ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

cancer through lakes: ನಿಮಗ್ಗೊತ್ತಾ? ಕೆರೆಗಳಿಂದಲೂ ಕ್ಯಾನ್ಸರ್ ಬರುತ್ತೆ!

Majja Webdeskby Majja Webdesk
21/04/2025
in Majja Special
Reading Time: 1 min read
cancer through lakes: ನಿಮಗ್ಗೊತ್ತಾ? ಕೆರೆಗಳಿಂದಲೂ ಕ್ಯಾನ್ಸರ್ ಬರುತ್ತೆ!

-ಬೆಂಗಳೂರಿನ ಕೆರೆಗಳೇಕೆ ಸಾಯುತ್ತಿವೆ? 

-ಮಲಿನಗೊಂಡ ಕೆರೆಗಳಿಂದ ಮಹಾ ಕಂಟಕ! 

 

ಆಗಾಗ ಬೆಂಗಳೂರಿನ ಹಲಸೂರು ಕೆರೆಯೂ ಸೇರಿದಂತೆ ರಾಜ್ಯದ ನಾನಾ ಕೆರೆಗಳಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿರುವ ವರದಿ ಸುದ್ದಿ ಮಾಡುತ್ತಿರುತ್ತವೆ. ಸುಮಾರು ೪೧.೫ ಹೆಕ್ಟೇರ್ ವಿಸ್ತೀರ್ಣದ ಹಲಸೂರು ಕೆರೆಯ ನೀರು ಹಾಳಾಗಿರುವುದರಿಂದಲೇ ಮೀನುಗಳು ಸತ್ತಿವೆ. ಆಮ್ಲಜನಕದ ಕೊರತೆಯ ಕಾರಣ ಮೀನುಗಳು ಗೊಟಕ್ ಎಂದಿವೆ. ಕೆರೆಯಲ್ಲಿ ಸತ್ತು ಬಿದ್ದಿದ್ದ ಮೀನುಗಳನ್ನು ಹೊರತೆಗೆದು, ಗುಂಡಿ ತೋಡಿ ಸಂಸ್ಕಾರ ಮಾಡಲಾಗಿದೆ. ೨೦೦ ಕೆ.ಜಿ.ಗಳಷ್ಟು ಪೌಷ್ಟಿಕ ಆಹಾರ ಅನಗತ್ಯವಾಗಿ ಪೋಲಾಗಿದೆ… ಮರಳಿನಲಿ ಸಮಾದಿ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗಲಿಲ್ಲ. ಕೆಲವೇ ವರ್ಷಗಳಲ್ಲಿ ಇದೇ ನೆಲದಿಂದ ಕಾರ್ಕೋಟಕ ವಿಷ ಹೊರ ಬರಲಿದೆ. ಇನ್ನಷ್ಟು ಅದ್ವಾನಗಳಿಗೆ ಎಡೆ ಮಾಡಿಕೊಡಲಿದೆ. ಕೇಡುಗಾಲಕ್ಕೆ ಕೆರೆ ಕೆಡುತ್ತದೆ ಎನ್ನುತ್ತಾರೆ. ಅದೀಗ ನಿಜವಾಗಿರಬಹುದಾ?! ಎಂಬ ಶಂಕ ಮೂಡುತ್ತಿವೆ.

ಸತ್ತ ಕೆರೆ!


