ಕನ್ನಡ ಸಂಗೀತ ಲೋಕದಲ್ಲಿ ರ್ಯಾಪ್ ಸಿಂಗರ್ ಆಗಿ ಜನಪ್ರಿಯತೆ ಪಡೆದುಕೊಂಡವರು ಚಂದನ್ ಶೆಟ್ಟಿ. ಅದಾದ ಬಳಿಕ ಬಿಗ್ಬಾಸ್ ಮನೆಯಲ್ಲೂ ಒಂದಷ್ಟು ಕಾಲವಿದ್ದು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಚಂದನ್ ಶೆಟ್ಟಿ, ಈಗ ಗಾಯಕ ಮತ್ತು ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ರ್ಯಾಪರ್ ಆಗಿ ಪ್ರವರ್ಧಮಾನಕ್ಕೆ ಬಂದು, ಒಂದಷ್ಟು ಖ್ಯಾತಿ ಪಡೆದಿರುವವರು ಚಂದನ್ ಶೆಟ್ಟಿ, ತಮ್ಮ ವೃತ್ತಿಯಲ್ಲಿ ಬಹು ಬೇಡಿಕೆಯಲ್ಲಿರುವಾಗಲೇ ನಟನೆಯತ್ತ ಮುಖ ಮಾಡಿದ್ದಾರೆ. ಈಗಾಗಲೇ ‘ಎಲ್ರ ಕಾಲೆಳೆಯುತ್ತೆ ಕಾಲ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಚಂದನ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾಗಳು ಅಂತಿಮ ಹಂತದಲ್ಲಿರುವಾಗಲೇ ಚಂದನ್ ಶೆಟ್ಟಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ಚಂದನ್ ಶೆಟ್ಟಿ ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಶ್ರೀ ಮುರುಳಿ ನಾಯಕನಾಗಿ ನಟಿಸಿದ್ದ ‘ಲೂಸ್ ಗಳು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಅರುಣ್ ಅಮುಕ್ತ. ಮೂಲತಃ ಆಡ್ ಫಿಲಂ ಮೇಕರ್ ಆಗಿರುವ ಅರುಣ್, ಚಿತ್ರರಂಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೆಲ್ಲ ಅನುಭವಗಳನ್ನು ಒಗ್ಗೂಡಿಸಿಕೊಂಡು ಒಂದೊಳ್ಳೆ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರಂತೆ. ಸದ್ಯದ ಮಟ್ಟಿಗೆ ಇದೊಂದು ಟೀನೇಜ್ ಡ್ರಾಮಾ ಆಗಿರಲಿದೆ ಎಂಬ ಏಕಮಾತ್ರ ಸುಳಿವು ಚಿತ್ರತಂಡದ ಕಡೆಯಿಂದ ಸಿಕ್ಕಿದೆಯಷ್ಟೇ.
ಈಗಾಗಲೇ ಈ ಸಿನಿಮಾದ ಟೈಟಲ್ ಪ್ರೊಮೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸದ್ಯ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ಆ. 25ರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಚಂದನ್ ಶೆಟ್ಟಿ ಹೊಸ ಸಿನಿಮಾದ ಟೈಟಲ್ ಅನಾವರಣಗೊಳ್ಳಲಿದೆ. ಇನ್ನು ಈ ಚಿತ್ರದ ತಾರಾಗಣದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಮತ್ ಸಂಬರ್ಗಿ ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಇನ್ನುಳಿದಂತೆ ಕಲಾವಿದರು, ತಾಂತ್ರಿಕ ವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.