ಮೆಡಿಕಲ್ ಸೈನ್ಸ್ ಎಂಬುದೀಗ ಎಲ್ಲರ ಅಂದಾಜನ್ನೂ ಮೀರಿ ಮುಂದುವರೆದಿದೆ. ಜಗತ್ತಿನ ಜನರನ್ನು ತಣ್ಣಗೆ ಕೊಲ್ಲುತ್ತಾ ಬಂದಿದ್ದ ಒಂದಷ್ಟು ಕಾಯಿಲೆ ಕಸಾಲೆಗಳಿಗೂ ಕೂಡಾ ಮದ್ದು ಕಂಡು ಹಿಡಿಯಲಾಗಿದೆ. ಯಾವ ಸಮಸ್ಯೆಗಳು ಬಂದರೂ ತುಸು ಪ್ರಯಾಸ ಪಟ್ಟಾದರೂ ಬದುಕಿಕೊಳ್ಳಬಹುದೆಂಬ ನಂಬಿಕೆ ಬಹುತೇಕ ಎಲ್ಲರಲ್ಲೂ ಇದೆ. ಆದರೆ, ಅಗಾಧವಾಗಿ ಹಬ್ಬಿಕೊಂಡಿರುವ ಮೆಡಿಕಲ್ ಸೈನ್ಸಿಗೂ ಕೂಡಾ ಒಂದಷ್ಟು ಮಿತಿಗಳಿದ್ದಾವೆಂಬ ವಾಸ್ತವ ಈ ಜಗತ್ತಿನ ಕಣ್ಣ ಮುಂದಿದೆ. ಒಂದು ವೇಳೆ ಎಲ್ಲ ಕಾಯಿಲೆಗಳಿಗೂ ಮದ್ದು ಕಂಡು ಹಿಡಿಯುವಷ್ಟರ ಮಟ್ಟಿಗೆ ವಿಜ್ಞಾನ ಮುಂದುವರೆದಿದ್ದರೆ ನಿಮಿಷಕ್ಕೊಂದು, ಸೆಕೆಂಡಿಗೊಂದರಂತೆ ಉಸಿರು ನಿಲ್ಲಿಸುತ್ತಿರುವ ಜೀವಗಳನ್ನು ಉಳಿಸಿಕೊಳ್ಳಬಹುದಾಗಿತ್ತು.
ನಿಖರವಾಗಿ ಹೇಳ ಬೇಕೆಂದರೆ, ವೈದ್ಯಕೀಯ ಜಗತ್ತು ಈವತ್ತಿಗೂ ಕೂಡಾ ಜಗತ್ತಿನಲ್ಲಿ ಅತೀ ಹೆಚ್ಚು ಬಲಿ ಪಡೆಯುತ್ತಿರುವ ಅದೆಷ್ಟೋ ಕಾಯಿಲೆಗಳಿಗೆ ಮದ್ದು ಕಂಡು ಹಿಡಿಯುವಲ್ಲಿ ಅಕ್ಷರಶಃ ಸೋತಿದೆ. ಏಡ್ಸ್ ನಂಥಾ ರೋಗಗಳಿಗೆ ದಶಕಗಳ ಕಾಲದಿಂದಲೂ ಮದ್ದು ಕಂಡು ಹಿಡಿಯುವ ಯತ್ನಗಳು ನಡೆಯುತ್ತಿವೆ. ಆದರೆ, ಏನೂ ತಪ್ಪು ಮಾಡದ ನಿಷ್ಪಾಪಿ ಜೀವಗಳು ಆ ಮಾರಿಗೆ ಬಲಿಯಾಗುತ್ತಲೇ ಇದ್ದಾವೆ. ಇದೆಲ್ಲದರಾಚೆಗೆ ಈ ಜಗತ್ತಿನಲ್ಲಿ ಸಾಂಕ್ರಾಮಿಕಗಳನ್ನೂ ಮೀರಿಸುವಂತೆ ಜೀವ ಬಲಿ ಪಡೆಯುತ್ತಿರುವ ಮಹಾ ಮಾರಿಯಂಥಾ ಕಾಯಿಲೆ ಕ್ಯಾನ್ಸರ್. ಇದು ಲಿಂಗ ಬೇಂಧವಿಲ್ಲದೆ, ವಯಸ್ಸಿನ ಹಂಗಿಲ್ಲದೆ ಎಲ್ಲರನ್ನೂ ಆವರಿಸಿಕೊಳ್ಳುತ್ತೆ. ಇದ್ರಲ್ಲಿ ನಾನಾ ಬಗೆಗಳಿದ್ದಾವೆ. ಆದರೆ, ಈ ವರೆಗಿನ ಅಂಕಿ ಅಂಶಗಳ ಆಧಾರದಲ್ಲಿ ಹೇಳೋದಾದರೆ, ಕ್ಯಾನ್ಸರ್‌ಗೆ ಅತೀ ಹೆಚ್ಚು ಬಲಿಯಾಗುತ್ತಿರೋದು ಮಹಿಳೆಯರೇ. ಅದರಲ್ಲಿಯೂ ಕ್ಯಾನ್ಸರ್ ಬಲಿ ವಿಚಾರದಲ್ಲಿ ಭಾರತೀಯ ಮಹಿಳೆಯರು ಡೇಂಜರ್ ಜೋನಿನಲ್ಲಿದ್ದಾರೆ!