ನಗರದ ನಡುಭಾಗದಲ್ಲಿರುವ ಕೆರೆಗೇ ಈ ದುರ್ಗತಿ ಬಂದಿದೆ ಎಂದರೆ ಹೊರಭಾಗದ ಯಲಹಂಕ ಕೆರೆ, ರಾಚೇನಹಳ್ಳಿ ಕೆರೆ, ಜಕ್ಕೂರು ಕೆರೆ, ಅಲ್ಲಾಳಸಂಧ್ರ ಕೆರೆ, ಉತ್ತರಹಳ್ಳಿ, ವಸಂತಪುರ, ಕುಂದಲಹಳ್ಳಿ, ಹೆಸರಘಟ್ಟ, ಹೆಬ್ಬಾಳ, ಮಡಿವಾಳ, ಎಲಮಲ್ಲಶೆಟ್ಟಿಹಳ್ಳಿ ದೊಡ್ಡನೆಕ್ಕುಂಡಿ, ವರ್ತೂರು, ಹೊರಮಾವು, ಹುಳಿಮಾವುಗಳ ಕೆರೆಗಳ ನೀರು ಹಲಸೂರು ಮಾದರಿಯಲ್ಲಿ ಕೆಟ್ಟಿಲ್ಲದಿರಬಹುದು. ಇವೆಲ್ಲವೂ ಅಪಾಯದ ಅಂಚಿನಲ್ಲಿವೆ. ಕಳೆದ ವರ್ಷದಿಂದ ಬಿಳಿನೊರೆಯನ್ನು ‘ವಾಮಿಟ್’ ಮಾಡುತ್ತಿರುವ ಬೆಳ್ಳಂದೂರು ಕೆರೆ ಹಲಸೂರು ಕೆರೆಗಿಂತಲೂ ಹದಗೆಟ್ಟಿದೆ!
ಅಧ್ಯಯನವೊಂದರ ಪ್ರಕಾರ ಹಲಸೂರು ಕೆರೆಯಲ್ಲಿ ಕರಗಿದ ಆಮ್ಲಜನಕ ಪ್ರಮಾಣ ತಗ್ಗಿದೆ. ಹೀಗಾಗಿ ಜಲಚರ ಈ ಕೆರೆಯಲ್ಲಿ ಬದುಕಲು ದುಸ್ಸಾಹಸ ಪಡಬೇಕಿದೆ. ಈ ನೀರು ಮಾನವ ಬಳಕೆಗೂ ಯೋಗ್ಯವಲ್ಲ. ಹೀಗಾಗಿ ಈ ಕೆರೆ ಸಂಪೂರ್ಣ ಸತ್ತಿದೆ ಎನ್ನಬಹುದು. ತ್ಯಾಜ್ಯ ನೀರಿನಲ್ಲಿ ರೆಡಾನ್, ಯುರೇನಿಯಂ ಸೇರಿದಂತೆ ವಿವಿಧ ರಾಸಾಯನಿಕಗಳ ಅಂಶ ಹೆಚ್ಚಿದ್ದು, ನೇರವಾಗಿ ಕೆರೆ ಸೇರುತ್ತಿದೆ. ಹೀಗಾಗಿ ನೀರಿನ ಆಮ್ಲಜನಕವನ್ನು ಇವು ‘ನುಂಗಿ’ ಹಾಕುತ್ತಿವೆ. (ದಹಿಸುತ್ತಿದೆ) ತ್ಯಾಜ್ಯ ನೀರನ್ನು ಶೇ. ೧೦೦ರಷ್ಟು ಶುದ್ದಗೊಳಿಸಿ ಕೆರೆಗೆ ಹರಿಯುವಂತೆ ಮಾಡದಿದ್ದಲ್ಲಿ ಬೆಳ್ಳಂದೂರು ಕೆರೆಗೆ ಬಂದ ದುರ್ಗತಿಯೇ ಹಲಸೂರು ಕೆರೆಗೂ ಬರಲಿದೆ.

