ನಟ ಅನಿರುದ್ಧ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ ‘ಶೆಫ್ ಚಿದಂಬರ’ ಎಂದು ಟೈಟಲ್ ಇಡಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಈ ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಮುಹೂರ್ತದ ಬಳಿಕ ಚಿತ್ರೀಕರಣ ಕಾರ್ಯವನ್ನು ಆರಂಭಿಸಿದ್ದ ಚಿತ್ರತಂಡ, ಸದ್ದಿಲ್ಲದೆ ಯಶಸ್ವಿಯಾಗಿ ‘ಶೆಫ್ ಚಿದಂಬರ’ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ಇನ್ನು ‘ಶೆಫ್ ಚಿದಂಬರ’ ಸಿನಿಮಾದ ಎರಡನೇ ಹಂತದ ಚಿತ್ರೀಕರಣಕ್ಕೂ ಮುನ್ನ ‘ಶೆಫ್’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಕ ನಟ ಅನಿರುದ್ಧ ತಮ್ಮ ಪಾತ್ರಕ್ಕಾಗಿ ತೆರೆ ಹಿಂದೆ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅನಿರುದ್ಧ ತಾವು ನಿರ್ವಹಿಸುತ್ತಿರುವ ‘ಶೆಫ್’ ಪಾತ್ರಕ್ಕಾಗಿ ಹೆಸರಾಂತ ಬಾಣಸಿಗರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಕೆಲ ದಿನಗಳಿಂದ ಅನಿರುದ್ಧ ಈ ತರಬೇತಿ ಪಡೆದುಕೊಳ್ಳುತ್ತಿದ್ದು, ಈ ಟ್ರೈನಿಂಗ್ ಪೋಟೋಗಳು ಮತ್ತು ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಸದ್ಯ ಅನಿರುದ್ಧ್ ‘ಶೆಫ್’ ತರಬೇತಿ ಪಡೆದುಕೊಳ್ಳುತ್ತಿರುವ ಪೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾತ್ರಕ್ಕಾಗಿ ಅನಿರುದ್ಧ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಶೆಫ್ ಚಿದಂಬರ’ ಸಿನಿಮಾದಲ್ಲಿ ಅನಿರುದ್ಧ್ ಅವರಿಗೆ ರೆಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದಮ್ತಿ ಪಿಕ್ಚರ್ಸ್’ ಲಾಂಛನದಲ್ಲಿ ರೂಪ ಡಿ. ಎನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಂ. ಆನಂದರಾಜ್ ನಿರ್ದೇಶಿಸುತ್ತಿದ್ದಾರೆ.