ಬೆಚ್ಚಿ ಬೀಳಿಸೋ ಅಂಕಿಅಂಶ
ಜಗತ್ತು ಕಣ್ಣಳತೆಗೆ ಮೀರಿ ಬೆಳೆದು ನಿಂತಿದೆ. ಇಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಆವಿಷ್ಕಾರಗಳಾಗುತ್ತಿವೆ. ಆದ್ರೆ ಚಂದ್ರಮಂಡಲವನ್ನೇ ಮುಟ್ಟಿ ಬಂದಿರೋ ಮನುಷ್ಯ ಪ್ರಾಣಿಗೆ ತನ್ನ ಸಂಕುಲವನ್ನು ಬಾಧಿಸ್ತಿರೋ ಮಾರಕ ರೋಗಳಿಂದ ಬಚಾವಾಗೋ ಸಮರ್ಥ ಹಾದಿಯಿನ್ನೂ ಸಿಕ್ಕಿಲ್ಲ. ಈವತ್ತಿಗೂ ಏಡ್ಸ್, ಕ್ಯಾನ್ಸರಿನಂಥಾ ರೋಗಳಿಗೆ ಜೀವ ಬಲಿಯಾಗುತ್ತಿವೆ. ಅದರಲ್ಲಿಯೂ ಸ್ತನ ಕ್ಯಾನ್ಸರ್ ಎಂಬುದು ಭಾರತದ ಮಹಿಳೆಯರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಕಾಯಿಲೆ ನಮ್ಮ ದೇಶದಲ್ಲಿ ಹಬ್ಬುತ್ತಿರುವ ವೇಗ, ಅದರಿಂದ ನರಳುತ್ತಿರುವವರ, ಉಸಿರು ಚೆಲ್ಲುತ್ತಿರುವವರ ಅಂಕಿಅಂಶಗಳು ನಿಜಕ್ಕೂ ಗಾಬರಿ ಬೀಳಿಸುತ್ತಿವೆ.
ಆಗಾಗ ಸಿನಿಮಾ ತಾರೆಯರು, ಸೆಲೆಬ್ರಿಟಿ ಮಹಿಳೆಯರೇ ಸ್ತನ ಕ್ಯಾನ್ಸರಿನಿಂದ ಬಳಲುತ್ತಿರೋ ಸುದ್ದಿಗಳು ಜಾಹೀರಾಗುತ್ತವೆ. ಅಂಥಾ ಹಣವಂತ ಮಹಿಳೆಯರನ್ನೇ ಹೈರಾಣು ಮಾಡುವ ಈ ಕಾಯಿಲೆ ತಮ್ಮನ್ನು ಬಾಧಿಸಿದರೆ ಏನು ಗತಿ ಅಂತ ಮಹಿಳೆಯರು ಕಂಗಾಲಾಗ್ತಾರೆ. ಇದೀಗ ಬಾಲಿವುಡ್ ನಟಿ ಹೀನಾ ಖಾನ್ ಸ್ತನ ಕ್ಯಾನ್ಸರಿಗೆ ತುತ್ತಾಗಿರೋ ಸುದ್ದಿ ಹೊರಬಿದ್ದಿದೆ. ಮೂರನೇ ಸ್ಟೇಜಿನಲ್ಲಿರುವಾಗ ಆಕೆಗೆ ಈ ಕಾಯಿಲೆ ಇರೋದು ಪತ್ತೆಯಾಗಿದೆ. ಈ ಕಾರಣದಿಂದ ಮತ್ತೊಮ್ಮೆ ಸ್ತನ ಕ್ಯಾನ್ಸರ್ ಎಂಬ ಮಾರಿಯ ಬಗ್ಗೆ ಚರ್ಚೆ ಶುರುವಾಗಿದೆ.