ಬ್ರಿಟಿಷರ ಕಿತಾಪತಿ


ಜೀವಂತ ಕೆರೆಗಳಿಗೆ, ನದಿಗಳಿಗೆ ಭಾರತೀಯರು ಎಂದಿಗೂ ಮಲಿನ ನೀರು ಬಿಟ್ಟವರಲ್ಲ. ಕೆರೆ, ಕಾಲುವೆಗಳಿಗೆ ಇಳಿಯುವ ಮುನ್ನ ಚಪ್ಪಲಿ ಕೂಡ ಧರಿಸದೆ ನೀರಿಗಿಳಿಯುತ್ತಿದ್ದರು! ಅದು ದೈವತ್ವ ಮಾತ್ರವಾಗಿರದೆ, ನೀರಿಗೆ ಚಪ್ಪಲಿ ಸೋಕಿಸಬಾರದೆನ್ನುವ ಉದಾತ್ತ ಭಾವನೆ ಇತ್ತು. ಅಂದಾಜು ೧೯೨೦ರಲ್ಲಿ ಬ್ರಿಟಿಷರು ಕಾಶಿ ಸಮೀಪದಲ್ಲಿ ಜೀವಂತ ನದಿಯೊಂದಕ್ಕೆ ಮಲಿನ ನೀರು ಬಿಡುವ ನಿರ್ಣಯಕೈಗೊಂಡರು. ಅದೇ ಮಾದರಿಯಾಗಿದ್ದು ಮಾತ್ರ ದುರಂತವೆನ್ನುತ್ತಾರೆ ಜಲ ತಜ್ಞ ರಾಜೇಂದ್ರ ಸಿಂಗ್. ನಮ್ಮ ವರ್ತೂರು ಕೆರೆ ಸರಣಿ, ಮಾದಾವರ ಕೆರೆಗಳ ಸಮೂಹ, ಪುಟ್ಟೇನಹಳ್ಳಿ, ಭೈರಮಂಗಲ ಕೆರೆಗಳ ಸರಣಿ ಇವೆಲ್ಲವೂ ಹಾಳಾಗಲು ಬ್ರಿಟಿಷಿರು ತೋರಿದ ಯಡವಟ್ಟಿನ ಹಾದಿಯೇ ಮೂಲವಾಗಿದೆ.
ಬ್ರಿಟಿಷರಿಗೆ ನೀರಿನ ಮಹತ್ವ ಅರ್ಥವಾಗಿದೆ. ನಮ್ಮ ವೃಷಭಾವತಿಗಿಂತಲೂ ಹಡಾಲೆದ್ದು ಹೋಗಿದ್ದ ಥೇಮ್ಸ್ ನದಿಯನ್ನು ಶುದ್ಧೀಕರಿಸಿಕೊಂಡು ದಶಕವಾಗುತ್ತಿದೆ. ಅದೇ ರೀತಿಯಲ್ಲಿ ಅಮೆರಿಕದ ಫೋಟೊಮ್ಯಾಕ್ ನದಿ ಶುದ್ಧೀಕರಣಗೊಂಡಿದೆ. ಆದರೆ ನಾವಿನ್ನೂ ಈ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಗಳನ್ನು ಮಾಡಿಲ್ಲ. ರಾಷ್ಟ್ರಾದ್ಯಂತ ಇಂದು ಅನೇಕ ನದಿಗಳು, ಕೆರೆಗಳು ಹಾಳಾಗಿವೆ. ಪಟ್ಟಣ ಹಾಗೂ ನಗರಗಳ ಸಮೀಪದಲ್ಲಿಯೇ ಇಂತಹ ಅಪಸವ್ಯಗಳು ಹೆಚ್ಚಿವೆ. ಪ್ರತಿ ವರ್ಷ ಈ ಪಟ್ಟಿಗೆ ಹೊಸ ಹೊಸ ಕೆರೆಗಳು ಸೇರ್ಪಡೆಗೊಳ್ಳುತ್ತಿವೆಯಾಗಲಿ ಶುದ್ಧೀಕರಿಸುವ ಪ್ರಯತ್ನಕ್ಕೆ ಅಧಿಕಾರಸ್ಥರು ಕೈ ಹಾಕಿದ ಉದಾಹರಣೆಗಳಿಲ್ಲ.

ಕೆರೆಗಳಿಂದ ಕ್ಯಾನ್ಸರ್!


