ಅಮೃತಧಾರೆ ಹೆಸರು ಕೇಳಿದಾಕ್ಷಣ ಮೋಹಕತಾರೆ ರಮ್ಯಾ ಕಣ್ಣಮುಂದೆ ಬರುತ್ತಿದ್ದರು. ಇನ್ಮೇಲೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಜೊತೆ ನಟಿ ಛಾಯಾಸಿಂಗ್ ಕೂಡ ನೆನಪಾಗುತ್ತಾರೆ. ಯಾಕಂದ್ರೆ, ಛಾಯಾಸಿಂಗ್ ಅಮೃತಧಾರೆ ಹೆಸರಿನ ಸೀರಿಯಲ್ ಮಾಡುತ್ತಿದ್ದಾರೆ. ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಹೊಚ್ಚ ಹೊಸ ಧಾರವಾಹಿ ಇದಾಗಿದ್ದು, ಈಗಾಗಲೇ ರಿಲೀಸ್ ಆಗಿರುವ ಪ್ರೋಮೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಅಮೃತಧಾರೆ ಪ್ರೋಮೋ ನೋಡಿದವರಿಗೆ ಜೊತೆಜೊತೆಯಲಿ ಸೀರಿಯಲ್ ನೆನಪಾಗುತ್ತಿದೆ. ಗೌತಮ್ ಹಾಗೂ ಭೂಮಿಕಾನ ನೋಡಿದರೆ ಆರ್ಯ ಮತ್ತು ನೋಡಿದ್ಹಂಗೆ ಫೀಲ್ ಆಗ್ತಿದೆ. ವಯಸ್ಸಿನ ಅಂತರವಿರುವ ಜೋಡಿ ಅಮೃತಧಾರೆ ಸುರಿಸಲು ಬಂದರಾ ಎನ್ನುವ ಕುತೂಹಲದ ಪ್ರಶ್ನೆ ಮೂಡಿದೆ. ಹೀಗಾಗಿ, ತಮ್ಮನೆಯ ಪುಟ್ಟ ಪರದೆಯ ಮೇಲೆ ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಜೋಡಿಯನ್ನು ಬರಮಾಡಿಕೊಳ್ಳೋದಕ್ಕೆ ಸೀರಿಯಲ್ ಪ್ರಿಯರು ಕಾತುರರಾಗಿದ್ದಾರೆ.
ಈ ಸೀರಿಯಲ್ನಲ್ಲಿ ರಾಜೇಶ್ ನಟರಂಗ ಅವರು ಉದ್ಯಮಿಯಾಗಿ ಕಾಣಿಸಿಕೊಂಡರೆ, ಛಾಯಾಸಿಂಗ್ ಮಧ್ಯಮವರ್ಗದ ಮನೆತನದ ಹೆಣ್ಣುಮಗಳ ಪಾತ್ರ ನಿರ್ವಹಿಸ್ತಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿರೋ ಛಾಯಾಸಿಂಗ್, ಮತ್ತೆ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಡುವುದಕ್ಕೆ ಉತ್ಸುಕರಾಗಿದ್ದಾರೆ. ಅಮೃತಧಾರೆ ಸೀರಿಯಲ್ ಜೊತೆಗೆ ರಾಯಲ್ ಹಾಗೂ ಭೈರತಿ ರಣಗಲ್ ಸಿನಿಮಾದಲ್ಲಿ ಛಾಯಾಸಿಂಗ್ ಮಿರಮಿರ ಮಿಂಚಲಿದ್ದಾರೆ.
ರಾಯಲ್…. ದಿನಕರ್ ತೂಗುದೀಪ್ ನಿರ್ದೇಶನದ, ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಅಭಿನಯದ ಚಿತ್ರ. ಈ ಸಿನಿಮಾದಲ್ಲಿ ಛಾಯಾ ಒಂದು ವಿಶೇಷ ಪಾತ್ರದಲ್ಲಿ ಕಾಣಸಿಗ್ತಾರೆ. ಇನ್ನೂ, ಮಫ್ತಿ ಸಿನಿಮಾದಲ್ಲಿ ಶಿವಣ್ಣನ ತಂಗಿ ಪಾತ್ರದಲ್ಲಿ ಮಿಂಚಿದ್ದರು ಈಗ ಮಫ್ತಿ ಪ್ರೀಕ್ವೆಲ್ ಭೈರತಿ ರಣಗಲ್ನಲ್ಲೂ ಛಾಯಾ ಕ್ಯಾರೆಕ್ಟರ್ ಕಂಟಿನ್ಯೂ ಆಗಲಿದೆ. ಹೀಗಾಗಿ, ಛಾಯಾ ದಿಲ್ ಖುಷ್ ಆಗಿದ್ದಾರೆ. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗ್ತಿದ್ದಾರೆ.
ಅಂದ್ಹಾಗೇ, ಛಾಯಾಸಿಂಗ್ ಮೂಲತಃ ಕನ್ನಡದವರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈಕೆ, ಮುನ್ನುಡಿ ಹೆಸರಿನ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟವರು. ಹಸೀನಾ, ತುಂಟಾಟ, ಚಿಟ್ಟೆ ಸಕ್ಸಸ್ ಕಂಡ ನಂತರ ಪರಭಾಷೆಗೆ ಹಾರಿದ್ದರು. ಕನ್ನಡ, ತಮಿಳು, ತೆಲುಗು, ಭೋಜ್ಪುರಿ ಬೆಂಗಾಲಿ, ಮಲೆಯಾಳಂ ಸೇರಿದಂತೆ ಐದಾರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ರು. ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿಯಾಗಿರುವ ಛಾಯಾಸಿಂಗ್, ಸಿನಿಮಾ ಮಾತ್ರವಲ್ಲದೇ ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಗುರ್ತಿಸಿಕೊಂಡಿದ್ದಾರೆ.
ರೌಡಿ ಅಳಿಯ, ಆಕಾಶಗಂಗೆ, ಸಖಸಖಿ, ಖಾಕಿ, ಮಫ್ತಿ ಸೇರಿದಂತೆ ಕನ್ನಡದ ಕೆಲ ಸಿನಿಮಾಗಳಲ್ಲಿ ಮಿಂಚಿರುವ ಛಾಯಾ, ಸರೋಜಿನಿ, ಪ್ರೇಮ ಕಥೆಗಳು, ನಂದಿನಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಕುಣಿಯೋಣು ಬಾರ ರಿಯಾಲಿಟಿ ಶೋ ಜಡ್ಜ್ ಆಗಿ, ಹಾಲು ಜೇನು ಶೋನ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಈಗ ಅಮೃತಧಾರೆ ಸೀರಿಯಲ್ ಮೂಲಕ ಕನ್ನಡ ಕಿರುಪರದೆ ಬೆಳಗೋದಕ್ಕೆ ಮತ್ತೆ ಬಂದಿದ್ದಾರೆ. ಅನು ಅನೆ ನೇನು ತೆಲುಗು ಸೀರಿಯಲ್ ಜೊತೆಗೆ ಕನ್ನಡ ಧಾರವಾಹಿಯನ್ನು ಒಪ್ಪಿಕೊಂಡು ಭಾಷಾ ಪ್ರೇಮ ಮೆರೆದಿದ್ದಾರೆ.