ಸ್ತನ ಕ್ಯಾನ್ಸರ್
ಹಾಗಾದ್ರೆ ಈ ಕಾಯಿಲೆ ಏಕೆ ಬರುತ್ತೆ? ಭಾರತೀಯ ಮಹಿಳೆಯರ ಮೇಲೇಕೆ ಅದು ತೀವ್ರವಾಗಿ ಪ್ರಹಾರ ನಡೆಸುತ್ತೆ? ನಮ್ಮಲ್ಲಿ ಆ ಕಾಯಿಲೆಯ ತೀವ್ರತೆ ಹೇಗಿದೆ? ಅದ್ರಿಂದ ಬಚಾವಾಗೋದು ಹೇಗೆ? ಈ ನಿಟ್ಟಿನಲ್ಲಿ ಹುಡುಕ ಹೋದರೆ ಅನೇಕ ವಿಚಾರಗಳು ಬಯಲಾಗುತ್ತವೆ. ೨೦೧೮ರಲ್ಲಿ ನಡೆದ ಸರ್ವೆಯೊಂದರ ಪ್ರಕಾರ ಭಾರತದ ೨೭ ಪರ್ಸೆಂಟಿನಷ್ಟು ಹೆಂಗಳೆಯರನ್ನು ಸ್ತನ ಕ್ಯಾನ್ಸರ್ ಬಾಧಿಸ್ತಿದೆ. ಪ್ರತೀ ನಾಲಕ್ಕು ನಿಮಿಷಗಳಿಗೆ ಓರ್ವ ಮಹಿಳೆ ಈ ಕಾಯಿಲೆಗೆ ಟ್ರೀಟ್ ಮೆಂಟ್ ಪಡೆಯುತ್ತಿದ್ದಾಳೆ. ಆ ವರ್ಷ ಒಂದರಲ್ಲೇ ಒಂದೂವರೆ ಲಕ್ಷ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಪತ್ತೆಯಾಗಿದೆ. ೨೦೧೮ರವರೆಗಿನ ಅಂಕಿ ಅಂಶಗಳ ಪ್ರಕಾರ ತೊಂಬತ್ತು ಸಾವಿರ ಮಹಿಳೆಯರು ಈ ಮಾರಿಗೆ ಬಲಿಯಾಗಿದ್ದಾರೆ.
ಸ್ತನದ ಭಾಗದಲ್ಲಿ ಸದ್ದಿಲ್ಲದೆ ಕ್ಯಾನ್ಸರ್ ಜೀವಕೋಶಗಳು ಸೃಷ್ಟಿಯಾಗುತ್ತವೆ. ಇದು ಅನುವಂಶಿಯತೆಯಿಂದ ಬರೋ ಸಾಧ್ಯತೆ ಇದೆ. ಆದ್ರೆ ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯೂ ಪ್ರಧಾನ ಕಾರಣವೆಂದು ತಜ್ಞರು ಹೇಳ್ತಾರೆ. ಹಾಗಂತ ಹೆದರೋ ಅವಶ್ಯಕತೆ ಇಲ್ಲ. ಆರಂಭಿಕ ಹಂತದಲ್ಲಿ ಕಂಡುಕೊಂಡರೆ ಯಾವ ಕಂಟಕವೂ ಇಲ್ಲದೆ ಇದ್ರಿಂದ ಪಾರಾಗಬಹುದು. ಸ್ತನದಲ್ಲಿ ಗಂಟುಗಳು ಕಂಡು ಬಂದರೆ, ಆ ಭಾಗದ ಚರ್ಮ ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದರೆ, ಸ್ತನದ ಆಕಾರದಲ್ಲಿ ಬದಲಾವಣೆಗಳು ಕಂಡುಬಂದರೆ, ತೊಟ್ಟಿನ ಭಾಗ ಊನಗೊಂಡಂತೆ ಕಂಡುಬಂದು, ಅದರಲ್ಲಿ ಕೀವಿನಂಥಾದ್ದು ಒಸರುತ್ತಿದ್ದರೆ ತಕ್ಷಣವೇ ವೈದ್ಯರನ್ನ ಕಾಣಬೇಕು. ಯಾಕಂದ್ರೆ ಭಯ, ಮುಜುಗರದಿಂದಲೇ ಹೆಚ್ಚಿನ ಮಹಿಳೆಯರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಆತಂಕ ಬಿಟ್ಟು ಮೊದಲ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಇದೊಂದು ಸಾಧಾರಣ ಕಾಯಿಲೆ. ಸ್ತನ ಕ್ಯಾನ್ಸರ್ ಬಂದ್ರೆ ಬದುಕೇ ಮುಗೀತು ಅಂದುಕೊಳ್ಳಬೇಡಿ. ನೆನಪಿರಲಿ… ಅದು ವಾಸಿಯಾಗೋ ಕಾಯಿಲೆ.