ಆಧುನಿಕ ಬೆಂಗಳೂರು ನಿವೃತ್ತರ ಸ್ವರ್ಗವಾಗಿ ಉಳಿದಿಲ್ಲ. ಅಥವಾ ಉದ್ಯಾನನಗರವೂ ಅಲ್ಲ. ಬದಲಿಗೆ ಐಟಿ ಸಿಟಿ, ಬಿಟಿ ಸಿಟಿ ಯಾಗಿದೆ. ಅದರೊಂದಿಗೆ ಕ್ಯಾನ್ಸರ್ ಸಿಟಿ ಎಂಬ ಕುಖ್ಯಾತಿಯೂ ಬಂದಿದ್ದರೆ ಅದಕ್ಕೆ ಕಾರಣ ಕೆರೆಗಳು! ಕೆರೆಗಳು ಅರ್ಬುದವನ್ನು ಸೃಷ್ಟಿಸುತ್ತಿವೆ ಎಂದು ನಿಂದಿಸುತ್ತಿಲ್ಲ. ಕೆರೆಗಳನ್ನು ಹಾಳುಗೆಡವಿ ಕ್ಯಾನ್ಸರ್ ಸೃಷ್ಟಿಸುತ್ತಿದ್ದೇವೆ. ‘ಮೀನುಗಳ ಮಾರಣ ಹೋಮಕ್ಕೆ ಕುಖ್ಯಾತಿಗೆ ಒಳಗಾಗಿರುವ ಹಲಸೂರು ಕೆರೆ ಸೇರಿದಂತೆ ನೊರೆಕೆರೆಯ ಬೆಳ್ಳಂದೂರು, ಕಲ್ಕೆರೆ, ಹೆಬ್ಬಾಳಕೆರೆ, ಮತ್ತಿಕೆರೆ… ಹೀಗೆ ಅನೇಕ ಕೆರೆಗಳಲ್ಲಿ ರೆಡಾನ್, ಯುರೇನಿಯಂ ಅಧಿಕಪ್ರಮಾಣದಲ್ಲಿದೆ. ಇವು ಕ್ಯಾನ್ಸರ್ ತರಬಲ್ಲದು.
ಇದು ಯಾರೋ ಹಾದಿ ಹೋಕರು ಹೇಳಿದ ಮಾತಲ್ಲ. ಬದಲಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಇಲಾಖೆ ೨೦೧೫ರಲ್ಲಿ ಅಧ್ಯಯನ ನಡೆಸಿ ಈ ಅಂಶಗಳನ್ನು ಹೊರಹಾಕಿವೆ! ಹೆಬ್ಬಾಳ ಹಾಗೂ ಮತ್ತಿಕೆರೆಗಳಲ್ಲಿನ ಮೇಲ್ಮೈ ನೀರಿನಲ್ಲೇ ಕ್ಯಾನ್ಸರ್‌ಗೆ ಕಾರಣವಾಗುವ ರೆಡಾನ್ ಇದ್ದು ಅಂತರಂಗದಲ್ಲಿ ಇನ್ನೇನು ಅಡಗಿದೆಯೋ?! ಎಂಬ ಆತಂಕವನ್ನು ತಜ್ಞರೇ ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಒಳಚರಂಡಿ ನೀರು ಹರಿಯುವ ಹೆಬ್ಬಾಳ, ಕೋರಮಂಗಲ-ಚಲ್ಲಘಟ್ಟ ಸಮೂಹದಲ್ಲಿನ ಕೆರೆಗಳಲ್ಲಿ ಶೇ. ೯೧ರಷ್ಟು ಪ್ರದೇಶಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳಿವೆ. ಇದೇ ನೀರು ಬೋರ್‌ವೆಲ್‌ಗಳಿಗೂ ಹರಿಯುತ್ತಿವೆ. ಈ ಭಾಗದಲ್ಲಿ ನೀರಿನ ಟ್ಯಾಂಕರ್‌ಗಳ ಬ್ಯುಸಿನೆಸ್ ಉತ್ತಮವಾಗಿದ್ದು-ಕ್ಯಾನ್ಸರ್ ಹರಡಲು ಕಾರಣವಾಗಿದೆ!

