಕಿಚ್ಚು ಹಚ್ಚಿದ ಬೀದರ್ ಹುಡುಗಿ, ಭಕ್ತಿಭಾವದಿಂದ ಅಲ್ಲಾ ಗೀತೆಯನ್ನ ತನ್ನ ನಾಲಿಗೆಯ ಮೇಲೆ ನಲಿದಾಡಿಸಿದ್ದಾಳೆ. ಈ ಮೂಲಕ ನಿಜವಾದ ಭಕ್ತರಿಗೆ ದೇವರು ಹೇಗೆ ಸಂಕುಚಿತತೆಯನ್ನು ಮೀರಿದ್ದು ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿದ್ದಾಳೆ. ಝಗಮಗಿಸೋ ವೇದಿಕೆಗೆ ತೀರ ಸರಳವಾಗಿಯೇ ಆಗಮಿಸಿದ ಶಿವಾನಿ, ಚಪ್ಪಲಿ ಕಳೆದು ವೇದಿಕೆ ಏರುವ ಮೂಲಕ ಗೌರವ ಸಲ್ಲಿಸಿದ್ದಾಳೆ. ಅದ್ಭುತವಾಗಿ ಹಾಡೋದ್ರ ಜೊತೆಗೆ ನಡೆ-ನುಡಿಯಿಂದ, ವಿನಯತೆಯಿಂದ ನಡೆದುಕೊಂಡು ಇಂಡಿಯನ್ ಐಡೆಲ್ನ ಜಡ್ಜಸ್ಗಳಾದ ಶ್ರೇಯಾ ಘೋಷಾಲ್, ವಿಶಾಲ್ ದಾಡ್ಲಾನಿ, ಕುಮಾರ್ ಸಾನು ಅವರಿಂದ ಸೈ ಎನಿಸಿಕೊಂಡಿದ್ದಾಳೆ. ಈಕೆಯ ಕಂಠದಲ್ಲಿರುವ ಶಕ್ತಿ ಮತ್ತು ಭಕ್ತಿ ಪರಾಕಾಷ್ಠೆಯನ್ನು ಮೆಚ್ಚಿ ಸ್ವರಸಾಮ್ರಾಜ್ಯದ ದಿಗ್ಗಜರೆಲ್ಲಾ ಕೊಂಡಾಡುತ್ತಿದ್ದರೆ, ಈಕೆಯ ಸಂಸ್ಕಾರಕ್ಕೆ ನಾಡಿನ ಜನತೆಯೇ ಬಹುಪರಾಕ್ ಹಾಕುತ್ತಿದ್ದಾರೆ. ಯಾರೆತ್ತ ಮಗಳೋ ಈಕೆ ಎನ್ನುತ್ತಾ ಆಕೆಗೆ ಶುಭ ಹಾರೈಸುತ್ತಿದ್ದಾರೆ.
