‘ಜನನಿ ಪಿಕ್ಚರ್ಸ್’ ಬ್ಯಾನರಿನಲ್ಲಿ ರವಿಚಂದ್ರ ಎ. ಜೆ ನಿರ್ಮಿಸುತ್ತಿರುವ, ‘ಬ್ಲಿಂಕ್’ ಸಿನಿಮಾದ ಮೊದಲ ಹಾಡು ಸ್ವತಂತ್ರ ದಿನದಂದು ಬಿಡುಗಡೆಯಾಗಿದೆ. ‘ಆಗಂತುಕ… ‘ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಇದು ರಾಪ್ ಶೈಲಿಯ ಹಾಡಗಿದ್ದು, ಭಾರತದ ಪಾರಂಪರಿಕ ಸಂಗೀತವನ್ನು ಬಳಸಿಕೊಂಡು ಇಂದಿನ ಜನರೇಶನ್ ಕೇಳುಗರಿಗೆ ಇಷ್ಟವಾಗುವಂತೆ ಸಂಯೋಜಿಸಲಾಗಿದೆ.
ರಾಪರ್ ಅನೂಪ್ (ಕಾಟಕೊಡು) ಹಾಗೂ ಕೌಮುದಿ ಈ ಹಾಡಿಗೆ ಧ್ವನಿಯಾಗಿದ್ದು, ಪ್ರಸನ್ನ ಕುಮಾರ್ ಎಂ. ಎಸ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ರಾಪ್ ಭಾಗವನ್ನು ಅತ್ಯುತ್ತಮವಾದ ಸಾಹಿತ್ಯದ ಜೊತೆಗೆ ಹೊಸರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಹಾಡು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಕಿರುತೆರೆ ನಟ ದೀಕ್ಷಿತ್ ಶೆಟ್ಟಿ ‘ಬ್ಲಿಂಕ್’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಚೈತ್ರಾ ಜೆ. ಆಚಾರ್, ಮಂದಾರ ಬಟ್ಟಲಹಳ್ಳಿ, ವಜ್ರಧೀರ್ ಜೈನ್ , ಗೋಪಾಲ ಕೃಷ್ಣದೇಶಪಾಂಡೆ, ಕಿರಣ್ ನಾಯ್ಕ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಬ್ಲಿಂಕ್’ ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾವಾಗಿದ್ದು, ಅವಿನಾಶ ಶಾಸ್ತ್ರೀ ಛಾಯಾಗ್ರಹಣ, ಸಂಜೀವ್ ಜಾಗಿರ್ದಾರ್ ಸಂಕಲನವಿದೆ. ಅಂದಹಾಗೆ, ಆಗಸ್ಟ್ 15 ರಂದು ಬೆಂಗಳೂರಿನ ಲಾಲ್ ಭಾಗ್ ನಲ್ಲಿ ಪುಷ್ಪ ಪ್ರದರ್ಶನದಲ್ಲಿ ಈ ಹಾಡು ಬಿಡುಗಡೆಯಾಗಿದೆ.