ನಿಮಿಷಕ್ಕೊಂದು ಬಲಿ
ಇತ್ತೀಚೆಗೆ ನಡೆದ ವೈದ್ಯಕೀಯ ಸರ್ವೆ ಒಂದರಲ್ಲಿ ನಿಜಕ್ಕೂ ಗಾಬರಿ ಬೀಳಿಸುವಂಥಾ ಒಂದಷ್ಟು ಅಂಶಗಳು ಜಾಹೀರಾಗಿವೆ. ಅದರನ್ವಯ ಹೇಳೋದಾದರೆ, ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆಯು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾಳೆ. ಭಾರತದಲ್ಲಿ ಈ ರೋಗ ಪತ್ತೆಯಾಗುತ್ತಿರುವ ಮಹಿಳೆಯರ ವಯಸ್ಸು ಪಾಶ್ಚಿಮಾತ್ಯ ದೇಶಗಳಲ್ಲಿ ಪತ್ತೆಯಾಗುತ್ತಿರುವ ಮಹಿಳೆಯರಿಗಿಂತ ಹತ್ತು ವರ್ಷ ಕಡಿಮೆಯಾಗಿದೆ. ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯ ಎಂಡೋಕ್ರೈನ್ ಸರ್ಜರಿ ವಿಭಾಗದ ಎಚ್‌ಒಡಿ ಪ್ರೋ ಆನಂದ್ ಮಿಶ್ರಾ ಈ ವರದಿಯನ್ನು ಗ್ಲೋಬಕೊನ್ ಅಧ್ಯಯನದಲ್ಲಿ ನೀಡಿದ್ದಾರೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಏರಿಕೆಯಿಂದಾಗಿ ಸ್ತನ ಕ್ಯಾನ್ಸರ್ ಸರ್ಜನ್ ಮತ್ತು ರೋಗಿಗಳ ಚಿಕಿತ್ಸೆಗೆ ಬೇಕಾದ ಸಾಧನಗಳ ಅವಶ್ಯಕತೆ ಬಹಳಷ್ಟಿದೆ. ಅದನ್ನು ಪೂರೈಸುವಲ್ಲಿ ನಿಧಾನಗತಿ ಆಗುತ್ತಿದೆ ಎಂಬುದನ್ನೂ ಕೂಡಾ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರ್ಷಕ್ಕೆ ಲಕ್ಷ ಬಲಿ
ಈಗೊಂದಷ್ಟು ವರ್ಷಗಳಿಂದೀಚೆಗೆ ಪ್ರತೀ ವರ್ಷವೂ ಜಾಗತಿಕ ಮಟ್ಟದಲ್ಲಿ ಕಾನ್ಸರ್ ಕುರಿತಾದ ಸಮ್ಮೇಳನ ನಡೆಯುತ್ತಾ ಬರುತ್ತಿದೆ. ಈ ಮೂಲಕ ಕ್ಯಾನ್ಸರ್ ರೋಗದ ತೀವ್ರತೆ ಮುಂತಾದ ನಾನಾ ವಿಚಾರಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಾ ಬಂದಿವೆ. ಸ್ತನ ಕ್ಯಾನ್ಸರ್ ಪತ್ತೆ ಮತ್ತು ಅನ್‌ಕೊಪ್ಲಸ್ಟೆ ಸರ್ಜರಿಗೆ ಗಮನ ಹರಿಸಲಾಗುವುದು ಎಂದು ತಜ್ಞರು ಹೇಳಿಕೊಂಡಿದ್ದಾರೆ. ತಂತ್ರಜ್ಞಾನ ಈ ಮೊದಲು ನಾವು ಸ್ತನ ಕ್ಯಾನ್ಸರ್ ಪತ್ತೆ ಮಾಡುತ್ತಿದ್ದ ವಿಧಾನವನ್ನು ಬದಲಾಯಿಸಿದೆ. ಹಾಗೇ ಚಿಕಿತ್ಸೆ ಕೂಡ ರಾಡಿಕಲ್ ಸರ್ಜರಿಯಿಂದ ಸ್ತನ ಸಂರಕ್ಷಣಾ ಸರ್ಜರಿಗೆ ಬದಲಾಗುತ್ತಿದೆ. ಅನ್‌ಕೊಪ್ಲಸ್ಟೆ ಸ್ತನ ಸರ್ಜರಿ ಹೊಸ ಸರ್ಜಿಕಲ್ ತಂತ್ರವನ್ನು ಹೊಂದಿದೆ. ಪ್ಲಾಸ್ಟಿಕ್ ಸರ್ಜರಿಯಿಂದ ಅಪ್ಟಿಮೈಸ್ ಕ್ಯಾನ್ಸರ್ ಉಪಶಮನ ಮಾಡುವ ಜೊತೆಗೆ ಸ್ತನದ ಆಕಾರವನ್ನು ನಿರ್ವಹಣೆ ಮಾಡುತ್ತದೆ ಎಂಬ ವಿಚಾರವನ್ನು ಈ ಮೂಲಕ ಪ್ರಸ್ತುತ ಪಡಿಸಲಾಗಿದೆ.