ಶುದ್ಧೀಕರಣ ಸಾಧ್ಯವಿದೆ


ಹಲಸೂರು ಕೆರೆಯ ಶುದ್ಧೀಕರಣ ಅಸಾಧ್ಯವೇನೂ ಅಲ್ಲ. ಬಯೋರೆಮಿಡಿಯನ್ ಬ್ಯಾಕ್ಟೀರಿಯಾಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಮೊಟ್ಟಮೊದಲಿಗೆ ಇಲ್ಲಿಗೆ ಹರಿಯ ಬಿಡುತ್ತಿರುವ ಮಲಿನ ನೀರು ಸಂಪೂರ್ಣವಾಗಿ ಶುದ್ಧೀಕರಣಗೊಂಡು ಹರಿಯುವಂತಾಗಬೇಕು. ಕಾರ್ಖಾನೆಗಳು ಮತ್ತು ಫ್ಲಾಟ್ಸ್‌ಗಳು ನೀರನ್ನು ಶುದ್ಧೀಕರಿಸಿ ಮಾತ್ರವೇ ಬಿಡಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಬೇಕು. ತಪ್ಪಿತಸ್ಥರಿಗೆ ಜಾಮೀನು ರಹಿತ ಬಂಧನದಂತಹ ಕಠಿಣ ಕಾನೂನು ರೂಪಿಸಬೇಕಿದೆ. ಇಲ್ಲವಾದಲ್ಲಿ ಹಲಸೂರು ಕೆರೆ ಈಗಿರುವ ಸ್ಥಿತಿಗಿಂತಲೂ ಅದ್ವಾನವಾಗಲಿದೆ.
ಸಿಹಿ ನೀರಿನ ಸಂಪನ್ಮೂಲಗಳನ್ನು ಸುಸ್ಥಿತಿಯಲ್ಲಿಡಿ. ಸಮರ್ಪಕವಾಗಿ ನಿರ್ವಹಣೆ ಮಾಡಿ, ಅವುಗಳನ್ನು ಸಂರಕ್ಷಿಸಿ” ಎಂಬುದೇ ವಿಶ್ವ ಸಂಸ್ಥೆಯ ಉದ್ದೇಶವಾಗಿದೆ. ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೂ ಇದೇ ಸದುದ್ದೇಶದೊಂದಿಗೆ ವಿಶ್ವಜಲ ದಿನವನ್ನು ಆಚರಿಸುವಂತೆ ಸೂಚಿಸಿದೆ. ೧೯೯೩ರಿಂದ ಇದು ಆಚರಣೆಗೆ ಬಂದಿದೆ. ದುರಂತವೆಂದರೆ ೧೯೯೩ರಿಂದೀಚೆಗೆ ನದಿಗಳು, ಕೆರೆಗಳು, ಕಲ್ಯಾಣಿಗಳು ಹಾಳಾಗುತ್ತಾ ಸಾಗಿದೆ. ವರ್ಷದಿಂದ ವರ್ಷಕ್ಕೆ ನಾವು ಆಚರಿಸುತ್ತಿರುವ ವಿಶ್ವ ಜಲದಿನಾಚರಣೆ ಅರ್ಥಹೀನವೆನಿಸಿಕೊಳ್ಳುತ್ತಿದೆ! ಹಲವಾರು ಕೆರೆಗಳು ಆಹುತಿಯಾಗುತ್ತಿವೆ. ಇದು ಬೆಂಗಳೂರಿಗೆ ಮಾತ್ರ ಒದಗಿದ ದುರ್ಗತಿಯಾಗಿರದೆ, ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳ ಆಸುಪಾಸಿನಲ್ಲೂ ಈ ಅಪಸವ್ಯ ಕಾಣಬಹುದು.
ಅಮೆರಿಕದ ಟೆಕ್ಸಾಸ್ ನಗರದಲ್ಲಿನ ಮ್ಯಾನ್ ಹೋಲ್‌ಗಳಲ್ಲಿ ಮೀನುಗಳು ಗೋಚರಿಸುತ್ತಿವೆ. ಮ್ಯಾನ್‌ಹೋಲ್‌ಗಳಿಗೆ ಕೈ ಹಾಕಿ, ಮೀನುಗಳನ್ನು ಗುಳುಂ ಎನ್ನಿಸುವ ಗ್ಯಾಂಗುಗಳೇ ಇವೆ. ಇದರರ್ಥ ಸ್ಪಷ್ಟ ಇಲ್ಲಿ ಹರಿಯುವ ನೀರು ಶುದ್ಧವಾಗಿದೆ. ಯೆಸ್! ಇಲ್ಲೂ ಆ ಮಟ್ಟದ ಶುಭ್ರತೆಯ ನೀರು ಹರಿದಾಗ ಮಾತ್ರ ಹಲಸೂರು, ಯಮಲೂರು, ಅಮಾನಿಕೆರೆ, ಬೆಳ್ಳಂದೂರು ಕೆರೆಗಳು ಸ್ವಚ್ಛವಾಗಲಿದೆ. ಸಕಲ ಜೀವರಾಶಿಗಳಿಗೂ ನೀರೇ ಮೂಲಾಧಾರ. ಜಲ ಉಳಿದಲ್ಲಿ ಜನ, ಜಾನುವಾರು, ಜಂಗಲ್, ಜಮೀನು ಉಳಿದೀತು.