ಅಂದ್ಹಾಗೇ, ಶಿವಾನಿ ಮೂರನೇ ವಯಸ್ಸಿಗೆ ಸರಿಗಮ ಅಂತ ಹಾಡೋಕೆ ಶುರು ಮಾಡಿದಳು. `ಮನೆಯೇ ಮೊದಲ ಪಾಠ ಶಾಲೆ, ತಂದೆ-ತಾಯಿಯೇ ಮೊದಲ ಗುರು’ ಎನ್ನುವಂತೆ ಈಕೆ ಮನೆಯಲ್ಲೇ ಅಪ್ಪ-ಅಮ್ಮನ ಸಾನಿಧ್ಯದಲ್ಲಿ ಸಂಗೀತಭ್ಯಾಸ ಶುರು ಹಚ್ಚಿಕೊಂಡಳು. ಹೇಳಿ ಕೇಳಿ ಇಡೀ ಕುಟುಂಬವೇ ಸಂಗೀತಗಾರರಿಂದ ಕೂಡಿದ ಕುಟುಂಬ. ಈಕೆಯೋ ಶಿವಭಕ್ತೆಯಾದ್ದರಿಂದ ಶಂಭೋಶಂಕರನ ಸ್ಮರಣೆ ಮಾಡುತ್ತಾ, ಜಾತ್ರೆ-ಜಾಗರಣೆಯಲ್ಲಿ ಪಾಲ್ಗೊಳ್ಳುತ್ತಾ ಹಾಡುವ ಅಭ್ಯಾಸ ರೂಡಿಸಿಕೊಂಡಳು. ತಾಯಿ ಶಾರದೆಯ ಧ್ಯಾನ ಮಾಡುತ್ತಾ, ಸಂಗೀತ ಸರಸ್ವತಿಯನ್ನು ಒಲಿಸಿಕೊಂಡ ಈಕೆ, ಆರಂಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಳು. ನಂತರ ರಾಜ್ಯದ ಹಲೆವಡೆ ಹಾಗೂ ಹೊರ ರಾಜ್ಯಗಳಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ಕಿರೀಟಕ್ಕೆ ಮುತ್ತಿಕ್ಕಿದ್ದಳು. ಮುಂದೆ ಝೀ ಕನ್ನಡದ ಸರಿಗಮಪ ವೇದಿಕೆ ಏರಿ ರನ್ನರ್ ಅಪ್ ಪಟ್ಟಕ್ಕೇರಿ ಬೆಳ್ಳಿಪದಕ ಮುಡಿಗೇರಿಸಿಕೊಂಡಳು. ಈಗ ದೇಶ ಮೆಚ್ಚಿದ `ಇಂಡಿಯನ್ ಐಡೆಲ್’ ವೇದಿಕೆ ಏರಿದ್ದಾಳೆ. ಸಂಗೀತವನ್ನೇ ಉಸಿರಾಗಿಸಿಕೊಂಡಿರುವ 17 ವರ್ಷದ ಶಿವಾನಿ ಶಿವದಾಸ್ ಕಂಚಿನಂತಹ ಕಂಠ ಹೊಂದಿದ್ದು, ಒಂದೇ ಒಂದು ಹಾಡಿನಿಂದ ದೇಶಾದ್ಯಂತ ಸಂಚಲನ ಮೂಡಿಸಿದ್ದಾಳೆ. ಜೀವನದಲ್ಲಿ ಮೂರೇ ಮೂರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತೀನಿ. ಮೊದಲು ಮನೆ, ಎರಡನೇಯದು ಸಂಗೀತ, ಮೂರನೇಯದು ನನ್ನ ದೇವರು ಶಿವಪ್ಪ ಅಂತ ಹೇಳಿಕೊಂಡಿದ್ದಾಳೆ. ಇಂತಿಪ್ಪ ಗಾಯಕಿಗೆ ಆ ಭಗವಂತ ತಥಾಸ್ತು ಎನ್ನದೇ ಇರುತ್ತಾನೆಯೇ? ಹಂಡ್ರೆಡ್ ಪರ್ಸೆಂಟ್ ಈಕೆಯ ಕನಸಿಗೆ ಮತ್ತು ಗುರಿಗೆ ಆ ಪರಶಿವನ ಕೃಪಾಕಟಾಕ್ಷ ಇದ್ದೇ ಇರುತ್ತೆ. ಈಗಾಗಲೇ ಬೀದರ್ನಿಂದ ಆಕೆಯನ್ನ ಜಗತ್ತು ಕಣ್ಣರಳಿಸಿ ನೋಡುವ ವೇದಿಕೆ ತಲುಪಿಸಿದ್ದಾನೆ. ಇನ್ನೇನಿದ್ರೂ ಆಕೆ ಎದುರಾಳಿ ಸ್ಪರ್ಧಿಗಳ ಕಂಠಕ್ಕೆ ಟಕ್ಕರ್ ಕೊಟ್ಟು ಕಿರೀಟ ಗೆಲ್ಲಬೇಕು. ಅಷ್ಟಾದರೆ ಮುಂದಾಗೋದು ಮಹಾ ಇತಿಹಾಸವೇ ಸರೀ.