ನಮ್ಮ ದೇಶದಲ್ಲ್ಲಿ ಮಹಿಳೆಯರು ಸ್ತನ ಕ್ಯಾನ್ಸರ್ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ರೋಗ ಪತ್ತೆಗೆ ತಡವಾಗಲು ಮತ್ತೊಂದು ಪ್ರಮುಖ ಕಾರಣ ಎಂದರೆ ರೋಗಿಗೆ ಗಂಭೀರ ಸಮಸ್ಯೆಯಾಗುವವರೆಗೆ ಅವರು ಚಿಕಿತ್ಸೆಯನ್ನು ಮುಂದೂಡುತ್ತಾರೆ. ಅಧ್ಯಯನದಲ್ಲಿ ಭಾರತದಲ್ಲಿ ಪ್ರತಿ ವರ್ಷ ೧,೭೮,೦೦ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆಂಬ ಆಘಾತಕಾರಿ ಅಂಶ ಬಯಲಾಗಿದೆ. ಸ್ತನ ಕ್ಯಾನ್ಸರ್ ಪ್ರಕರಣಗಳು ಗರ್ಭಕಂಠ ಕ್ಯಾನ್ಸರ್ ಸ್ಥಾನವನ್ನು ಹಿಂದಿಕ್ಕಿದೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಎರಡನೇ ಸಾಮಾನ್ಯ ಕ್ಯಾನ್ಸರ್ ಗರ್ಭಕಂಠದ ಕ್ಯಾನ್ಸರ್. ಇದಕ್ಕಿಂತ ಹೆಚ್ಚಾಗಿ ಗಮನವಹಿಸಬೇಕಾದ ಅಂಶ ಎಂದರೆ ಪಶ್ಚಿಮ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಯುವ ವಯಸ್ಸಿನ ಮಹಿಳೆಯರಲ್ಲಿ ಈ ಸಮಸ್ಯೆ ಪತ್ತೆಯಾಗುತ್ತಿದೆ. ವಾರ್ಷಿಕ ತೊಂಬತ್ತು ಸಾವಿರ ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಅಂದರೆ ದೇಶದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಶೇಖಡಾ ಅರವತ್ತರಷ್ಟು ಮಹಿಳೆಯರು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಷ್ಟಕ್ಕೂ ಕ್ಯಾನ್ಸರ್ ಅಂದ್ರೇನು?