ಒತ್ತುವರಿಯೇ ಮೇಲು


ಹೌದು, ಕ್ಯಾನ್ಸರ್ ಕಕ್ಕುವ ಕೆರೆಗಳಿಗಿಂತಲೂ ಒತ್ತುವರಿಯೇ ಮೇಲು! ಹಾಗೆಂದು ನೈಸರ್ಗಿಕ ಸಂಪತ್ತಿನ ಮೇಲೆ ನಡೆಯುತ್ತಿರುವ ಅತ್ಯಾಚಾರಿಗಳಿಗೆ ನೆರವಾಗುವ ಕೆಟ್ಟ ಯೋಚನೆ ನಮ್ಮದಲ್ಲ. ಚಿಕ್ಕಕಲ್ಲಸಂದ್ರದ ಕೆರೆ ಒತ್ತುವರಿಯ ಜಮೀನಿನಲ್ಲಿ ಯಾರೋ ನೆಲಹಿಡುಕನ ಮಾತಿಗೆ ಸೈಟ್ ಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಮುಲಾಜಿಲ್ಲದೆ ಡೆಮಾಲಿಷನ್ ಮಾಡಲಾಯಿತು. ಆದರೇನು?! ಅಲ್ಲೇನು ಕೆರೆ ಬಂದಿಲ್ಲ. ಕಲ್ಯಾಣಿಯೂ ಇಲ್ಲ. ಆಟದ ಮೈದಾನವಿಲ್ಲ. ಪಾರ್ಕ್ ಕೇಳಲೇ ಬೇಡಿ! ಅನಧಿಕೃತ ಮೂತ್ರ, ಮಲ ವಿಸರ್ಜನೆ ಕೇಂದ್ರವಾಗಿದೆ. ಕಸ ಸುರಿಯುವ ಕಾರ್ಯವಾಗುತ್ತಿದೆ! ಇದೆಲ್ಲವೂ ಕೆರೆ ಉಳಿಸುವ ಪರಿಯೇ? ಜೀವ ಜಲ ಸಂರಕ್ಷಿಸಿದ ಈ ಪರಿಯನ್ನು ವಿಶ್ವ ಸಂಸ್ಥೆ ‘ಶಹಬಾಷ್’ ಎಂದೀತೇ?! ಮನೆಗಳಿದ್ದಾಗ ಸುಂದರವಾಗಿದ್ದ ಈ ಭಾಗದಲ್ಲಿ ಅಡ್ಡಾಡುವುದೇ ದುಸ್ತರವಾಗಿದೆ. ಅದೇ ರೀತಿ ಇತರೆ ಕೆರೆ ‘ಏರಿ’ಯಾದಲ್ಲೂ ಆಗಿರಲೂಬಹುದು.

