ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟ ದಾಸ ತಮ್ಮ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಿನಿಮಾ ಮಂದಿ ಸಾರಥಿಯ ಹುಟ್ಟುಹಬ್ಬಕ್ಕೆ ಸಾಲು ಸಾಲು ಉಡುಗೊರೆಗಳನ್ನ ನೀಡಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನನ ಕಾಲ್‌ಶೀಟ್ ಗಿಟ್ಟಿಸಿಕೊಂಡಿರುವ ಅನ್ನದಾತರು, ಯಜಮಾನನ ಜನ್ಮದಿನಕ್ಕೆ ಫಸ್ಟ್ ಲುಕ್ ಪ್ಲಸ್ ಟೀಸರ್ ಗಿಫ್ಟ್ ಕೊಟ್ಟಿದ್ದಾರೆ.
ಡೆವಿಲ್ ಚಿತ್ರತಂಡ ಚಕ್ರವರ್ತಿಗೆ ಭರ್ಜರಿ ಗಿಫ್ಟನ್ನೇ ನೀಡಿದೆ. ಶೀರ್ಷಿಕೆಗೆ ತಕ್ಕಂತೆ ಡೆವಿಲ್ ಟೀಸರ್ ಡೆವಿಲ್ ರೂಪದಲ್ಲಿ ಹೊರಬಂದಿದ್ದು, ಒಡೆಯ ವಿರಾಟ ರೂಪ ತಾಳಿದ್ದಾರೆ. ‘ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು, ಫೋಟೋ ತಗೆಯಲದಕ್ಕೆ ಬಲು ಕೋಪ ಬರುವುದು’.. ಹೀಗೊಂದು ಡೈಲಾಗ್ ಟೀಸರ್ ಮೂಲಕ ಹೊರಬಿದ್ದಿದೆ. ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶನ ʻಡೆವಿಲ್ʼ ಸಿನಿಮಾಗಿದೆ. ತಾರಕ್ ಸಿನಿಮಾ ನಂತರ ನಿರ್ದೇಶಕ ಮಿಲನ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್ ರಿಪೀಟ್ ಆಗಿದ್ದು, ʻಡೆವಿಲ್ʼ ಮೇಲೆ ನಿರೀಕ್ಷೆ ಹೆಚ್ಚಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
ಈಗಾಗಲೇ ದಚ್ಚು ಜೊತೆ ಯಜಮಾನ ಮತ್ತು ಕ್ರಾಂತಿ ಚಿತ್ರ ಮಾಡಿ ಸಕ್ಸಸ್ ಕಂಡಿರೋ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರು ಈಗ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಸಾರಥಿ ಜೊತೆ ಹ್ಯಾಟ್ರಿಕ್ ಬಾರಿಸಲು ಹೊರಟಿರೋ ಇವರು ದಚ್ಚು ಹುಟ್ಟುಹಬ್ಬದಂದು, ವೀರಯೋಧ ಸಿಂಧೂರ ಲಕ್ಷ್ಮಣ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕಾಟೇರ ಖ್ಯಾತಿಯ ತರುಣ್ ಸುಧೀರ್ ಹೆಗಲಿಗೆ ನಿರ್ದೇಶನದ ಜವಬ್ದಾರಿಯನ್ನ ವಹಿಸಿದ್ದಾರೆ. ವೀರ ಸಿಂಧೂರ ಲಕ್ಷ್ಮಣ ಅಂದಾಕ್ಷಣ ಥಟ್ಟನೆ ನೆನಪಾಗೋದು ಹಿರಿಯ ನಟ ಸುಧೀರ್. ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ ಮಹಾನ್ ಕಲಾವಿದ ಸುಧೀರ್. ತಮ್ಮ ತಂದೆಯ ಅಭಿನಯದ ಅಪರೂಪದ ಪಾತ್ರವನ್ನು ತೆರೆಗೆ ತರಲು ರೆಡಿಯಾಗುತ್ತಿದ್ದಾರೆ ತರುಣ್ ಸುಧೀರ್. ಕ್ರಾಂತಿ ಪುರುಷ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ.
ಚೌಕ, ರಾಬರ್ಟ್ ನಂತರ ಚಕ್ರವರ್ತಿಗೆ ಕಾಟೇರ ಸಿನಿಮಾ ಮಾಡಿ ಸೈ ಎನಿಸಿಕೊಂಡಿರೋ ತರುಣ್ ಸುಧೀರ್‌ಗೆ ಈಗ ʻವೀರ ಸಿಂಧೂರ ಲಕ್ಷ್ಮಣʼದ ಜೊತೆಗೆ ಮತ್ತೊಂದು ಸಿನಿಮಾ ಡೈರೆಕ್ಟ್ ಮಾಡುವ ಅವಕಾಶ ಸಿಕ್ಕಿದೆ. ರಾಜಕಾರಣಿ ಹಾಗೂ ದರ್ಶನ್ ಆಪ್ತ ಸಚ್ಚಿದಾನಂದ ನಿರ್ಮಾಣ ಮಾಡಲಿರುವ ಸಿನಿಮಾಗೆ ತರುಣ್ ಆಕ್ಷನ್ ಕಟ್ ಹೇಳಲಿದ್ದು, ಈ ಸಿನಿಮಾದ ಘೋಷಣೆ ಕೂಡ ಇಂದು ಆಗಿದೆ. ಈ ಎರಡೂ ಚಿತ್ರಗಳು ಯಾವಾಗ ಬರುತ್ತವೆ ಎನ್ನುವುದು ಇನ್ನೂ ಖಾತರಿ ಆಗಿಲ್ಲ. ಆದರೂ, ಘೋಷಣೆ ಮಾಡಲಾಗಿದೆ.
ಸಾಮಾನ್ಯವಾಗಿ ಒಂದು ಸಿನಿಮಾ ಆದ ನಂತರವೇ ದರ್ಶನ್ (Darshan) ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವುದು ವಾಡಿಕೆ. ಸಿನಿಮಾ ಅನೌನ್ಸ್ ಕೂಡ ಹಾಗೆಯೇ ಆಗುತ್ತವೆ. ಆದರೆ, ಈ ಬಾರಿ ಆ ನಿಯಮವನ್ನು ಮುರಿಯಲಾಗಿದೆ. ದರ್ಶನ್ ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು ಸಂದಿರುವ ಸಂದರ್ಭದಲ್ಲಿ ಹಾಗೂ ಹುಟ್ಟುಹಬ್ಬದ (Birthday) ಪ್ರಯುಕ್ತ ಒಟ್ಟು ಒಂಬತ್ತು ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. ಮಿಲನ ಪ್ರಕಾಶ್ ವೀರ್ ಹಾಗೂ ತರುಣ್ ಸುಧೀರ್ ಸಿನಿಮಾಗಳ ಜೊತೆಗೆ ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್ ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ. ದರ್ಶನ್ ಸಿನಿಮಾಗಳಿಗೆ ಬಂಡವಾಳ ಹಾಕಿದರೆ ಹಣಕ್ಕೆ ಮೋಸವಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಕಾಟೇರ ಗೆದ್ದ ನಂತರ ಈ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸಾಲು ಸಾಲು ಸಿನಿಮಾಗಳು ಘೋಷಣೆ ಆಗಿವೆ. ಯಾವೆಲ್ಲ ಸಿನಿಮಾಗಳು, ಯಾವಾಗೆಲ್ಲ ಬರುತ್ತವೆ ಎನ್ನುವುದು ಕಾದು ನೋಡಬೇಕಿದೆ.