ಕ್ಯಾನ್ಸರ್ ಇಂದು ಭಾರತವನ್ನು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದೆ. ಅದರ ಬಗೆಗಿನ ಅರಿವಿನಿಂದ ಒಂದಷ್ಟು ರೋಗ ತಡೆಗಟ್ಟುವಿಕೆ ಸಾಧ್ಯವಾದೀತು. ಕ್ಯಾನ್ಸರ್ ಎನ್ನುವುದು ದೇಹದಲ್ಲಿನ ಜೀವಕೋಶದ ಬೆಳವಣಿಗೆಯು ಅನಿಯಂತ್ರಿತವಾಗಿರುವ ಒಂದು ಕಾಯಿಲೆ. ಅದರ ಕೋಶಗಳು ದೇಹದ ವಿವಿಧ ಅಂಗಾಂಶಗಳಿಗೆ ಹರಡುತ್ತದೆ. ಇದು ಚರ್ಮದಿಂದ ಆಂತರಿಕ ಅಂಗಗಳವರೆಗೆ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ಕಳೆದ ದಶಕಗಳಲ್ಲಿ ಕ್ಯಾನ್ಸರ್ ವಿಶ್ವಾದ್ಯಂತ ಗಮನಾರ್ಹ ಆರೋಗ್ಯ ಸಮಸ್ಯೆಯಾಗಿ ಗುರುತಿಸಿಕೊಂಡಿದೆ. ಲಕ್ಷಾಂತರ ಜನರನ್ನು ಹಿಂಡಿ ಹಾಕುತ್ತಿದೆ. ಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿಗಳ ಹೊರತಾಗಿಯೂ ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿ ಉಳಿದುಕೊಂಡಿದೆ. ಈ ಕ್ಷಣಕ್ಕೂ ಕೋಟ್ಯಾಂತರ ಜೀವಗಳು ಈ ಕಾಯಿಲೆಯಿಂದ ನರಳುತ್ತಿವೆ.
ಕ್ಯಾನ್ಸರ್ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ದೇಹದಾದ್ಯಂತ ಹರಡುತ್ತವೆ. ಇದು ಟ್ರಿಲಿಯನ್ನುಗಟ್ಟಲೆ ಜೀವಕೋಶಗಳಿಂದ ಮಾಡಲ್ಪಟ್ಟ ಮಾನವ ದೇಹದಲ್ಲಿ ಎಲ್ಲಿಯಾದರೂ ಪ್ರಾರಂಭವಾಗಬಹುದು. ಕೋಶ ವಿಭಜನೆ ಅಗತ್ಯವಿರುವಾಗ ಹೊಸ ಕೋಶಗಳನ್ನು ರೂಪಿಸಲು ಹೆಚ್ಚಿಸಲು ಜೀವಕೋಶದ ಸಾಮಾನ್ಯ ವ್ಯವಸ್ಥೆ ಇದೆ. ಈ ಪ್ರಕ್ರಿಯೆ ವಿಫಲವಾದರೆ ಅಸಹಜ ಅಥವಾ ಹಾನಿಗೊಳಗಾದ ಜೀವಕೋಶಗಳು ವೃದ್ಧಿಯಾಗುತ್ತ. ಇದರಿಂದಾಗಿಯೇ ದೇಹದ ನಾನಾ ಭಾಗಗಳಲ್ಲಿ ಗೆಡ್ಡೆಗಳು ಸೃಷ್ಟಿಯಾಗುತ್ತವೆ. ಮೆಟಾಸ್ಟಾಸಿಸ್ ಕ್ಯಾನ್ಸರ್ ಯುಕ್ತ ಗೆಡ್ಡೆಗಳನ್ನು ಆಸುಪಾಸಿನ ಅಂಗಾಂಶಗಳಿಗೆ ಹರಡಲು ಅನುವು ಮಾಡಿಕೊಡುತ್ತದೆ. ಹಾನಿಕರವಲ್ಲದ ಗೆಡ್ಡೆಗಳು ಪಕ್ಕದ ಅಂಗಾಂಶಗಳಿಗೆ ಆಕ್ರಮಣ ಮಾಡುವುದಿಲ್ಲ ಅಥವಾ ವಲಸೆ ಹೋಗುವುದಿಲ್ಲ. ಅಂತಹ ಹಾನಿಕರವಲ್ಲದ ಗೆಡ್ಡೆಯನ್ನು ತೆಗೆದುಹಾಕಿದರೆ, ಅದು ಸಾಮಾನ್ಯವಾಗಿ ಮತ್ತೆ ಬೆಳೆಯುವುದಿಲ್ಲ. ಇದು ಸಾಕಷ್ಟು ದೊಡ್ಡದಾಗಿದ್ದರೆ ಅದು ಕ್ಯಾನ್ಸರ್ ಕೋಶಗಳನ್ನು ಆಕರ್ಷಿಸಬಹುದು.