ಕೆರೆ, ಕುಂಟೆ, ನದಿಗಳಂತಹ ಜಲ ಕೇಂದ್ರಗಳನ್ನು ಉಳಿಸಿಕೊಳ್ಳದೆ ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಮುಂತಾದ ಘೋಷಣೆಗಳನ್ನು ಕೂಗಿದಲ್ಲಿ ಪರಿಸರ ಉಳಿಯದು. ಕೆರೆ ಉಳಿಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಇದೆ. ಕೆಲಸಕ್ಕೆ ಬಾರದ ವಿಷಯಗಳಿಗೆಲ್ಲಾ ಹೋರಾಡುವ ಸಂಘಟನೆಗಳು, ಮಠಾಧಿಪತಿಗಳು, ಕೆರೆ ಉಳಿಸುವಂತಹ ಪವಿತ್ರ ಕಾರ್ಯಗಳಿಗೇಕೆ ಕೈ ಜೋಡಿಸುವುದಿಲ್ಲ. ನೈಸರ್ಗಿಕ ಸಂಪತ್ತಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಧ್ವನಿಯೆತ್ತುತ್ತಿಲ್ಲವೇಕೆ? ಭಾರತ ಮಾತೆಯ ಸ್ವಯಂ ಘೋಷಿತ ಪುತ್ರರು ಜಲಸಂರಕ್ಷಣೆಯನ್ನು ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಉದ್ದುದ್ದ ಭಾಷಣ ಬಿಗಿಯುತ್ತಾರೆ. ಕೆರೆ, ಕಲ್ಯಾಣಿಗಳ ರಕ್ಷಣೆ ಮಾಡುತ್ತಿರುವುದಾಗಿ ಹೇಳುತ್ತಾ ಸಾಕಷ್ಟು ಚಂದಾ ಎತ್ತುತ್ತಲೂ ಇದ್ದಾರೆ! ಆದರೆ ಬೆಂಗಳೂರಿನಲ್ಲಿರುವ ೮೦ಕ್ಕೂ ಹೆಚ್ಚು ಕೆರೆಗಳು ಅಪಾಯದ ಅಂಚಿಗೆ ಬಂದಿದ್ದರೂ ಧ್ವನಿ ಎತ್ತಿಲ್ಲ! ಹಲಸೂರು ಕೆರೆಯಲ್ಲಿ ಮೀನುಗಳು ಮಾರಣಹೋಮವಾಗಿದ್ದರೂ, ಬೆಳ್ಳಂದೂರು ಕೆರೆ, ನೊರೆಗಟ್ಟಿ ಬೆಂಕಿ ಬಿದ್ದರೂ ನಾಮಕಾವಸ್ತೆಯ ಜನಪ್ರತಿನಿಧಿಗಳು ಆಗಮಿಸುವುದಿಲ್ಲವೇಕೆ. ಪ್ರಾಯಶಃ ಸಂಗ್ರಹವಾಗಿರುವ ಚಂದಾಹಣ ಖರ್ಚಾದ ಮೇಲೆ ಆಗಮಿಸಲಿದ್ದಾರೆ.


ಗತಿಸಿ ಹೋದ ಒಂದುವರ್ಷದ ಪತ್ರಿಕೆಗಳನ್ನು ಹರವಿ ಕೂತು ನೋಡಿ…. ಕೆರೆಗೆ ಸಂಬಂಧಿಸಿದ ಸುದ್ದಿಗಳು ಹಲವಷ್ಟಿವೆ. ಈ ಬಾರಿ ಹಲಸೂರು ಕೆರೆ ಅದಕ್ಕೂ ಹಿಂದೆ ಕೆರೆ ಒತ್ತುವರಿ ತೆರವಿನ ಸುದ್ದಿ ಬಾಣಸವಾಡಿ ಕೆರೆ ಒತ್ತುವರಿ ತೆರವು, ಸಾರಕ್ಕಿ ಕೆರೆಯ ಒತ್ತುವರಿ ತೆರವು, ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿ ತೆರವು, ಕೆರೆ ನೊರೆ ಕಾರಿಕೊಂಡಿದ್ದು, ಬೆಂಕಿ ತಗಲಿ ವಿಶ್ವದ ಗಮನ ಸೆಳೆದಿದ್ದು. ಬೆಂಗಳೂರಿನ ೨೧ ಕೆರೆಗಳ ಅನಧಿಕೃತ ಒತ್ತುವರಿ ಕುರಿತಂತೆ ಸದನ ಸಮಿತಿ ರಚಿಸಿ, ಅವರು ಬೆಂಗಳೂರಿನ ಉದ್ದಗಲಕ್ಕೂ ಅಡ್ಡಾಡಿ ದಿನಕ್ಕೊಂದು ನ್ಯೂಸ್ ಮಾಡಿದರು. ಮಾರ್ಚ್ ೧೮ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಇನ್ನು ಅದೆಷ್ಟು ಕೆರೆಗಳು ಚರ್ಚೆಗೆ ಬರಲಿದೆಯೋ ಅಥವಾ ಅದೆಷ್ಟು ಕೆರೆಗಳು, ವಿಷ, ನೊರೆ, ಬೆಂಕಿ ಉಗುಳುತ್ತದೋ ತಿಳಿಯದು…

 

Tags: #awareness#cancer#environment#pollutedlakes

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
wonder facts: ಕಣ್ಣೀರಿಂದಲೂ ಕರೆಂಟ್ ಉತ್ಪಾದಿಸಬಹುದು!

wonder facts: ಕಣ್ಣೀರಿಂದಲೂ ಕರೆಂಟ್ ಉತ್ಪಾದಿಸಬಹುದು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.