ವರನಟ ಡಾ. ರಾಜ್ಕುಮಾರ್ ಅಭಿನಯದ ಎವರ್ ಗ್ರೀನ್ ಸಿನಿಮಾಗಳ ಟೈಟಲ್ ಹಾಗೂ ಹಾಡುಗಳ ಸಾಲನ್ನ ಮರುಬಳಕೆ ಮಾಡ್ಕೊಂಡು, ಅನೇಕ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಇದೀಗ ಅಣ್ಣಾವ್ರ ಮೊಮ್ಮಗ ಷಣ್ಮುಕ ಗೋವಿಂದರಾಜ್ ಅವರು, ಅಪ್ಪಾಜಿಯ ಜನಪ್ರಿಯ ಚಿತ್ರಗೀತೆಯ ಸಾಲನ್ನ ಟೈಟಲ್ ಆಗಿಸಿಕೊಂಡು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. `ಹುಲಿಯ ಹಾಲಿನ ಮೇವು’ ಚಿತ್ರದ `ಚಿನ್ನದ ಮಲ್ಲಿಗೆ ಹೂವೇ’ ಸಾಲನ್ನ ಸಿನಿಮಾ ಶೀರ್ಷಿಕೆಯನ್ನಾಗಿಸಿದ್ದಾರೆ. ನಟ ರಾಘವೇಂದ್ರ ರಾಜ್ಕುಮಾರ್ ಅವರ ಕೈಯಲ್ಲಿ ಟೈಟಲ್ ಅನಾವರಣಗೊಂಡಿದ್ದು, ದೊಡ್ಮನೆ ಅಭಿಮಾನಿಗಳು ಸಿನಿಮಾಗಾಗಿ ಕುತೂಹಲದಿಂದ ಕಾಯುವಂತೆ ಮಾಡಿದ್ದಾರೆ.
ಷಣ್ಮುಕ ಗೋವಿಂದರಾಜ್ ಅಣ್ಣಾವ್ರ ಹಿರಿಯ ಪುತ್ರಿ ಲಕ್ಷ್ಮಿ ಗೋವಿಂದರಾಜ್ ಅವ್ರ ಮಗ. ಕಲಾವಿದನಾಗಬೇಕು ಎನ್ನುವ ಇವರ ಕನಸಿಗೆ ನಿರ್ದೇಶಕ ಅಶೋಕ್ ಕಡಬ ಅವರು ಜೀವ ತುಂಬಿದ್ದಾರೆ. ಷಣ್ಮುಕ ಗೋವಿಂದರಾಜ್ಗೆ ಹೀರೋ ಪಟ್ಟ ಕಟ್ಟಿ `ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.ಈ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಷಣ್ಮುಕ ಗೋವಿಂದರಾಜ್ ಅವರಿಗೆ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. `ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾಗೆ ನಾಯಕನಾಗುವ ಅದೃಷ್ಟ ಅರಸಿಕೊಂಡು ಬಂದಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ರಚನೆ ಹಾಗೂ ನಿರ್ದೇಶನ ಈ ಸಿನಿಮಾಗಿದೆ. ಷಣ್ಮುಖ ಗೋವಿಂದರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ನಾಗೇಂದ್ರ ಪ್ರಸಾದ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರಗಳ ಆಡಿಷನ್ ನಡೆಯುತ್ತಿದೆ. ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ ‘ಸಾರಾ ವಜ್ರ’ ಸಿನಿಮಾವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್ನಾ ಸಾಧ್ಯ ಈಗ ನಿರ್ಮಾಪಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಇದೀಗ ಆರ್ನಾ ಸಾಧ್ಯ ‘ಸಂಭ್ರಮ ಮೀಡಿಯಾ ಹೌಸ್’ ಎಂಬ ಸಂಸ್ಥೆಯ ಮೂಲಕ ‘ಚಿನ್ನದ ಮಲ್ಲಿಗೆ ಹೂವೇ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಬರೆದುಕೊಟ್ಟರು. ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಿದರು.ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಪ್ರಣವ್ ಸತೀಶ್ ‘ಚಿನ್ನದ ಮಲ್ಲಿಗೆ ಹೂವೇ’ ಗೆ ಸಂಗೀತ ನೀಡುತ್ತಿದ್ದು, ಮಧು ತುಂಬಕೆರೆ ಸಂಕಲನವಿದೆ.