ರಕ್ಕಸ ಕಾಯಿಲೆಗೆ ನಾನಾ ಮುಖ
ಸದ್ಯ ವಿಜ್ಞಾನಿಗಳು ಗುರುತಿಸಿರುವಂತೆ ನೂರಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್‌ಗಳಿವೆ. ಪ್ರತಿಯೊಂದೂ ವಿಭಿನ್ನ ಅಂಗ ಅಥವಾ ಅಂಗಾಂಶದಲ್ಲಿ ಜೀವ ಪಡೆದಿರುತ್ತವೆ. ಅಸಹಜ ಚರ್ಮದ ಕೋಶಗಳ ಅನಿಯಂತ್ರಿತ ಪ್ರಸರಣ ಇರುವ ಸಂದರ್ಭಗಳಲ್ಲಿ ಚರ್ಮದ ಕ್ಯಾನ್ಸರ್ ಬೆಳವಣಿಗೆಯಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತ ಹೆಚ್ಚಿನ ಸಾವುಗಳಿಗೆ ಕಾರಣವಾಗುವ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. ಇದು ಶ್ವಾಸಕೋಶದಲ್ಲಿನ ಅಸಹಜ ಕೋಶಗಳಿಂದ ನಿರೂಪಿಸಲ್ಪಟ್ಟಿದೆ. ಸ್ತನ ಕ್ಯಾನ್ಸರ್ ಸ್ತನದಲ್ಲಿನ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಹುಟ್ಟಿಕೊಳ್ಳುತ್ತದೆ. ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ ಸಾಮಾನ್ಯವಾಗಿ ಪಾಲಿಪ್ಸ್ ಆಗಿ ಪ್ರಾರಂಭವಾಗುತ್ತದೆ. ಇದು ಕೊಲೊನ್ ಅಥವಾ ಗುದನಾಳದ ಒಳಪದರದಲ್ಲಿ ಅಸಹಜ ಬೆಳವಣಿಗೆಯಿಂದ ಉಂಟಾಗುತ್ತದೆ.
ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಮೂತ್ರಗ್ರಂಥಿ ಕೋಶಗಳಿಂದ ಹುಟ್ಟಿಕೊಳ್ಳುತ್ತದೆ. ರಕ್ತದ ಕ್ಯಾನ್ಸರ್ ಅನ್ನು ಹೆಮಟೊಲಾಜಿಕಲ್ ವ್ಯತ್ಯಯ ಎಂದೂ ಕರೆಯಲಾಗುತ್ತದೆ. ಇದು ರಕ್ತ ರೂಪಿಸುವ ಅಂಗಾಂಶಗಳಲ್ಲಿನ ಬದಲಾವಣೆಯಿಂದ ಶುರುವಾಗಿ ಎಲ್ಲೆಡೆ ಹಬ್ಬಿಕೊಳ್ಳುತ್ತೆ. ಲ್ಯುಕೇಮಿಯಾಗಳು, ಲಿಂಫೋಮಾಗಳು ಮತ್ತು ಮೈಲೋಮಾಗಳು ಸಾಮಾನ್ಯ ರಕ್ತ ಕ್ಯಾನ್ಸರ್ ವಿಧಗಳು. ಮೂಳೆ ಕ್ಯಾನ್ಸರ್ ಮೂಳೆಗಳು ಅಥವಾ ಮೂಳೆಗಳ ಸುತ್ತಲಿನ ಮೃದು ಅಂಗಾಂಶಗಳಲ್ಲಿ ಬೆಳವಣಿಗೆಯಾಗುತ್ತದೆ. ಗಾಳಿಗುಳ್ಳೆಯ ಕ್ಯಾನ್ಸರ್, ಮಿದುಳಿನ ಕ್ಯಾನ್ಸರ್, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್, ಕಣ್ಣಿನ ಕ್ಯಾನ್ಸರ್, ಪಿತ್ಥಕೋಶದ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ ವಿಧಗಳಿದ್ದಾವೆ.
ಮಹಿಳೆಯರ ಪಾಲಿನ ಜವರಾಯ
ಈಗಂತೂ ಎಲ್ಲಿ ನೋಡಿದರಲ್ಲಿ ಅನೇಕ ಮಹಿಳೆಯರು ಸ್ತನ ಕ್ಯಾನ್ಸರಿನಿಂದ ಬಳಲುತ್ತಿದ್ದಾರೆ. ಹೆಸರೇ ಸೂಚಿಸುವಂತೆ ಸ್ತನದ ಜೀವಕೋಶಗಳಲ್ಲಿ ಬೆಳೆಯುವ ಕ್ಯಾನ್ಸರ್ ಅನ್ನು ಸ್ತನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಇದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಪ್ರಧಾನವಾದದ್ದು. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳು ಆರಂಭಿಕ ಪತ್ತೆ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಇಂಥಾ ತ್ವರಿತ ವೈದ್ಯಕೀಯ ಚಟುವಟಿಕೆಯಿಂದಾಗಿ ಸಾವಿನ ಪ್ರಮಾಣ ಒಂದಷ್ಟು ಕಡಿಮೆಯಾಗಿದೆಯಷ್ಟೆ. ಸ್ತನ ಚೀಲಗಳು ಒಂದು ಅಥವಾ ಎರಡೂ ಸ್ತನಗಳಲ್ಲಿ ಕಂಡುಬರುವ ಕ್ಯಾನ್ಸರ್ ಅಲ್ಲದ ಗಂಟುಗಳೂ ಇದ್ದಾವೆ. ಅವು ಸಾಮಾನ್ಯ ಮತ್ತು ವಯಸ್ಸಾದ ಮತ್ತು ಹಾರ್ಮೋನುಗಳ ಬದಲಾವಣೆಯೊಂದಿಗೆ ಸ್ತನದಲ್ಲಿನ ಬದಲಾವಣೆಗಳಿಂದ ನೈಸರ್ಗಿಕವಾಗಿ ಸಂಭವಿಸುತ್ತವೆ. ಹಾಗಂತ ಎಲ್ಲ ಗಡ್ಡೆಗಳೂ ಹಾಗೆ ನಿರುಪದ್ರವಿ ಆಗಿರುತ್ತವೆಂದು ಧೈರ್ಯ ಮಾಡುವಂತೆಯೂ ಇಲ್ಲ.
ಹಾಗಾದರೆ ಈ ಸ್ಥಸ್ತನ ಕ್ಯಾನ್ಸರ್ ಹೇಗೆ ಹರಡುತ್ತೆ ಅನ್ನೋ ಪ್ರಶ್ನೆ ಮೂಡಿಕೊಳ್ಳೋದು ಸಹಜ. ರಕ್ತ ಅಥವಾ ದುಗ್ಧರಸದ ಮೂಲಕ ಬೇರೆ ಅಂಗಗಳಿಗೆ ಹರಡಬಹುದು. ಈ ಪ್ರಕ್ರಿಯೆಯನ್ನು ಮೆಟಾಸ್ಟಾಸಿಸ್ ಎಂದು ಕರೆಯಲಾಗುತ್ತದೆ. ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಮೂಳೆಗಳು, ಶ್ವಾಸಕೋಶಗಳು, ಯಕೃತ್ತು, ಹೃದಯ ಮತ್ತು ಮೆದುಳಿನಂತಹ ಅಂಗಗಳಿಗೆ ಹರಡಬಹುದು. ಅಷ್ಟೊಂದು ಹರಡುವವರೆಗೆ ರೋಗ ಪತ್ತೆ ಮಾಡಿ ಚಿಕಿತ್ಸೆ ಪಡೆಯದಿದ್ದರೆ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ. ಭಾರತದ ಮಹಿಳೆಯರು ಅತೀ ಹೆಚ್ಚು ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್ ಗೆ ಬಲಿಯಾಗುತ್ತಿರೋದು ರೋಗ ಪತ್ತೆ ಮಾಡುವಲ್ಲಿನ ನಿಧಾನ ಗತಿಯಿಂದಲೇ.
ಹಾಗಂತ ಪುರುಷರು ಈ ಬಗೆಯ ಕ್ಯಾನ್ಸರಿನಿಂದ ಸೇಫ್ ಅಂದುಕೊಳ್ಳುವಂತಿಲ್ಲ. ಅಪರೂಪದ ಸಂದರ್ಭಗಳಲ್ಲಿ ಪುರುಷರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗೋದೂ ಇದೆ. ಪುರುಷ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಕೆಲವು ಔಷಧಿಗಳು ಅಥವಾ ಅಸಹಜ ಹಾರ್ಮೋನ್ ಹಾಗೂ ಹೆರಿಡಿಟಿಯಿಂದ ಬರುತ್ತವೆಂದೂ ಹೇಳಲಾಗುತ್ತದೆ. ಆದರೆ ಆ ಪ್ರಮಾಣ ಕಡಿಮೆಯಿದೆ. ಇದೆಲ್ಲ ಏನೇ ಇದ್ದರೂ ಭಾರತದ ಮಹಿಳೆಯರು ವರ್ಷಕ್ಕೆ ಲಕ್ಷ ಸಂಖ್ಯೆಯಲ್ಲಿ ಕ್ಯಾನ್ಸರ್ ಗೆ ಬಲಿಯಾಗುತ್ತಿರೋದು ನಿಜಕ್ಕೂ ದುರಂತ…